ಅಮೃತ ಸರೋವರ ಕೆರೆಯಲ್ಲಿ 75 ನೇ ಸ್ವಾತಂತ್ರ್ಯ ಧ್ವಜಾರೋಹಣ

ಕೊಪ್ಪಳ: ನಮ್ಮ ದೇಶ ಸ್ವಾತಂತ್ರ್ಯಗೊಂಡು ಇಂದಿಗೆ 75 ವರ್ಷ ಸಂದ ಹಿನ್ನೆಲೆ ಇಡೀ ದೇಶಾದ್ಯಂತ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಸಂತಸದ ವಿಷಯ ಎಂದು ಮಾಜಿ ಸೈನಿಕರಾದ ಪರಸಪ್ಪ ಕುಂಬಾರ್ ಅವರು ಹೇಳಿದರು.

ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಗೊಳಿಸಿರುವ ಊರಮುಂದಿನ ಕೆರೆಯ ದಂಡೆ ಮೇಲೆ 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ಈ 75ನೇ ಅಮೃತ ಮಹೋತ್ಸವದ ನಿಮಿತ್ತ ಸರ್ಕಾರ ವಿಭಿನ್ನ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ನಮ್ಮ ಊರಿನ ಕೆರೆಯನ್ನು ಅಭಿವೃದ್ಧಿಗೊಳಿಸಿರುವುದು ಸಂತಸದ ವಿಷಯ. ಜೊತೆಗೆ ಈ ಕೆರೆಯ ದಂಡೆ ಮೇಲೆ ಧ್ವಜಾರೋಹಣ ಮಾಡುವ ಅವಕಾಶ ತಮಗೆ ದೊರಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

ನಂತರ ಅಮೃತ ಸರೋವರ ಕೆರೆಯನ್ನು ಉದ್ಘಾಟಿಸಿ, ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು, ಗ್ರಾಮಗಳು ಅಭಿವೃದ್ಧಿಯಾದರೇ ದೇಶ ಅಭಿವೃದ್ಧಿಯಾದಂತೆ, ಆ ನಿಟ್ಟಿನಲ್ಲಿ ಇಂದು ನಮ್ಮ ಬಹದ್ದೂರ್ ಬಂಡಿ ಗ್ರಾಮವು ಅಭಿವೃದ್ಧಿಯನ್ನು ಕಾಣುತ್ತಿದೆ. ಒಳ್ಳೆಯ ರೀತಿಯಲ್ಲಿ ಸುಂದರವಾಗಿ ಊರಮುಂದಿನ ಕೆರೆಯನ್ನು ಅಭಿವೃದ್ಧಿಗೊಳಿಸಿದ್ದೀರಿ. ಯಾವ ಗ್ರಾಮದಲ್ಲಿ ಒಗ್ಗಟ್ಟು, ಏಕತೆ ಇರುತ್ತದೆಯೋ ಆ ಗ್ರಾಮ ಅಬಿವೃದ್ಧಿಯಾಗಲಿದೆ ಎಂಬುದಕ್ಕೆ ನಿಮ್ಮ ಗ್ರಾಮವೇ ಉದಾಹರಣೆ. ಜೊತೆಗೆ ಸರ್ಕಾರದ ಆಸ್ತಿಗಳು ನಮ್ಮ ಆಸ್ತಿ ಎಂಬ ಕಲ್ಪನೆ ಬಂದಾಗ ಮಾತ್ರ ಅದು ಬಹಳಷ್ಟು ದಿನ ಉಳಿಯಲಿಕ್ಕೆ ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ನಿಮ್ಮ ಗ್ರಾಮದ ಕೆರೆಯ ಸಂರಕ್ಷಣೆಯ ಹೊಣೆಯು ನಿಮ್ಮ ಮೇಲಿದೆ ಎಂದು ಹೇಳಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಅವರು ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಇಂದು ತಾಲೂಕಿನಲ್ಲಿ ಮೊದಲಿಗೆ ಐದು ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಗೊಳಿಸಿ, ಇಂದು ಧ್ವಜಾರೋಹಣವನ್ನು ನೆರವೇರಿಸಲಾಗಿದೆ. ಅದರಂತೆ ಕಳೆದ ವರ್ಷ ನರೇಗಾ ಯೋಜನೆಯಡಿ ಶಾಲಾ-ಅಂಗನವಾಡಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಬಾರಿ ಕೆರೆಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಗ್ರಾಮಗಳ ಜಲಮೂಲಗಳ ಸಂರಕ್ಷಣೆ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಮೀನುಗಾರಿಕೆಗೆ ಉತ್ತೇಜಿಸಿದ ಸಿಇಓ: ಜಿ.ಪಂ ಸಿಇಓ ಫೌಜೀಯಾ ತರುನ್ನುಮ್ ಅವರು ಬಹದ್ದೂರ್ ಬಂಡಿಯ ಅಮೃತ ಸರೋವರ ಕೆರೆಗೆ ಭೇಟಿ ನೀಡಿ ಕೆರೆಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಕೆರೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ತಂದಿದ್ದ 2 ಸಾವಿರ ಮೀನುಗಳನ್ನು ಕೆರೆಯಲ್ಲಿ ಬಿಡುವ ಮೂಲಕ ಮೀನು ಸಾಕಾಣಿಕೆಗೂ ಉತ್ತೇಜನ ನೀಡುವಂತೆ ತಿಳಿಸಿದರು. ಊರ ಮುಂದಿರುವ ಈ ಕೆರೆಯು ಬಹಳ ಸುಂದರವಾಗಿ ನಮ್ಮ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಗೊಳಿಸಿದ್ದು, ಗ್ರಾಮಸ್ಥರು ಇದನ್ನು ಉಳಿಸಿಕೊಂಡು ಹೋಗುವಂತೆ ತಿಳಿಸಿದರು.

ಈ ವೇಳೆ ಜಿ.ಪಂ ಉಪಕಾರ್ಯದರ್ಶಿಗಳಾದ ಸಮೀರ್ ಮುಲ್ಲಾ, ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ, ಸಹಾಯಕ ಕಾರ್ಯದರ್ಶಿಗಳಾದ ಕುಮುಲಯ್ಯ, ಸಹಾಯಕ ನಿರ್ದೇಶಕರುಗಳಾದ (ಗ್ರಾ.ಉ) ಸೌಮ್ಯ ಕೆ, ಮಹೇಶ್ (ಪಂ.ರಾ), ಯೋಜನಾಧಿಕಾರಿ ನದಾಫ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜೋತಿ ರಡ್ಡೇರ್, ಗ್ರಾ.ಪಂ ಅಧ್ಯಕ್ಷರಾದ ಪಾರ್ವತಮ್ಮ ಕುರಿ, ಉಪಾಧ್ಯಕ್ಷ ಮಂಜುನಾಥ್ ನಡುವಿನಮನಿ ಸೇರಿದಂತೆ ಸರ್ವ ಸದಸ್ಯರು, ತಾ.ಪಂ ಮತ್ತು ಗ್ರಾ.ಪಂ ಸಿಬ್ಬಂದಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು, ಶಾಲಾ ಮಕ್ಕಳು ಇದ್ದರು.

Please follow and like us: