ಭಯವಿರದ ಸ್ವಾತಂತ್ರ್ಯ – ಕವಿತಾ ಕೃಷ್ಣನ್

ಮೇ 27 ಮತ್ತು 28 ರಂದು ದಾವಣಗೆರೆಯಲ್ಲಿ (ತಾಜ್ ಪ್ಯಾಲೇಸ್) ನಡೆಯಲಿರುವ ಮೇ ಸಾಹಿತ್ಯ ಮೇಳ- 2022 ದಲ್ಲಿ ಉದ್ಘಾಟನಾ ಗೋಷ್ಠಿಯ ದಿಕ್ಸೂಚಿ ಮಾತುಗಳನ್ನಾಡುವವರಲ್ಲಿ ಒಬ್ಬರಾದ ಕವಿತಾ ಕೃಷ್ಣನ್ ಕುರಿತು..
ಕವಿತಾ ಕೃಷ್ಣನ್ ‘ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ’ (ಆಲ್ ಇಂಡಿಯಾ ಪ್ರೊಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್-ಐಪ್ವಾ)ದ ಜಂಟಿ ಕಾರ್ಯದರ್ಶಿ. ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ನಡೆದ ನಂತರ ಭುಗಿಲೆದ್ದ ಬೀದಿ ಹೋರಾಟಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಮುಂಚೂಣಿಗೆ ಬಂದ ಹೆಸರು. ಮಹಿಳೆಯರ ಹಕ್ಕುಗಳ ಕುರಿತು ಖಚಿತ ಮತ್ತು ಮುಕ್ತ ಅಭಿಪ್ರಾಯಗಳನ್ನು ಹೊಂದಿರುವ ಕವಿತಾ ತಮ್ಮ ಈ ಗುಣಗಳಿಂದಲೇ ತರುಣ ಪೀಳಿಗೆಯನ್ನು ಸೆಳೆದಿರುವ ನಾಯಕಿ.
ಮೂಲತಃ ತಮಿಳುನಾಡಿನ ಕೂನೂರಿನ ಕವಿತಾ ಹುಟ್ಟಿ ಬೆಳೆದಿದ್ದು ಭಿಲಾಯಿಯಲ್ಲಿ. ತಂದೆ ಉಕ್ಕು ಕಾರ್ಖಾನೆಯಲ್ಲಿ ಇಂಜಿನಿಯರ್. ತಾಯಿ ಇಂಗ್ಲಿಷ್ ಉಪನ್ಯಾಸಕಿ. ಮುಂಬಯಿಯಲ್ಲಿ ಪದವಿ ಓದುವಾಗ ಬೀದಿ ನಾಟಕಗಳಲ್ಲಿ, ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಮುಂದಿದ್ದ ಕವಿತಾ ದೆಹಲಿಯ ಜವಾಹರ್‌ಲಾಲ್ ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂಫಿಲ್ ಮಾಡಿದರು. ೧೯೯೪ರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಶಿವಸೇನಾ ವಿದ್ಯಾರ್ಥಿ ಸಾಂಪ್ರದಾಯಿಕ ನಿಲುವು ತಳೆದು ಮಹಿಳಾವಿರೋಧಿ ಭಾಷಣ ಮಾಡಿದಾಗ ಅದಕ್ಕೆ ಪ್ರತಿಯಾಗಿ ಅವನೆದುರು ತುಂಡುಲಂಗ ತೊಟ್ಟು ಸಿಗರೇಟ್ ಎಳೆಯುತ್ತ ಕವಿತಾ ಮತ್ತವರ ಗೆಳತಿಯರು ತಿರುಗಾಡಿದ್ದರು. ‘ನೀನೇನಾದರೂ ಆಯ್ಕೆಯಾದರೆ ನಮ್ಮಂತಹ ಹುಡುಗಿಯರನ್ನು ಏನು ಮಾಡುತ್ತಿ?’ ಎಂದು ಪ್ರಶ್ನಿಸಿದಾಗ, ‘ಜೈಲಿಗೆ ಅಟ್ಟುತ್ತೇನೆ’ ಎಂದಿದ್ದ ಅವನು. ಅವನ ದರ್ಪದ ಮಾತು ಕವಿತಾ ಮತ್ತವರ ಗೆಳತಿಯರಲ್ಲಿ ರೊಚ್ಚು, ಕೆಚ್ಚು ಎರಡನ್ನೂ ಮೂಡಿಸಿತು.
ಆಗ ಕವಿತಾ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್’ನ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಐಸಾ) ಸೇರಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಪ್ರಸಾದ್ ಎಂಬ ಯುವನಾಯಕನ ಗಾಢ ಪ್ರಭಾವಕ್ಕೆ ಒಳಗಾದರು. ನಂತರ ಜೆಎನ್ಯು ವಿದ್ಯಾರ್ಥಿ ಸಂಘಕ್ಕೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಆದರೆ ವಿದ್ಯಾರ್ಥಿ ಮುಖಂಡರಾದ ಚಂದ್ರಶೇಖರ್ ಹಾಗೂ ಶ್ಯಾಂ ನಾರಾಯಣ್ ಯಾದವ್ ಬಿಹಾರದ ಸಿವನ್‌ನ ರ್ಯಾಲಿಯಲ್ಲಿ ಭಾಷಣ ಮಾಡುವಾಗ ಹತ್ಯೆಯಾದರು. ಅದಕ್ಕೆ ಕಾರಣರಾದ ಆರ್‌ಜೆಡಿ ಎಂಪಿ ಸೈಯದ್ ಶಹಾಬುದ್ದೀನ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದಾಗ ಕವಿತಾ ಜೈಲಿಗೆ ಹೋದರು.
ಹೀಗೆ ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯ ಜೀವನ ಆಯ್ದುಕೊಂಡ ಕವಿತಾ ಮುಂದೆಯೂ ಹಲವು ಬಾರಿ ಜೈಲುವಾಸಿಯಾದರು. ಈಗ ಅವರು ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್’ನ ಪಾಲಿಟ್ ಬ್ಯೂರೋ ಸದಸ್ಯೆ. ಪಕ್ಷದ ಮುಖವಾಣಿ ಪತ್ರಿಕೆ ‘ಲಿಬರೇಷನ್’ನ ಸಂಪಾದಕಿ. ತಮ್ಮ ಪಕ್ಷದ ಮಹಿಳಾ ಸಂಘಟನೆ ಆಲ್ ಇಂಡಿಯಾ ಪ್ರೊಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್ (ಐಪ್ವಾ)ದ ಕಾರ್ಯದರ್ಶಿ. ಕರ್ನಾಟಕದ ಹಿರಿಯ ಮಹಿಳಾ ಹೋರಾಟಗಾರ್ತಿ ಮೈಸೂರಿನ ರತಿ ರಾವ್ ಈಗ ಐಪ್ವಾದ ಅಧ್ಯಕ್ಷರಾಗಿದ್ದಾರೆ.
ಐಪ್ವಾ, ಮಹಿಳೆಯರ ಮೇಲಾಗುವ ಎಲ್ಲ ರೀತಿಯ ಶೋಷಣೆ, ತಾರತಮ್ಯ ಮತ್ತು ಹಿಂಸೆಯನ್ನು ವಿರೋಧಿಸುತ್ತ ಹಕ್ಕು ಮತ್ತು ಸಮಾನತೆಯನ್ನು ಪ್ರತಿಪಾದಿಸಲು ಮಹಿಳೆಯರನ್ನು ಸಂಘಟಿಸುತ್ತದೆ. ಸಾಮಾಜಿಕ ಬದಲಾವಣೆಗಾಗಿ ಪ್ರಗತಿಪರ ಶಕ್ತಿಗಳ ಜೊತೆ ಕೈ ಜೋಡಿಸುತ್ತದೆ. ಮನೆ, ಉದ್ಯೋಗ ಸ್ಥಳ ಹಾಗೂ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ತಾರತಮ್ಯ, ದೌರ್ಜನ್ಯಕ್ಕೆ ಕಾರಣವಾದ ಪುರುಷ ಪ್ರಧಾನ ದಬ್ಬಾಳಿಕೆಯನ್ನು ಐಪ್ವಾ ವಿರೋಧಿಸುತ್ತದೆ. ಸಮಾಜವಾದ ನೆಲೆಗೊಂಡ ಸಮಾನತೆಯ ಸಮಾಜಕ್ಕಾಗಿ ಹೋರಾಡುತ್ತದೆ. ಜಾತಿ, ವರ್ಗ, ಪಿತೃಪ್ರಾಧಾನ್ಯಗಳು ಶೋಷಣೆಯ ಮೂರು ಮುಖಗಳೆಂದು ಗುರುತಿಸಿ, ಅವುಗಳ ವಿರುದ್ಧ ಹೋರಾಟದಲ್ಲಿ ಸಮಾಜದ ಎಲ್ಲ ಸ್ತರಗಳ ಮಹಿಳೆಯರು ಭಾಗಿಯಾಗಬೇಕೆಂದು ಬಯಸುತ್ತದೆ.
ಐಪ್ವಾ ಸರ್ಕಾರಿ-ವಿದೇಶಿ ಧನಸಹಾಯದಿಂದ ನಡೆಯುವ ಸಂಘಟನೆಯಲ್ಲ. ಅದು ತನ್ನ ಇರವಿಗೆ ಜನಸಾಮಾನ್ಯ ಮಹಿಳೆಯರ ಶಕ್ತಿಯನ್ನೇ ಅವಲಂಬಿಸಿದೆ. ೧೬ ವರ್ಷ ಮುಗಿದ, ಐಪ್ವಾದ ಸಂವಿಧಾನ-ಕಾರ್ಯಕ್ರಮಗಳ ಬಗೆಗೆ ಸಹಮತವುಳ್ಳ ಯಾರೇ ಆದರೂ ಅದರ ಸದಸ್ಯರಾಗಬಹುದು. ಸದಸ್ಯತ್ವ ಶುಲ್ಕ ೨ ರೂಪಾಯಿ ಮಾತ್ರ. ಸಹಮತವಿರುವ ವ್ಯಕ್ತಿಗಳು, ಜನಸಾಮಾನ್ಯರಿಂದ ಸಂಗ್ರಹಿಸುವ ಹಣವೇ ಅದರ ಕೆಲಸ ಕಾರ್ಯಗಳಿಗೆ ಆಧಾರ. ಇಂತಹ ಸಂಘಟನೆಗಳ ಸದಸ್ಯರಲ್ಲಿ ಸಹಜವಾಗಿ ಕಾಣುವ ಸರಳ, ನಿರ್ಭಯ, ದಿಟ್ಟ ವ್ಯಕ್ತಿತ್ವ ಕವಿತಾ ಅವರದು.
‘ಫ್ರೀಡಂ ವಿತೌಟ್ ಫಿಯರ್’
೨೦೧೨ರ ನಿರ್ಭಯಾ ಅತ್ಯಾಚಾರ ಪ್ರಕರಣದ ವೇಳೆ ಕವಿತಾ ತಮ್ಮ ಭಿನ್ನ ನಿಲುವು, ನಾಯಕತ್ವದ ಗುಣಗಳಿಂದ ಮುನ್ನೆಲೆಗೆ ಬಂದರು. ಜಂತರ್ ಮಂತರ್, ಇಂಡಿಯಾ ಗೇಟ್, ಶೀಲಾ ದೀಕ್ಷಿತ್ ಮನೆ ಎದುರು ಮತ್ತು ದೆಹಲಿಯ ಇತರ ಕಡೆಗಳಲ್ಲಿ ನಡೆದ ಅತ್ಯಾಚಾರ ವಿರೋಧಿ ಪ್ರತಿಭಟನೆಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು. ‘ಅತ್ಯಾಚಾರವಾದದ್ದು ದೆಹಲಿಯಲ್ಲಾದರೆ, ಸಾವಿರಾರು ಜನ ಪ್ರತಿಭಟಿಸಿದರೆ, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ ಪ್ರಕರಣದ ವಿಚಾರಣೆ ತ್ವರಿತಗೊಂಡು ಕೂಡಲೇ ತೀರ್ಪು ಬರುತ್ತದೆ. ಇಲ್ಲದಿದ್ದರೆ ದಶಕಗಟ್ಟಲೆ ಕಳೆದ ನಂತರವೂ ‘ಸಾಕ್ಷ್ಯಾಧಾರಗಳಿಲ್ಲದೆ’ ಕೇಸು ಸಾಯುತ್ತದೆ. ಖೈರ್ಲಾಂಜಿಯಲ್ಲಿ, ನಾಗ್ಪುರದಲ್ಲಿ, ಮಣಿಪುರದಲ್ಲಿ ನಡೆದದ್ದು ಮುಚ್ಚಿ ಹೋಗುತ್ತವೆ. ಭಾರತದಲ್ಲಿ ನ್ಯಾಯ ಸಿಗುವುದು ಎಂದರೆ ಲಾಟರಿ ಹೊಡೆಯುವ ಹಾಗೆ’ ಎಂದು ಕವಿತಾ ನ್ಯಾಯವ್ಯವಸ್ಥೆಯ ವಿಳಂಬ ಮತ್ತು ಅದಕ್ಷತೆಯನ್ನು ಕಟುವಾಗಿ ಟೀಕಿಸಿದರು. ಬಲಿಪಶು ಆದವರ ಸಾಕ್ಷ್ಯ ನಂಬುವ ಬದಲು ಫೊರೆನ್ಸಿಕ್ ಸಾಕ್ಷ್ಯಗಳನ್ನೇ ಕೋರ್ಟು ಹೆಚ್ಚೆಚ್ಚು ನಂಬುತ್ತಿರುವುದು ನ್ಯಾಯವ್ಯವಸ್ಥೆಯ ದುರಂತ ಎಂದು ಬಣ್ಣಿಸಿದ ಕವಿತಾ, ಅತ್ಯಾಚಾರಿಗೆ ಮರಣದಂಡನೆ-ಪೌರುಷಹರಣ ಮಾಡುವುದನ್ನು ಖಂಡತುಂಡ ವಿರೋಧಿಸಿದರು.
‘ಅತ್ಯಾಚಾರವಾಗುವುದು ಲೈಂಗಿಕ ಬಯಕೆಯ ಕಾರಣದಿಂದಲ್ಲ. ಜ್ಯಾಕ್ ದ ರಿಪ್ಪರ್ ಎಂಬ ಸರಣಿ ಅತ್ಯಾಚಾರಿ-ಕೊಲೆ ಪಾತಕಿ ಷಂಡನಾಗಿದ್ದ. ಹೆಣ್ಣಿನ ಮೇಲೆ ಅತ್ಯಾಚಾರವೆಸಗಲು ಲೈಂಗಿಕ ಅಂಗವೇ ಬೇಕಿಲ್ಲ, ವಸ್ತುಗಳೂ ಸಾಕು. ಆದ್ದರಿಂದ ಪುರುಷತ್ವ ಹರಣ ಮಾಡುವುದು ಅತ್ಯಾಚಾರ ಕೊನೆಗೊಳಿಸುವುದಿಲ್ಲ. ೧೦೦ ಅತ್ಯಾಚಾರಿಗಳಲ್ಲಿ ೨೬ ಜನರಿಗೆ ಮಾತ್ರ ಶಿಕ್ಷೆಯಾಗುತ್ತಿರುವಾಗ ಮರಣದಂಡನೆ ಶಿಕ್ಷೆಯೂ ಅತ್ಯಾಚಾರ ತಡೆಗಟ್ಟಲಾರದು’ ಎಂದು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಕವಿತಾ ತಿಳಿಸಿದರು. ಹೆಣ್ಣಿಗೆ ಬೇಕಿರುವುದು ಬರಿಯ ರಕ್ಷಣೆಯಲ್ಲ, ಸ್ವಾತಂತ್ರ್ಯ, ಭಯವಿರದ ಸ್ವಾತಂತ್ರ್ಯ ಎನ್ನುತ್ತಾ, ‘ಫ್ರೀಡಂ ವಿತೌಟ್ ಫಿಯರ್’ ಎಂಬ ಘೋಷವಾಕ್ಯ ಚಾಲ್ತಿಯಲ್ಲಿಟ್ಟರು. ಹೆಣ್ಣಿಗೆ ಎಂದೆಂದೂ ನಿರಾಕರಿಸಲಾದ ಸ್ವಾತಂತ್ರ್ಯವನ್ನು ಎಲ್ಲ ದನಿಗಳೂ ಪ್ರತಿಪಾದಿಸಿದವು. ಅವರ ವಿಭಿನ್ನ ವಿಶ್ಲೇಷಣೆ ತರುಣ ಪೀಳಿಗೆಯನ್ನು ಸೆಳೆದು ಸಾಮಾಜಿಕ ಜಾಲತಾಣದ ಕಣ್ಮಣಿಯಾದರು.
ಎಲ್ಲರೂ ಮಹಿಳೆಯ ರಕ್ಷಣೆ-ಭದ್ರತೆಯ ಬಗೆಗೆ ಮಾತನಾಡಿದರೆ ಕವಿತಾ ಮಹಿಳಾ ಸ್ವಾತಂತ್ರ್ಯದ ಬಗೆಗೆ ಮಾತನಾಡಿದರು. ‘ಜಗತ್ತಿನ ಎಲ್ಲಕಡೆ ಹೆಣ್ಣನ್ನು ಆಸೆಯಿಂದಲೆ ನೋಡುತ್ತಾರೆ. ಎಲ್ಲಿ ಹೆಜ್ಜೆಯಿಟ್ಟರೂ ಹೆಣ್ಣು ಅವೇ ನೋಟಗಳ ಎದುರಿಸಬೇಕು. ಸುಂದರ ಹೆಣ್ಣುಗಳ ಚರ್ಮ, ಆಕಾರ, ಸ್ತನ, ನಿತಂಬಗಳಿಗೆ ಸೌಂದರ್ಯದ ಕಾರಣದಿಂದ ಜಾಹೀರಾತಿನಲ್ಲಿ ತೋರಿಸಿಕೊಳ್ಳುವ ಸ್ವಾತಂತ್ರ್ಯವಾದರೂ ಇದೆ. ಹಾಗಿಲ್ಲದಿರುವ ‘ಕುರೂಪಿ’ಗಳಿಗೆ ಯಾವ ಸ್ವಾತಂತ್ರ್ಯವಿದೆ? ಹೆಣ್ಣಿನ ಸಾಮಾಜಿಕ ಸ್ವಾತಂತ್ರ್ಯ, ಲೈಂಗಿಕ ಸ್ವಾತಂತ್ರ್ಯ ಬೇರೆ ಬೇರೆ ಅಲ್ಲ. ಯಾಕೆಂದರೆ ಲೈಂಗಿಕ ಸ್ವಾತಂತ್ರ್ಯ ಎಂದರೆ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಆಗಿದೆ.’
ಅತ್ಯಾಚಾರದ ಸುತ್ತ, ಅಪರಾಧಿಗಳ ಸುತ್ತ, ಹುಡುಗಿಯರ ‘ನಡತೆ-ಬಟ್ಟೆ’ಗಳ ಸುತ್ತ ಗಿರಕಿ ಹೊಡೆಯುತ್ತಿದ್ದ ಚರ್ಚೆ-ಸಂವಾದಗಳನ್ನು ಕವಿತಾ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯದ ವಿಸ್ತೃತ ಆಯಾಮಗಳತ್ತ ಒಯ್ದರು. ‘ಭಯವಿಲ್ಲದೆ ಹೆಣ್ಣು ಹೊರಗೆಲ್ಲು ಮುಕ್ತವಾಗಿ ತಿರುಗದಂತಹ ಸನ್ನಿವೇಶ ನಿರ್ಮಾಣವಾಗಿದೆ. ಮಾಧ್ಯಮಗಳು ಹೆಣ್ಣು ಎಂದರೆ ಸತಿ ಸಾವಿತ್ರಿಯಂತೆ ತೋರಿಸಿ ‘ಪಢಿಯೆ ಗೀತಾ ಬನೀಯೆ ಸೀತಾ’ ಎನ್ನುವ ತಪ್ಪು ಮಾದರಿ ಸೃಷ್ಟಿಸಿವೆ. ನಾನು ಅಂಥ ಎಲ್ಲ ಮಾದರಿಗಳ ವಿರುದ್ಧ ನಿಲ್ಲಬಯಸುತ್ತೇನೆ. ರಾತ್ರಿ ಏಕೆ ಓಡಾಡಬೇಕು? ಹುಡುಗರೊಡನೆ ಏಕೆ ಅಡ್ಡಾಡಬೇಕು? ಎಂದೆಲ್ಲ ನಮ್ಮನ್ನು ಕೇಳಬೇಡಿ. ಹೆಂಗಸರಿಗೆ ಅಡ್ವೆಂಚರಸ್ ಆಗುವ ಎಲ್ಲ ಹಕ್ಕೂ ಇದೆ: ನಾವು ಹಾಗೇ ಇರುವವರು. ನಮಗೆ ಎಂತೆಂಥ ಬಟ್ಟೆ ಹಾಕಬೇಕು ಎಂದು ಸಲಹೆ ಕೊಡಬೇಡಿ. ಹಗಲು-ರಾತ್ರಿಗಳ ಯಾವ ಹೊತ್ತಿನಲ್ಲಿ ಸಂಚರಿಸುವುದು ಸುರಕ್ಷಿತ ಎಂದು ಹೇಳಬೇಡಿ. ಸುರಕ್ಷಿತವಾಗಿರಲು ಯಾರ ಜೊತೆ, ಎಷ್ಟು ಪುರುಷರ ಜೊತೆಗೆ ಅಡ್ಡಾಡಬೇಕು ಎಂಬ ಲೆಕ್ಕ ಕೊಡಬೇಡಿ. ಎಂಥ ದಿರಿಸು ತೊಡಬೇಕೆಂದು ನಮಗಲ್ಲ, ಅವರಿಗೆ ಹೇಳಿ. ಏಕೆ ಅತ್ಯಾಚಾರ ಮಾಡಬಾರದು ಎಂದು ಅವರಿಗೆ ತಿಳಿಸಿ. ಅಪರಿಚಿತರು, ಹೊರಗಿನವರೇ ಅತ್ಯಾಚಾರಿಗಳು ಎಂದು ಹೆಣ್ಮಕ್ಕಳನ್ನು ಹೆದರಿಸಲಾಗುತ್ತಿದೆ. ಅದು ಪೂರ್ಣ ಸತ್ಯವಲ್ಲ. ಪರಿಚಯಸ್ಥರು, ಬಂಧುಗಳು, ಗುರುಗಳು, ನಾವು ಗೌರವಿಸುವವರು, ರಕ್ಷಿಸುವವರೇ ಅತ್ಯಾಚಾರ ಎಸಗುವುದು ಹೆಚ್ಚಿರುವಾಗ ಯಾರಿಂದ ಯಾರನ್ನು ರಕ್ಷಿಸುತ್ತೀರಿ? ಸಿಸಿಟಿವಿಗಳಿಂದ ಎಷ್ಟು ಹೆಣ್ಮಕ್ಕಳನ್ನು ರಕ್ಷಿಸುತ್ತೀರಿ? ಅತ್ಯಾಚಾರಕ್ಕೊಳಗಾಗದ ಹಾಗೆ ಸದಾ ನಮ್ಮನ್ನು ನಾವೇ ಕಾಪಾಡಿಕೊಳ್ಳುತ್ತಿರಲು ಸಾಧ್ಯವಿಲ್ಲ. ನಮಗೆ ಸ್ವಾತಂತ್ರ ಬೇಕು. ಭಯವಿರದ ಸ್ವಾತಂತ್ರ್ಯ ಬೇಕು.’
ಸಹಜವಾಗಿ ಅವರಿಗೆ ಬೆಂಬಲಿಗರೆಷ್ಟೋ ಅಷ್ಟೇ, ವಿರೋಧಿಗಳೂ ಹುಟ್ಟಿಕೊಂಡರು. ಕೆಟ್ಟ ಮೆಸೇಜುಗಳು, ಟೀಕೆ, ಪ್ರತಿಕ್ರಿಯೆಗಳ ಸುರಿಮಳೆಯೇ ಆಯಿತು. ಮಹಿಳೆ ತನ್ನ ಹಕ್ಕುಗಳ ಬಗೆಗೆ, ಸ್ವಾತಂತ್ರ್ಯದ ಬಗೆಗೆ ಮಾತನಾಡಿದಾಗಲೆಲ್ಲ ಲೈಂಗಿಕ ಸ್ವೇಚ್ಛಾಚಾರಿ ಎಂಬ ಗೂಬೆ ಕೂರಿಸಿ, ‘ಸೂಳೆ’ ಎಂಬ ಪಟ್ಟ ಕಟ್ಟಿ ಬಾಯ್ಮುಚ್ಚಿಸಲಾಗುತ್ತದೆ. ‘ನಕ್ಸಲೈಟ್’ ಎಂದು ಜರೆಯಲಾಗುತ್ತದೆ. ಕವಿತಾಗೂ ಅವೇ ಟೀಕೆಗಳು ಕೇಳಿಬಂದವು.
ಒಬ್ಬನಂತೂ, ‘ಇಷ್ಟಪಟ್ಟವರ ಜೊತೆ ಮಲಗುವುದು ಹಕ್ಕು ಎನ್ನುತ್ತೀ. ನಿನ್ನಮ್ಮನೂ ಇಷ್ಟಪಟ್ಟವರ ಜೊತೆ ಮಲಗಿದ್ದಳೇ ಕೇಳು’ ಎಂದ. ‘ಹೌದು, ನನ್ನಮ್ಮ ಅವಳಿಷ್ಟಪಟ್ಟವರ ಜೊತೆಯೇ ಮಲಗಿದ್ದಳು. ಬಹುಶಃ ನಿನ್ನಮ್ಮನೂ ಸಹ. ಇಷ್ಟಪಟ್ಟವರ ಜೊತೆ ಮಲಗುವುದು ಮಾತ್ರ ಸೆಕ್ಸ್. ಉಳಿದದ್ದು ರೇಪ್, ತಿಳಕೊ’ ಎಂದು ಅವನಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ಕವಿತಾಗೆ ಪೂರಕವಾಗಿ ಅವರ ತಾಯಿ ಲಕ್ಷ್ಮಿ ಕೃಷ್ಣನ್, ‘ನಾನು ನನಗೆ ಬೇಕಾದಾಗ, ನನಗಿಷ್ಟ ಬಂದವರ ಜೊತೆ ಮಲಗಿದ್ದೇನೆ. ಪ್ರತಿ ಸ್ತ್ರೀಪುರುಷರಿಗು ಪರಸ್ಪರ ಒಪ್ಪಿಗೆ ಮೂಲಕ ಸೇರಲು ಇರುವ ಈ ಸ್ವಾತಂತ್ರ್ಯವನ್ನು, ಬಲವಂತವಿರದ, ಬಂಧನಗಳಿರದ ಲೈಂಗಿಕ ಸ್ವಾತಂತ್ರ್ಯವನ್ನು ಕೊನೆತನಕ ಎತ್ತಿ ಹಿಡಿಯುತ್ತೇನೆ’ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದರು!
ಒಟ್ಟಾರೆಯಾಗಿ ಸಂಪ್ರದಾಯನಿಷ್ಠ, ಬಲಾಢ್ಯ ವರ್ಗವು ಒಪ್ಪದ ವಿಷಯಗಳನ್ನು ಎತ್ತಿ ಆಡುವ, ಹಕ್ಕು ಪ್ರತಿಪಾದಿಸುವ ಕವಿತಾ ಕೃಷ್ಣನ್ ಒಬ್ಬ ಶಕ್ತ ಸಂಘಟಕಿ, ಮುಕ್ತ ನಿರ್ಭೀತ ಮಾತುಗಾರಿಕೆಯಿಂದ ಜನಸಾಮಾನ್ಯರ ಸೆಳೆವ ವಾಗ್ಮಿ. ಅವರ ವಿಚಾರಗಳ ಬಗೆಗೆ ಸಹಮತ ಇಲ್ಲದವರಿಗೂ ಅವರ ಹಿಂದಿನ ಬದ್ಧತೆ, ಕಳಕಳಿ, ಹೋರಾಟದ ಕೆಚ್ಚಿನ ಬಗೆಗೆ ಭಿನ್ನಮತವಿರಲು ಸಾಧ್ಯವಿಲ್ಲ. ಮಹಿಳಾಪರ ಮತ್ತು ಸಾಮಾಜಿಕ ಹೋರಾಟಗಾರ್ತಿಯಾಗಿ ತನ್ನದೇ ಹಾದಿ ರೂಪಿಸಿಕೊಳ್ಳುತ್ತಿರುವ ಕವಿತಾ ಭವಿಷ್ಯದ ಭರವಸೆಯ ನಾಯಕಿ ಎನ್ನುವುದರಲ್ಲಿ ಅನುಮಾನವಿಲ್ಲ.
*ಡಾ.ಎಚ್.ಎಸ್.ಅನುಪಮಾ*
Please follow and like us: