ಮಳೆ, ಕೊಡೆ, ಹಾಡು ಮತ್ತು ಪ್ರೀತಿಯ ರಾಗ-ಭೋಗ ಮಾನ್ಸೂನ್ ರಾಗ Movie

-ಬಸವರಾಜ ಕರುಗಲ್
ಮಾನ್ಸೂನ್ ರಾಗ-ಇದು ಮಳೆ ಇದ್ದರೂ ಕೊಡೆ ಹಿಡಿದರೂ ಭಾವ-ಭಾವನೆಗಳ ಹಾಡಿನ ಪ್ರೀತಿಯ, ತ್ಯಾಗದ ರಾಗ ಮತ್ತು ಭೋಗದ ಕಥೆ.
ಚಿತ್ರದಲ್ಲಿ‌ ಬಿಡಿ ಬಿಡಿಯಾಗಿರುವ ಐದು ಕಥೆಗಳು ಏಕ ಕಾಲಕ್ಕೆ ಚಲಿಸುತ್ತವೆ. ಕೊನೆಗೆ ಆ ಎಲ್ಲ ಕಥೆಗಳ ಸಂಗಮ ಕ್ಷಣಾರ್ಧದಲ್ಲೇ ಮುಗಿದು ಹೋಗುತ್ತದೆ. ಚಿತ್ರಕ್ಕೆ ಅದು ಅಗತ್ಯವೂ ಸಹ.
ಮೇಲ್ನೋಟಕ್ಕೆ ಕನ್ನಡದ “ಮಾನ್ಸೂನ್ ರಾಗ” ತೆಲುಗಿನ “ಕೇರಾಫ್ ಕಂಚಾರಪಾಲೆಂ”ನಂತೆ‌ ಕಂಡರೂ ಅದರ ನೆರಳಿನಲ್ಲಿ ಅದ್ದಿ, ತಿದ್ದಿ ತೀಡಿದ ಚಿತ್ರ. ಇಲ್ಲಿ ಬಿಡಿ ಬಿಡಿಯಾದ ಕಥೆಗಳು ಕೊನೆಯಲ್ಲಿ ಬಂಧಿಯಾಗಿ ಬಿಡುತ್ತವೆ. ಮನದಲ್ಲಿ ಹಲವು ಭಾವಗಳ ಗೂಡನ್ನು ಕಟ್ಟಿಕೊಟ್ಟು ಬಿಡುತ್ತವೆ. ಆದರೂ ನೆನಪಲ್ಲಿ ಉಳಿಯೋದು ಒಂದೆರಡು ಪಾತ್ರಗಳಲ್ಲ. ಇಡೀ ಕಥೆಯೇ ಸ್ಥಾಯಿಭಾವ ಪಡೆದುಕೊಳ್ಳುತ್ತದೆ.
ಈ ಹಿಂದೆ ಕವಿತಾ ಲಂಕೇಶ್ ಅವರ ಪ್ರೀತಿ, ಪ್ರೇಮ, ಪ್ರಣಯ ಸಿನಿಮಾ ಸಹ ನೆನಪಾಗುತ್ತದೆ. ಸುದೀಪ್ ಅವರ ಮೈ ಆಟೋಗ್ರಾಫ್ ಕೂಡ ಕಣ್ಮುಂದೆ ಬಂದು ಹೋಗುತ್ತದೆ. ಆದರೂ ಆ ಸಿನಿಮಾಗಳ ಒಂದೆಳೆಯೂ ಇಲ್ಲಿಲ್ಲ ಎಂಬುದು ವಿಶೇಷ.
ಸಿನಿಮಾದಲ್ಲಿ ಮತಾಂತರದ ವಿಷಯವನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಧರ್ಮಾಂಧತೆಯ ಭೀಕರತೆಯನ್ನು ರಕ್ತಪಾತವಿಲ್ಲದೇ ತೋರಿಸಿರುವುದು ಜಾಣ್ಮೆಯ ಸಂಕೇತ. ಎಳಸು ಮನಸುಗಳ ಮುಗ್ಧ ಪ್ರೀತಿ, ತರುಣ ಜೋಡಿಯ ಜವಾಬ್ದಾರಿಯುತ ಪ್ರೇಮ, ಇಳಿವಯಸ್ಸಿನ ಪ್ರಣಯ ಆಸೆಗಲ್ಲ, ಆಸರೆಗೆ ಎಂದು ತೋರಿಸಿರುವ ತೀವ್ರತೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ.
ಚಿತ್ರದ ಹೈಲೈಟ್ ಎಂದರೆ‌ ಅಚ್ಯುತ್‌ರಾವ್ ಮತ್ತು ಸುಹಾಸಿನಿ ಮಣಿರತ್ನಂ. ಡಾಲಿ ಧನಂಜಯ್ ನಿಷ್ಕಲ್ಮಶ ಪ್ರೇಮಿಯಾಗಿ ಇಮೇಜ್ ಹಂಗು ತೊರೆದು ಬೇರೆಯದ್ದೇ ರೀತಿಯಲ್ಲಿ ಇಷ್ಟವಾಗ್ತಾರೆ. ಹಾಗೆಯೇ ಡಿಂಪಲ್ ಕ್ವೀನ್ ಸೆಕ್ಸ್ ವರ್ಕರ್ ಪಾತ್ರ ಮಾಡಿದ್ದರೂ ಇಂಟರಡಕ್ಷನ್ ಸೀನ್ ಬಿಟ್ಟು ಇಡೀ ಸಿನಿಮಾದಲ್ಲಿ ನಿಜವಾದ ಪ್ರೀತಿಯ ಅನುಭವಕ್ಕೆ ಹಾತೊರೆಯುವ ಹುಡುಗಿಯಾಗಿ ಇಷ್ಟವಾಗ್ತಾರೆ. ಹೊಸ ಪ್ರತಿಭೆ ಶಿವಾಂಕ್‌ ಮೊದಲ ಪ್ರಯತ್ನದಲ್ಲಿ ಗಮನ ಸೆಳೆದಿದ್ದಾರೆ. ಯಶಾ ಶಿವಕುಮಾರ್ ನಟನೆ, ನೃತ್ಯದಲ್ಲಿ ಭರವಸೆ ಮೂಡಿಸಿದ್ದಾರೆ. ನಿಹಾಲ್, ಸಿಂಚನಾ ಸೇರಿದಂತೆ ಮೂವರು ಬಾಲ ಕಲಾವಿದರು ನಗಿಸುತ್ತಾರೆ, ಅಳಿಸುತ್ತಾರೆ. ಪೋಷಕ ಪಾತ್ರದ ಸಿದ್ಲಿಂಗು ಶ್ರೀಧರ್, ಶೋಭರಾಜ್ ನೆನಪಲ್ಲುಳಿಯುತ್ತಾರೆ.
ನಾಲ್ಕು ಪ್ಲಸ್ ಒಂದು ಕಥೆಯನ್ನು ಏಕಕಾಲಕ್ಕೆ ಹೇಳುವ, ಅದೂ ಎಲ್ಲೂ ಬೋರ್ ಆಗದಂತೆ ನಿರೂಪಿಸಿರುವ ನಿರ್ದೇಶಕ ರವೀಂದ್ರನಾಥ್ “ಪುಷ್ಪಕ ವಿಮಾನ”ದ ನಂತರ ಮತ್ತೊಮ್ಮೆ ಒಂದೊಳ್ಳೆ ಸಿನಿಮಾ ಕೊಟ್ಟಿದ್ದಾರೆ. ಚಿತ್ರದ ನಿಜವಾದ ನಾಯಕರೆಂದರೆ ಹಾಡುಗಳಿಗೆ ಅತ್ಯುತ್ತಮ ರಾಗ ಸಂಯೋಜಿಸಿ, ಇಡೀ ಸಿನಿಮಾಗೆ ಅತ್ಯದ್ಭುತ ಹಿನ್ನೆಲೆ ಸಂಗೀತ ನೀಡಿದ ಅನೂಪ್ ಸೀಳಿನ್, ಕಥೆಗೆ ಸಂಭಾಷಣೆ ಬರೆದ ದಿವಂಗತ ಗುರು ಕಶ್ಯಪ್ ಹಾಗೂ ಮಳೆ,ಮಲೆನಾಡ ವಾತಾವರಣ ಮತ್ತು ಕತ್ತಲನ್ನು‌ ಮನಮೋಹಕವಾಗಿ ಚಿತ್ರಿಸಿರುವ ಛಾಯಾಗ್ರಾಹಕ ಎಸ್.ಕೆ.ರಾವ್. ಚಿತ್ರವನ್ನು ನಿರ್ಮಿಸಿರುವ ಎ. ಆರ್.ವಿಖ್ಯಾತ್ ಅವರು ಕನ್ನಡಿಗರಿಗೆ ಉತ್ತಮ ಕಥಾಹಂದರದ ಸಿನಿಮಾ ನೀಡಿದ ತೃಪ್ತಿಗಂತು ಮೋಸವಿಲ್ಲ.
ಬಾಕ್ಸ್…
ಚಿತ್ರ: ಮಾನ್ಸೂನ್ ರಾಗ
ರೇಟಿಂಗ್: *** (3/5)
ತಾರಾಗಣ: ಅಚ್ಯುತ್‌ರಾವ್, ಸುಹಾಸಿನಿ, ಡಾಲಿ ಧನಂಜಯ್, ರಚಿತಾ ರಾಮ್, ನಿಹಾಲ್, ಶಿವಾಂಕ್, ಯಶಾ ಶಿವಕುಮಾರ್ ಮತ್ತಿತರರು
ಸಂಗೀತ: ಅನೂಪ್ ಸೀಳಿನ್
ಛಾಯಾಗ್ರಹಣ: ಎಸ್.ಕೆ.ರಾವ್.
ನಿರ್ಮಾಣ: ಎ.ಆರ್.ವಿಖ್ಯಾತ್