ಋತುಸ್ರಾವ ಮೈಲಿಗೆಯಲ್ಲ, ಹೆಣ್ಣಿನ ದೇಹದಲ್ಲಾಗುವ ನೈಸರ್ಗಿಕ ಪ್ರಕ್ರಿಯೆ

ಋತುಸ್ರಾವ  ಎನ್ನುವುದು ಮೈಲಿಗೆಯಲ್ಲ. ಅದು ಹೆಣ್ಣಿನ ದೇಹದಲ್ಲಾಗುವ ನಿಸರ್ಗದತ್ತ ದೈಹಿಕ ಬದಲಾವಣೆ. ಇದು ಹೆಣ್ಣನ್ನು ತಾಯ್ತನಕ್ಕೆ ಸಿದ್ದಪಡಿಸುವ ಪ್ರಕೃತಿ ಸಹಜ ಪ್ರಕ್ರಿಯೆ. ಋತುಚಕ್ರವನ್ನು ಹೀಗಳೆದು, ಕೀಳುಗೊಳಿಸಿ ಹೆಣ್ಣಿನ ಮೇಲೆ ನಿರ್ಬಂಧ ಹೇರುವುದು, ಪ್ರತ್ಯೇಕವಾಗಿರಿಸುವುದು, ಮೂಲೆಯಲ್ಲಿ ಕೂರಿಸುವುದು, ಸಭೆ ಸಮಾರಂಭಗಳಿAದ ದೂರವಿಸುವುದನ್ನು ಸಮಾಜ ರೂಢಿಸಿಕೊಂಡಿದೆ. ಆದರೆ ನಾವೆಲ್ಲರೂ ಇದನ್ನು ಮೀರಿ ನಿಲ್ಲಬೇಕಾಗಿದೆ. ಇಂಥ ಹಿಂಜರಿಕೆ, ಮೌಢ್ಯಗಳಿಂದ ನಾವು ಮುಕ್ತರಾಗಿ, ಋತುಚಕ್ರ ಕುರಿತಾಗಿ ಮುಕ್ತವಾಗಿ ಮಾತನಾಡುವ ಅಗತ್ಯವಿದೆ.
ಋತುಚಕ್ರ ಪ್ರತಿ ಹೆಣ್ಣಿನಲ್ಲಿ ಆಗುವ ಸಹಜ ಕ್ರಿಯೆ. ವ್ಯತ್ಯಾಸಗಳನ್ನು ಗೌರವಿಸೋಣ. ಸಹಜವಾದುದನ್ನ ಸಹಜವಾಗಿ ಸ್ವೀಕರಿಸೋಣ. ಇದು 3 ರಿಂದ 5 ದಿನಗಳ ಸಹಜ ಪ್ರಕ್ರಿಯೆ. ನಮ್ಮ ತಾಯಿ, ತಂಗಿ, ಪತ್ನಿ, ಮಗಳು, ಗೆಳತಿ ಪ್ರತಿಯೊಬ್ಬರಿಗೂ ನಾವು ಈ ಸಮಯದಲ್ಲಿ ಸಹಕಾರ ನೀಡಬೇಕು. ಸಹಜವಾದ ಕ್ರಿಯೆಗೆ ಸಹಜವಾಗಿ, ಸೂಕ್ಷö್ಮತೆಯಿಂದ ಸ್ಪಂದಿಸಬೇಕು. ಹೆಣ್ಣು ಗಂಡು ಎಂಬ ಬೇಧವಿಲ್ದಲದೆ ಋತುಚಕ್ರದ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಅವರ ಶತ್ಮವಿಶ್ವಾಸ ಹೆಚ್ಚಿಸಿ, ಹೆಣ್ತನವನ್ನು ಸಂಭ್ರಮಿಸಲು ಆಕೆಗೆ ಅನುವು ಮಾಡಿಕೊಡಬೇಕು.
ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಇನ್ಸಿನರೇಟರ್‌ಗಳನ್ನು ಅಳವಡಿಸುವುದರ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಋತುಚಕ್ರದ ಕುರಿತಾಗಿ ಇರುವ ಕೀಳು ಮನೋಭಾವನೆಯನ್ನು ಹೋಗಲಾಡಿಸಿ, ಮಹಿಳೆಯರ ಆರೋಗ್ಯ, ಗ್ರಾಮದ ಸ್ವಚ್ಛತೆಗೆ ಕಾರ್ಯಯೋಜನೆ ರೂಪಿಸಿದೆ.
ಮಹಿಳೆಯರು  ಅವೈಜ್ಞಾನಿಕವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವುದರಿಂದ ಮಹಿಳೆಯರ ಆರೋಗ್ಯದ ಮೇಲೆ  ದುಷ್ಪರಿಣಾಮ ಬೀರುವುದನ್ನು ಅರಿತ ಸರಕಾರ ಅವರ  ಅನುಕೂಲಕ್ಕಾಗಿ ಪ್ರತಿ ಗ್ರಾಮ ಪಂಚಾಯತಗಳಿಗೆ ಇನ್ಸಿನರೇಟರ್ ಯಂತ್ರವನ್ನು ವಿತರಿಸಲಾಗಿದೆ. ಈಗಾಗಲೇ ಅವುಗಳ ಮೂಲಕ ಬಳಸಿದ ಪ್ಯಾಡ್‌ಗಳ ವೈಜ್ಞಾನಿಕ  ನಿರ್ವಹಣೆ ಕೂಡ ಪ್ರಾರಂಭಿಸಿದೆ.
ಜಿಲ್ಲೆಯಾದ್ಯಾAತ ಈಗಾಗಲೇ ಘನ ತ್ಯಾಜ್ಯ ವಿಲೇವಾರಿ ವಾಹನದ ಮೂಲಕ ಬಳಸಿದ ಪ್ಯಾಡ್‌ಗಳ ಸಂಗ್ರಹ ಮಾಡಿ ವೈಜ್ಞಾನಿಕ ನಿರ್ವಹಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಮೇ ತಿಂಗಳ 28 ರಂದು ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಅಂಗವಾಗಿ ಒಂದು ವಾರಗಳ ಕಾಲ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ಕಾರ್ಯಕ್ರಮಗಳಲ್ಲಿ ಋತುಚಕ್ರದ ಸಮಯದಲ್ಲಿ ಮಹಿಳೆಯರು ಅನುಸರಿಸಬೇಕಾದ ಸ್ವಚ್ಛತಾ ಕ್ರಮಗಳು, ಆರೋಗ್ಯಕರ ರೂಢಿಗಳ ಬಗ್ಗೆ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಮಹಿಳೆಯರು ಸ್ವಚ್ಛ, ಸುರಕ್ಷಿತ, ಸೌಲಭ್ಯಗಳಿರುವ ಶೌಚಾಲಯವನ್ನು ಸದಾ ಉಪಯೋಗಿಸಬೇಕು. ನಮ್ಮ ಮನೆಯಲ್ಲಿ ಮಹಿಳೆಯರಿಗೆ ಅನುಕೂಲಕರವಾದ ಮತ್ತು ಸುರಕ್ಷಿತ ಶೌಚಾಲಯವನ್ನ ನಿರ್ಮಿಸಬೇಕು ಮತ್ತು ಸದಾ ಬಳಸಬೇಕು. ಶೌಚಾಲಯ ಬಳಸಿದ ನಂತರ, ಆಹಾರ ಸೇವಿಸುವ ಮೊದಲು ಮತ್ತು ನಂತರ ಸ್ವಚ್ಛವಾಗಿ ಕೈತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಿಳಿ ಹೇಳಲಾಗುತ್ತಿದೆ.

ಋತುಚಕ್ರದ ಸಮಯದಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಪಂಚ ಸೂತ್ರಗಳು:
1. ಪ್ರತಿ 4 ರಿಂದ 6 ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕು.
2. ಋತುಚಕ್ರ ಉತ್ಪನ್ನಗಳ ಸುರಕ್ಷಿತ ವಿಲೇವಾರಿ ಮಾಡಬೇಕು.
3. ಒಳ ಉಡುಪುಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
4. ಶೌಚಾಲಯಗಳ ಬಳಕೆ ಹಾಗೂ ಋತುಚಕ್ರ ಉತ್ಪನ್ನಗಳನ್ನು ಧರಿಸುವ ಮುನ್ನ ಹಾಗೂ ಬದಲಿಸಿದ ನಂತರ
ಸಾಬೂನಿನಿಂದ  ಕೈಗಳನ್ನು ಸ್ವಚ್ಛಗೊಳಿಸಬೇಕು.
5. ಪ್ರತಿನಿತ್ಯ ಸ್ನಾನ ಮಾಡಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ಬಳಸಿದ ಪ್ಯಾಡ್ ಹಾಗೂ ಬಟ್ಟೆಗಳ ವೈಜ್ಞಾನಿಕ ನಿರ್ವಹಣೆ ವಿಧಾನ;
ಬಳಸಿದ ಸ್ಯಾನಿಟರಿ  ಪ್ಯಾಡ್ ಗಳನ್ನು ಕಾಗದದಲ್ಲಿ ಸುತ್ತಿ ಕೆಂಪು ಗುರುತು ಮಾಡಿ, ಸ್ವಚ್ಛತಾಗಾರರಿಗೆ ಪ್ರತ್ಯೇಕವಾಗಿ ನೀಡಬೇಕು ಹಾಗೂ ಇನ್ಸಿನರೇಟರ್ ಮೂಲಕ ನಿರ್ವಹಣೆ ಮಾಡಬೇಕು. ಮರುಬಳಕೆ ಮಾಡಬಹುದಾದ ಬಟ್ಟೆಗಳು, ಪ್ಯಾಡ್‌ಗನ್ನು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಋತುಚಕ್ರದ ಕಪ್ ಗಳನ್ನು ಸ್ವಚ್ಛವಾಗಿ ತೊಳೆದು ಕುದಿಯುವ ನೀರಿನಲ್ಲಿ ಸೋಂಕು ಮುಕ್ತ ಮಾಡಿ ಸ್ವಚ್ಛವಾದ ಸ್ಥಳದಲ್ಲಿ ತೆಗೆದಿಡಬೇಕು.


ವಿದ್ಯಾರ್ಥಿನಿಯರಿಗೆ ಋತುಚಕ್ರ ನೈರ್ಮಲ್ಯದ ಜಾಗೃತಿ ಅತ್ಯಂತ ಅವಶ್ಯವಿದೆ. ಬಟ್ಟೆ ಬಳಕೆ ಹಾಗೂ ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಜೊತೆಗೆ ಸರಿಯಾದ ನಿರ್ವಹಣೆ ನಮ್ಮೆಲ್ಲರ ಹೊಣೆ. ಎಲ್ಲರೂ ವೈಯಕ್ತಿಕ ಶುಚಿತ್ವಕ್ಕಾಗಿ ಕೈ ಜೋಡಿಸೋಣ. ಮುಟ್ಟಿನ ಬಗ್ಗೆ ಮುಜುಗರ ಬೇಡ ಮುಕ್ತವಾಗಿ ಮಾತಾಡೋಣ.

ಶಾಲೆಗಳಲ್ಲಿ, ಸ್ವಸಹಾಯ ಸಂಘಗಳ ಮಹಿಳೆಯರಿಗೆ, ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಲ್ಪ ಸಂಖ್ಯಾತ ಮುಂತಾದ ವಸತಿ ಶಾಲೆಗಳಲ್ಲಿ, ನರೇಗಾ ಕೂಲಿಕಾರ ಮಹಿಳೆಯರಿಗೆ ಜಾಗೃತಿ ಮೂಡಿಸಿದ ಹಿನ್ನೆಯಲ್ಲಿ ಈ ಸ್ಥಳಗಳಲ್ಲಿ  ಇನ್ಸಿನರೇಟರ್ ಬಳಕೆಯಲ್ಲಿವೆ. ಕೆಲವು ಕಡೆ ಮುಜುಗರ, ಹಿಂಜರಿಕೆ ಕಾರಣದಿಂದ, ಜಾಗೃತಿ ಕೊರತೆಯಿಂದ ಅನೇಕ ಕಾಯಿಲೆಗಳಿಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ಪರಿಸರದ ಮೇಲಾಗುವ ದುಷ್ಪರಿಣಾಮ ತಪ್ಪಿಸುವ ಉದ್ದೇಶದಿಂದ  ಮೇ 28 ರಂದು ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಜಾಗೃತಿ  ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶೇ.100 ರಷ್ಟು ಇನ್ಸಿನರೇಟರ್ ಬಳಕೆ ಮಾಡುವಂತೆ ಉದ್ದೇಶ ಹೊಂದಿದೆ.
— ಬಿ ಫೌಜಿಯಾ ತರನ್ನುಮ್,
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ಜಿಲ್ಲಾ ಪಂಚಾಯತ, ಕೊಪ್ಪಳ

Please follow and like us: