ಕೋವಿಡ್ ಮುನ್ನೆಚ್ಚರಿಕೆಯಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಿ : ಎಂ.ಸುಂದರೇಶ್ ಬಾಬು

ಸುರಕ್ಷತೆ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಗುರುವಾರದಂದು (ಆ.೧೮) ಆಯೋಜಿಸಲಾಗಿದ್ದ ಕೋವಿಡ್-೧೯ ಲಸಿಕೆ ಕಾರ್ಯದ ಪ್ರಗತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸುತ್ತ ಜಿಲ್ಲೆಯಲ್ಲಿರುವ ಕೋವಿಡ್-೧೯ ಪ್ರಕರಣಗಳ ಅಂಕಿ-ಅಂಶ ಆಧಾರದ ಮೇಲೆ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳು, ಬೆಡ್‌ಗಳು, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆಯ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯಗಳ ವ್ಯವಸ್ಥೆ, ಬೆಡ್ ಶೀಟ್ ವ್ಯವಸ್ಥೆ, ರೋಗಿಗಳಿಗೆ ನೀಡುವ ಊಟದ ವ್ಯವಸ್ಥೆಗಳನ್ನು ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಒಂದು ವೇಳೆ ಕೋವಿಡ್ ಅಲೆ ಸಂಭವಿಸಿದರೂ ಅದನ್ನು ಅಚ್ಚು ಕಟ್ಟಾಗಿ ನಿರ್ವಹಣೆ ಮಾಡುವಂತಹ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಜಿಲ್ಲಾ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು, ವಿವಿಧ ತಾಲ್ಲೂಕುಗಳಲ್ಲಿರುವ ತಾಲ್ಲೂಕಾ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಎಲ್ಲಾ ವೈದ್ಯಾಧಿಕಾರಿ, ಸಿಬ್ಬಂದಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದಾಗ ಮಾತ್ರ ಜನರಿಗೆ ಉತ್ತಮ ಸೇವೆ ದೊರಕುತ್ತದೆ. ಸಾರ್ವಜನಿಕರಿಗೆ ಯಾವ ಸೇವೆಗಳು ಎಲ್ಲಿ ಸಿಗುತ್ತವೆ ಎಂದು ನಿಖರ ಮಾಹಿತಿಯನ್ನು ಆಸ್ಪತ್ರೆಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಬೇಕು. ಇದ್ದರಿಂದ ಸುಲಭವಾಗಿ ಸೇವೆ ಪಡೆಯಲು ಜನರಿಗೆ ಅನುಕೂಲವಾಗುತ್ತದೆ. ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ಪ್ರವೃತ್ತರಾಗುವುದರಿಂದ ಜಿಲ್ಲೆಯ ಪ್ರಜೆಗಳಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬಹುದು. ಜಿಲ್ಲೆಯ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಪ್ರಗತಿಯಲ್ಲಿರುವ ಕಟ್ಟಡ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಅವಶ್ಯಕತೆ ಇರುವ ಆಂಬುಲೆನ್ಸ್ಗಳನ್ನು ಸಂಸದರು, ಶಾಸಕರ ಅನುದಾನದಲ್ಲಿ ಪಡೆಯುವ ಕುರಿತು ಅವರೊಂದಿಗೆ ಮಾತನಾಡಿ, ಆಂಬುಲೆನ್ಸ್ ಕೊಂಡುಕೊಳ್ಳಲು ಕ್ರಮ ಕೈಗೊಳ್ಳಿ ಎಂದರು.
ಈಗಾಗಲೇ ಮೊದಲ ಲಸಿಕೆ ಪಡೆದ ೧೨ ರಿಂದ ೧೪ ವರ್ಷದ ಮಕ್ಕಳಿಗೆ ಎರಡನೇ ಡೋಸ್ ನೀಡಬೇಕು. ೧೫ ರಿಂದ ೧೭ ವರ್ಷದ ಮಕ್ಕಳ ವ್ಯಾಕ್ಸಿನೇಷನ್ ಶೇ ೧೦೦ ರಷ್ಟು ಪ್ರಗತಿ ಸಾಧಿಸುವುದು ಕಡ್ಡಾಯವಾಗಿದ್ದು, ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಲಸಿಕೆಯಿಂದ ಬಾಕಿ ಇರುವ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿ ಹಾಗೂ ಶಾಲಾ ಕಾಲೇಜುಗಳಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಸಹ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ನಡೆಸಿ, ಲಸಿಕೆಗೆ ಅರ್ಹರಿರುವ ಎಲ್ಲಾ ಮಕ್ಕಳಿಗೆ ವ್ಯಾಕ್ಸಿನ್ ನೀಡುವುದರ ಮೂಲಕ ಹೆಚ್ಚಿನ ಪ್ರಗತಿ ಸಾಧಿಸಬೇಕು. ಅಲ್ಲದೇ ಕೋವಿಡ್ ಲಸಿಕೆಗೆ ಅರ್ಹರಿರುವವರಲ್ಲಿ ಯಾರು ಇನ್ನೂ ಲಸಿಕೆಯನ್ನು ಪಡೆಯದೇ ಬಾಕಿ ಉಳಿದಿದ್ದಾರೆ, ಅಂತಹ ಜನರರನ್ನು ಗುರುತಿಸಿ ಈ ಕೂಡಲೇ ಅವರಿಗೆ ಕೋವಿಡ್ ವ್ಯಾಕ್ಸಿನ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಾತನಾಡಿ, ೧೮ ರಿಂದ ೫೯ ವರ್ಷ ವಯಸ್ಸಿನ ಹಾಗೂ ೬೦ ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳು ಮುನ್ನೆಚ್ಚರಿಕೆ ಲಸಿಕೆ ಪಡೆಯಲು ಬಾಕಿ ಇದ್ದು, ಇದನ್ನು ಪ್ರತಿ ದಿನ ಹೆಚ್ಚಿನ ಲಸಿಕಾ ಸತ್ರಗಳನ್ನು ಆಯೋಜಿಸಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಹೆಚ್.ಸಿ.ಡಬ್ಲೂ ಮತ್ತು ಎಫ್.ಎಲ್.ಡಬ್ಲೂ ಮುನ್ನೆಚ್ಚರಿಕಾ ಡೋಸ್‌ಗಳನ್ನು ಶೇ ೧೦೦ ಪ್ರಗತಿ ಸಾಧಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕನಂದಾ ಮಳಗಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಪ್ರಕಾಶ್ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಈಶ್ವರ ಸವಡಿ, ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ. ನಂದಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಮಟ್ಟದ ವೈಧ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Please follow and like us: