SC ST ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕೊಪ್ಪಳ,  :  ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಎಸ್‍ಸಿ, ಎಸ್‍ಟಿ ಸಂಘಟನೆಗಳ ಒಕ್ಕೂಟ ಹಾಗೂ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಗರದ ತಾಲೂಕು ಕ್ರೀಡಾಂಗಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿ ಮುತ್ತಿಗೆ ಹಾಕಲು ಪ್ರಯತ್ನಿಸಿತು. ನಂತರ ಅಲ್ಲಿಯೇ ಇದ್ದ ವೇದಿಕೆಯಲ್ಲಿ ಹಲವಾರು ನಾಯಕರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಹನುಮೇಶ್ ನಾಯಕ್, ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ.15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3ರಷ್ಟು ಮೀಸಲಾತಿ ನೀಡಿದೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವ ಅಗತ್ಯವಿದೆ. ಆದ್ದರಿಂದ ಪರಿಶಿಷ್ಟ ಜಾತಿಗೆ ಶೇ. 17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರ ಏಕ ಸದಸ್ಯ ಆಯೋಗದ ವರದಿ ಜಾರಿ ಅಗತ್ಯವಿದೆ. ಈ ಸಂಬಂಧ ವಾಲ್ಮೀಕಿ ಗುರುಪೀಠದ ಸ್ವಾಮೀಜಿಗಳು ಧರಣಿ ಸತ್ಯಾಗ್ರಹ ಆರಂಭಿಸಿ 152 ದಿನ ಕಳೆದಿವೆ. ಇದುವರೆಗೂ ಯಾವುದೇ ಪ್ರಯೋಜನವಿಲ್ಲ. ಮುಖ್ಯಮಂತ್ರಿಗಳು ಮೀಸಲಾತಿ ಹೆಚ್ಚಿಸಬೇಕು ಇಲ್ಲವೇ ವರದಿ ತಿರಸ್ಕರಿಸಬೇಕು. 1 ವಾರದೊಳಗೆ ಮೀಸಲಾತಿ ಹೆಚ್ಚಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮುಖಂಡರುಗಳು ಮಾತನಾಡಿ, ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಮೀಸಲು ಕಲ್ಪಿಸಲು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರ ಏಕ ಸದಸ್ಯ ಆಯೋಗ ಮಾಡಿತ್ತು, ಆದರೆ ನಂತರ ಬಂದ ಜೆಡಿಎಸ್ ಮತ್ತು ಬಿಜೆಪಿ ಸರಕಾರಗಳು ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ, ದಲಿತರಿಗೆ ಮೋಸ ಮಾಡುತ್ತಿವೆ. ನಮ್ಮದೇ ನಾಯಕರು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದರು, ಇಪ್ಪತ್ನಾಲ್ಕು ಗಂಟೆಯಲ್ಲಿ ಮೀಸಲು ಕೊಡಿಸುತ್ತೇನೆಂದು ಹೇಳಿದವರು ಇಪ್ಪತ್ನಾಲ್ಕು ತಿಂಗಳಾದರೂ ಎಲ್ಲಿ ಕುಳಿತಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

 

ಈಗಿನ ಸಚಿವರು ಅನೇಕರು ಸಿಎಂ ಬೊಮ್ಮಾಯಿ ಸಮೇತ ಬಂದು ಕೇವಲ ಭರವಸೆ ನೀಡುತ್ತಿದ್ದಾರೆ, ಯಡಿಯೂರಪ್ಪ ಸಹ ಮೂಗಿಗೆ ತುಪ್ಪ ಹಚ್ಚಿದ್ದಾರೆ. ಮುಂದೆ ನಾವು ನಮಗೆ ನ್ಯಾಯ ಕೊಡಬಹುದಾದ ಸರಕಾರಗಳ ಪರವಾಗಿ ನಿಲ್ಲುವದು ಅನಿವಾರ್ಯವಾಗುತ್ತದೆ. ಸ್ವಾಮೀಜಿ ಅಹೋರಾತ್ರಿ ಹೋರಾಟ ಮಾಡುತ್ತಿದ್ದರೂ ಕಣ್ಣು ತೆರೆಯದ ದಲಿತ ವಿರೋಧಿ ಸರಕಾರವನ್ನು ಕಿತ್ತೊಗೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.  ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಬಂದು ಮನವಿ ಸ್ವೀಕರಿಸಿ ಜಿಲ್ಲೆಯ ವಾಸ್ತವ ಸಂಗತಿ ತಮ್ಮ ಅನಿಸಿಕೆಗಳನ್ನು ಸೇರಿಸಿ ಮುಖ್ಯಮಂತ್ರಿಗಳಿಗೆ ಮನವಿ ಕಳಿಸಿಕೊಡಲಾಗುವದು ಎಂದರು.

ಹಲವು ಪಕ್ಷಗಳ ಮುಖಂಡರು ಹೋರಾಟದಲ್ಲಿ ಸಮುದಾಯಕ್ಕಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಟಿ.ರತ್ನಾಕರ್, ಜಿ.ಪಂ. ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ, ಈರಪ್ಪ ಕುಡಗುಂಟಿ, ಸುಜಾತಾ ರಮೇಶ್ ನಾಯಕ್, ದಲಿತ ರಾಜ್ಯ ಮುಖಂಡ ಹೆಚ್.ಎನ್. ಬಡಿಗೇರ್, ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲಣ್ಣವರ್, ರಾಜ್ಯ ಕಾರ್ಯದರ್ಶಿ ಸುರೇಶ್ ಡೊಣ್ಣಿ, ಮುಖಂಡರಾದ ರಮೇಶ್ ನಾಯಕ್, ಸುಖರಾಜ್ ತಾಳಕೇರಿ, ಮರಿಯಪ್ಪ ಕುಂಟೋಜಿ, ಕೆ.ಎಸ್.ಮೈಲಾರಪ್ಪ, ಶಿವಪುತ್ರಪ್ಪ ಗುಮಗೇರ, ವೀರಭದ್ರಪ್ಪ ನಾಯಕ್, ಮಾರೆಪ್ಪ ನಾಯಕ್, ಜೋಗದ ನಾರಾಯಣಪ್ಪ ನಾಯಕ್, ಜೋಗದ ಹನುಮಂತಪ್ಪ ನಾಯಕ್, ಜೆ ಶಂಕರ್, ಹಂಚ್ಯಾಳಪ್ಪ ತಳವಾರ, ಅವಿನಾಳಪ್ಪ ತಳಬಾಳ, ಶರಣಪ್ಪ ನಾಯಕ್ ಕೊಪ್ಪಳ, ಬಸವರಾಜ್ ಕುಷ್ಠಗಿ, ಮಂಗಳೇಶ್ ಕುಕನೂರು, ಗದ್ಯಪ್ಪ ಕಾರಟಗಿ, ಶರಣಪ್ಪ ಕುರಿ ಕನಕಗಿರಿ, ಮಾನಪ್ಪ ಯಬುರ್ಗಾ, ಬಸಪ್ಪ ಗಡೇಕಲ್, ಡಾ.ಯಮನೂರಪ್ಪ, ಮಂಗಳಪ್ಪ ಕುಕನೂರು, ಶಿವಮೂರ್ತಿ ಗುತ್ತೂರು, ಯಮನೂರಪ್ಪ ನಾಯಕ್, ಹನುಮಂತಪ್ಪ ಚೌಡ್ಕಿ, ಮಂಜುನಾಥ ಜಿ. ಗೊಂಡಬಾಳ, ಆನಂದ್ ಭಂಡಾರಿ ಸೇರಿ ಹಲವರು ಉಪಸ್ಥಿತರಿದ್ದರು.

Please follow and like us: