ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಸರ್ಕಾರದ ಲಿಖಿತ ಹೇಳಿಕೆಗೆ ಸ್ವಾಗತ- ಭಾರಧ್ವಾಜ

KARNATAKA BREAKING NEWS

ಮೂರು ತಿಂಗಳೊಳಗಾಗಿ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಸರ್ಕಾರದ ಲಿಖಿತ ಹೇಳಿಕೆಗೆ ಸ್ವಾಗತ
– ಭಾರಧ್ವಾಜ

ಗಂಗಾವತಿ: ಜುಲೈ-೧ ರಿಂದ ನಡೆಸಿದ ರಾಜ್ಯವ್ಯಾಪಿ ಹೋರಾಟಕ್ಕೆ ಮಣಿದ ಸರ್ಕಾರ ಎಲ್ಲಾ ಕಾರ್ಮಿಕರನ್ನು ಮೂರು ತಿಂಗಳೊಳಗಾಗಿ ಖಾಯಂಗೊಳಿಸುವುದಾಗಿ ಲಿಖಿತ ಆಶ್ವಾಸನೆ ನೀಡಿದೆ. ಇದರಿಂದಾಗಿ ಪೌರಕಾರ್ಮಿಕರು ನಡೆಸುತ್ತಿರುವ ಹೋರಾಟವನ್ನು ಹಿಂಪಡೆದಿದ್ದಾರೆ ಎಂದು ಭಾರಧ್ವಾಜ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದರು.
ಸರ್ಕಾರ ಮುಂದಿನ ದಿನಗಳಲ್ಲಿ ತಾನು ಕೊಟ್ಟ ಮಾತಿನಂತೆ ನಡೆಯದಿದ್ದರೆ, ಉಗ್ರವಾದ ಹೋರಾಟ ಮಾಡಲು ಕಾರ್ಮಿಕರು ಸಿದ್ಧರಾಗಿದ್ಧಾರೆ, ಈಗ ಜುಲೈ-೧ ರಿಂದ ಮಾಡಿದ ಹೋರಾಟದಲ್ಲಿ ಕಾರ್ಮಿಕರ ಒಗ್ಗಟ್ಟನ್ನು ತೋರಿಸಿ, ಮುಖ್ಯಮಂತ್ರಿಗಳಿಗೆ ಬಿಸಿ ಮುಟ್ಟಿಸಲಾಗಿದೆ. ಅವರು ಜಾರಿಕೊಳ್ಳಲು ಪ್ರಯತ್ನಿಸಿದರೂ ಕಾರ್ಮಿಕರ ಒಗ್ಗಟ್ಟಿನ ಹೋರಾಟದಿಂದ ಸರ್ಕಾರ ಮಣಿದು ಲಿಖಿತ ಆಶ್ವಾಸನೆ ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ಸುಮಾರು ೫೦೦೦೦ ಜನ ಪೌರಕಾರ್ಮಿಕರು ಸರ್ಕಾರಿ ನೌಕರರಾಗಲಿದ್ದಾರೆ. ಕರ್ನಾಟಕದ ಪೌರಕಾರ್ಮಿಕರ ದೊಡ್ಡ ಗೆಲುವಾಗಿದೆ. ಈ ಹೋರಾಟದಲ್ಲಿ ಕಾರ್ಮಿಕರಿಗೆ ಕಿರುಕುಳ ನೀಡದೇ, ಸಹಕರಿಸಿದ ಜಿಲ್ಲಾಧಿಕಾರಿಗಳು, ಯೋಜನಾ ನಿರ್ದೇಶಕರು, ಪೌರಾಯುಕ್ತರು, ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.

Please follow and like us: