ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

: ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅವಧಿಯನ್ನು ವಿಸ್ತರಿಸಲಾಗಿದೆ.
2022-23ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ (ಸಾಮನ್ಯ ಮತ್ತು ಮಾದರಿ) ವಿದ್ಯಾರ್ಥಿನಿಲಯಗಳಲ್ಲಿ ಹೊಸದಾಗಿ ಪ್ರವೇಶ ಬಯಸುವ ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ಸೆ. 22 ರವರೆಗೆ ವಿಸ್ತರಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಇಲಾಖಾ ವೆಬ್‌ಸೈಟ್  www.bcwd.karnataka.gov.in ನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.  ಅರ್ಜಿ ಸಲ್ಲಿಸಲು ಪ್ರವರ್ಗ-1, ಎಸ್.ಸಿ. ಮತ್ತು ಎಸ್.ಟಿ. ವರ್ಗಗಳ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ  ರೂ. 2.50 ಲಕ್ಷದೊಳಗಿರಬೇಕು.  ಪ್ರವರ್ಗ-2ಎ, 2ಬಿ, 3ಎ, 3ಬಿ ಇತರೆ ಹಿಂದುಳಿದ ವರ್ಗ ಹಾಗೂ ಇತರೆ ವರ್ಗಗಳ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ  ರೂ. 1 ಲಕ್ಷ ದೊಳಗಿರಬೇಕು.
ತಾಲ್ಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ ಹಾಗೂ ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ, ಸರ್ಕಾರದ ಆದೇಶ ಹಾಗೂ ಅರ್ಜಿ ಸಲ್ಲಿಕೆಗಾಗಿ  ಇಲಾಖೆಯ ವೆಬ್‌ಸೈಟ್ ಅನ್ನು ನೋಡಬಹುದು. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ  ಇ-ಮೇಲ್  bcwd.hostels@karnataka.gov.in ಮುಖಾಂತರ, ಸಹಾಯವಾಣಿ ಸಂಖ್ಯೆ 080-8050370006 ಅಥವಾ ಜಿಲ್ಲಾ/ ತಾಲ್ಲೂಕು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,  ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us: