ಮಳೆಗಾಲದ ತುರ್ತುಪರಿಸ್ಥಿತಿಯನ್ನು ಇಲಾಖೆಗಳು ಸಮನ್ವಯತೆಯಿಂದ ಯಶಸ್ವಿಯಾಗಿ ನಿರ್ವಹಿಸಿ: ಎಂ.ಸುAದರೇಶ ಬಾಬು

ಕೊಪ್ಪಳ, 

 ಮಳೆಗಾಲದಲ್ಲಿ ಉಂಟಾಗಬಹುದಾದ ಪ್ರವಾಹ, ಮಳೆ ಹಾನಿಯಂತಹ  ತುರ್ತುಪರಿಸ್ಥಿತಿಯನ್ನು ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ, ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಸುAದರೇಶ ಬಾಬು ಅವರು ಅಧಿಕಾರಿಗಳಿಗೆ ಹೇಳಿದರು.
ಜೂನ್ ರಿಂದ ಆಗಸ್ಟ್ ವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಆದ ಹಾನಿ ಬಗ್ಗೆ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನೆ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರದಂದು ಜಿಲ್ಲಾಡಳಿತ ಭವನದ ಕೆ-ಸ್ವಾನ್ ನಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮಳೆ ಹಾನಿ, ಪ್ರವಾಹದ ಸಂದರ್ಭದಲ್ಲಿ ಜನರಿಗೆ ಪರಿಹಾರ ಒದಗಿಸುವುದು ಕೇವಲ ಕಂದಾಯ ಇಲಾಖೆ ಜವಾಬ್ದಾರಿಯಲ್ಲ. ಮಳೆ ಹಾನಿ ಎಂದರೆ, ಮನೆಗಳ, ಶಾಲಾ ಕಟ್ಟಡಗಳ ಕುಸಿತ, ಮಾನವ ಅಥವಾ ಪ್ರಾಣಿ ಜೀವ ಹಾನಿ, ರಸ್ತೆಗಳು ಹಾಳಾಗುವುದು, ಕೃಷಿ ಭೂಮಿಗೆ ನೀರು ನುಗ್ಗುವುದು ಮುಂತಾದ ಹಾನಿಗಳು ಸಂಭವಿಸುತ್ತವೆ. ಅದಕ್ಕೆ ಸಂಬAಧಿಸಿದAತೆ ಆಯಾ ಇಲಾಖೆಯ ಜವಾಬ್ದಾರಿಯೂ ಇರುತ್ತದೆ. ಸಿಡಿಲಿನ ಆಘಾತ ಅಥವಾ ಮನೆ ಕುಸಿತದಿಂದ ಹಸು, ದನ ಕರುಗಳು ಮೃತಪಟ್ಟರೆ ಸಂಬAಧಿಸಿದ ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮೃತ ಪ್ರಾಣಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಬೇಕು. ದನದ ಮಾಲೀಕರಿಗೆ 24 ಗಂಟೆಯೊಳಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಅದರಂತೆ ಮಾನವ ಜೀವ ಹಾನಿ ಸಂದರ್ಭದಲ್ಲಿಯೂ 24 ರಿಂದ 48 ಗಂಟೆಯೊಳಗೆ ಪರಿಹಾರ ಒದಗಿಸಬೇಕು. ಇದೇ ರೀತಿ ಬೇರೆಲ್ಲ ಇಲಾಖೆಗಳಿಗೂ ಅದರದೇ ಆದ ಜವಾಬ್ದಾರಿ ಇರುತ್ತದೆ. ಅದನ್ನು ಅರಿತು ಎಲ್ಲ ಇಲಾಖೆಗಳು ತುರ್ತುಪರಿಸ್ಥಿತಿಯಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ, ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳ ವಿಪತ್ತು ನಿರ್ವಹಣೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆದ್ದರಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಈಗಾಗಲೇ ರಚನೆಗೊಂಡಿರುವ ಗ್ರಾ.ಪಂ. ಅಧ್ಯಕ್ಷರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳನ್ನೊಳಗೊಂಡ ಸಮಿತಿಯು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಗಾಗ್ಗೆ ಸಭೆಗಳನ್ನು ನಡೆಸಿ, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕು. ವಿಪತ್ತು ನಿರ್ವಹಣಾ ಯೋಜನೆಯಲ್ಲಿ ನಿರ್ವಹಣೆ ಕುರಿತಾದ ವಿವರಗಳು ಇದ್ದು, ಅವುಗಳನ್ವಯ ಗ್ರಾಮ ಪಂಚಾಯತಿ ಹಂತದಲ್ಲಿ ಉಂಟಾಗಬಹುದಾದ ಅಂದಾಜು ಹಾನಿ, ತೊಂದರೆಗಳನ್ನು ನಿರ್ವಹಿಸಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಿ. ತುರ್ತು ಸಂದರ್ಭಕ್ಕೆ ಬೇಕಾದ ಅಗತ್ಯ ಔಷಧಿಗಳು, ಕಾಳಜಿ ಕೇಂದ್ರಗಳ ಸ್ಥಾಪನೆ ಮುಂತಾದ ಕುರಿತು ವಿವರಗಳನ್ನು ಚರ್ಚಿಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಎಲ್ಲ ಚರಂಡಿ, ರಾಜ ಕಾಲುವೆಗಳನ್ನು ಆಗಸ್ಟ್ 15 ರೊಳಗಾಗಿ ತಳಮಟ್ಟದಿಂದ ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಿ. ಇದರಿಂದ ನೀರು ಒಂದೆಡೆ ನಿಲ್ಲುವುದನ್ನು, ನಿಂತ ನೀರು ಜನವಸತಿ ಪ್ರದೇಶಗಳಿಗೆ ಹರಿಯುವುದನ್ನು ನಿಯಂತ್ರಿಸಬಹುದು. ಪ್ರತಿ ಬಾರಿ ಮಳೆ ನಿಂತ ನಂತರ ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸಂಬAಧಿಸಿದ ಗ್ರಾಮ, ಊರುಗಳಲ್ಲಿ ಪರಿಶೀಲನೆ ನಡೆಸಬೇಕು. ಮಳೆಯಿಂದ ಯಾವುದೇ ಪ್ರದೇಶದಲ್ಲಿ ಉಂಟಾದ ಮನೆ, ರಸ್ತೆ, ಸೇತುವೆ, ಚರಂಡಿ, ಶಾಲಾ ಕಟ್ಟಡಗಳ, ಅಂಗನವಾಡಿ ಕಟ್ಟಡಗಳಿಗೆ ಹಾನಿಯಾದಲ್ಲಿ ಅವುಗಳ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಕೆಲಸ ಗ್ರಾಮ ಮಟ್ಟದಿಂದ ನಡೆಯಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಯಾವುದೇ ಕಾರಣಕ್ಕೂ ಶಿಥಿಲಾವಸ್ಥೆ ಹಾಗೂ ಸೋರುವ ಸ್ಥಿತಿಯಲ್ಲಿರುವ ಕೊಠಡಿಗಳಲ್ಲಿ ಶಾಲಾ ತರಗತಿಗಳನ್ನು, ಅಂಗನವಾಡಿಗಳನ್ನು ನಡೆಸುವಂತಿಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಶೌಚಾಲಯ, ಆವರಣ ಗೋಡೆ, ಶಾಲಾ ಕೊಠಡಿಗಳ ಕಡೆ ಮಕ್ಕಳು ಹೋಗದಂತೆ ಎಚ್ಚರ ವಹಿಸಬೇಕು. ಅಂತಹ ಪ್ರದೇಶದಲ್ಲಿ ಟೇಪ್ ಅಥವಾ ಸೂಚನಾ ಫಲಕವನ್ನು ಅಳವಡಿಸುವುದರ ಮೂಲಕ ಮಕ್ಕಳಿಗೆ ಸೂಕ್ತ ಸೂಚನೆ ನೀಡಬೇಕು. ಇದು ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಜವಾಬ್ದಾರಿಯಾಗಿದ್ದು, ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಹಾಗೆಯೇ ಜಿಲ್ಲೆಯಾದ್ಯಂತ ಹೆಚ್ಚಿನ ಮಳೆ ಸುರಿದಾಗ ಜಿಲ್ಲಾಡಳಿತದಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಆದರೆ ಕೆಲ ಸಂದರ್ಭ ನಿರ್ದಿಷ್ಟವಾಗಿ ಒಂದೇ ಪ್ರದೇಶ ಅಥವಾ ಊರುಗಳಲ್ಲಿ ಮಳೆ ಸುರಿದಾಗ, ಮಕ್ಕಳು ಶಾಲೆಗೆ ಬರಲು ಸಾಧ್ಯವಿಲ್ಲ ಎನಿಸಿದಾಗ ಮುಖ್ಯೋಪಾಧ್ಯಾಯರು ಡಿಡಿಪಿಐ ಹಾಗೂ ತಹಶೀಲ್ದಾರರಿಗೆ ಮಾಹಿತಿ ನೀಡಿ ಅಂದು ಶಾಲೆಗಳಿಗೆ ಸ್ಥಳೀಯ ರಜೆಯನ್ನು ಘೋಷಿಸಬಹುದು. ಈ ಬಗ್ಗೆ ಎಲ್ಲ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಕ್ತ ನಿರ್ದೇಶನ ನೀಡಿ. ಅದರಂತೆ ಅಂಗನವಾಡಿಗಳಿಗೂ ಇದೇ ನಿಯಮ ಅನ್ವಯವಾಗುತ್ತದೆ. ಅಂಗನವಾಡಿಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸರಬರಾಜು ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಕಡ್ಡಾಯವಾಗಿ ಇರಬೇಕು. ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ಒದಗಿಸಬೇಕು. ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಅನುಷ್ಠಾನ ಏಜೆನ್ಸಿಗಳು ತ್ವರಿತವಾಗಿ ಕಾಮಗಾರಿಯನ್ನು ಮುಗಿಸಿ, ಶಾಲಾ ಬಳಕೆಗೆ ಸಿದ್ಧಗೊಳಿಸಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಗಾಲವಾದ್ದರಿಂದ ಸಾಂಕ್ರಾಮಿಕ ರೋಗಗಳು ತೀವ್ರವಾಗಿ ಹರಡುತ್ತವೆ. ಆದ್ದರಿಂದ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ಔಷಧ, ವೈದ್ಯರು, ಸ್ಟಾಫ್ ನರ್ಸ್ಗಳು ಯಾವುದೇ ಸಮಯದಲ್ಲಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು. ಮಲೇರಿಯಾ, ಡೆಂಗ್ಯೂ, ಕೋವಿಡ್-19, ಮಂಕಿಪಾಕ್ಸ್ ಮುಂತಾದ ಖಾಯಿಲೆಗಳಿಂದ ಸುರಕ್ಷಿತವಾಗಿರಲು ಕೈಗೊಳ್ಳಬೇಕಾಗದ ಮುಂಜಾಗ್ರತಾ ಕ್ರಮಗಳ ಕುರಿತು ಜನರಿಗೆ ಅರಿವು ಮೂಡಿಸಿ. ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆಯಾಗಿ ಹೆಚ್ಚುವರಿ ಬೆಡ್‌ಗಳನ್ನು ಕಾಯ್ದಿರಿಸಿ. ಕೋವಿಡ್-19 ಪರೀಕ್ಷೆಗೆ ಮಾದರಿ ಸಂಗ್ರಹವನ್ನು ಹೆಚ್ಚಿಸಿ. ಕೋವಿಡ್-19 ಲಸಿಕೆ ನೀಡುವಿಕೆ ಪ್ರಮಾಣದಲ್ಲಿ ಶೇ.100 ರಷ್ಟು ಪ್ರಗತಿ ಕಾಣಬೇಕು. ಆದ್ದರಿಂದ ಅರ್ಹರೆಲ್ಲರಿಗೂ ಮೊದಲ ಹಾಗೂ ಎರಡನೇ ಡೋಸ್ ಲಸಿಕೆಯನ್ನು ನೀಡಬೇಕು. ತುರ್ತು ಪರಿಸ್ಥಿತಿ ನಿರ್ವಹಣೆಗೆ ಎಲ್ಲ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಇದುವರೆಗೂ ಸುರಿದ ಮಳೆಯಿಂದ ಉಂಟಾದ ಕೃಷಿ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳ ಹಾನಿ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿಯೊAದಿಗೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವಾರದೊಳಗೆ ವರದಿ ಸಲ್ಲಿಸಬೇಕು. ಬೆಳೆ ಹಾನಿ  ಹಾಗೂ ಮನೆಗಳ ಹಾನಿ ಬಗ್ಗೆ ಪರಿಹಾರ ನೀಡಲು ತಿಂಗಳುಗಳ ಸಮಯ ತೆಗೆದುಕೊಳ್ಳಬೇಡಿ. ತಾಲ್ಲೂಕು ತಹಶೀಲ್ದಾರರು ಸಂಬAಧಿಸಿದ ಪೋರ್ಟಲ್‌ನಲ್ಲಿ ಸ್ಥಳ ಮಹಜರು ನಂತರದ ವರದಿಯನ್ನು ಕೂಡಲೇ ಅಪ್‌ಲೋಡ್ ಮಾಡಬೇಕು. ಪ್ರತಿಯೊಂದಕ್ಕೂ ಪ್ರಸ್ತಾವನೆ ಸಲ್ಲಿಸುವ ಅಗತ್ಯವಿಲ್ಲ. ಜಿಲ್ಲೆಯ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ. ಮಳೆಯಿಂದ ನೀರು ಕಲುಷಿತಗೊಳ್ಳುವ ಸಾಧ್ಯತೆ ಇರುವುದರಿಂದ ಆರ್‌ಓ ಘಟಕಗಳು ಸುಸ್ಥಿತಿಯಲ್ಲಿದ್ದು, ಜನರಿಗೆ ಶುದ್ಧ ನೀರು ಸಿಗುವಂತೆ ಮಾಡಿ ಎಂದು ಸಂಬAಧಿಸಿದ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ಮಳೆಯಿಂದ ಅಥವಾ ಗಾಳಿಯ ಮೂಲಕ ಕುರಿ, ಮೇಕೆ ಹಾಗೂ ದನ ಕರುಗಳಲ್ಲಿ ಕಂಡುಬರುವ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಅಗತ್ಯವಿರುವ ಲಸಿಕೆಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಪ್ರಾಣಿ ಹಾನಿ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ವರದಿಯನ್ನು 24 ಗಂಟೆಯೊಳಗೆ ಇಲಾಖಾ ಅಧಿಕಾರಿಗಳು ಸಂಗ್ರಹಿಸಬೇಕು ಎಂದು ಪಶುಪಾಲನಾ ಇಲಾಖಾ ಅಧಿಕಾರಿಗೆ ಸೂಚಿಸಿದರು.
ಮಳೆ ಸುರಿಯುವಾಗ ಸುರಕ್ಷತಾ ದೃಷ್ಟಿಯಿಂದ ಜೆಸ್ಕಾಂ ನಿಂದ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ. ಆದರೆ ಜನವಸತಿ ಪ್ರದೇಶಗಳಲ್ಲಿ 6 ಗಂಟೆಗಿAತ ಹೆಚ್ಚು ಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತಿಲ್ಲ. ಹಾಗೂ ಕೃಷಿ ಭೂಮಿಯಲ್ಲಿನ ಟ್ರಾನ್ಸ್ಫಾರ್ಮರ್, ವಿದ್ಯುತ್ ಕಂಬಗಳ ಹಾನಿಯ ದುರಸ್ಥಿ ಕಾರ್ಯಗಳನ್ನು ಎರಡರಿಂದ ಮೂರು ದಿನಗಳಲ್ಲಿ ದುರಸ್ತಿಗೊಳಿಸಬೇಕು. ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ ಗಳ ದಾಸ್ತಾನು ಹೆಚ್ಚಿಸಿ. ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ. ನೀರು ಪೂರೈಕೆ ಕೇಂದ್ರಗಳಲ್ಲಿ ಹೆಚ್ಚು ಸಮಯ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಬೇಡಿ. ಪ್ರತಿ ಉಪ ವಿಭಾಗಗಳಲ್ಲಿ ಕನಿಷ್ಠ 50 ಟ್ರಾನ್ಸ್ಫಾರ್ಮರ್ ಹೆಚ್ಚುವರಿಯಾಗಿ ಇರುವಂತೆ ಕ್ರಮ ವಹಿಸಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಪೌರ ಕಾರ್ಮಿಕರಿಗೆ ಕೈಗವಸು, ಮಾಸ್ಕ್, ಸ್ಯಾನಿಟೈಸರ್, ಹೆಲ್ಮೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಕಿಟ್‌ಗಳನ್ನು ನೀಡಿ. ಗುಣಮಟ್ಟದ ಉಪಾಹಾರವನ್ನು ಒದಗಿಸಿ. ನಿಯಮಿತವಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಅವರ ಆರೋಗ್ಯ ತಪಾಸಣೆ ಮಾಡಿಸಿ ಎಂದು ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸಹಾಯಕ ಆಯಕ್ತರಾದ ಬಸವಣಪ್ಪ ಕಲಶೆಟ್ಟಿ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.

Please follow and like us: