ವಿಜಯಪುರದಲ್ಲಿ 37ನೇ
ಕೆಯುಡಬ್ಲ್ಯೂಜೆ ರಾಜ್ಯ
ಪತ್ರಕರ್ತರ ಸಮ್ಮೇಳನ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.

ಬೆಳಗಾವಿಯ ಜೀರಿಗೆ ಭವನದಲ್ಲಿ ಕೆಯುಡಬ್ಲ್ಯೂಜೆ
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಗಡಿ ಜಿಲ್ಲೆಯಾದ ಗುಮ್ಮಟ ನಗರಿ ವಿಜಯಪುರದಲ್ಲಿ ಒಮ್ಮೆಯೂ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆದಿಲ್ಲ. ಆದ್ದರಿಂದ ಈ ಬಾರಿ ವಿಜಯಪುರಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಚೂರಿ ಅವರ ನೇತೃತ್ವದ ಪದಾಧಿಕಾರಿಗಳು ಮಾಡಿದ ಮನವಿಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಕಾಸರಗೋಡು, ಚಿತ್ರದುರ್ಗ, ಉಡುಪಿ ಮತ್ತು ಬಾಗಲಕೋಟೆ ಜಿಲ್ಲಾ ಘಟಕಗಳು ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಸಲು ಸಭೆಯಲ್ಲಿ ಮನವಿ ಮಾಡಿದ್ದವು.

ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, ಅಂತಿಮವಾಗಿ ವಿಜಯಪುರ ಜಿಲ್ಲೆಯಲ್ಲಿ ಸಮ್ಮೇಳನ ಮಾಡಲು ತೀರ್ಮಾನಿಸಲಾಯಿತು.
ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ಶಿವಾನಂದ ತಗಡೂರು ಅವರು ತಿಳಿಸಿದರು.

Please follow and like us: