ತಟ್ಟೆಯಲ್ಲಿ ಅನ್ನ ಇರದವರಲ್ಲ, ಉತ್ತಮ ವಿಚಾರ ಇಲ್ಲದವರು ನಿರ್ಗತಿಕರು: ಗವಿಶ್ರೀ

-ಛಲ ಇದ್ದರೆ ಪತ್ರಿಕೋದ್ಯಮದಲ್ಲಿ ಸಾಧನೆ ಸಾಧ್ಯ: ಶಿಬರೂರು
-ಕಾಲೇಜಿನ ಪ್ರತಿಭೆಗಳನ್ನು ಬೆಳಕಿಗೆ ತರಲು ಇದೊಂದು ಉತ್ತಮ ವೇದಿಕೆ: ಹಿಟ್ನಾಳ
-ಸಮಾಜದ ಏಳ್ಗೆಗೆ ಶ್ರಮಿಸುವ ಶಕ್ತಿಯೇ ಪತ್ರಿಕೋದ್ಯಮ: ಸಿ.ವಿ.ಸಿ.
-ಪತ್ರಿಕೋದ್ಯಮದಲ್ಲಿವೆ ಸಾಕಷ್ಟು ಅವಕಾಶಗಳು: ರಾಕೇಶ್
ಕೊಪ್ಪಳ: ಯಾರ ತಟ್ಟೆಯೊಳಗೆ ಅನ್ನ ಇರುವುದಿಲ್ಲವೋ ಅವರು ನಿರ್ಗತಿಕರಲ್ಲ, ಬೆಳಗ್ಗೆ ಎದ್ದ ತಕ್ಷಣ ಯಾರ ತಲೆಯೊಳಗೆ ಉತ್ತಮ ವಿಚಾರಗಳು ಬರುವುದಿಲ್ಲವೋ ಅಂಥವರೇ ನಿಜವಾದ ನಿರ್ಗತಿಕರು ಎಂದು ಸಂಸ್ಥಾನ ಶ್ರೀ ಗವಿಮಠದ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಘಟಕ ಹಾಗೂ ಪತ್ರಿಕೋದ್ಯಮ ವಿಭಾಗದಡಿ ಕಾಲೇಜಿನ ಆಂತರಿಕ ಪ್ರಸಾರದ ವಿದ್ಯಾರ್ಥಿಗಳ ಪ್ರಾಯೋಗಿಕತೆಯ ಕಾಲೇಜು ರಂಗ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಪತ್ರಿಕೆ ಎಂದರೆ ಅಲ್ಲಸಲ್ಲದ, ಇಲ್ಲಸಲ್ಲದ, ಎಲ್ಲೂ ಸಲ್ಲದ ವಿಚಾರಗಳನ್ನು ಬರೆಯುವುದಲ್ಲ. ಅದರಲ್ಲಿರುವ ಭಾವನೆ, ವಿಚಾರಗಳು ಜೀವನ, ಸಮಾಜ ಬದಲಾವಣೆಗೆ ಕಾರಣವಾಗಬೇಕು. ಸುದ್ದಿಗಳು ಬೆಂಕಿಯಂತಾಗದೇ ಬೆಳಗುವ ದೀಪಗಳಾಗಬೇಕು. ಕಾಲೇಜು ರಂಗ ದೀಪವಾಗಿ ಭವಿಷ್ಯ ಬೆಳಗಲಿ ಎಂದು ಆರ್ಶೀವಚನ ನೀಡಿದರು.
ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಮಾತನಾಡಿ, ಪತ್ರಿಕೋದ್ಯಮದಲ್ಲಿ ಅವಮಾನ, ಜೀವ ಬೆದರಿಕೆ ಸಹಜ. ಅಂಥವುಗಳಿಗೆಲ್ಲ ಎದೆಗುಂದದೆ ಎದುರಿಸಿ ನಿಲ್ಲುವ ಛಾತಿ ಇರಬೇಕು. ಛಲ ಇದ್ದರೆ ಪತ್ರಿಕೋದ್ಯಮದಲ್ಲಿ ಸಾಧನೆ ಸಾಧ್ಯ ಎಂದು ಕಿವಿಮಾತು ಹೇಳಿದರು.
ವಿಎಸ್‌ಕೆಯುಬಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ತಾಳಿಕೋಟಿ ಮಾತನಾಡಿ, ಒಂದೊಂದು ಕೆಲಸಕ್ಕೆ ಒಂದೊಂದು ಕೋರ್ಸ್ ಇದೆ. ಆದರೆ ಪತ್ರಿಕೋದ್ಯಮ ಅಭ್ಯಸಿಸಿದರೆ ಸಾಕಷ್ಟು ಕೆಲಸಗಳು ತೆರೆದುಕೊಂಡಿವೆ. ಸರಕಾರಿ, ಸರಕಾರೇತರ ಕೆಲಸಗಳಿವೆ. ಅವುಗಳನ್ನು ತಲುಪುವ ದಾರಿ ಗೊತ್ತಿರಬೇಕು ಮತ್ತು ಸರಿಯಾಗಿರಬೇಕು ಎಂದು ಸಲಹೆ ನೀಡಿದರು.
ಪತ್ರಿಕೆಯ ಮಹಾಪೋಷಕ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ಪತ್ರಿಕೋದ್ಯಮ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಶಕ್ತಿ ಕ್ಷೇತ್ರ. ಸರಕಾರಿ ಕಾಲೇಜಿನಲ್ಲಿ ಈ ಶಕ್ತಿ ಕ್ಷೇತ್ರಕ್ಕೆ ವಿದ್ಯಾರ್ಥಿಗಳು ತಯಾರಾಗುತ್ತಿರುವುದು ಹೆಮ್ಮೆಯ ವಿಷಯ. ಕಾಲೇಜು ರಂಗ ಪತ್ರಿಕೆ ನಿರಂತರತೆ ಕಾಪಾಡಿಕೊಳ್ಳಲಿ ಎಂದು ಆಶಿಸಿದರು.
ಕಾಲೇಜಿನ ಪ್ರಾಚಾರ್ಯ ಮಾರುತೇಶ್. ಬಿ. ಮಾತನಾಡಿ, ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ‌ ಇತ್ತಷ್ಟೇ. ಈಗ ಅದಕ್ಕೆ ಜೀವಕಳೆ ಬಂದಿದೆ. ಕ್ರಿಯಾಶೀಲ ಉಪನ್ಯಾಸಕರು ಪಾಠದ ಜತೆಗೆ ಪ್ರಾಯೋಗಿಕತೆಗೂ ಒತ್ತು ನೀಡಿ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿ, ಸಾಹಸದ ಕಾರ್ಯಕ್ಕೆ ಕೈ ಹಾಕಿದ್ದಾರೆ. ವಿದ್ಯಾರ್ಥಿಗಳು ಇಂಥ ಅವಕಾಶದ ಸದುಪಯೋಗ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಪತ್ರಿಕೆ ಸತ್ಯ ತಿಳಿಸುವ ಜೊತೆಗೆ ಸಮಾಜದ ಸುಧಾರಣೆಗೆ ಶ್ರಮಿಸುತ್ತದೆ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು‌ ಕರೆಸಿಕೊಂಡಿರುವ ಪತ್ರಿಕಾ ರಂಗಕ್ಕೆ ಅಡಿ ಇಡಲು ಕಾಲೇಜಿನ ವಿದ್ಯಾರ್ಥಿಗಳು ಅಣಿಯಾಗುತ್ತಿರುವುದು ಸಂತಸದ ಸಂಗತಿ. ಕಾಲೇಜು, ವಿದ್ಯಾರ್ಥಿಗಳ ಪಾಲಿಗೆ ದೇವಸ್ಥಾನ ಇದ್ದಂತೆ  ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಉಪನ್ಯಾಸಕ ಬಸವರಾಜ ಕರುಗಲ್ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ವಿಜಯಕುಮಾರ್ ಕುಲಕರ್ಣಿ ನಿರೂಪಿಸಿದರು. ವಿದ್ಯಾರ್ಥಿನಿ ದೀಪಾ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಜಂಬಣ್ಣ, ರಮೇಶ್ ಹುನಗುಂದ ಮತ್ತು ಯಮನಗೌಡ ಪೊಲೀಸ್ ಪಾಟೀಲ  ಸ್ವಾಗತಿಸಿದರು. ವಿದ್ಯಾರ್ಥಿ ರವಿ ವಂದಿಸಿದರು.
Please follow and like us: