ಸ್ವಾತಂತ್ರ್ಯ ಯೋಧರ ಮನೆಗೆ ಸಚಿವ ಹಾಲಪ್ಪ ಆಚಾರ್ ಭೇಟಿ, ರಾಷ್ಟ್ರ ಧ್ವಜ ಉಡುಗೊರೆ

ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ : ತಳಕಲ್ ಗ್ರಾಮದ ಜಿ.ಬಿ. ಮೂಲಿಮನಿ ಅವರಿಗೆ ಸನ್ಮಾನ


ಕೊಪ್ಪಳ, ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ ನಿಮಿತ್ತ ರಾಜ್ಯ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಲಪ್ಪ ಆಚಾರ್ ಅವರು ಇಂದು (ಆ.09) ಜಿಲ್ಲೆಯ ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದ 98 ವರ್ಷ ವಯಸ್ಸಿನ ಸ್ವಾತಂತ್ರ್ಯ ಯೋಧರಾದ ಜಿ.ಬಿ. ಮೂಲಿಮನಿ ರವರಿಗೆ ರಾಷ್ಟ್ರ ಧ್ವಜ ಉಡುಗೊರೆಯಾಗಿ ನೀಡಿ, ಸನ್ಮಾನಿಸಿದರು.
ಸರ್ಕಾರದ ನಿರ್ದೇಶನದಂತೆ ಸ್ವಾತಂತ್ರ‍್ಯ ಯೋಧರಿಗೆ ಅವರ ಮನೆಯಲ್ಲಿಯೇ ಸನ್ಮಾನ ಮಾಡುವ ನಿಟ್ಟಿನಲ್ಲಿ ತಳಕಲ್ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಜಿ.ಬಿ. ಮೂಲಿಮನಿ ಅವರ ಸ್ವಗೃಹದಲ್ಲಿ ಮಂಗಳವಾರ ಸನ್ಮಾನಿಸಲಾಯಿತು.
ಸ್ವಾತಂತ್ರ್ಯ ಯೋಧರೊಂದಿಗೆ ಸಚಿವರು ಆತ್ಮೀಯವಾಗಿ ಚರ್ಚಿಸಿ, ಸನ್ಮಾನಿಸುವ ವೇಳೆ, ಭಾರತ ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ದೇಶಾದ್ಯಂತ ಹರ್ ಘರ್ ತಿರಂಗಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಮ್ಮ ಮನೆ ಮೇಲೆ ಧ್ವಜಾರೋಹಣ ಮಾಡುವಂತೆ ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಕುಕನೂರು ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಸ್ವಾತಂತ್ರ್ಯ ಯೋಧ ಜಿ.ಬಿ. ಮೂಲಿಮನಿ ರವರ ಧರ್ಮ ಪತ್ನಿ ಮಲ್ಲಮ್ಮ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Please follow and like us: