ಹಿರೇಹಳ್ಳವೊ? ಓಜಿನಹಳ್ಳವೊ?ಕುಶನದಿಯೊ?..


ಈ ಲೇಖನ ಬರೆಯಲು ಒಂದು ಕಾರಣವಿದೆ. ಮೊನ್ನೆ ಎರಡು ದಿನ ಸತತವಾಗಿ ಸುರಿದ ಮಳೆಯಿಂದಾಗಿ ರಾಜ್ಯದ ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಅದರಂತೆ ಕೊಪ್ಪಳದ ಬಹುತೇಕ ಹಳ್ಳಗಳೂ ತುಂಬಿ ಹರಿದು ಸಾರ್ವಜನಿಕ ಬದುಕಿಗೆ ತೊಂದರೆಯನ್ನುಂಟು ಮಾಡಿದವು. ಅದರಲ್ಲಿ ಜಿಲ್ಲೆಯಲ್ಲಿ ತುಂಬಿ ಹರಿದ ಹಳ್ಳಗಳಲ್ಲಿ ಕಿನ್ನಾಳದ ಹಿರೇಹಳ್ಳವೂ ಒಂದಾಗಿತ್ತು.

ಹಿರೇಹಳ್ಳ ತುಂಬಿ ಅಣೆಕಟ್ಟಿನಿಂದ ನೀರು ಹೊರಗಡೆ ಬಿಟ್ಟಾಗ ಹಳ್ಳದ ಸರಹದ್ದಿನ ಹಳ್ಳಿಗಳ ಸೇತುವೆಗಳು ತುಂಬಿ, ಜನ ಓಡಾಡುವ ರಸ್ತೆಗಳ ಸಂಪರ್ಕ ಕಡಿದುಕೊಂಡಾಗ ಹಿರಿಯ ಪತ್ರಕರ್ತರಾದ ಶ್ರೀ ಜಿ.ಎಸ್.ಗೋನಾಳರವರು ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆಗಳ ಮೂಲಕ ‘ಕುಶನದಿ’ ಹರಿಯುವ ಸರಹದ್ದುಗಳಲ್ಲಿ ಸರಿಯಾದ ರೀತಿಯಲ್ಲಿ ಸೇತುವೆಗಳನ್ನು ನಿರ್ಮಿಸಬೇಕೆಂದು ಒತ್ತಾಯ ಮಾಡಿದ್ದು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಯಿತು.

ಆಗ ನನಗೆ ‘ಕುಶನದಿ’ ಎಂಬ ಹೆಸರು ಗಮನಿಸಿದಾಗ ಹೌದು ಇದು ಹಿರೇಹಳ್ಳವೊ? ಓಜಿನಹಳ್ಳವೊ? ಕುಶನದಿಯೊ? ಎಂಬ ಬಗ್ಗೆ ಅಧ್ಯಯನಕ್ಕೆ ಮತ್ತಷ್ಟು ಪುಷ್ಠಿಕೊಟ್ಟಿತು. ಎಂದೋ ಓದಿದ ‘ಕುಶನದಿ’ಯು ನನ್ನ ಸ್ಮೃತಿಪಟಲದಲ್ಲಿ ಮತ್ತೊಮ್ಮೆ ನೆನಪಿಸಿತು.
ಈ ಹಿರೇಹಳ್ಳದ ಹರಿವು ಧಾರವಾಡ ಜಿಲ್ಲೆಯ ಬೆಟ್ಟಗಳಲ್ಲಿ ಹುಟ್ಟಿಕೊಂಡು, ಗದಗ, ಗಜೇಂದ್ರಗಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹರಿದು ಬಂದು ಕಿನ್ನಾಳದ ಹತ್ತಿರವಿರುವ ಮುದ್ಲಾಪೂರ ಗ್ರಾಮದಲ್ಲಿ ನಿರ್ಮಿಸಿದ ಅಣೆಕಟ್ಟಿನಲ್ಲಿ ನೀರು ಸಂಗ್ರಹವಾಗುತ್ತದೆ. ಅಣೆಕಟ್ಟಿನಲ್ಲಿ ತುಂಬಿದ ನಂತರ ಅಲ್ಲಿಂದ ಹೆಚ್ಚುವರಿ ನೀರನ್ನು ಹೊರಬಿಟ್ಟಾಗ ಇದು ಮುಂದೆ ಸಾಗಿ ಸುಮಾರು ೨೪ ಕಿ.ಮೀ ದೂರದಲ್ಲಿರುವ ತುಂಗಭದ್ರಾ ಜಲಾಶಯವನ್ನು ಸೇರುತ್ತದೆ. ವೀರಾಪೂರ ಹಳ್ಳ ಮತ್ತು ಹಿರೇಹಳ್ಳ ಇವೆರಡೂ ಹಳ್ಳಗಳಿಗೆ ಈ ಹಿರೇಹಳ್ಳ ಯೋಜನೆಯನ್ನು ನಿರ್ಮಿಸಲಾಗಿದೆ. ಕೊಪ್ಪಳ ತಾಲೂಕಿನಲ್ಲಿ ಕಡಿಮೆ ಮಳೆಯಾಗುತ್ತಿದ್ದು, ಅದರ ಪರಿಣಾಮವಾಗಿ ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ. ಈ ಪ್ರದೇಶದಲ್ಲಿ ಹರಿಯುವ ಸಾಕಷ್ಟು ತೊರೆಗಳು ಹರಿದು ವ್ಯರ್ಥವಾಗಿ ತುಂಗಭದ್ರಾ ಜಲಾಶಯಕ್ಕೆ ಸೇರುತ್ತಿತ್ತು. ಇದನ್ನು ಮನಗಂಡು ಸರ್ಕಾರ, ಮಳೆ ನೀರು ಅವಲಂಬಿತ ಕೃಷಿ ಭೂಮಿಯನ್ನು ನೀರಾವರಿ ಕೃಷಿ ಭೂಮಿ ಮಾಡಲು ಅನುಕೂಲ ಕಲ್ಪಿಸುವ ಉದ್ಧೇಶದಿಂದ ಕಿನ್ನಾಳ ಗ್ರಾಮದಿಂದ ಸುಮಾರು ಮೂರು-ನಾಲ್ಕು ಕಿ.ಮೀ ಅಂತರದಲ್ಲಿ ಹಿರೇಹಳ್ಳ ಯೋಜನೆಯನ್ನು ಕೈಗೆತ್ತಿಕೊಡಿತು.
ಈ ಯೋಜನೆಯು ಸುಮಾರು ೧೦೦೦೦ ಹೆಕ್ಟೇರ್ ಪ್ರದೇಶವನ್ನು ನೀರಾವರಿ ಪ್ರದೇಶವನ್ನಾಗಿ ಎರಡು ಹಳ್ಳಗಳಾದ ವೀರಾಪೂರ ಹಳ್ಳ ಮತ್ತು ಹಿರೇಹಳ್ಳಗಳು ಸಂಗಮವಾಗುವ ಸ್ಥಳದಲ್ಲಿ ಹಿರೇಹಳ್ಳ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಹಿರೇಹಳ್ಳ ಅಣೆಕಟ್ಟು ೩.೬ ಕಿ.ಮೀ ಅಗಲದ ಮಣ್ಣು ಮತ್ತು ಕಲ್ಲಿನ ಹೊದಿಕೆಯಿಂದ ೧೫.೦೦ ಮೀ ಎತ್ತರವನ್ನು ಹೊಂದಿದೆ. ಈ ಅಣೆಕಟ್ಟಿನಲ್ಲಿ ಸುಮಾರು ೧.೬೯ ಟಿಎಂಸಿ ಸಂಗ್ರಹವಾಗುವ ನೀರನ್ನು ಕಾಲುವೆಗಳ ಮೂಲಕ ಈ ಭಾಗದ ರೈತರ ಜಮೀನುಗಳಿಗೆ ಹರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಈ ಅಣೆಕಟ್ಟು ಸುಮಾರು ೧೦೦೦೦ ಹೆಕ್ಟೇರ್ ಭೂಮಿಯನ್ನು ನೀರಾವರಿ ಪ್ರದೇಶವನ್ನಾಗಿ ಪರಿವರ್ತನೆ ಮಾಡಿದೆ. ಈ ಅಣೆಕಟ್ಟು ಸುಮಾರು ೨೯ ಕಿ.ಮೀ ಉದ್ದದ ಬಲದಂಡೆ ಹಾಗೂ ಸುಮಾರು ೨೭ ಕಿ.ಮೀ ಉದ್ದದ ಎಡದಂಡೆ ಹರಿವಿನ ಕಾಲುವೆಗಳನ್ನು ಹೊಂದಿದೆ. ಇದು ೨೦೦೧ರಲ್ಲಿ ನಿರ್ಮಾಣವಾದ ಹಿರೇಹಳ್ಳ ಯೋಜನೆ. ತುಂಗಭದ್ರಾ ನದಿಗೆ ಹೆಚ್ಚು ಹೂಳು ಹರಿದು ಬರುತ್ತಿರುವುದರಿಂದ ಇಲ್ಲಿಯೇ ಹೂಳನ್ನು ತಡೆಯುವ ಯೋಜನೆಯೂ ಇದಾಗಿತ್ತು. ಇಂದು ಇದರ ಲಾಭವನ್ನು ಅನೇಕ ರೈತರು ಪಡೆಯುತ್ತಿರುವುದು ಸಂತಸದ ಸಂಗತಿ.
ಸುತ್ತಲ ಪ್ರದೇಶಗಳಲ್ಲಿ ಹರಿಯುವ ಹಳ್ಳಗಳಲ್ಲೇ ಇದು ಬಹುದೊಡ್ಡ ಹಳ್ಳ. ಆದ್ದರಿಂದ ಇದಕ್ಕೆ ‘ಹಿರೇಹಳ್ಳ’ ಎಂದು ಕರೆಯುತ್ತಿರಬೇಕು. ಈ ಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಸುಕು ಹರಿದುಬರುತ್ತದೆ. ಹೀಗೆ ಹರಿದು ಬಂದ ಆಪಾರ ಪ್ರಮಾಣದ ಉಸುಕು ತುಂಗಭದ್ರಾ ಅಣೆಕಟ್ಟನ್ನು ಸೇರುತ್ತಿತ್ತು. ಹೀಗಾಗಿಯೇ ಈ ಹಿರೇಹಳ್ಳಕ್ಕೆ ಅಣೆಕಟ್ಟನ್ನು ನಿರ್ಮಿಸಲಾಯಿತು. ಇಂದಿಗೂ ಸಹ ಅಪಾರ ಪ್ರಮಾಣದಲ್ಲಿ ಉಸುಕು ಹರಿದುಬರುತ್ತಿದೆ. ಈ ಹಿರೇಹಳ್ಳದ ಉಸುಕು ಮನೆ ನಿರ್ಮಸಿಲು ಬಹಳ ಯೋಗ್ಯವಾಗಿದೆ. ಆದ್ದರಿಂದ ಈ ಹಳ್ಳದ ಉಸುಕಿಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನು ಮನಗಂಡ ಸರಕಾರ ಟೆಂಡರ್ ಮತ್ತು ಹರಾಜುಗಳ ಮೂಲಕ ಈ ಹಳ್ಳದ ಉಸುಕನ್ನು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಇದಕ್ಕೆ ‘ಉಸುಕಿನಹಳ್ಳ’ ಎಂತಲೂ ಕರೆಯಲಾಗುತ್ತಿದೆ. ಇಂದು ಸರಕಾರಕ್ಕೆ ಈ ಹಿರೇಹಳ್ಳದ ಉಸುಕಿನಿಂದ ಕೋಟ್ಯಾನುಗಟ್ಟಲೆ ತೆರಿಗೆ ಹಣವು ಸಂಗ್ರಹವಾಗುತ್ತಿದೆ.
ಪ್ರಾಚೀನ ಕಾಲದಲ್ಲಿ ಈ ಹಳ್ಳವು ಸ್ವಚ್ಛಂದವಾಗಿ, ಸುಂದರವಾಗಿ ಹರಿಯುತ್ತಿತ್ತು. ಇಲ್ಲಿನ ನೀರು ತಿಳಿ ಹಾಲಿನಂತೆ ಹರಿಯುತ್ತಿದ್ದು. ಹರಿಯುವ ತಿಳಿನೀರಿನೊಳಗೆ ಸುಂದರವಾದ ಉಸುಕನ್ನೂ ಸಹ ಕಾಣಬಹುದಾಗಿತ್ತಂತೆ. ಹೀಗಾಗಿ ಇಲ್ಲಿನ ಪರಿಶುದ್ಧವಾದ ನೀರನ್ನು ಪೂಜೆ-ಪುನಸ್ಕಾರಗಳಿಗೆ, ಮುನಿಪೋತ್ತಮರಿಗೆ ಇಂತಹ ಅನೇಕ ಶುಭಕಾರ್ಯಗಳಿಗೆ ಬಳಸಲಾಗುತ್ತಿತ್ತೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಈ ಹಿರೇಹಳ್ಳದ ಪಕ್ಕದಲ್ಲಿರುವ ಮಾದಿನೂರು, ಓಜನಹಳ್ಳಿ ಮತ್ತು ನರೇಗಲ್ ಗ್ರಾಮಗಳು ಪ್ರಾಚೀನ ಕಾಲದಲ್ಲಿ ಜೈನ ಕೇಂದ್ರಗಳಾಗಿದ್ದವೆಂದು ಇತಿಹಾಸದಿಂದ ತಿಳಿದುಬರುತ್ತದೆ. ಅಂದರೆ ಈ ಸುತ್ತಲ ಪ್ರದೇಶವೇ ಜೈನ ನೆಲೆಯಾಗಿತ್ತು ಎಂದು ತಿಳಿದುಬರುತ್ತದೆ. ಕೊಪ್ಪಳದ ಜೈನಧರ್ಮದ ಹಿರಿಯರಾದ ಶ್ರೀ ಮಹೇಂದ್ರ ಛೋಪ್ರಾರರವರು ಹೇಳುವಂತೆ ಈ ಹಿರೇಹಳ್ಳವು ಪ್ರಾಚೀನ ಕಾಲದಲ್ಲಿ ಶುಭ್ರವಾಗಿ ಮತ್ತು ಸ್ವಚ್ಛಂದವಾಗಿ ಹರಿಯುವ ತಿಳಿ ನೀರಿನ ಹಳ್ಳವಾಗಿತ್ತು. ಈ ಹಳ್ಳದ ಸುತ್ತಲ ಪ್ರದೇಶದಲ್ಲಿ ಅನೇಕ ಜೈನ ಮುನಿಗಳು ವಾಸವಾಗಿದ್ದರು. ಅವರಿಗೆ ದಿನನಿತ್ಯಕ್ಕೆ ಬೇಕಾದ ಶುದ್ಧವಾದ ನೀರನ್ನು ಇದೇ ಹಳ್ಳದಿಂದ ಪಡೆಯುತ್ತಿದ್ದರು. ಬಹಳ ಮುಖ್ಯವಾಗಿ ಓಜನಹಳ್ಳಿ ಗ್ರಾಮವು ಸಂಪೂರ್ಣ ಜೈನಮುನಿ ಮತ್ತು ಅನುಯಾಯಿಗಳಿಂದ ತುಂಬಿತ್ತು. ಹೀಗಾಗಿ ಅವರು ಪಕ್ಕದಲ್ಲೇ ಹರಿಯುವ ಹಳ್ಳದಲ್ಲಿನ ಶುದ್ಧವಾದ ನೀರನ್ನು ಪಡೆಯುತ್ತಿದ್ದರು. ಅದಕ್ಕಾಗಿ ಈ ಹಳ್ಳಕ್ಕೆ ‘ಓಜಿನಹಳ್ಳ’ ಎಂದು ಜೈನ ಸಂಪ್ರದಾಯ ಕಾಲದಲ್ಲಿ ಕರೆಯಲಾಗುತ್ತಿತ್ತು. ಜೈನ ಮುನಿಗಳು ಇದೇ ಹಳ್ಳದ ಸಾಲಿನಲ್ಲಿ ಪೂಜೆ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು. ಹೀಗಾಗಿ ನಮ್ಮ ಪ್ರಾಚೀನ ಕಾಲದ ಜೈನಮುನಿಗಳ ಕಾಲಕ್ಕೆ ಇದು ಪವಿತ್ರವಾದ ಜೈನ(ಜಿನ)ಹಳ್ಳವೇ ನದಿಯಾಗಿ ಹರಿಯುತ್ತಿತ್ತು ಎಂಬುದು ಅವರ ಅಭಿಪ್ರಾಯವಾಗಿದೆ.
ಪ್ರಾಚೀನ ಕಾಲದಲ್ಲಿ ಕೊಪ್ಪಳವು ಜೈನರ ಕಾಶಿಯಾಗಿತ್ತು. ಇಲ್ಲಿ ಅನೇಕ ಜೈನಮುನಿಗಳು ವಾಸವಾಗಿದ್ದರು. ಅಲ್ಲದೇ ಇಲ್ಲಿಗೆ ಅನೇಕ ಜೈನ ಮುನಿಗಳು ಭೇಟಿಕೊಟ್ಟ ಉದಾಹರಣೆಗಳು ಸಾಕಷ್ಟು ದೊರೆಯುತ್ತವೆ. ಕೊಪ್ಪಳ ಪ್ರದೇಶವು ಜೈನ ಸಂಪ್ರದಾಯದಿಂದ ತುಂಬಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಹೀಗಾಗಿ ಇಲ್ಲಿನ ಪ್ರದೇಶ, ಪ್ರಕೃತಿಗಳಿಗೆ ಜೈನ ಸಂಬಂಧಗಳು ಕಾಣಸಿಗುತ್ತವೆ. ಉದಾಹರಣೆಗೆ ನೋಡುವುದಾದರೆ ಬಹದ್ದೂರಬಂಡಿ ಗ್ರಾಮದ ಬೆಟ್ಟಕ್ಕೆ ಬರಮಪ್ಪನ ಬೆಟ್ಟ ಅಥವಾ ಗುಡ್ಡ (ತೀರ್ಥಂಕರರ ಯಕ್ಷ ಬ್ರಹ್ಮನು. ಅವರನ್ನು ಬರಮಪ್ಪ ಎಂತಲೂ ಕರೆಯಲಾಗುತ್ತದೆ), ಓಜಿನಹಳ್ಳಿ ಮತ್ತು ಜಿನ್ನಾಪುರ ಗ್ರಾಮಗಳೂ ಜೈನಧರ್ಮದ ಹೆಸರಿನಿಂದ ಕರೆಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲ ಕೊಪ್ಪಳದ ಅನೇಕ ಗ್ರಾಮಗಳಲ್ಲಿ ಇಂದಿಗೂ ಸಹ ಬರಮಪ್ಪನ ಗುಂಡುಗಳನ್ನು ಕಾಣಬಹುದು. ಇವೆಲ್ಲವುಗಳನ್ನು ಗಮನಿಸಿದಾಗ ಇದೂ ಒಂದು ‘ಓಜಿನಹಳ್ಳ’ ಇರಬೇಕೇನೂ ಎಂದೆನಿಸುವುದು ಸಹಜ. ಇದೇ ವಿಷಯದ ಮೇಲೆ ಚರ್ಚಿಸಿದರೆೆ ಈ ಹಳ್ಳಕ್ಕೆ ಸುಮಾರು ಒಂದು ಸಾವಿರ ವರ್ಷದ ಇತಿಹಾಸ ದೊರೆಯುತ್ತದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಶೋಧಗಳು ನಡೆಯಬೇಕಿದೆ.
ಮಾದಿನೂರು ಗ್ರಾಮದಲ್ಲಿ ವಿಷ್ಣುತೀರ್ಥರ ದೇವಸ್ಥಾನವಿದೆ. ದಕ್ಷಿಣದ ಭಕ್ತರು ‘ಉತ್ತರದಲ್ಲಿರುವ ಬದರಿನಾರಾಯಣ’ ದೇವಸ್ಥಾನಕ್ಕೆ ಹೋಗುವುದಕ್ಕೆ ಆಗದವರು ಇಲ್ಲಿಗೆ ಬಂದು ದರ್ಶನ ಪಡೆದರೆ ಸಾಕು. ಅವರು ಪವಿತ್ರರಾಗುತ್ತಾರೆ. ಅವರಿಗೆ ಉತ್ತರದ ‘ಬದರಿನಾರಾಯಣನ’ ದರ್ಶನ ಪಡೆದಂತೆ ಆಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಆದ್ದರಿಂದ ಈ ವಿಷ್ಣುತೀರ್ಥ ದೇವಸ್ಥಾನಕ್ಕೆ ಅನೇಕ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ. ಈ ವಿಷ್ಣುತೀರ್ಥರು ಅರಣ್ಯಕಾಚಾರ್ಯರು. ಅಂದರೆ ಸಾಮಾನ್ಯ ಅರ್ಥದಲ್ಲಿ ಅಡವಿ ಸ್ವಾಮಿಗಳು ಎಂದು. ಇವರು ಊರೂರು ಸಂಚರಿಸುತ್ತಾ ಈ ಮಾದಿನೂರು ಗ್ರಾಮದಲ್ಲಿ ಬಂದು ನೆಲೆಸಿದ್ದರು. ಇವರು ಕ್ರಿ.ಶ. ಸುಮಾರು ೧೭೦೬ ರಿಂದ ೧೭೫೬ರ ಅವಧಿಯಲ್ಲಿ ಇಲ್ಲಿ ನೆಲೆಸಿದ್ದರೆಂದು ಪ್ರತೀತಿ ಇದೆ. ಇಂದು ಈ ದೇವಸ್ಥಾನವನ್ನು ‘ದಕ್ಷಿಣ ಬದರಿನಾರಾಯಣ’ ದೇವಸ್ಥಾನವೆಂತಲೂ ಕರೆಯುತ್ತಾರೆ. ಈ ದೇವಸ್ಥಾನದ ಮೂಲ ಕತೃಗಳಾದ ಶ್ರೀ ಅಡವಿಕಾಚಾರ್ಯರರ ವಂಶಸ್ಥರು ಮೂಲತಃ ಸವಣೂರಿನವರು. ಶ್ರೀ ಆಚರ‍್ಯರು ಶ್ರೀ ತಿರುಮಲಾಚಾರ್ಯರು ಮತ್ತು ಶ್ರೀಮತಿ ಭಾಗೀರಥಿಯವರ ಪುಣ್ಯಗರ್ಭದಿಂದ ಜನ್ಮತಾಳಿದರು. ಇವರ ಮೂಲ ಹೆಸರು ಜಯತೀರ್ಥಾಚಾರ್ಯರು. ಇವರ ಹೆಸರೇ ಸೂಚಿಸುವಂತೆ ಇವರು ಊರೂರು ಸಂಚರಿಸುತ್ತಾ ಬಂದಿರುವುದರಿಂದ ಅಡವಿಕಾಚರ‍್ಯರು ಎಂದಾಗಿರಬೇಕು. ಸಕಲ ಶಾಸ್ತçಗಳಲ್ಲಿ ಪರಿಣಿತಿ ಪಡೆದ ಇವರು ಅನೇಕ ಕೃತಿಗಳನ್ನು ಬರೆದಿದ್ದಾರೆ. ಆದರೆ ಎಷ್ಟು ಕೃತಿಗಳನ್ನು ರಚಿಸಿದ್ದಾರೆಂಬುದು ನಿಖರವಾಗಿ ತಿಳಿದುಬಂದಿರುವುದಿಲ್ಲ. ಆದರೂ ಉಪಲಬ್ಧವಾದ ಕೆಲವೇ ಕೆಲವು ಗ್ರಂಥಗಳೆಂದರೆ ಸುಮಧ್ವ ವಿಜಯ, ಪ್ರಮೇಯ ಫಲಮಾಲಿಕ ಮತ್ತು ರಮಾಸ್ತೋತ್ರ ಎಂಬ ಕೆಲವೇ ಗ್ರಂಥಗಳು ಮಾತ್ರ ದೊರಕಿವೆ.
ಶ್ರೀ ಅಡವಿಕಾಚಾರ್ಯರರ ಕೃತಿಗಳಲ್ಲಿ ಈ ‘ಕುಶನದಿ’ ಎಂಬ ಉಲ್ಲೇಖ ಬರುತ್ತದೆ. ‘’ಚಾರುಶ್ರೀಕುಶನದೀತಿರದಲ್ಲಿರುತಿಹನ್ಯಾರೇ ಪೇಳಮ್ಮಯ್ಯ ಸಾರಯತೀಶ್ವರ ಧೀರ ಸುಗುಣಗಂಭೀರ ವಿಷ್ಣುತೀರ್ಥಾರ್ಯ ಕಾಣಮ್ಮಾ’’|| ಎಂದು ಶ್ರೀ ಅರಣ್ಯಕಾಚರ‍್ಯರು ತಮ್ಮ ‘ಚಾರುಶ್ರೀಕುಶನದಿ ತೀರದಲ್ಲಿರುತಿಹನ್ಯಾರೇ’ ಎಂಬ ಪದ್ಯದಲ್ಲಿ ಆಚರ‍್ಯರು ತಾವು ವಾಸಿಸಿರುವ ಮಾದಿನೂರಿನ ಹತ್ತಿರ ಹರಿಯುವ ಹಳ್ಳದ ಪ್ರದೇಶಕ್ಕೆ ‘ಕುಶನದಿ’ ಎಂದು ಉಲ್ಲೇಖಿಸಿದ್ದಾರೆ. ಕುಶನದಿಯ ಈ ಉಲ್ಲೇಖ ಇವರ ಇನ್ನೂ ಕೆಲ ಕಾವ್ಯಗಳಲ್ಲಿ ಪ್ರಸ್ತಾಪವಿದೆ. ಮಾದಿನೂರು ಪಕ್ಕದಲ್ಲೇ ಹರಿಯುವ ಹಿರೇಹಳ್ಳಕ್ಕೆ ಈ ರೀತಿಯಲ್ಲಿ ವರ್ಣಿಸಿರುವುದು ಕಂಡುಬರುತ್ತದೆ. ಅಂದರೆ ಕ್ರಿ.ಶ. ೧೭ನೇ ಶತಮಾನದಲ್ಲಿ ಈ ಉಲ್ಲೇಖವಿರುವುದು ತಿಳಿದುಬರುತ್ತದೆ. ಶ್ರೀ ಅಡವಿಕಾಚರ‍್ಯರು ‘ಕುಶನದಿ’ಯ ಈ ಉಲ್ಲೇಖವನ್ನು ಯಾವ ಆಧಾರಮೇಲೆ ಉಲ್ಲೇಖಿಸಿದರು ಎಂಬುದು ಮಾತ್ರ ತಿಳಿಯುವುದಿಲ್ಲ. ಅವರು ಬ್ರಾಹ್ಮಣಾಚಾರ್ಯರಾಗಿದ್ದರಿಂದ ಭವಿಷ್ಯ ಈ ಉಲ್ಲೇಖ ಮಾಡಿರಬೇಕೇನೋ ಎಂದೆನಿಸುತ್ತದೆ. ಏಕೆಂದರೆ ಅವರ ಪೂಜೆ, ಪುನಸ್ಕಾರ, ಮಡಿ ಇತ್ಯಾದಿ ಶುಭಕಾರ್ಯಗಳಿಗೆ ಶುದ್ಧವಾದ ಜಲ ಅಥವಾ ತೀರ್ಥ ಬೇಕಾಗುತ್ತದೆ. ಮತ್ತು ಸಂಧ್ಯಾವಂದನೆ ಇತ್ಯಾದಿ ಶುಭಕಾರ್ಯಗಳಿಗೆ ಇಂತಹ ಸ್ವಚ್ಛಂದವಾದ ಮತ್ತು ಶುದ್ಧವಾದ ನೀರು ಅಗತ್ಯವಾಗಿ ಬೇಕಾಗುತ್ತದೆ. ‘ಕುಶ’ ಎಂದರೆ ಹೋಮ, ಹವನಗಳಿಗೆ ಬಳಸುವ ಮೊನಚಾದ ಹುಲ್ಲು ಅಥವಾ ದರ್ಬೆ ಎಂದು ಅರ್ಥ ಬರುತ್ತದೆ. ಭವಿಷ್ಯ ಹಳ್ಳದಲ್ಲಿ ಹರಿಯುವ ಶುದ್ಧವಾದ ನೀರು, ಹೋಮಕ್ಕೆ ಬೇಕಾದ ಹುಲ್ಲು ಸಿಗುವ ಈ ಹಳ್ಳಕ್ಕೆ ‘ಕುಶನದಿ’ ಎಂದು ಕರೆದಿರುವ ಸಾಧ್ಯತೆಯಿದೆ. ಅರಣ್ಯಕಾಚರ‍್ಯರು ಹೆಸರಿಸಿದ ಕುಶನದಿಯ ಉಲ್ಲೇಖದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ.
ಇಂತಹ ಸಾವಿರಾರು ವರ್ಷಗಳ ಇತಿಹಾಸವಿರುವ ಹಿರೇಹಳ್ಳವು ಕಾಲ ಕಾಲಕ್ಕೆ ತಕ್ಕಂತೆ ನಾಮ ಬದಲಾಗುತ್ತಾ ಬಂದಿರಬಹುದು. ಆದರೆ ಅದರಲ್ಲಿ ನಿರಂತರವಾಗಿ ಹರಿದು ಬರುವ ನೀರು ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಮನಗಂಡ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಪರಮಪೂಜ್ಯರಾದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮತ್ತು ಶ್ರೀಮಠದ ಭಕ್ತ ಸಮೂಹ ಎರಡು ವರ್ಷದ ಕೆಳಗೆ ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಹಿರೇಹಳ್ಳವನ್ನು ಸ್ವಚ್ಛಗೊಳಿಸಿದರು. ಶ್ರೀಗಳು, ಭಕ್ತ ಸಮೂಹ ಮತ್ತು ವಿಶೇಷವಾಗಿ ಹಳ್ಳದ ಸರಹದ್ದಿನಲ್ಲಿ ವಾಸಿಸುವ ಜನರು, ಸರಕಾರ, ಸಂಘ-ಸಂಸ್ಥೆಗಳು ಅಣೆಕಟ್ಟಿನಿಂದ ತುಂಗಭದ್ರಾ ನದಿಯವರೆಗೆ ಇದ್ದ ಮುಳ್ಳು, ಕಂಟಿ, ಬೇಲಿಗಳನ್ನು ಕಡಿದು ತೆಗೆದುಹಾಕಲಾಯಿತು. ಹಳ್ಳದ ಸಾಲಿನಲ್ಲಿರುವ ಕಸ-ಕಡ್ಡಿಯನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಎಲ್ಲಿಯೂ ಅಡೆ-ತಡೆಯಿಲ್ಲದೆ ನೀರು ಸರಾಗವಾಗಿ ಹರಿದು ಬರುವಂತೆ ಮಾಡಿದ ಕೀರ್ತಿ ಪರಮಪೂಜ್ಯರಿಗೆ ಮತ್ತು ಇದರಲ್ಲಿ ಭಾಗವಹಿಸಿದ ಭಕ್ತ ಸಮೂಹಕ್ಕೆ ಸಲ್ಲುತ್ತದೆ.


ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊಬೈಲ್: ೯೪೪೮೫೭೦೩೪೦
E-mail:-skotnekal@gmail.com

Please follow and like us: