ಪುನೀತ್ ಗೆ ನುಡಿನಮನ ನೂತನ ಹಾಡಿನ ಚಿತ್ರೀಕರಣಕ್ಕೆ ಚಾಲನೆ
ಕೊಪ್ಪಳ: ಬದುಕಿದ ಅಲ್ಪ ಅವಧಿಯಲ್ಲಿಯೇ ನಮಗೆ ಅನೇಕ ಆದರ್ಶದ ಕುರುಹು ಬಿಟ್ಟು ಹೋಗಿರುವ, ಪರಸೇವೆಯಲ್ಲಿ ದೈ ಕಾಣುತ್ತಾ ದೇವರಾದ ನಟ ದಿವಂಗತ ಪುನೀತ್ ರಾಜಕುಮಾರ್ ನಮಗೆ ಎಂದೆಂದಿಗೂ ದಾರಿ ದೀಪ ಎಂದು ರಚನಾ ರಾಘವೇಂದ್ರ ಹಿಟ್ನಾಳ್ ಹೇಳಿದರು.
ಅವರು ಹುಲಿಗಿ ಗ್ರಾಮದ ಶ್ರೀಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಪಿಹೆಚ್ಡಿ ವಿದ್ಯಾರ್ಥಿನಿ ಶೃತಿ ಹಾಡಿ, ಅಭಿನಯಿಸುತ್ತಿರುವ ಓ ದೊರೆ ರಾಜ ನೂತನ ನುಡಿ ನಮನ ಹಾಡಿನ ಚಿತ್ರೀಕರಣಕ್ಕೆ ಚಾಲನೆ ನೀಡಿ, ಅಪ್ಪು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಸುಮಾರು ಆರು ತಿಂಗಳ ಕಾಲ ಶ್ರಮಿಸಿ ಟ್ಯೂನ್ ಮಾಡುವ ಮೂಲಕ ಅತ್ಯುತ್ತಮ ಸಾಹಿತ್ಯದೊಂದಿಗೆ ಹೊರ ಬಂದಿರುವ ಈ ಹಾಡು ಉತ್ತರ ಕರ್ನಾಟಕ ಪ್ರತಿಭೆಯ ಪರಿಚಯ ಚಿತ್ರರಂಗಕ್ಕೆ ಪರಿಚಯಿಸಲಿದೆ, ಶೃತಿ ತಮ್ಮ ಅಭಿಮಾನದ ಹಾಡನ್ನು ಅತ್ಯದ್ಭುತವಾಗಿ ಹಾಡಿದ್ದು ಚಿತ್ರರಂಗದಲ್ಲಿ ಇದು ಮೈಲುಗಲ್ಲಾಗಲಿದೆ ಎಂದು ಭವಿಷ್ಯ ನುಡಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಸಂಘದ ಹೊಸಪೇಟೆ ತಾಲೂಕಾ ಅಧ್ಯಕ್ಷ ಗುಂಡಿ ರಮೇಶ್ ಮಾತನಾಡಿ, ಉತ್ತರ ಕರ್ನಾಟಕ ಕಲಾವಿದರು ಇತ್ತೀಚಿಗೆ ಚಿತ್ರರಂಗದಲ್ಲಿ ದಾಪುಗಾಲಿಡುತ್ತಿರುವುದು ಆಶಾದಾಯಕ ಬೆಳವಣಿಗೆ, ನಿರಂತರ ಶ್ರಮ, ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಉತ್ತಮವಾದದನ್ನು ಸಾಧಿಸಬಹುದು ಎನ್ನುವುದಕ್ಕೆ ಶೃತಿ ಹ್ಯಾಟಿ ಅವರು ಹಾಡಿದ ಹಾಡು ಅತ್ಯುತ್ತಮ ನಿದರ್ಶನ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸ್ಥಳೀಯ ಕಲಾವಿದರನ್ನೇ ಬಳಿಸಿಕೊಂಡು, ಲಭ್ಯ ಸಂಪನ್ಮೂಲಗಳ ಮೂಲಕ ಉತ್ತಮ ಕೊಡುಗೆ ನೀಡಬಹುದು ಎನ್ನುವುದಕ್ಕೆ ಶೃತಿ ಹ್ಯಾಟಿ ಆದರ್ಶವಾಗಿ ನಿಲ್ಲುತ್ತಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕಾ ಘಟಕದ ಅಧ್ಯಕ್ಷ ನಾಗರಾಜ್ ಇಂಗಳಗಿ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕ ಗುಜ್ಜಲ್ ಪುರುಷೋತ್ತಮಾ, ಕಾಂಗ್ರೆಸ್ ಮುಖಂಡ ಹನುಮಂತಪ್ಪ ಹ್ಯಾಟಿ, ಜೋಗಿ ತಾಯಪ್ಪ, ರಾಗ ಸಂಯೋಜಕಿ ಹಾಗು ಗಾಯಕಿ, ನಟಿ ಶೃತಿ ಹ್ಯಾಟಿ, ವಿನಯ್ ಕುಮಾರ್ ಹ್ಯಾಟಿ, ನೈತ್ಯ ನಿರ್ದೇಶಕ ಬಸವರಾಜ್ ಬಸವರಾಜ್ ಎಂ.ಡಿ.ಗಂಗಾವತಿ, ಕಲಾವಿದ ಪರಶುರಾಮ್ ಹೊಸಪೇಟೆ, ಸಂಗೀತ ನಿರ್ದೇಶಕ ನಂದು, ತಿಪ್ಪು, ವಿನಯ್ ಸಾಗರ್ ಹ್ಯಾಟಿ, ಪ್ರೀತಂ ಬೆಂಗಳುರು, ಗೌರಿ ಶಂಕರ್ ಬಣಕಾರ ಮತ್ತು ಸುನೀಲ್ ಕುಮಾರ್ ಹ್ಯಾಟಿ ಇತರರಿದ್ದರು.