ಕೌಸರ್ ಕೌಶಲ್ಯಳಾದ ಕೌತುಕ
ಗಂಡನನ್ನು ಕಳೆದುಕೊಂಡಾಗ
ಬದುಕು ಶೂನ್ಯವಾಗಿಬಿಟ್ಟಿತ್ತು!

ಬದುಕಿನಲ್ಲಿ ಆಘಾತಗಳು ಹೇಗೆ ಬರುತ್ತವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಕೌಶಲ್ಯ ಬದುಕಿನಲ್ಲಿ ಆಗಿದ್ದು ಅದೇ.

ಪ್ರೀತಿಸಿ ಮದುವೆಯಾದವರ ಹೆಸರು ದತ್ತಾತ್ರೇಯ ವಾಸುದೇವ ಫನಾಳಕರ್. ಗುಮ್ಮಟ ನಗರಿ ವಿಜಯಪುರದಲ್ಲಿ
ಗುಂಬಜ್ ಎಕ್ಸ್‌ಪ್ರೆಸ್‌ ಪತ್ರಿಕೆ ನಡೆಸುವ ಮೂಲಕ ಬದುಕು ಕಟ್ಟಿಕೊಂಡವರು. ಇಬ್ಬರು ಮಕ್ಕಳ ಜೊತೆಗೆ ಸುಖ ಜೀವನ. ಗಂಡನ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಜೀವನ ನಡೆಸುತ್ತಿದ್ದ ಕೌಶಲ್ಯ ಅವರಿಗೆ ಇಂಥದೊಂದು ದಿನ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ.

ಧರ್ಮ ಬೇರೆ ಆದರೂ ಹೇಗೋ ಸಂಬಾಳಿಸಿಕೊಂಡು ಬದುಕು ನಡೆಸುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಪ್ರವೇಶಿಸಿದ್ದು ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿತು.

ಎರಡು ವರ್ಷದ ಹಿಂದೆ
ಕೋವಿಡ್ ಹೆಸರಿಗೆ ಹೌಹಾರಿ ಹೋಗುತ್ತಿದ್ದ ಕಾಲಘಟ್ಟ. ಕೋವಿಡ್ ಪಾಸಿಟಿವ್ ಎಂದರೆ ಕೇಳಬೇಕೆ? ವಿಧಿಯಿಲ್ಲದೆ ದತ್ತಾತ್ರೇಯ ಅವರನ್ನು ಕೈಹಿಡಿದು ಆಸ್ಪತ್ರೆಗೆ ಸೇರಿಸಿ, ಉಪಚರಿಸಿದ ಗಟ್ಟಿಗಿತ್ತಿ‌ ಕೌಶಲ್ಯ.

ಕೋವಿಡ್ ಅಂದಾಕ್ಷಣ ಎಲ್ಲರೂ ದೂರ ಸರಿದರು. ಆಗ ಆಸ್ಪತ್ರೆಯಲ್ಲಿ ಉಳಿದಿದ್ದು ಕೌಶಲ್ಯ ಮಾತ್ರ. ಹೇಗೊ ಗಂಡ ಬದುಕಿದರೆ ಸಾಕು ಎಂದು ಹರಸಾಹಸ ಮಾಡಿದರು. ಕೋವಿಡ್ ಬೆಡ್ ನಲ್ಲಿ ಉಪಚರಿಸಿದರು. ಇನ್ನೇನು ವಾಸಿಯಾಗಿ ಮನೆಗೆ ಹಿಂತಿರಗಬಹುದು ಎನ್ನುವ ಭರವಸೆ ಮೂಡುತ್ತಿತ್ತು. ಮೂರು ದಶಕಗಳ ಕಾಲ ದಾಂಪತ್ಯ ಮಾಡಿದ ಸವಿನೆನಪುಗಳ ಮೆರವಣಿಗೆ ಮನಸಿನಲ್ಲಿ ಹಾಯ್ದು ಹೋಗುತಿತ್ತು.
ಅಲ್ಲಿ ಹಿಂದೂ ಮುಸ್ಲಿಂ ಎನ್ನುವ ಬೇಧವಿರಲಿಲ್ಲ. ಪ್ರೀತಿ ಅಷ್ಟೆ ಹೃದಯ ತುಂಬಿಕೊಂಡಿತ್ತು.

ಇಬ್ಬರೂ ಅಗಾಧ ಪ್ರೀತಿಸಿ ಮದುವೆ ದಿಬ್ಬಣಕ್ಕೊರಟಾಗ ಎರಡೂ ಕಡೆಗಳಲ್ಲಿ ವಿರೋಧ. ಅವರು ಮಗಳು ಹುಟ್ಟಿಯೇ ಇಲ್ಲ ಎಂದು ಷರಾ ಬರೆದು ಸುಮ್ಮನಾಗಿಬಿಟ್ಟರು. ಮನವೊಲಿಸಲು ಮಾಡಿದ ಪ್ರಯತ್ನ ಫಲಿಸದಿದ್ದಾಗ ದತ್ತಾತ್ರೇಯ ಕುಟುಂಬದಲ್ಲಿಯೂ ಬಿರುಗಾಳಿ ವಾತಾವರಣ.

ಅನ್ಯ ಧರ್ಮೀಯಳನ್ನು ಮದುವೆ ಮಾಡಿಕೊಳ್ಳಲು ನಿನಗೇನಾಗಿದೆ ಎಂದು ಬೈದು ಉಪ್ಪಿನಕಾಯಿ ಹಾಕಿದರೂ ಇವರ ಪ್ರೀತಿ ಬಂಧ ಬಿಡಲಿಲ್ಲ. ಮದುವೆ ನಂತರ ವೈರುಧ್ಯಗಳ ನಡುವೆ ಈಜಿದರೂ ಸೈ ಅನ್ನಿಸಿಕೊಂಡು ಬದುಕಿದರು. ಕನಸುಗಳ ಕಟ್ಟಿದರು. ಸಾಧನೆ ಹಾದಿಯಲ್ಲಿ ಇರುವಾಗಲೇ ಕೋವಿಡ್ ಎಲ್ಲದಕ್ಕೂ ಬ್ರೇಕ್ ಹಾಕಿತ್ತು.

ಆಸ್ಪತ್ರೆಯಲ್ಲಿ ಅಂದು ಕೈಹಿಡಿದು ಮಾತನಾಡುತ್ತಿದ್ದ ಸಂದರ್ಭದಲ್ಲಿ ಮುಗುಳ್ನಕ್ಕ ದತ್ತಾತ್ರೇಯ ಅವರ ಕೈ ಜಾರಿ ಉಸಿರು ನಿಂತಾಗ ಕೌಶಲ್ಯಗೆ ಹೇಗಾಗಿರಬೇಡ?

ಕೋವಿಡ್ ಎಂದು ಯಾರೂ ಅಂತ್ಯಸಂಸ್ಕಾರಕ್ಕೂ ಬರಲಿಲ್ಲ. ಗಂಡನ ಶವ ಹಿಡಿದು ಅಂತ್ಯ ಸಂಸ್ಕಾರವನ್ನು ಎಲ್ಲಾ ಹಿಂದೂ ಸಂಪ್ರದಾಯದಂತೆ ಮಾಡಿದ ಕೌಶಲ್ಯ ಕುಟುಂಬ ಕಷ್ಟದಲ್ಲಿ ಇದೆ ಎಂದು ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಗಮನಕ್ಕೆ ತಂದಾಗ ಆಗಿನ ಸಿಎಂ ಯಡಿಯೂರಪ್ಪ ಅವರ ಎದುರು ಅರ್ಜಿ ಹಿಡಿದು 5 ಲಕ್ಷ ಪರಿಹಾರ ಮಂಜೂರು ಮಾಡಿಸಿದೆ.

ಕಳೆದ ಸಲ ವಿಜಯಪುರಕ್ಕೆ ಹೋಗಿದ್ದಾಗ ಕೌಶಲ್ಯ ಮನೆಗೆ ಭೇಟಿ ನೀಡಿದ್ದೆ. ಅವರ ಮನೆ ವಾತಾವರಣ ಅಚ್ಚರಿ ತಂದಿತ್ತು. ಮನಸ್ಸು ಮಾಡಿದರೆ ಹೇಗೆಲ್ಲ ಬದುಕು ಕಟ್ಟಿಕೊಳ್ಳಬಹುದು ಎನ್ನುವುದಕ್ಕೆ ಕೌಶಲ್ಯ ಉದಾಹರಣೆ.

ಮುಸ್ಲಿಂ ಎಂದು ದೂರವಿಟ್ಟ ಜನರೇ ಅವರ ಮನೆಗೆ ಬಂದು ಮುಹೂರ್ತ ದಿನಾಂಕ, ಶುಭ ಕಾರ್ಯ ದಿನ ನಿಗದಿ ಮಾಡಿಕೊಂಡು ಹೋಗುತ್ತಾರೆ. ಅಷ್ಟರ ಮಟ್ಟಿಗೆ ಪಂಚಾಂಗ ಪ್ರವೀಣೆ. ಯಾವುದು ಅಸಾಧ್ಯ ಎಂದುಕೊಳ್ಳದೆ ಎಲ್ಲವನ್ನೂ ಕಲಿತಿದ್ದಾರೆ. ಮಕ್ಕಳಿಬ್ಬರು ಐಎಎಸ್‌ ಮಾಡುವ ಗುರಿಯೊಂದಿಗೆ ಹೆಜ್ಜೆ ಇಟ್ಟಿದ್ದಾರೆ.

ಮೊನ್ನೆ ಬೆಂಗಳೂರಿಗೆ ಬಂದ ಕೌಶಲ್ಯ ಮನೆಗೆ ಬಂದರು. ನಮ್ಮನೆಯಾಕೆ ಸ್ವಾಗತಿಸಿ, ಉಪಚರಿಸುವಾಗ ಕೌಶಲ್ಯ ಹೆಸರು ಹೇಗೆ ಬಂತು ಎಂದಾಗ ಆಕೆಯ ಇಡೀ ಬದುಕಿನ ಘಟನಾವಳಿಗಳ ಹೇಳುತ್ತಾ ಹೋದಂತೆ ಮನೆಯಲ್ಲಿ ಮಕ್ಕಳೆಲ್ಲ ಕಿವಿಯಾದರು.

ಮದುವೆಗೆ ಮುನ್ನ ಕೌಸರ್ ಎಂದು ಇದ್ದ ಹೆಸರನ್ನು ದತ್ತಾತ್ರೇಯ ಅವರು ಪ್ರೀತಿಯ ಕೌಶಲ್ಯ ಎಂದು ಸಂಭೋದಿಸಿದರು. ಅಂದಿನಿಂದ ಕೌಶಲ್ಯ ಹೆಸರು ಬಂತು ಎನ್ನುತ್ತಲೇ ಮಾತು ಮುಗಿಸಿದರು.

ತಾಂತ್ರಿಕ ಸಮಸ್ಯೆ ಕಾರಣಕ್ಕೆ ತಡವಾಗಿತ್ತು. ನಿನ್ನೆ ಬ್ಯಾಂಕ್ ಗೆ 5 ಲಕ್ಷ ರೂ ಹಣ ಜಮೆ ಆಗಿರುವುದನ್ನು ಖಚಿತಪಡಿಸಿಕೊಂಡೆ.
ಮನಸ್ಸು ತಡೆಯಲಿಲ್ಲ. ಕಷ್ಟದಲ್ಲಿ ಸಹಾಯ ಮಾಡಿದವರನ್ನು ದೇವರು ಏನಾಂದಾನು? ಎಂದು ರಾತ್ರಿ ಬಿಜಾಪುರದಿಂದ ಬಸ್ ಹತ್ತಿ ನಿಮಗೆ ಧನ್ಯವಾದ ಹೇಳಲೆಂದೆ ಬಂದಿರುವೆ ಎಂದಾಗ ನನಗೂ ಮನಸ್ಸು ತುಂಬಿ ಬಂತು.
-ಶಿವಾನಂದ ತಗಡೂರು

Please follow and like us: