ಸರ್ಕಾರ ಜನತಾ ಜನಾರ್ಧನನ ಸೇವಕನಂತೆ ಕಾರ್ಯ ನಿರ್ವಹಿಸುತ್ತಿದೆ- ಪ್ರಧಾನಿ ನರೇಂದ್ರ ಮೋದಿ

ಜನ ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಗಳಿಂದ ವಿಡಿಯೋ ಸಂವಾದ


ಕೊಪ್ಪಳ,): ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಭಾರತ ಸರ್ಕಾರದಿಂದ ಪ್ರಾಯೋಜನೆಗೊಂಡ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಕುರಿತಾಗಿ ಭಾರತದ ಪ್ರಧಾನಮಂತ್ರಿಗಳು ಮಂಗಳವಾರ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟçಮಟ್ಟದಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಿಂದ ವಿಡಿಯೋ ಸಂವಾದ ಕಾರ್ಯಕ್ರಮ ನಡೆಸಿದರು.
ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಈ ವಿಡಿಯೋ ಸಂವಾದದ ನೇರ ಪ್ರಸಾರದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ. ಉಪಕಾರ್ಯದರ್ಶಿ ಶರಣಬಸವರಾಜ, ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಡಿಯೋ ಸಂವಾದದಲ್ಲಿ ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು, ಬಡವರ ಕಲ್ಯಾಣಕ್ಕಾಗಿಯೇ ನಾವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಯೋಜನೆಗಳಡಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಸರ್ಕಾರದ ಅನುದಾನ ಸೋರಿಕೆಯನ್ನು ತಡೆಗಟ್ಟಿದ್ದೇವೆ. 08 ವರ್ಷಗಳ ನಮ್ಮ ಆಡಳಿತದಲ್ಲಿ ನಾನು ಪ್ರಧಾನ ಸೇವಕನಾಗಿ ಕಾರ್ಯ ನಿರ್ವಹಿಸಿದ್ದೇನೆ, ದೇಶದ 130 ಕೋಟಿ ಜನರ ಪರಿವಾರದ ಸದಸ್ಯನಾಗಿದ್ದೇನೆ. ನಾವೆಲ್ಲರೂ ಜೊತೆಗೂಡಿ ಭಾರತವನ್ನು ಇಡೀ ವಿಶ್ವದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸೋಣ. ಇಂದು ದೇಶದ 10 ಕೋಟಿಗೂ ಹೆಚ್ಚಿನ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದೆವೆ. ಇಡೀ ರಾಷ್ಟçದ ಜನ ಈ ಗರೀಬ್ ಕಲ್ಯಾಣ್ ಸಮ್ಮೇಳನದಲ್ಲಿ ಭಾಗವಹಿಸಿ ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
ಇದಕ್ಕೂ ಮುನ್ನ ದೇಶದ ವಿವಿಧ ರಾಜ್ಯಗಳಿಂದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಗಳು ವರ್ಚುವಲ್ ಮೂಲಕ ಸಂವಾದ ನಡೆಸಿ, ಅವರ ಅಭಿಪ್ರಾಯ ಆಲಿಸಿದರು. ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಸಂತೋಷಿ ಎಂಬ ಮಹಿಳಾ ಫಲಾನುಭವಿಯೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಗಳು, ಸಂತೋಷಿ ಅವರು, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಿಂದಾದ ಅನುಕೂಲದ ಬಗ್ಗೆ ವಿವರಣೆ ಪಡೆದುಕೊಂಡರು. ಬಳಿಕ ಮಹಿಳೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ‘ನೀವು ಯೋಜನೆಯ ಬಗ್ಗೆ ಮಾತನಾಡಿದ ರೀತಿ ನೋಡಿ ನನಗೆ ಅತೀವ ಸಂತೋಷವಾಯಿತು, ನಿಮ್ಮ ಗ್ರಾಮದಲ್ಲಿ ಉತ್ತಮ ನಾಯಕಿಯಾಗುವ ಎಲ್ಲ ಲಕ್ಷಣಗಳು, ಅರ್ಹತೆ ನಿಮ್ಮಲ್ಲಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ವಿಡಿಯೋ ಸಂವಾದಲ್ಲಿ ದೇಶದ ವಿವಿಧ ರಾಜ್ಯಗಳ ಫಲಾನುಭವಿಗಳಾದ ಲಡಖ್-ತಶಿ ಲೆಹ, ಬಿಹಾರ್ ಲಲಿತಾ ದೇವಿ, ವೆಸ್ಟ್ ತ್ರಿಪುರ- ಪಂಕಜ ಸಹನಿ, ಕರ್ನಾಟಕದ ಕಲಬುರಗಿ-ಸಂತೋಷಿ, ಇವರುಗಳೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಉಜ್ವಲ ಯೋಜನೆ, ಪೋಷಣ್ ಅಭಿಯಾನ್, ಮಾತೃ ವಂದನಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ಜಲ ಜೀವನ ಮಿಷನ್, ವನ್ ನೇಷನ್ ವನ್ ರೇಷನ್ ಯೋಜನೆ, ಪ್ರದಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಆಯುಷ್ಮಾನ್ ಭಾರತ್ ಕಾರ್ಡ್, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಪಡೆದ ದೇಶದ ಫಲಾನುಭವಿಗಳ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಲಕಾನಂದ ಮಳಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಸೇರಿದಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಜಿಲ್ಲಾ ಫಲಾನುಭವಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Please follow and like us: