೨೧ರಂದು ಮಳೆಮಲ್ಲೇಶ್ವರ ಜಾತ್ರಾ, ಸಾಮೂಹಿಕ ವಿವಾಹ ನಿಮಿತ್ಯ ವಿಶೇಷ ಲೇಖನ

ಕೊಪ್ಪಳ ಇಂದ್ರಕೀಲ ಪರ್ವತದ ಮಳೆಮಲ್ಲೇಶ್ವರ ಮತ್ತು ಪರಿಸರದ ಇತಿಹಾಸ


(ದಿನಾಂಕ-೨೦-೦೮-೨೦೨೨ರಂದು ಲಘು ಉಚ್ಚಾಯ ಮತ್ತು ೨೧-೦೮-೨೦೨೨ರಂದು ಮಳೆಮಲ್ಲೇಶ್ವರ ಜಾತ್ರಾ ಮತ್ತು ಸಾಮೂಹಿಕ ವಿವಾಹ ನಿಮಿತ್ಯ ವಿಶೇಷ ಲೇಖನ )
ಕೊಪ್ಪಳದ ಇತಿಹಾಸವು ಪುರಾಣ ಕಾಲದ ಚರಿತ್ರೆಯೊಂದಿಗೆ ತಳುಕು ಹಾಕಿಕೊಂಡಿದೆ. ಪುರಾಣವೆಂದರೆ ನಿನ್ನೆ-ಮೊನ್ನೆ ರಚಿಸಿದ ಪುರಾಣಗಳಲ್ಲ. ಸಾವಿರಾರು ವರ್ಷಗಳ ಹಿಂದೆ ರಚಿಸಿದ ಪುರಾಣಗಳಲ್ಲಿ ಕೊಪ್ಪಳದ ಪ್ರದೇಶಗಳ ಉಲ್ಲೇಖಗಳು ಬರುವುದರಿಂದ ಇದರ ಚರಿತ್ರೆ ಅರಿಯುವುದು ಅಷ್ಟು ಸುಲಭವಲ್ಲ. ಕ್ರಿ.ಶ.ಪೂ ಸಾವಿರಾರು ವರ್ಷಗಳ ಹಿಂದೆ ರಚಿಸಿದ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳಲ್ಲೇ ಈ ಪರಿಸರದ ಬಗ್ಗೆ ಉಲ್ಲೇಖವಿದೆ. ಹೀಗಾಗಿ ಕೊಪ್ಪಳದ ಚರಿತ್ರೆ ಬಹಳ ದೂರವೇ ಇದೆ ಎನ್ನಬಹುದು.
ಕೊಪ್ಪಳ ಪ್ರದೇಶಗಳ ಬಗ್ಗೆ ರಾಮಾಯಣ ಕಾವ್ಯದಲ್ಲಿ ಕಿಷ್ಕಿಂದೆ ಪ್ರದೇಶ ಮತ್ತು ಮಹಾಭಾರತದಲ್ಲಿ ಇಂದ್ರಕೀಲ ಪರ್ವತದ ಉಲ್ಲೇಖಗಳಿವೆ. ರಾಮಾಯಣದ ಕಿಷ್ಕಿಂದೆಯು ಇಂದಿನ ಆನೆಗುಂದಿ-ಹಂಪಿ ಪ್ರದೇಶ ಎಂದು ಹೇಳಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬAತೆ ಈ ಪ್ರದೇಶದಲ್ಲಿ ಅನೇಕ ಪುರಾಣಗಳು, ಶಾಸನಗಳು, ಪ್ರಾಕೃತಿಕ ಆಧಾರಗಳು, ನಂಬಿಕೆ-ಐತಿಹ್ಯಗಳು ಇಲ್ಲಿ ದೊರಕಿವೆ. ಅದರಂತೆ ಮಹಾಭಾರತದಲ್ಲಿ ಉಲ್ಲೇಖಿತ ಇಂದ್ರಕೀಲ ಪರ್ವತವೇ ಕೊಪ್ಪಳದ ಹತ್ತಿರವಿರುವ ಇಂದಿನ ‘ಮಳೆಮಲ್ಲೇಶ್ವರ ಪರ್ವತ’ ಎಂದು ಹೇಳಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂದರೆ ಸಾವಿರಾರು ವರ್ಷಗಳಿಂದ ನಂಬಿಕೊಡು ಬಂದಿರುವ ಇಲ್ಲಿನ ಅನೇಕ ಪುರಾಣಗಳು, ಐತಿಹ್ಯಗಳೇ ಆಧಾರಗಳಾಗಿವೆ.
ಮಳೆಮಲ್ಲೇಶ್ವರ ಪರ್ವತ, ಮಳೆಮಲ್ಲೇಶ್ವರ ಬೆಟ್ಟ, ಮಳೆಮಲ್ಲಪ್ಪನ ಬೆಟ್ಟ, ಮಳೆಮಲ್ಲಪ್ಪನ ಪರ್ವತ, ಇಂದ್ರಕೀಲ ಪರ್ವತ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ಈ ಪರ್ವತವು ಕೊಪ್ಪಳ ನಗರದಿಂದ ಸುಮಾರು ಎರಡು-ಮೂರು ಕಿ.ಮೀ ದೂರದಲ್ಲಿದೆ. ನಗರದ ದಕ್ಷಿಣಕ್ಕಿರುವ ಈ ಪರ್ವತವು ವಿಶಾಲವಾಗಿ ಪೂರ್ವದವರೆಗೂ ಸುಮಾರು ನಾಲ್ಕಾರು ಕಿ.ಮೀ.ಗಳವರೆಗೂ ವಿಶಾಲವಾಗಿ ಹರಡಿಕೊಂಡಿದೆ. ಇಂದು ಈ ಪರ್ವತವು ಕೇವಲ ‘ಇಂದ್ರಕೀಲ ಪರ್ವತ’ ಅಥವಾ ‘ಮಳೆಮಲ್ಲೇಶ್ವರ ಬೆಟ್ಟ’ ಎಂದಷ್ಟೇ ಕರೆಸಿಕೊಳ್ಳುತ್ತಿರಬಹುದು. ಆದರೆ ಈ ಪರ್ವತದ ಪ್ರಾಚೀನ ಕಾಲದ ಚರಿತ್ರೆಯನ್ನು ಅಧ್ಯಯನ ಮಾಡಿದಾಗ ಅದರ ಇತಿಹಾಸದ ಮಹತ್ವ ತಿಳಿದುಬರುತ್ತದೆ. ಕ್ರಿ.ಶ.ಪೂ ಸುಮಾರು ಹತ್ತು-ಹದಿನೈದು ಸಾವಿರ ವರ್ಷದ ಹಿಂದಿನ ಚರಿತ್ರೆಯಿಂದ ಇಂದಿನವರೆಗೂ ತಿಳಿದುಬರುತ್ತದೆ. ‘ಮಲೆ’ ಎಂದರೆ ಸಾಮಾನ್ಯ ಅರ್ಥದಲ್ಲಿ ‘ಬೆಟ್ಟ’ ಅಥವಾ ‘ಪರ್ವತ’ ಎಂದಾಗುತ್ತದೆ. ಸಾಮಾನ್ಯವಾಗಿ ಅದನ್ನು ‘ಮಲೆ’ಯ ಬದಲಾಗಿ ‘ಮಳೆ’ ಎಂಬ ಪದ ಪ್ರಯೋಗಿಸಲಾಗುತ್ತಿದೆ. ಹೀಗಾಗಿ ಇದಕ್ಕೆ ‘ಮಳೆ’ಮಲ್ಲೇಶ್ವರ ಎಂದು ಕರೆದಿರಬಹುದು.
ಮಹಾಭಾರತದ ಇಂದ್ರಕೀಲ ಪರ್ವತವೇ?;- ಇದನ್ನು ಮಹಾಭಾರತದ ಇಂದ್ರಕೀಲ ಪರ್ವತ ಎಂದು ಕರೆಯಲಾಗುತ್ತಿದೆ. ಅರ್ಜುನನು ತಪಸ್ಸಿಗೆ ಕುಳಿತದ್ದು ಇದೇ ಪರ್ವತದಲ್ಲಿ ಎಂದು ಹೇಳಲಾಗುತ್ತಿದೆ. ಅರ್ಜುನನ ತಪಸ್ಸನ್ನು ಭಂಗಗೊಳಿಸಲು ಶಿವನು ಹಂದಿಯ ವೇಷದಲ್ಲಿ ಬಂದು ಭಂಗಗೊಳಿಸುತ್ತಾನೆ. ಆಗ ಕುಪಿತನಾದ ಅರ್ಜುನನು ಶಿವನ ಮೇಲೆ ಯುದ್ಧ ಮಾಡುತ್ತಾನೆ. ಆ ಯುದ್ಧದಲ್ಲಿ ಅರ್ಜುನನು ಜಯಗಳಿಸುತ್ತಾನೆ. ಆಗ ಅರ್ಜುನನ್ನು ಮೆಚ್ಚಿದ ಶಿವನು ಅರ್ಜುನನಿಗೆ ಪಾಶುಪತಾಸ್ತ್ರವನ್ನು ನೀಡುತ್ತಾನೆ. ಅದನ್ನೇ ಕೊನೆಗೆ ಕರ್ಣನ ಮೇಲೆ ಪ್ರಯೋಗಮಾಡಿ ಸಾಯಿಸುತ್ತಾನೆಂದು ಹೇಳಲಾಗುತ್ತಿದೆ. ಅರ್ಜುನನು ತಪಸ್ಸು ಮಾಡಿದ ಮತ್ತು ಶಿವನ ಜೊತೆ ಯುದ್ಧ ಮಾಡಿದ ಇಂದ್ರಕೀಲ ಪರ್ವತವೇ ಇಂದಿನ ಕೊಪ್ಪಳದ ಈ ಮಳೆಮಲ್ಲೇಶ್ವರ ಪರ್ವತ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ. ಪುರಾತತ್ವ ಇಲಾಖೆ ಸಂಶೋಧಕರಾಗಿದ್ದ ಶ್ರೀ ಯಾಜ್ದಾನಿಯವರೇ ಇದನ್ನು ಮೊದಲು ಇಂದ್ರಕೀಲ ಪರ್ವತ ಎಂದು ಕರೆದರೆಂದು ತಿಳಿದು ಬಂದರೂ ದಿ||ನಾ.ಭಾ.ಶಾಸ್ತ್ರಿಗಳು ವಿವರಿಸಿದ್ದಂತೆ ಅದನ್ನು ಇಲ್ಲಿನ ಜನರ ಬಾಯಿಂದಲೇ ವಿಷಯ ಸಂಗ್ರಹಿಸಿದ ಮೇಲೆಯೇ ಶ್ರೀ ಯಾಜ್ದಾನಿಯವರು ಉಲ್ಲೇಖಿಸಿದ್ದಾರೆಂದು ವಿವರಿಸಿದ್ದಾರೆ. ಅದೇನೇ ಇದ್ದರೂ ಇಲ್ಲಿನ ಜನರು ಈ ಪರ್ವತವನ್ನು ಅರ್ಜುನನು ತಪಸ್ಸು ಮಾಡಿದ ‘ಇಂದ್ರಕೀಲ ಪರ್ವತವೇ’ ಇದು ಎಂದು ಸಾವಿರಾರು ವರ್ಷಗಳಿಂದ ನಂಬಿಕೊAಡು ಬಂದಿರುವ ನಂಬಿಕೆ ಮಾತ್ರ ಸುಳ್ಳಲ್ಲ.
ಶಿಲಾಸಮಾಧಿಗಳು;- ಈ ಪರ್ವತದ ಮೇಲೆ ಅನೇಕ ಶಿಲಾಸಮಾಧಿಗಳನ್ನು ಕಾಣಬಹುದಾಗಿದೆ. ಇವು ಕ್ರಿ.ಪೂ ಸುಮಾರು ೧೫೦೦ ವರ್ಷಗಳ ಕೆಳಗೆ ನಿರ್ಮಾಣಗೊಂಡಿರಬಹುದೆAದು ಇತಿಹಾಸಕಾರರ ಅಭಿಪ್ರಾಯವಾಗಿದೆ. ಅವು ಆದಿಮಾನವರ ಸಮಾಧಿಗಳಾಗಿವೆ. ಪ್ರಾಚೀನ ಕಾಲದಲ್ಲಿ ಮಾನವರು ಸತ್ತಾಗ ಕ್ರಮಬದ್ಧವಾಗಿ ಈ ರೀತಿಯಲ್ಲಿ ಶವಸಂಸ್ಕಾರ ಮಾಡುವ ಪದ್ಧತಿಯನ್ನು ಇಟ್ಟುಕೊಂಡಿದ್ದರು. ಅವುಗಳು ಕುರುಹುಗಳು ಎಂಬಂತೆ ಇಂದು ಶಿಲಾಸಮಾಧಿಗಳ ರೂಪದಲ್ಲಿ ನಿಂತಿವೆ. ಇಂತಹ ಶಿಲಾಸಮಾಧಿಗಳನ್ನು ಜಿಲ್ಲೆಯ ಕೆಲ ಭಾಗಗಳಲ್ಲಿ ಕಂಡುಬAದರೂ ಗಂಗಾವತಿಯ ಹಿರೇಬೆಣಕಲ್ ಗ್ರಾಮದ ಬೆಟ್ಟದ ಮೇಲೆ ಹೆಚ್ಚಾಗಿ ಇರುವುದನ್ನು ಕಾಣಬಹುದಾಗಿದೆ. ಜಿಲ್ಲೆಯ ಹಿರೇಬೆಣಕಲ್ ಹೊರತುಪಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಶಿಲಾಸಮಾಧಿಗಳು ಸಿಗುವ ಪ್ರದೇಶವೇ ಈ ಮಳೆಮಲ್ಲೇಶ್ವರ ಪರ್ವತ. ಅದರೆ ಇಲ್ಲಿರುವ ಸಮಾಧಿಗಳು ಸಂಪೂರ್ಣ ನೆಲಕಚ್ಚಿ ಬಿದ್ದಸ್ಥಿತಿಯಲ್ಲಿವೆ. ನೆಲದ ಮೇಲೆ ಬಿದ್ದ ಕಲ್ಲುಗಳಂತೆ ಕಾಣುತ್ತವೆ. ಹೀಗಾಗಿ ಅವುಗಳ ಸಂಖ್ಯೆಗಳಾಗಲಿ ಇಲ್ಲವೇ ಹೆಚ್ಚಿನ ಮಾಹಿತಿಗಳು ಲಭ್ಯವಾಗುವುದಿಲ್ಲ. ಒಟ್ಟಿನಲ್ಲಿ ಈ ಬೆಟ್ಟದ ಮೇಲೆ ಆದಿಮಾನವರು ವಾಸವಾಗಿದ್ದರೆಂದು ಮತ್ತು ಅವರ ಸಾಂಸ್ಕೃತಿಕ ಜೀವನಕ್ಕೆ ಇವು ಸಾಕ್ಷಿ ಎನ್ನುವುದು ಮಾತ್ರ ಸತ್ಯ.
ಗುಹೆಗಳು;- ಈ ಬೆಟ್ಟದ ಮೇಲೆ ಅಲ್ಲಲ್ಲಿ ಗುಹೆಗಳಿವೆ. ಇವು ಆದಿ ಮಾನವರ ವಾಸಸ್ಥಾನಗಳಾಗಿದ್ದವು. ಪ್ರಾಚೀನ ಕಾಲದಲ್ಲಿ ಆದಿಮಾನವರು ಈ ಬೆಟ್ಟದ ಮೇಲಿರುವ ಗುಹೆಗಳಲ್ಲಿಯೇ ವಾಸವಾಗಿದ್ದರೆಂದು ಇಲ್ಲಿನ ಕುರುಹುಗಳ ಆಧಾರದ ಮೇಲೆ ತಿಳಿದುಬರುತ್ತದೆ.
ಗುಹಾಚಿತ್ರಗಳು;- ಈ ಬೆಟ್ಟದ ಗುಹೆಗಳೊಳಗೆ ಗುಹಾಚಿತ್ರಗಳಿವೆ. ಇದು ಆದಿಮಾನವನ ಕಲಾವಂತಿಕೆಯನ್ನು ತೋರುತ್ತವೆ. ಆ ಚಿತ್ರಗಳಲ್ಲಿ ಪ್ರಾಣಿಗಳು, ಬೇಟೆಯಾಡುವ ಚಿತ್ರಗಳು ಮತ್ತು ಬೇರೆ-ಬೇರೆ ಅಸ್ಪಷ್ಟ ಚಿತ್ರಗಳು ಇಲ್ಲಿವೆ. ಅವು ಆದಿಮಾನವರ ಸಂಸ್ಕೃತಿ ಎಂಬAತೆ ಬಳಸಿದ ಬಗ್ಗೆ ತಿಳಿದುಬರುತ್ತದೆ. ಇವು ಇಷ್ಟು ಸಾವಿರ ವರ್ಷಗಳಾದರೂ ನಶಿಸದೇ ಇರುವುದು ಬಹಳ ವಿಶೇಷ ಎನ್ನಬಹುದು.
ಕಮಲ ಸರೋವರ;- ಈ ಇಂದ್ರಕೀಲ ಪರ್ವತದ ಮೇಲೆ ಬಹಳ ಸುಂದರವಾಗಿ ಕಾಣುವ ಒಂದು ಹೊಂಡವಿದೆ. ಅದು ಸರೋವರದಂತೆ ಕಾಣುತ್ತಿದ್ದು ಅದನ್ನು ಕಮಲ ಸರೋವರ ಎಂದು ಕರೆಯಲಾಗುತ್ತಿದೆ. ಈ ಸರೋವರವು ಸದಾ ನೀರಿನಿಂದ ತುಂಬಿಕೊಂಡಿರುವ ಸೆಲೆಯಾಗಿದೆ. ಅದರಲ್ಲಿ ಅನೇಕ ಸುಂದರವಾದ ಕಮಲಗಳನ್ನು ಕಾಣಬಹುದಾಗಿದೆ. ಅವು ಚಳಿ, ಮಳೆ ಮತ್ತು ಬೇಸಿಗೆ ಎಲ್ಲಾ ಕಾಲಗಳಲ್ಲೂ ಸದಾ ಅರಳಿ ನಿಂತ ಕಮಲಗಳು ಸಹೃದಯರನ್ನು ಆಕರ್ಷಿಸುತ್ತವೆ. ಮಳೆಮಲ್ಲೇಶ್ವರನಿಗೆ ಅಲ್ಲಿನ ಕಮಲದ ಹೂಗಳಿಂದಲೇ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಇದು ಪ್ರಾಚೀನ ಕಾಲದಿಂದಲೂ ಮುಂದುವರೆದುಕೊAಡು ಬಂದಿರುವ ಸಂಪ್ರದಾಯವಾಗಿದೆ.
ಅಶೋಕನ ಶಿಲಾಶಾಸನ;- ಕ್ರಿ.ಪೂ ೩-೨ನೇ ಶತಮಾನದಲ್ಲಿ ಅಶೋಕನು ಕೊಪ್ಪಳದಲ್ಲಿ ಎರಡು ಶಾಸನಗಳನ್ನು ಕೆತ್ತಿಸಿದ್ದಾನೆ. ಒಂದು ಶ್ರೀ ಗವಿಮಠದ ಹಿಂದಿರುವ ಬಂಡೆಯ ಮೇಲೆ, ಮತ್ತೊಂದು ಈ ಮಳೆಮಲ್ಲೇಶ್ವರ ಪರ್ವತದ ಮೇಲಿದೆ. ಈ ಎರಡೂ ಶಾಸನಗಳ ಪಠ್ಯ ಒಂದೇ ಆಗಿದ್ದು, ಪ್ರಾಕೃತ ಭಾಷೆಯ ಬ್ರಾಹ್ಮಿ ಲಿಪಿಯಲ್ಲಿವೆ. ಆದರೆ ಮಳೆಮಲ್ಲೇಶ್ವರ ಬೆಟ್ಟದ ಮೇಲಿರುವ ಶಾಸನದ ಲಿಪಿ ಬಹುತೇಕ ಅಳಿಸಿಹೋಗಿದ್ದು, ಓದಲು ಸಾಧ್ಯವಾಗುವುದಿಲ್ಲ. ಇವು ಧರ್ಮಪ್ರಚಾರದ ಶಾಸನಗಳಾಗಿದ್ದು, ಕ್ಷÄದ್ರ ಜನರೂ ಕೂಡ ಧರ್ಮಾಚರಣೆ ಮಾಡಬಹುದೆಂದು ಹೇಳಲಾದ ಶಾಸನಗಳು ಇವಾಗಿವೆ. ಇಂತಹ ಧರ್ಮ ಪ್ರಚಾರದ ಶಾಸನಗಳು ಈ ಪರ್ವತದ ಮೇಲಿರುವುದು ವಿಶೇಷವಾಗಿದೆ.
ಇತರೆ ಶಾಸನಗಳು;- ಈ ಬೆಟ್ಟದ ಮೇಲೆ ಅಶೋಕನ ಶಾಸನವಲ್ಲದೇ ಇತರೆ ಸುಮಾರು ಇಪ್ಪತ್ತಕ್ಕೂ ಅಧಿಕ ಶಾಸನಗಳಿವೆ. ಅದರಲ್ಲಿ ಬಹುತೇಕ ಶಾಸನಗಳು ಒಂದು ಸಾಲಿನ ಇಲ್ಲವೆ ಎರಡು ಸಾಲಿನವುಗಳಾಗಿವೆ. ಮತ್ತು ವಿಶೇಷವಾಗಿ ಅದರಲ್ಲಿ ಹೆಚ್ಚಿನವುಗಳು ಜೈನಶಾಸನಗಳಾಗಿವೆ. ಕೊಪ್ಪಳವು ಜೈನಧರ್ಮದ ಪವಿತ್ರ ಸ್ಥಳವಾಗಿತ್ತು ಎಂಬುದು ಎಲ್ಲರಿಗೂ ತಿಳಿದ ಇತಿಹಾಸ. ಇಂತಹ ಪವಿತ್ರ ಮತ್ತು ಶ್ರದ್ಧಾ ಕೇಂದ್ರಕ್ಕೆ ಅನೇಕ ಜೈನ ಮುನಿಗಳು ಭೇಟಿಕೊಟ್ಟ ಉದಾಹರಣೆಗಳು ಇಂದಿಗೂ ಸಹ ದೊರೆಯುತ್ತಿವೆೆ. ಈ ಬೆಟ್ಟದ ಮೇಲಿರುವ ಅನೇಕ ಶಾಸನಗಳು ಜೈನಮುನಿಗಳು ಭೇಟಿಕೊಟ್ಟ ಕಾರಣಕ್ಕಾಗಿ ಶಾಸನಗಳನ್ನು ಕೊರೆಸಿದವುಗಳಾಗಿವೆ. ಸುಮಾರು ಹದಿನೈದು ಶಾಸನಗಳು ಮುನಿಗಳ ಭೇಟಿಕೊಟ್ಟದ್ದನ್ನು ಸಾಕ್ಷೀಕರಿಸುತ್ತವೆ. ಇಷ್ಟು ಶಾಸನಗಳನ್ನು ಇದೇ ಬೆಟ್ಟದ ಮೇಲೆಯೇ ಏಕೆ ಕೆತ್ತಿಸಲಾಯಿತು ಎಂಬ ಪ್ರಶ್ನೆ ಉಂಟಾಗುವುದು ಸಹಜ. ಬಹುಶಃ ಈ ಪರ್ವತ ಪ್ರಾಚೀನ ಕಾಲದಲ್ಲಿ ಜೈನರ ಪವಿತ್ರ ಸ್ಥಳವಾಗಿರಬೇಕು ಅದಕ್ಕಾಗಿಯೇ ಇಲ್ಲಿ ಶಾಸನಗಳನ್ನು ಕೊರೆಸಿರಬಹುದು. ಪಾರಿಸಕೀರ್ತಿ, ಇಂದ್ರನಾಗಮ್ಮ, ಪಾಯಣ, ಮಸೋಪವಾಸಿ ಮಹಾನಂದಿ, ಬಸದಿಯ ಸಾಂತಪ್ಪ, ಚಿಕ್ಕಜೀಯ ಚಂದ್ರಪ್ಪ, ಲಕ್ಕಣ್ಣ, ವರ್ಧಮಾನ, ಕೊಲ್ಲಾಪುರದ ಸೋಬಣ್ಣ, ತೆಂಗುಳಿಯ ಸಂಗಪ್ಪ, ಗುಂಡಕಲ್ಲ ಸೋವಿಗುಡ್ಡ, ಬ್ರಹ್ಮ ಸಮುದ್ರ, ತೋಡರಮಲ್ಲ ನಂಜಿನಾಥ, ಮೀಸರ ಗಂಡ ಎಂಬ ಬಿರುದುಳ್ಳ ಕಲ್ಲಪ್ಪ ನಾಯಕ, ಮಲ್ಲಾನೆಯ(ಮಲ್ಲಯ್ಯ) ಮಗ ನಂಜರಾಯ ಹೀಗೆ ಮುಂತಾದವರು ಕೊಪ್ಪಳಕ್ಕೆ ಭೇಟಿಕೊಟ್ಟದ್ದಕ್ಕೆ ಶಾಸನಗಳನ್ನು ಕೆತ್ತಿಸಲಾಗಿದೆ. ಆದರೆ ಅವರು ಯಾವಕಾರಣಕ್ಕಾಗಿ ಇಲ್ಲಿಗೆ ಭೇಟಿಕೊಟ್ಟರು ಮತ್ತು ಇತರೆ ಯಾವುದೇ ಮಾಹಿತಿಗಳು ಆ ಶಾಸನಗಳಲ್ಲಿ ಉಲ್ಲೇಖ ಇರುವುದಿಲ್ಲ. ಆದರೂ ಇಷ್ಟೆಲ್ಲಾ ಹಿರಿಯರು ಈ ಪರ್ವತಕ್ಕೆ ಭೇಟಿಕೊಟ್ಟಿದ್ದಾರೆ ಎಂದರೆ ಅದು ಸಾಮಾನ್ಯವಾದ ಪರ್ವತವಾಗಿರಲಿಕ್ಕಿಲ್ಲ ಎಂದೆನಿಸುತ್ತದೆ.
ಈ ಬೆಟ್ಟದ ಮೇಲೆ ಮತ್ತೊಂದು ವಿಶೇಷವಾದ ಶಾಸನವನ್ನು ಕಾಣಬಹುದಾಗಿದೆ. ಕ್ರಿ.ಶ ೧೦೦೮ರ ಶಾಸನದಲ್ಲಿ ಆಚಾರ್ಯ ಸಿಂಹನಂದಿಯು ‘ಇಂಗಿಣಿ ಮರಣ’ ಹೊಂದಿದ್ದನ್ನು ತಿಳಿಸುತ್ತದೆ. ಸಿಂಹನಂದಿ ಆಚಾರ್ಯರು ಕಡುತಪಸ್ಸಿನಿಂದ ಆಚರಣೆ ಮಾಡಿ ಮೋಕ್ಷಕ್ಕೆ ಸಂದರೆಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಈ ಇಂಗಿಣಿ ಮರಣವೇ ಬಹಳ ಕಠಿಣವಾದ ಮೋಕ್ಷದ ವ್ರತವಾಗಿದೆ. ಸಲ್ಲೇಖ ವ್ರತಗಳಲ್ಲೇ ಇದು ಅತ್ಯಂತ ಕಠಿಣವಾದ ವ್ರತವಾಗಿದೆ. ಇಂತಹ ವ್ರತವನ್ನಾಚರಣೆ ಮಾಡಿ ಮೋಕ್ಷ ಹೊಂದಿದ ಬಗ್ಗೆ ಇತಿಹಾಸದಲ್ಲಿ ಕೆಲವೇ ಕೆಲವು ಉದಾಹರಣೆಗಳು ನಮಗೆ ದೊರೆಯುತ್ತವೆ. ಅದರಲ್ಲಿ ಇಂತಹ ಇಂಗಿಣಿ ಮರಣದ ಬಗ್ಗೆ ಕೊಪ್ಪಳದಲ್ಲಿ ಉಲ್ಲೇಖವಿದೆ ಎಂದರೆ ಇದು ಸಾಮಾನ್ಯ ಸಂಗತಿಯಲ್ಲ. ಮತ್ತು ಅದು ವಿಶೇಷವಾಗಿ ಈ
ಮೂರ್ತಿಶಿಲ್ಪಗಳು;- ಈ ಪರ್ವತದ ಮೇಲೆ ಅಲ್ಲಲ್ಲಿ ಭಗ್ನಗೊಂಡ ಅನೇಕ ಮೂರ್ತಿ-ಶಿಲ್ಪಗಳನ್ನು ಕಾಣಬಹುದಾಗಿದೆ. ಕ್ರಿ.ಶ. ೧೦ನೇ ಶತಮಾನದ ಒಂದು ಶಾಸನದಲ್ಲಿ ಜಾವಯ್ಯನೆಂಬುವ ಶಿಷ್ಯನು ತನ್ನ ಗುರುಗಳಾದ ಜಟಾಸಿಂಗ ಆಚಾರ್ಯರ ಪಾದುಕೆಗಳನ್ನು ಶಿಲೆಯಲ್ಲಿ ಕೆತ್ತಿಸಿದನೆಂದು ಶಾಸನದಲ್ಲಿ ಬರೆಸಲಾಗಿದೆ. ಅಲ್ಲದೆ ಭಟ್ಟಾರಕರ ಪ್ರಿಯ ಶಿಷ್ಯ ವರ್ಧಮಾನದೇವರು ಛಾಯಾಚಂದ್ರನಾಥಸ್ವಾಮಿಯ ಬಿಂಬವನ್ನು ಮಾಡಿಸಿದನೆಂದು ಕ್ರಿ.ಶ ೧೮ನೇ ಶತಮಾನದ ಶಾಸನದಲ್ಲಿ ವಿವರವನ್ನು ಕಾಣಬಹುದು. ಅಲ್ಲದೇ ಅಲ್ಲಲ್ಲಿ ಬಿದ್ದ, ಭಗ್ನಗೊಂಡ, ಚೂರಾದ ಮೂರ್ತಿ-ಶಿಲ್ಪಗಳು ಕಂಡುಬರುತ್ತಿವೆ.
ಮಳೆಮಲ್ಲೇಶ್ವರ ದೇವಸ್ಥಾನ;- ಈ ಬೆಟ್ಟದ ಕೆಳಗೆ ಮಳೆಮಲ್ಲೇಶ್ವರ ದೇವಸ್ಥಾನವಿದೆ. ಇದು ಕ್ರಿ.ಶ. ಸುಮಾರು ೧೨-೧೩ನೇ ಶತಮಾನದಲ್ಲಿ ನಿರ್ಮಾಣವಾಗಿರಬಹುದೆಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ದೇವಸ್ಥಾನದೊಳಗಿರುವ ಲಿಂಗವನ್ನು ‘ಉದ್ಭವಲಿಂಗ’ ಎಂದು ಹೇಳಲಾಗುತ್ತಿದೆ. ಅಂದರೆ ಆ ಲಿಂಗವು ಸ್ವಯಂಭುವಾಗಿ ಸ್ಥಾಪಿತಗೊಂಡ ಲಿಂಗವಾಗಿದ್ದು; ಮಾನವರಿಂದ ಸ್ಥಾಪಿತವಾದುದಲ್ಲ. ಈ ರೀತಿ ಉದ್ಭವಲಿಂಗಳನ್ನು ಹೊಂದಿರುವ ಅನೇಕ ದೇವಾಲಯಗಳು ಕರ್ನಾಟಕದಲ್ಲಿವೆ. ಅದರಂತೆ ಕೊಪ್ಪಳದ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿಯೂ ಸಹ ‘ಉದ್ಭವಲಿಂಗ’ ಇರುವುದು ವಿಶೇಷ ಎನ್ನಬಹುದು. ಆದರೆ ಈ ದೇವಸ್ಥಾನ ಇತ್ತೀಚೆಗೆ ಜೀರ್ಣೋದ್ಧಾರಗೊಂಡಿರುವುದರಿAದ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ. ಆದರೂ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಈ ಬೆಟ್ಟಕ್ಕೆ ‘ಮಳೆಮಲ್ಲೇಶ್ವರ ಬೆಟ್ಟ’ ಅಥವಾ ‘ಪರ್ವತ’ ಎಂದು ಕರೆಯುತ್ತಿರುವುದು. ಪರ್ವತಕ್ಕಿರುವ ಈ ಹೆಸರು ಅನಾದಿಕಾಲದಿಂದಲೂ ಬಂದಿರಬಹುದು. ಹಾಗಾದರೆ ಈ ದೇವಾಲಯವೂ ಸಹ ಅನಾದಿಕಾಲದಿಂದ ಇದ್ದಿರಬೇಕು. ಯಾಕೆಂದರೆ ಅನಾದಿಕಾಲದಿಂದ ಬಂದ ಪರ್ವತದ ಹೆಸರೇ ‘ಮಳೆಮಲ್ಲೇಶ್ವರ ಪರ್ವತ’ ಮತ್ತು ಆ ಪರ್ವತದ ಕೆಳಗೆ ಇರುವ ಈಶ್ವರನ ದೇವಸ್ಥಾನದ ಹೆಸರೂ ‘ಮಳೆಮಲ್ಲೇಶ್ವರ ದೇವಸ್ಥಾನ’ ಎಂದಾದರೆ, ಅದು ಪರ್ವತದ ಜೊತೆ-ಜೊತೆಯಲ್ಲೇ ಈ ದೇವಸ್ಥಾನ ಬಂದಿರಬೇಕು. ಅದರ ಬಗ್ಗೆಯೂ ಹೆಚ್ಚಿನ ಮಾಹಿತಿಗಳು ಲಭ್ಯವಾಗುವುದಿಲ್ಲ. ಯಾಕೆಂದರೆ ಆ ಪರ್ವತ ಮತ್ತು ದೇವಸ್ಥಾನದ ಕಾಲದ ಇತಿಹಾಸ ಎಷ್ಟು ಸಾವಿರ ವರ್ಷಗಳದ್ದೆಂದು ತಿಳಿದುಬರುವುದಿಲ್ಲ. ಆದರೂ ಈ ದೇವಸ್ಥಾನವನ್ನು ಆಗಾಗ್ಗೆ ಜೀರ್ಣೋದ್ಧಾರ ಮಾಡುತ್ತಾ ಬಂದಿರಬಹುದು. ಅದರ ಬಗ್ಗೆಯೂ ಸಹ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. ಹೀಗಾಗಿ ಈ ಮಳೆಮಲ್ಲೇಶ್ವರ ದೇವಸ್ಥಾನದ ಕಾಲ ತಿಳಿದುಬರುವುದಿಲ್ಲ.
ನೀರಿನ ಝರಿ ಹರಿವು;- ಈ ಬೆಟ್ಟದ ಮತ್ತೊಂದು ವಿಶೇಷತೆ ಎಂದರೆ, ಇಲ್ಲಿ ಅಘೋಚರವಾಗಿ ಹರಿದುಬರುತ್ತಿರುವ ನೀರಿನ ಝರಿ. ಇದು ಎಲ್ಲಿಂದ ಮೂಲ ಉತ್ಪತ್ತಿಯಾಗಿ ಹರಿದು ಬರುತ್ತಿದೆ ಎಂಬುದೇ ನಿಗೂಢ. ಎಲ್ಲಿಂದಲೋ ಹರಿದು ಬರುವ ನೀರು ಉದ್ಭವ ಲಿಂಗದ ಪಕ್ಕದಲ್ಲಿ ಹರಿದು ಮುಂದೆ ಸಾಗುತ್ತಿರುವುದು ಬಹಳ ವಿಶೇಷ. ಹೀಗಾಗಿ ಭಕ್ತರು ಆ ಲಿಂಗ ಸೋಂಕಿದ ನೀರನ್ನು ತೀರ್ಥ ಎಂದು ಭಾವಿಸಿ ಸ್ವೀಕರಿಸುತ್ತಾರೆ. ಅಷ್ಟೇ ಆ ನೀರು ಚರ್ಮರೋಗ ಇತ್ಯಾದಿ ಸೋಂಕಿನ ರೋಗನಿವಾರಕ ಶಕ್ತಿ ಇದೆ ಎಂದು ಭಕ್ತರ ನಂಬಿಕೆ. ಇದು ಒಂದು ಪವಾಡ ಸದೃಶ್ಯವೇ ಸರಿ.
ಶ್ರೀ ಗವಿಸಿದ್ಧೇಶ್ವರರ ತಪೋಭೂಮಿ;- ಈ ಬೆಟ್ಟದಲ್ಲಿ ಶ್ರೀ ಗವಿಮಠದ ಹನ್ನೊಂದನೆ ಪೀಠಾಧಿಪತಿಗಳಾದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಇದೇ ಪರ್ವತದ ಮೇಲೆಯೇ ತಪಸ್ಸು ಮಾಡಿದ್ದರಂತೆ. ಶ್ರೀಗಳು ಬಾಲಕನಾಗಿದ್ದಾಗ ಇದೇ ಬೆಟ್ಟದ ಮೇಲೆ ದನಗಳನ್ನು ಕಾಯುತ್ತಿದ್ದನೆಂದು ಹೇಳಲಾಗುತ್ತದೆ. ಅವರು ಈ ಪರ್ವತದ ಮೇಲೆಯೇ ಅನೇಕ ಪವಾಡಗಳನ್ನು ಮಾಡಿದರೆಂಬ ಐತಿಹ್ಯಗಳಿವೆ. ಶ್ರೀಗಳ ಮೊದಲನಾಮ ‘ಗುಡ್ಡದಯ್ಯ’ ಎಂದಿತ್ತಂತೆ. ಅಂದರೆ ಶ್ರೀಗಳು ಇದೇ ಬೆಟ್ಟದ(ಗುಡ್ಡ) ಮೇಲೆ ವಾಸಮಾಡುತ್ತಿದ್ದುದರಿಂದ ‘ಗುಡ್ಡದಯ್ಯ’ ಎಂದು ಕರೆದಿರಬಹುದೇ? ಯಾವುದೇ ದಾಖಲೆಗಳಿಲ್ಲಾ. ನಂತರ ನಗರಕ್ಕೆ ಬಂದು ಜಡೆಗೌಡರ ಮನೆಯಲ್ಲಿ ವಾಸಮಾಡಿದನೆಂದು ಹೇಳಲಾಗುತ್ತಿದೆ.
ಪ್ರಾಣಿಸಂಕುಲಗಳ ವಾಸಸ್ಥಾನ;- ಇಂದು ಈ ಬೆಟ್ಟದಲ್ಲಿ ಅನೇಕ ಪ್ರಾಣಿ ಸಂಕುಲಗಳು ವಾಸಿಸುತ್ತಿವೆ. ಕಪಿ, ಹಾವು, ನವಿಲು, ಜಿಂಕೆ, ನರಿ, ಮುಂಗುಸಿ ಮತ್ತು ಅನೇಕ ಪಕ್ಷಿಸಂಕುಲಗಳು, ವಿವಿಧ ಪ್ರಾಣಿಗಳು ಇಲ್ಲಿ ವಾಸಿಸುತ್ತಿವೆ. ಆಗಾಗ ಚಿರತೆ ಮತ್ತು ಕರಡಿಗಳೂ ಓಡಾಡಿದ್ದೂ ಉಂಟು. ಈ ಬೆಟ್ಟ ಪ್ರಾಚೀನ ಕಾಲದಿಂದಲೂ ಸರಿಸೃಪಗಳ ವಾಸಸ್ಥಾನವಾಗಿದ್ದು, ಇಂದಿಗೂ ಸಹ ಅವು ನಿರ್ಭಯವಾಗಿ ಈ ಪರ್ವತದ ಮೇಲೆ ನೆಲೆಸಿವೆ.
ಹೀಗೆ ಕೊಪ್ಪಳದ ಮಳೆಮಲ್ಲೇಶ್ವರ ಪರ್ವತವು ಅನೇಕ ಚರಿತ್ರೆ, ಪವಾಡ ಮತ್ತು ಐತಿಹ್ಯಗಳನ್ನು ತನ್ನೊಡಲೊಳಗೆ ಇಟ್ಟುಕೊಂಡು ಸಾವಿರಾರು ವರ್ಷಗಳಿಂದ ಮುಂದೆ ಸಾಗುತ್ತಾ ಬಂದಿರುವುದನ್ನು ಕಾಣಬಹುದಾಗಿದೆ. ಆದರೆ ಇಂದು ಜನ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಅಲ್ಲಿನ ಪರ್ವತಕ್ಕೆ ಧಕ್ಕೆ ಬಂದಿದೆ. ಇಂತಹ ಅಮೋಘ ಇತಿಹಾಸ ಮತ್ತು ಪುರಾಣಗಳ ಹಿನ್ನೆಲೆಯುಳ್ಳ ಈ ಮಳೆಮಲ್ಲೇಶ್ವರ ಪರ್ವತವನ್ನು ಉಳಿಸಿ, ಮುಂದಿನ ಜನಾಂಗಕ್ಕೆ ಕೊಂಡೊಯ್ಯಬೇಕಾಗಿದೆ. ಅಂತಹ ಜವಾಬ್ಧಾರಿ ಸಮಾಜ, ಜನಪ್ರತಿನಿಧಿಗಳು, ಸರಕಾರ ಮತ್ತು ಪುರಾತತ್ವ ಇಲಾಖೆಗಳ ಮೇಲಿದೆ.

ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊಬೈಲ್: ೯೪೪೮೫೭೦೩೪೦
E-mail:- skotnekal@gmail.com

Please follow and like us: