ಗವಿಮಠಕ್ಕೆ 10 ಕೋಟಿ ರೂ. ಮಂಜೂರು: ಸಿಎಂಗೆ ಸಿವಿಸಿ ಅಭಿನಂದನೆ

ಕೊಪ್ಪಳ: ಗವಿಮಠದ ಆವರಣದಲ್ಲಿ 5 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ನಿಲಯ ಹಾಗೂ ಪ್ರಸಾದ ನಿಲಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು 10 ಕೋಟಿ ರೂ. ಮಂಜೂರು ಮಾಡಿದ್ದು, ಸಿಎಂ ಅವರನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಹಾಗೂ ಸಮಾಜ ಸೇವಕ ಸಿ.ವಿ.ಚಂದ್ರಶೇಖರ್ ಅಭಿನಂದಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗವಿಮಠವು ರಾಜ್ಯದ ಎರಡನೇ ಸಿದ್ದಗಂಗೆ ಎಂಬ ಪ್ರಖ್ಯಾತಿ ಪಡೆದಿದೆ. 3500 ಕ್ಕೂ ಅಧಿಕ ವಿದ್ಯಾರ್ಥಿಗಳು ಉಚಿತ ವಸತಿ ಹಾಗೂ ಪ್ರಸಾದ ಪಡೆಯುತ್ತಿದ್ದಾರೆ. ಸ್ಥಳಾವಕಾಶ ಕೊರತೆ ಹಿನ್ನೆಲೆ 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯ ನಿರ್ಮಾಣಕ್ಕೆ ಮುಂದಾಗಿದ್ದು, ಈ ಕಾರ್ಯಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂ. ಮಂಜೂರು ಮಾಡುವ ಮೂಲಕ ಗವಿಶ್ರೀಗಳಿಗೆ ಶಕ್ತಿ ತುಂಬಿದೆ ಎಂದು ತಿಳಿಸಿದರು.
ಬಡ ವಿದ್ಯಾರ್ಥಿಗಳು ಮಠಗಳಲ್ಲಿ ಉಚಿತ ವಸತಿ ಹಾಗೂ ಪ್ರಸಾದ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದು, ಬಿಜೆಪಿ ಸರ್ಕಾರವು ಮೊದಲಿನಿಂದಲೂ ಮಠಗಳಿಗೆ ಅನುದಾನ ನೀಡುತ್ತಾ ಬಂದಿದೆ. ಇದೀಗ ಗವಿಮಠದ ಕಾರ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಸ್ಪಂದಿಸಿ 10 ಕೋಟಿ ರೂ. ಮಂಜೂರು ಮಾಡಲು ಆದೇಶಿಸಿರುವುದು ಸ್ವಾಗತಾರ್ಹವಾಗಿದೆ. ತಾವು ಕೂಡ ಗವಿಮಠಕ್ಕೆ 11 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಶ್ರೀಗಳ ಕಾರ್ಯಕ್ಕೆ ಕೈ ಜೋಡಿಸಲಾಗಿದೆ ಎಂದರು.
ಗವಿಮಠದಲ್ಲಿ ಉತ್ತರ ಕರ್ನಾಟಕ ಭಾಗ ಸೇರಿ ರಾಜ್ಯದ ವಿವಿಧ ಜಿಲ್ಲೆಯ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದು, ಶಿಕ್ಷಣಕ್ಕೆ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಉತ್ತೇಜನೆ ನೀಡುತ್ತಿದ್ದು, ಕೊಡುಗೈ ದಾನಿಗಳು ದೇಣಿಗೆ ನೀಡುವ ಮೂಲಕ ಗವಿಶ್ರೀಗಳ ಜೋಳಗಿ ತುಂಬಿಸಬೇಕು ಎಂದು ಮನವಿ ಮಾಡಿದ್ದಾರೆ.

Please follow and like us: