ಸಿಎಂ ಕಚೇರಿಯಲ್ಲೊಬ್ಬ
ಅಪರೂಪದ ಅಧಿಕಾರಿ…

ಜೀವನದಲ್ಲಿ ಎಂದೂ ಶಾಲು ಹೊದಿಸಿಕೊಳ್ಳದ ಅಪರೂಪದ ಅಧಿಕಾರಿಯೊಬ್ಬರಿಗೆ ಶಾಲು ಹೊದಿಸಿ ಸನ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ.

ನಿವೃತ್ತಿ ಅಂಚಿಗೆ ಬಂದರೂ ಸನ್ಮಾನದಿಂದ ದೂರ. ತಾಲ್ಲೂಕು ಪಂಚಾಯತಿ ಎಕ್ಸಿಕ್ಯುಟಿವ್ ಆಫೀಸರ್, ಜಿಲ್ಲಾ ಪಂಚಾಯಿತಿ ಸಿಇಓ ಸೇರಿದಂತೆ ಹತ್ತು ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದರೂ, ಎಲ್ಲಿಯೂ ಭ್ರಷ್ಟಾಚಾರ ಸೋಂಕು ತಗುಲಿಸಿಕೊಂಡವರಲ್ಲ.

ಎಷ್ಟೇ ಬಾರಿ ವರ್ಗಾವಣೆ ಆದರೂ ಸನ್ಮಾನ ಪಡೆದವರಲ್ಲ. ಯಾವುದೇ ಬಿರುದು, ಬಾವಲಿಗಳಿಗೆ ಅಂಟಿಕೊಂಡವರಲ್ಲ. ತನಗನಿಸಿದ ನ್ಯಾಯ ಮಾರ್ಗದಲ್ಲಿ ಕಾನೂನು ಚೌಕಟ್ಟಿನೊಳಗೆ ಸೇವೆ ಸಲ್ಲಿಸಿದ ಅಪರೂಪದ ಸರಳ ವ್ಯಕ್ತಿತ್ವದ ಸಾಕಾರಮೂರ್ತಿ ಪಿ.ಎ.ಗೋಪಾಲ್.

ಇಂಥವರು ನಮ್ಮ ನಡುವೆ ಇದ್ದಾರಾ? ಎಂದು ಹುಬ್ಬೇರಿಸುವವರಿದ್ದಾರೆ. ಖಂಡಿತವಾಗಿ ಇದ್ದಾರೆ. ‌ಆದರೆ ಅವರನ್ನು ಗುರುತಿಸುವವರಿಲ್ಲ. ಗುರುತಿಸಲಿ ಎಂದು ಅವರು ಎಂದು ಬೇಡಿದವರೂ ಅಲ್ಲ. ದೇವರು ನಮಗೆ ನೀಡಿದ ಅವಕಾಶ ಎಂದು ತಿಳಿದು ಜನರ ಸೇವೆಯಲ್ಲಿ ಮುಳುಗಿ ಹೋದವರು. ನಿಷ್ಠೂರವಾದರೂ ಸರಿಯೇ ಎಂದು ನಿರ್ಧರಿಸಿ ಕಾನೂನು ಬಿಟ್ಟು ಆಚೀಚೆ ಹೋಗದ ಗೋಪಾಲ್ ಅವರು ಸುದೀರ್ಘವಾಗಿ ಸವೆಸಿದ
ಸರ್ಕಾರಿ ಹಾದಿಯ ಸೇವೆ ಅನನ್ಯವಾದದ್ದು.

ವಿಷಯಕ್ಕೆ ಬಂದು ಬಿಡೋಣ.
ಮುಖ್ಯಮಂತ್ರಿ ಪರಿಹಾರ ವಿಭಾಗದ ಅಧಿಕಾರಿಯಾಗಿರುವ ಪಿ.ಎ.ಗೋಪಾಲ್ ಇದೇ ಜೂನ್ ಅಂತ್ಯಕ್ಕೆ ನಿವೃತ್ತಿ. ಅವರು ಈ ವಿಭಾಗಕ್ಕೆ ಬಂದ ದಿನದಿಂದ ಮೂರ್ನಾಲ್ಕು ವರ್ಷಗಳ ಕಾಲ ಸತತವಾಗಿ ನೋಡಿದ್ದೇನೆ. ನಮ್ಮ ಸುದ್ದಿ ಮನೆಯ ಪತ್ರಕರ್ತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದಾಗ, ಸಿಎಂ ಸೂಚನೆ ಮೇರೆಗೆ ಅವರು ನೀಡಿದ ಸ್ಪಂದನೆ ಎಂದೂ ಮರೆಯುವಂತಿಲ್ಲ. ಸಿಎಂ ಪರಿಹಾರ ನಿಧಿಗೆ ಸುಮಾರು 900 ಕೋಟಿ ರೂ ದಾನಿಗಳಿಂದ ದೇಣಿಗೆ ಸಂಗ್ರಹಿಸಿದ ತೆರೆ ಮರೆಯ ಹಿಂದೆ ಗೋಪಾಲ್ ಪಾತ್ರವನ್ನು ಯಾರೂ ಅಲ್ಲಗಳೆಯಲಾರರು.

ಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಓದಿದ ಅವರು ಸರ್ಕಾರಿ ಸೇವೆಗೆ ಸೇರಿದರೂ ಕೂಡ ಅದೇ ಸೇವಾ ಮನೋಭಾವ ಇಟ್ಟುಕೊಂಡು ದುಡಿದ ಅಪರೂಪದ ಜೀವ ಗೋಪಾಲ್.

ಏನು ಮಾಡಿದರೂ ಸನ್ಮಾನಕ್ಕೆ ಒಪ್ಪಿರಲಿಲ್ಲ. ಒಂದು ವಾರದಿಂದ ಇದೇ ರೀತಿ ಪ್ರಯತ್ನ ನಡೆದಿತ್ತು. ಇಂದು ಸಿಎಂ ಆಪ್ತ ವಿಭಾಗದ ಐಎಎಸ್‌ ಅಧಿಕಾರಿ ಜಗದೀಶ್ ಅವರ ಕಚೇರಿಯಲ್ಲಿದ್ದಾಗ ಗೋಪಾಲ್ ಅವರನ್ನು ಒಪ್ಪಿಸಿ ಸನ್ಮಾನಿಸಿದ ಹೆಗ್ಗಳಿಕೆ ನಮ್ಮದಾಯಿತು. ಸರ್ಕಾರಿ ಸೇವೆಯಲ್ಲಿ ಇಂಥವರ ಸಂತತಿ ಹೆಚ್ಚಲಿ ಎಂದು Kuwj ಅಧ್ಯಕ್ಷರಾದ ಶಿವಾನಂದ ತಗಡೂರ್ ಹಾರೈಸಿದ್ದಾರೆ.

Please follow and like us: