ಇತಿಹಾಸ ಅರಿಯುವಲ್ಲಿ ಗ್ರಾಮಗಳ ಚರಿತ್ರೆ ಮುಖ್ಯ; ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್


ಕೊಪ್ಪಳ:- ಇತಿಹಾಸವನ್ನು ಅರಿಯಬೇಕಿದ್ದರೆ ಮೊದಲು ಗ್ರಾಮಗಳ ಚರಿತ್ರೆಯನ್ನು ಅರಿಯಬೇಕಿದೆ. ಗ್ರಾಮಗಳ ಒಟ್ಟು ಚರಿತ್ರೆಯೇ ದೇಶದ ಚರಿತ್ರೆ ಎಂದು ಉಪನ್ಯಾಸಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರು ನುಡಿದರು. ಅವರು ಹಲಗೇರಿಯಲ್ಲಿ ನಡೆದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟೀಯ ಸೇವಾ ಯೋಜನಾ ಘಟಕದವತಿಯಿಂದ ನಡೆದ ೨೦೨೨-೨೩ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಮೂರನೆ ದಿನದ ಸಂಜೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಹಲಗೇರಿ ಗ್ರಾಮದ ಚಾರಿತ್ರಿಕ ಹಿನ್ನೆಲೆ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡಿದರು. ಮುಂದುವರೆದು ಅನೇಕ ವಿದ್ವಾಂಸರುಗಳು ಗ್ರಾಮಗಳ ಚರಿತ್ರೆಯನ್ನು ಅಧ್ಯಯನ ಮಾಡುವ ಗೋಜಿಗೆ ಹೋಗುವುದಿಲ್ಲ. ಬರೀ ರಾಜ-ಮಹಾರಾಜರ ಚರಿತ್ರೆಯನ್ನು ಮಾತ್ರ ಅಧ್ಯಯನ ಮಾಡುತ್ತಾರೆ. ಗ್ರಾಮಗಳ ಅಧ್ಯಯನ ಮಾಡುವುದು ಬಹಳ ಕಡಿಮೆ. ಪ್ರತಿ ಗ್ರಾಮಗಳ ಚರಿತ್ರೆಯ ಕೋಶ ಬರಬೇಕಿದೆ. ಆಗ ಮಾತ್ರ ದೇಶದ ಒಟ್ಟು ಚರಿತ್ರೆ ದೊರೆತಂತೆ ಆಗುತ್ತದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡರಾದ ರಾಜಶೇಖರಗೌಡ ಜಿ.ಪಾಟೀಲ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ ಪಾಲನಕರ್, ಉಮಾದೇವಿ ಸಿಂಧೋಗಿ, ಮುಖಂಡರಾದ ರಾಯನಗೌಡ ಪಾಟೀಲ ಮತ್ತು ಎನ್.ಎಸ್.ಎಸ್ ಅಧಿಕಾರಿಗಳಾದ ಕಮಲ ಅಳವಂಡಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಚನ್ನಕುಮಾರಸ್ವಾಮಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಕು.ಯಮನಮ್ಮ ಸ್ವಾಗತಿಸಿದರೆ, ಕೊನೆಗೆ ಕು.ಶಶಿಕುಮಾರ ಉಳ್ಳಾಗಡಿ ವಂದಿಸಿದರು. ಕು.ಕಾವೇರಿ ಕಾರ್ಯಕ್ರಮ ನಿರೂಪಿಸಿದರು.

Please follow and like us: