ಪತ್ರಕರ್ತ ಸಮಾಜಕ್ಕೆ ಮೇಷ್ಟ್ರು:
ಹಿರಿಯ ಪತ್ರಕರ್ತ ಹಳೇಬೀಡು ಕೃಷ್ಣಮೂರ್ತಿ ಅಭಿಮತ

ನನ್ನ ವೃತ್ತಿ ಬದುಕಿನಲ್ಲಿ ಮೊದಲ
ಸನ್ಮಾನ, ಮೊದಲ ಶಾಲು

ಬೆಂಗಳೂರು:
ಮೇಷ್ಟ್ರಾದವರು ಕ್ಲಾಸ್ ರೂಂನಲ್ಲಿ ಮಾತ್ರ ಪಾಠ ಮಾಡಬಹುದು. ಆದರೆ ಪತ್ರಕರ್ತ ಆದವರು ಸಮಾಜಕ್ಕೆ ಮೇಷ್ಟ್ರು. ಆದ್ದರಿಂದ ಪತ್ರಕರ್ತರು ಸಮಾಜದಲ್ಲಿ ಆ ಎತ್ತರದ ಗೌರವ, ಘನತೆ ಉಳಿಸಿಕೊಳ್ಳಲು ಹಿರಿಯ ಪತ್ರಕರ್ತ ಹಳೇಬೀಡು ಕೃಷ್ಣಮೂರ್ತಿ ಕರೆ ನೀಡಿದ್ದಾರೆ.

ಸ್ವಾತಂತ್ರ್ಯತ್ಸವದ 75ನೇ ಅಮೃತೋತ್ಸವ ಪ್ರಯುಕ್ತ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಿರಿಯ ಪತ್ರಕರ್ತರಿಗಾಗಿ ಹಮ್ಮಿಕೊಂಡಿರುವ ಮನೆಯಂಗಳದಲ್ಲಿ ಮನದುಂಬಿ ನಮನ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರು ಕಲ್ಲಸಂದ್ರದ ರಾಮಾಂಜನೇಯ ನಗರದ ಅವರ ಮಗನ ಮನೆಯಲ್ಲಿ ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿ ಮಾತನಾಡಿದರು.

ಐವತ್ತರ ದಶಕದಲ್ಲಿ ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಸಂದರ್ಭಗಳನ್ನು ನೆನಪು ಮಾಡಿಕೊಂಡ ಅವರು ಐದು ದಶಕಗಳ ಕಾಲ ಸುದ್ದಿ ಮನೆಯಲ್ಲಿ ಕೆಲಸ ಮಾಡಿದೆ. ನಾನೆಂದು ಸ್ವಾರ್ಥಕ್ಕಾಗಿ ವೃತ್ತಿ ಬಳಸಲಿಲ್ಲ ಎಂದರು.

ತೀ ತಾ ಶರ್ಮಾ ನನ್ನ ಗುರುಗಳು. ಖಾದ್ರಿಶಾಮಣ್ಣ, ಟಿಎಸ್ ಆರ್, ಕೃನ ಮೂರ್ತಿ ಅವರ ಒಡನಾಟದಲ್ಲಿ ಕೆಲಸ ಮಾಡಿದ ಸಾರ್ಥಕತೆ ನನಗಿದೆ ಎಂದರು.

ನಾನೆಂದೂ ಯಾವುದೇ ಪ್ರಶಸ್ತಿ ಹಿಂದೆ ಹೋಗಲಿಲ್ಲ, ರಾಜ್ಯೋತ್ಸವ ಪ್ರಶಸ್ತಿಯೂ ಬೇಡ ಎಂದವನು‌ ನಾನು. ಹಲವು ಸಂದರ್ಭಗಳಲ್ಲಿ ಮಠ ಮಾನ್ಯಗಳು, ಸಂಘ ಸಂಸ್ಥೆಗಳು, ಜಿಲ್ಲಾಡಳಿತಗಳು ಸನ್ಮಾನ ಮಾಡಲು ಮುಂದೆ ಬಂದಾಗ ಅವುಗಳನ್ನು ನಯವಾಗಿ ತಿರಸ್ಕರಿಸಿದ್ದೇನೆ. ಪ್ರೀತಿಯಿಂದ ಒಂದು ಹೂ ಪಡೆದಿದ್ದೇನೆ. ನನ್ನ ಬದ್ಧತೆಯನ್ನು ಉಳಿಸಿಕೊಂಡು ಜೀವನದುದ್ದಕ್ಕೂ ಪರಿಪಾಲನೆ ಮಾಡಿದ್ದೇನೆ ಎಂದರು.

ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ, ಗುಂಡೂರಾವ್, ರಾಮಕೃಷ್ಣ ಹೆಗಡೆ, ದೇವರಾಜ ಅರಸು ಅವರಿಂದ ಹಿಡಿದು ಮಾಜಿ ಪ್ರಧಾನಿ ದೇವೇಗೌಡರ ತನಕ ಆತ್ಮೀಯ ಒಡನಾಟ ಇದ್ದರೂ, ಪತ್ರಕರ್ತನಾಗಿ‌ ದುರ್ಬಳಕೆ ಮಾಡಿಕೊಳ್ಳಲಿಲ್ಲ. ನಾನು ಪತ್ರಕರ್ತನಾಗಿಯೇ ಉಳಿಯಬಯಸಿದೆ ಎಂದರು.

ಕೆಯುಡಬ್ಲ್ಯೂಜೆ ವೃತ್ತಿ ಪರವಾದ ಸಂಘಟನೆ. ಡಿವಿಜಿ ಹುಟ್ಟುಹಾಕಿದ ಈ ಸಂಘದ ಗೌರವವನ್ನು ನನ್ನ ಮನೆಯಂಗಳದಲ್ಲಿ ನೀಡುತ್ತಿರುವುದು ನನ್ನ ಜೀವನದ ಮರೆಯಲಾಗದ ಕ್ಷಣ. ಪತ್ರಕರ್ತನಾಗಿ ನಾನೆಂದೂ ಶಾಲು ಹೊದಿಸಿಕೊಂಡಿರಲಿಲ್ಲ. ಎಂಬತ್ತರನೇ ವಸಂತದಲ್ಲಿ ಇದು ಹೆಗಲ ಮೇಲಿನ ಮೊದಲನೆಯ ಶಾಲು ಎನ್ನುವುದು ಸಾರ್ಥಕ ಭಾವ ನನ್ನದು ಎಂದರು.
ಕೆಯುಡಬ್ಲ್ಯೂಜೆ ಹಮ್ಮಿಕೊಂಡಿರುವ
ಹಿರಿಯರ ಮನೆಯಂಗಳದಲ್ಲಿ ಕಾರ್ಯಕ್ರಮ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸುದ್ದಿ ಮನೆಯಲ್ಲಿ 54 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಜೀವ ಕೃಷ್ಣಮೂರ್ತಿ ಅವರನ್ನು 86ನೇ ವಸಂತ ತುಂಬಿದ ಸಂದರ್ಭದಲ್ಲಿ ಗೌರವಿಸುತ್ತಿರುವುದು ನಮ್ಮ ಅಭಿಮಾನದ ಸಂಗತಿಯಾಗಿದೆ ಎಂದರು.

ಹಾಸನ ಜಿಲ್ಲೆಯ ಹಳೇಬೀಡಿನಿಂದ ವೃತ್ತಿ ಜೀವನ ಪ್ರಾರಂಭಿಸಿದ ಅವರು ತಾಯ್ನಾಡು, ಜನಮಿತ್ರ, ಪ್ರಜಾವಾಣಿ, ದಾವಣಗೆರೆಯಲ್ಲಿ ನಗರವಾಣಿಯಲ್ಲಿ ಸೇವೆ ಸಲ್ಲಿಸಿದರು. ಚಿಕ್ಕಮಗಳೂರು, ಚಿತ್ರದುರ್ಗ ದಾವಣಗೆರೆ, ಹಾಸನ ಜಿಲ್ಲೆಯ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದ್ದಲ್ಲದೆ, ಹಾಸನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅನನ್ಯವಾದುದು ಎಂದು ಸ್ಮರಿಸಿದರು.

ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ರಾಷ್ಟ್ರೀಯ ಮಂಡಳಿ ಸದಸ್ಯ ಕಿರಣ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Please follow and like us: