ಹಳಗನ್ನಡ ಪಠ್ಯವನ್ನು ಓದುವುದೆಂದರೆ ಎಲೆ ತನ್ನ ಬೇರಿನೊಂದಿಗೆ ಸಂವಾದ ಮಾಡಿದಂತೆ : ಡಾ. ಯ.ಮಾ.ಯಾಕೊಳ್ಳಿ

ಕೊಪ್ಪಳ : ಹಳಗನ್ನಡ ಪಠ್ಯವನ್ನು ಓದುವುದೆಂದರೆ ಎಲೆ ತನ್ನ ಬೇರಿನೊಂದಿಗೆ ಸಂವಾದ ಮಾಡಿದಂತೆ.ನಮ್ಮ ಹಿರಿಯರು ನಿರ್ಮಿಸಿದ ಹಳಗನ್ನಡ ಕಾವ್ಯಗಳು ನಮ್ಮ ಸಂಸ್ಕೃತಿಯನ್ನು ಅನಾವರಣ ಮಾಡುತ್ತವೆ. ಪಂಪ, ರನ್ನ, ನಾಗಚಂದ್ರ, ಹರಿಹರ, ಕುಮಾರವ್ಯಾಸ, ಪುಲಿಗೆರೆ ಸೋಮನಾಥ, ಲಕ್ಷ್ಮೀಶ, ಕನಕದಾಸ, ಪುರಂದರದಾಸ ಹೀಗೆ ಹತ್ತಾರು ಜನ ಹಳಗನ್ನಡ, ನಡುಗನ್ನಡದ ಪ್ರಮುಖ ಕವಿಗಳ ಪಠ್ಯಗಳು ನಮ್ಮ ಎರಡು ವರ್ಷದ ಪದವಿಪೂರ್ವ ತರಗತಿಗಳಿಗಿವೆ. ನಾಗಚಂದ್ರನ ರಾವಣ, ರನ್ನನ ದುರ್ಯೋಧನ, ಹರಿಹರನ ರಗಳೆ, ಮಾದಾರ ಚೆನ್ನಯ್ಯ, ಕುಮಾರವ್ಯಾಸನ ದ್ರೌಪದಿ, ಲಕ್ಷ್ಮೀಶನ ಸೀತೆ ಹೀಗೆ ಕನ್ನಡದ ಪ್ರಮುಖ ಕವಿಗಳ ಪಠ್ಯಗಳ ಮುಖ್ಯ ಪಾತ್ರಗಳನ್ನು ಕೇಂದ್ರವಾಗಿ ಇರಿಸಿಕೊಂಡು ಇಲ್ಲಿನ ಪಠ್ಯಗಳು ಆಯ್ಕೆ ಮಾಡಲ್ಪಟ್ಟಿವೆ. ರಾವಣ ತನ್ನ ತಪ್ಪನ್ನು ಒಪ್ಪಿಕೊಳ್ಳುವುದು, ದುರ್ಯೋಧನ ಸಾವಿನ ದಾರಿಯಲ್ಲಿ ತನ್ನ ಬಂಧುಗಳನ್ನು ಕಂಡು ದು:ಖಿಸುವದು, ಮಾದಾರ ಚೆನ್ನಯ್ಯನ ಭಕ್ತಿಗೆ ಕರಿಕಾಲಚೋಳ ಶರಣಾಗುವುದು ಇಂತಹ ಅಂಶಗಳು ಮಹತ್ವವಾಗಿವೆ ಎಂದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಕ್ಕುಂಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಹಿರಿಯ ವಿಮರ್ಶಕರಾದ ಂii.ಮಾ.ಯಾಕೊಳ್ಳಿ ಹೇಳಿದರು.

ಅವರು ಕೊಪ್ಪಳ ತಾಲೂಕಿನ ಭಾಗ್ಯನಗರದ ಜ್ಞಾನಬಂಧು ಪಿ.ಯು ಕಾಲೇಜಿನಲ್ಲಿ ಕೊಪ್ಪಳ ಜಿಲ್ಲಾಮಟ್ಟದ ಪಿ.ಯು ಕಾಲೇಜು ಉಪನ್ಯಾಸಕರಿಗೆ ಏರ್ಪಡಿಸಿದ್ದ ಒಂದು ದಿನದ ವಿಷಯಾಧಾರಿತ ತರಬೇತಿ ಕಾರ್ಯಾಗಾರಕ್ಕೆ ಕನ್ನಡ ವಿಷಯದ ಸಂಪನ್ಮೂಲ ವ್ಯಕ್ತಿಗಳಾಗಿ ‘ಪಿ.ಯು ತರಗತಿಗಳ ಪಠ್ಯಕೇಂದ್ರಿತ ಹಳಗನ್ನಡ ಸಾಹಿತ್ಯದೊಂದಿಗೆ ಒಂದು ಅನುಸಂಧಾನ’ ವಿಷಯದ ಕುರಿತು ಮಾತನಾಡಿದರು. ರನ್ನ, ನಾಗಚಂದ್ರ, ಹರಿಹರ, ಕುಮಾರವ್ಯಾಸ, ಲಕ್ಷ್ಮೀಶ, ಪುಲಿಗೆರೆ ಸೋಮನಾಥನ ಕಾವ್ಯಗಳಲ್ಲಿನ ಸ್ತ್ರೀ ಸಂವೇದನೆ, ಸಮಾನತೆ, ಶೋಷಣೆ, ಯುದ್ಧಗಳ ನಶ್ವರತೆ , ಕಾವ್ಯಗಳಲ್ಲಿನ ಪ್ರತಿಭಟನೆ ಮೊದಲಾದ ಅಂಶಗಳು ಇಂದಿನ ಸಮಾಜದಲ್ಲಿ ವಾಸ್ತವತೆಗೆ ಹೇಗೆ ಅನುಸಂಧಾನ ನಡೆಸುತ್ತವೆ ಎಂಬುದನ್ನು ಅರ್ಥಪೂರ್ಣವಾಗಿ ಪ್ರಸ್ತುತಪಡಿಸಿದರು. ಇತರೆ ಸಂಪನ್ಮೂಲ ವ್ಯಕ್ತಿಗಳಾಗಿ ಹನುಮಂತಪ್ಪ ಚಂದ್ಲಾಪುರ, ಡಾ.ನಾಗರಾಜ ಹೀರಾ, ಗಂಗಾಧರ ಅವಟೇರ, ಲಕ್ಷ್ಮಣ ಸಿಂಗ್ ವಗರನಾಳ ಭಾಗವಹಿಸಿ ವಿವಿಧ ಭಾಷಾ ಆಯಾಮಗಳ ಕುರಿತು ವಿಷಯ ಮಂಡಿಸಿದರು. ತದನಂತರ ಸಂಚಾಲಕರಾದ ಡಾ.ಎಸ್.ಎಸ್.ಪೋರೆ, ಜಿಲ್ಲಾ ಉಪನ್ಯಾಸಕರ ಸಂಘದ ಪ್ರತಿನಿಧಿಗಳಾದ ಮಲ್ಲಿಕಾರ್ಜುನ ಹೊಳಗುಂದಿ, ಮಾರುತಿ ಲಕಮಾಪುರ, ಷೇಖಬಾಬು ಶಿವಪುರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us: