ಜಿಲ್ಲೆಯ ಪ್ರತಿ ಮನೆಗಳಿಗೂ ಧ್ವಜಗಳು ಸಿಗುವಂತೆ ಕಾರ್ಯ ಪ್ರವೃತ್ತರಾಗಿ : ಬಿ.ಫೌಜಿಯಾ ತರನ್ನುಮ್

ಹರ್ ಘರ್ ತಿರಂಗಾ ಕಾರ್ಯಕ್ರಮ : ಅಧಿಕಾರಿಗಳೊಂದಿಗೆ ಸಭೆ


ಕೊಪ್ಪಳ, ): ಹರ್ ಘರ್ ತಿರಂಗಾ ಕಾರ್ಯಕ್ರಮ ನಿಮಿತ್ತ ಕೊಪ್ಪಳ ಜಿಲ್ಲೆಯ ಪ್ರತಿ ಮನೆಗಳಿಗೂ ಧ್ವಜಗಳು ಸಿಗುವಂತೆ ಕಾರ್ಯ ಪ್ರವೃತ್ತರಾಗಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹರ್ ಘರ್ ತಿರಂಗಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೋಮವಾರದಂದು ಜಿಲ್ಲಾ ಉಸ್ತುವಾರಿ ಸಚಿವರುಗಳ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳ ವಿಡಿಯೋ ಸಂವಾದದ ನಂತರ ಜಿಲ್ಲಾಡಳಿತ ಭವನದಲ್ಲಿರುವ ಕೆಎಸ್-ಒನ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಸಭೆಗೂ ಮುನ್ನಾ ಕಾರ್ಯಕ್ರಮದ ಬಗ್ಗೆ ವಿಸಿ ಮೂಲಕ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತಾ ಸಿಇಒ ಅವರು, ಹರ್ ಘರ್ ತಿರಂಗಾ ಅಭಿಯಾನದಡಿ ಕೊಪ್ಪಳ ಜಿಲ್ಲೆಯ ಒಟ್ಟು 3.2 ಲಕ್ಷ ಮನೆಗಳ ಪೈಕಿ 2.40 ಲಕ್ಷ ಮನೆಗಳ ಮೇಲೆ ಧ್ವಜಾರೋಹಣ ಮಾಡುವಂತೆ ಜಿಲ್ಲೆಗೆ ಸರ್ಕಾರದಿಂದ ಗುರಿ ನಿಗದಿಯಾಗಿದ್ದು, ಪ್ರಸ್ತುತ ಜಿಲ್ಲೆಗೆ ರಾಜ್ಯ ಸರ್ಕಾರದಿಂದ 72 ಸಾವಿರ ಮತ್ತು ಅನನ್ಯ ಸಂಸ್ಥೆಯ ಮೂಲಕ ಖರೀದಿಸಿದ 1 ಲಕ್ಷ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಮೂಲಗಳು ಸೇರಿದಂತೆ ಒಟ್ಟು 1.89 ಲಕ್ಷ ಧ್ವಜಗಳು ಲಭ್ಯವಿದ್ದು, ಪೋಸ್ಟ್ ಆಫೀಸ್ ಮತ್ತು ಇತರೆ ಸಂಸ್ಥೆಗಳಲ್ಲಿ ಧ್ವಜಗಳು ಲಭ್ಯ ಇವೆ. ಉಳಿದಂತೆ ಗುರಿ ತಲುಪಲು 40 ಸಾವಿರ ಧ್ವಜಗಳ ಅವಶ್ಯಕತೆ ಇದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಒಟ್ಟಾರಿಯಾಗಿ ಜಿಲ್ಲೆಗೆ ನಿಡಿರುವ ಗುರಿಯನ್ನು ತಲುಪಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲಾಗುವುದು ಎಂದು ಮಾಹಿತಿ ನೀಡಿದರು.
ವಿಸಿ ನಂತರ ಅಧಿಕಾರಿಗಳ ಸಭೆಯಲ್ಲಿ ಸಿಇಒ ಅವರು ಮಾತನಾಡಿ, ಭಾರತ ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವದ ಅಂಗವಾಗಿ ಇದೇ ಆಗಸ್ಟ್ 13 ರಿಂದ 15 ರವರೆಗೆ ದೇಶಾದ್ಯಂತ ಹರ್ ಘರ್ ತಿರಂಗಾ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಅಚ್ಚುಕಟ್ಟಾಗಿ ಹಮ್ಮಿಕೊಳ್ಳುವಂತೆ ಹಾಗೂ ಇದರ ಜೊತೆಗೆ ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಸನ್ಮಾನ ಮಾಡುವಂತೆ ರಾಜ್ಯ ಸರ್ಕಾರವು ಆದೇಶಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಲ್ಲಿ ವಸತಿ ಹೆಚ್ಚಾಗಿದೆ, ಅಂತಹ ಹೋಬಳಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಧ್ವಜಗಳು ಸಿಗುವ ವ್ಯವಸ್ಥೆಗಳನ್ನು ಮಾಡಿ ಎಂದರು.
ಕ್ಟಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ ಪ್ರಯುಕ್ತ ಆ. 09 ರಂದು ಸ್ವಾತಂತ್ರ್ಯ ಯೋಧರ ಮನೆಗೆ ತೆರಳಿ, ಅವರನ್ನು ಸನ್ಮಾನಿಸಬೇಕಾಗಿದೆ. ಈ ಪ್ರಯುಕ್ತ ಜಿಲ್ಲೆಯ ಸ್ವಾತಂತ್ರ್ಯ ಯೋಧರಿಗೆ ಸರ್ಕಾರದ ಶಿಷ್ಟಾಚಾರದಂತೆ ಜಿಲ್ಲಾಡಳಿತದಿಂದ ಸನ್ಮಾನಿಸಿ ಗೌರವಿಸಬೇಕಾಗಿದ್ದು, ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಮತ್ತು ಕಟ್ಟಡಗಳ ಮೇಲೆ ಶಿಷ್ಟಾಚಾರದಂತೆ ಮತ್ತು ನಿಯಮಾನುಸಾರ ಧ್ವಜಾರೋಹಣ ಮಾಡಬೇಕು. ಇ-ಆಫೀಸ್ ನಲ್ಲಿ ಆನ್‌ಲೈನ್ ಶುಲ್ಕ ಪಾವತಿಸಿ ಸಾರ್ವಜನಿಕರು ತಮ್ಮ ಸಮೀಪದ ಪೋಸ್ಟ್ ಆಫೀಸ್ ಮೂಲಕ ಧ್ವಜಗಳನ್ನು ಪಡೆಯಲು ಅವಕಾಶವಿದೆ. ಬಸ್ ನಿಲ್ದಾಣಗಳಲ್ಲಿ ಸ್ಟಾಲ್‌ಗಳ ನಿರ್ಮಾಣ, ಜಿಲ್ಲಾಡಳಿತ ಭವನದಲ್ಲಿಯೂ ಸ್ಟಾಲ್ ನಿರ್ಮಾಣ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಉಪ ವಿಭಾಗಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ, ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಾಣೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೋಟ್ರೇಶ್ ಮರಬನಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Please follow and like us: