ಹನುಮಂತಪ್ಪ ಅಂಡಗಿಯವರ ‘ಬಂಡಾಯಗಾರ ಬರಗೂರು’ ಕೃತಿಯ ಅವಲೋಕನ


ಮನುಷ್ಯನಿಗೆ ಯಾವುದಾದರೂ ಒಂದು ಉತ್ತಮ ಹವ್ಯಾಸವಿದ್ದರೆ ಆ ಮನುಷ್ಯನ ವ್ಯಕ್ತಿತ್ವ ವಿಕಸನವಾಗುತ್ತದೆ ಮತ್ತು ಅವನ ಆಯುಷ್ಯವೂ ವೃದ್ಧಿಯಾಗುತ್ತದೆ ಎಂಬ ಹಿರಿಯರ ಮಾತು ಸತ್ಯವಿದೆ. ಅದು ಸಾಹಿತ್ಯ, ಸಂಗೀತ, ಕ್ರೀಡೆ ಹೀಗೆ ಯಾವುದಾದರೂ ಒಂದು ಹವ್ಯಾಸವಿರಬಹುದು. ಅವು ಮನುಷ್ಯನ ವ್ಯಕ್ತಿತ್ವ ಬೆಳೆಸುವುದರ ಜೊತೆಗೆ ಅವನ ಜ್ಞಾನವನ್ನೂ ಹೆಚ್ಚಿಸುತ್ತದೆ. ಹವ್ಯಾಸವೆಂದರೆ ಹೀಗೆ ಇರಬೇಕು, ಇಂತಹದ್ದೇ ಇರಬೇಕು ಎಂಬ ಷರತ್ತುಗಳೇನೂ ಇಲ್ಲ. ಆದರೂ ಆ ಹವ್ಯಾಸಗಳು ನಾಲ್ಕು ಜನರಿಗೆ ಒಪ್ಪಿತವಾಗಿರಬೇಕು ಮತ್ತು ವಿಶೇಷವಾಗಿ ಆ ಹವ್ಯಾಸಗಳಿಂದ ಸಮಾಜಕ್ಕೆ ಉಪಯುಕ್ತವಾಗಿದ್ದಾಗ ಮಾತ್ರ ಅಂತಹ ಹವ್ಯಾಸಗಳಿಗೆ ಸಮಾಜದಲ್ಲಿ ಮನ್ನಣೆ ಮತ್ತು ಗೌರವಗಳು ದೊರೆಯುತ್ತವೆ.
ಸಮಾಜದಲ್ಲಿ ಎಂತೆಂತದೋ ಹವ್ಯಾಸಗಳಿರುವ ಮನುಷ್ಯರನ್ನು ನಾವು ನೋಡಿದ್ದೇವೆ. ಆದರೆ ಕಳೆದ ಸುಮಾರು ೧೫-೨೦ ವರ್ಷಗಳಿಂದಲೂ ಪ್ರತಿನಿತ್ಯ ಸ್ಥಳೀಯ ಮತ್ತು ರಾಜ್ಯಮಟ್ಟದ ಎಲ್ಲಾ ಪತ್ರಿಕೆಗಳನ್ನು ಖರೀದಿಸುವ ದುಬಾರಿ ಹವ್ಯಾಸವನ್ನಿಟ್ಟುಕೊಂಡಿರುವ ಶ್ರೀ ಹನುಮಂತಪ್ಪ ಅಂಡಗಿಯವರು ನನಗೆ ಬಹಳ ವಿಶಿಷ್ಟವಾಗಿ ಕಾಣುತ್ತಾರೆ. ದಿನನಿತ್ಯ ಸುಮಾರು ೫೦-೬೦ ರೂಪಾಯಿಗಳ ಪತ್ರಿಕೆಗಳನ್ನು ಖರೀದಿಸಿ, ಅವುಗಳನ್ನು ಓದುವುದರ ಜೊತೆಗೆ, ಅದರಲ್ಲಿ ಬರುವ ಪ್ರಮುಖ ಸಾಹಿತಿಗಳ, ಕಲಾವಿದರ, ರಾಜಕಾರಣಿಗಳ, ನಟರ, ಸ್ವಾತಂತ್ರ ಹೋರಾಟಗಾರರ ಹೀಗೆ ವಿಶಿಷ್ಟ ಸಾಧಕರ ಪರಿಚಯ ಲೇಖನಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದರ ಜೊತೆಗೆ, ಆ ಲೇಖನಗಳನ್ನು ಸಂಪಾದಿಸಿ, ಗ್ರಂಥಗಳರೂಪದಲ್ಲಿ ಪ್ರಕಟಿಸಿ ಉಚಿತವಾಗಿ ವಿತರಿಸುವ ವಿಭಿನ್ನ ಹವ್ಯಾಸವನ್ನಿಟ್ಟುಕೊಂಡಿರುವ ಶ್ರೀ ಅಂಡಗಿಯವರ ಹವ್ಯಾಸ ವಿಶಿಷ್ಟವೇ ಎನ್ನಬಹುದು.
ಇಂದಿನ ಡಿಜಿಟಲ್ ಯುಗದಲ್ಲಿ ಇ-ಪತ್ರಿಕೆ ಬಂದ ಮೇಲಂತೂ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಕೆಲವರಂತೂ ಪತ್ರಿಕೆಗಳನ್ನು ಕೊಂಡು ಓದದೇ, ಪಕ್ಕದ ಮನೆಯವರಿಂದ ಯರವಲು ಪಡೆದು ಓದುವವರೂ ಇದ್ದಾರೆ. ಇಂದಿನ ಪತ್ರಿಕೆ ನಾಳೆಗೆ ರದ್ದಿಯಾಗುತ್ತದೆ ಎನ್ನುವವರೂ ಇದ್ದಾರೆ. ಕೆಲವರು ಒಂದು ಪತ್ರಿಕೆಯನ್ನು ತರಸಿಕೊಂಡು, ಅದರ ಹಣವನ್ನು ಸರಿಯಾದ ಸಮಯಕ್ಕೆ ಕೊಡದೇ ಪತ್ರಿಕಾ ಏಜೆಂಟ್‌ರನ್ನು ಓಡಾಡಿಸಿದ ಉದಾಹರಣೆಗಳಿವೆ. ಇಂತಹ ದಿನಮಾನಗಳಲ್ಲಿಯೂ ಸಹ ಈ ರೀತಿ ಹಣ ನೀಡಿ ಪತ್ರಿಕೆಗಳನ್ನು ಖರೀದಿಸಿ, ಅವುಗಳನ್ನು ಓದುವ ಮತ್ತು ಅದರಲ್ಲಿರುವ ವಿದ್ವತ್‌ಪೂರ್ಣ ಲೇಖನಗಳನ್ನು ಸಂಗ್ರಹಿಸುವ ಅಂಡಗಿಯವರ ಕಾರ್ಯ ನಿಜಕ್ಕೂ ಆಶ್ಛರ್ಯವೇ ಸರಿ.
ಈ ನಾಡಿನ ಹಿರಿಯ ಸಾಹಿತಿಗಳಾದ ಡಾ.ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ಮೇಲೆ ಅವರ ಕುರಿತು ಪತ್ರಿಕೆಗಳಲ್ಲಿ ಬಂದ ಲೇಖನಗಳು, ಸಂದರ್ಶನಗಳು, ಸಂಪಾದಕೀಯ ಹಾಗೂ ಗಣ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸುಮಾರು ಆರುನೂರು ಪುಟದ ‘ಕಂಬಾರರಿಗೆ ಜ್ಞಾನಪೀಠ ಅಭಿನಂದನೆ’ ಎನ್ನುವ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅಲ್ಲದೆ ಸ್ವತಃ ಡಾ.ಚಂದ್ರಶೇಖರ ಕಂಬಾರರಿಂದಲೇ ಬಿಡುಗಡೆಗೊಳಿಸಿ ಉಚಿತವಾಗಿ ವಿತರಿಸುವುದರ ಮೂಲಕ ಕನ್ನಡ ನಾಡಿನ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಸಂಪ್ರದಾಯ ನಿರ್ಮಿಸಿದ್ದಾರೆ. ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಪಿ.ಬಿ.ಧುತ್ತರಗಿಯವರನ್ನು ಕುರಿತು ‘ರಂಗಭೂಮಿಯ ಜಂಗಮ’ ಸಂಪಾದನಾ ಕೃತಿಯನ್ನು ಹೊರತಂದಿದ್ದಾರೆ. ಅಲ್ಲದೆ ನಾಡಿನ ತುಂಬಾ ಹೆಸರು ಮಾಡಿದ ದೊಡ್ಡ-ದೊಡ್ಡ ವಿದ್ವಾಂಸರ ಕುರಿತು ಪತ್ರಿಕೆಗಳ್ಲಿ ಪ್ರಕಟವಾದ ಲೇಖನಗಳನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿರುವುದು ಇವರ ವಿಶಿಷ್ಟ ವ್ಯಕ್ತಿತ್ವಕ್ಕೆ ಸಾಕ್ಷಿ ಎನ್ನಬಹುದು. ಸ್ವಾತಂತ್ರ್ಯ ಹೋರಾಟಗಾರ ಶಿವಮೂರ್ತಿಸ್ವಾಮಿ ಅಳವಂಡಿಯವರ ಕುರಿತು ‘ಕರ್ನಾಟಕದ ಹುಲಿ’, ಸಂಗೀತ ವಿದ್ವಾಂಸರಾದ ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳ ಕುರಿತು ‘ಗಾನಯೋಗಿ’ ಎನ್ನುವ ರಾಜ್ಯಮಟ್ಟದ ಕವನ ಸಂಕಲನವನ್ನು ಹೊರತಂದಿದ್ದಾರೆ. ಕೊಪ್ಪಳದ ಆರಾಧ್ಯದೈವ ಶ್ರೀ ಗವಿಸಿದ್ಧೇಶ್ವರ ಮತ್ತು ಶ್ರೀ ಗವಿಮಠದ ಪರಂಪರೆಯ ಕುರಿತು ‘ಗವಿಸಿರಿ’ ಹಾಗೂ ‘ಗವಿಬೆಳಕು’, ಹಿರಿಯ ಸಾಹಿತಿ ಶ್ರೀ ಎಚ್.ಎಸ್.ಪಾಟೀಲರ ಕುರಿತು ‘ಕೊಪಣ ಕೋಶ’, ಡಾ.ಮಹಾಂತೇಶ ಮಲ್ಲನಗೌಡರ ಕುರಿತು ‘ಮನಸ್ಸು ಮಲ್ಲಿಗೆ’, ಸಾಂಸ್ಕೃತಿಕ ಮಹಿಳೆ ಶ್ರೀಮತಿ ನಿರ್ಮಲಾ ಬಳ್ಳೊಳ್ಳಿಯವರ ಕುರಿತು ‘ನಿರ್ಮಲಾ ದಾಸೋಹಿ’ ಮತ್ತು ಇತ್ತೀಚೆಗೆ ನಾಡಿನ ಹಿರಿಯ ಬಂಡಾಯ ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕರಾದ ಪ್ರೊ.ಬರಗೂರು ರಾಮಚಂದ್ರಪ್ಪನವರ ಬದುಕು ಮತ್ತು ಬರಹಗಳ ಅವಲೋಕನ ‘ಬಂಡಾಯಗಾರ ಬರಗೂರು’ ಸೇರಿದಂತೆ ಹೀಗೆ ಮೂವತ್ತಾರು ಸಂಪಾದನಾ ಕೃತಿಗಳನ್ನು ಪ್ರಕಟಿಸಿದ ಅಂಡಗಿಯವರ ಕಾರ್ಯ ಅದ್ಭುತವೇ ಸರಿ.
ಶ್ರೀ ಅಂಡಗಿಯವರು ಸಂಪಾದನಾ ಕೃತಿಗಳಲ್ಲದೆ ಸ್ವತಂತ್ರ ಕೃತಿಗಳನ್ನೂ ಸಹ ಬರೆದು ಕನ್ನಡ ಸಾಹಿತ್ಯದ ಸೇವೆ ಮಾಡಿದ್ದಾರೆ. ವಚನಕಾರರಾದ ಅಂಬಿಗರ ಚೌಡಯ್ಯನವರ ಕುರಿತು ‘ಒಡಲಿಲ್ಲದಂಬಿಗ’ ಹಾಗೂ ಹಿರಿಯ ವಿದ್ವಾಂಸರ ಮತ್ತು ಚಿಂತಕರ ಜೀವನ ಚರಿತ್ರೆಗಳನ್ನು ಒಳಗೊಂಡ ‘ಚೈತನ್ಯಶೀಲರು’ ಎಂಬ ಸ್ವತಂತ್ರ ಕೃತಿಗಳನ್ನು ಪ್ರಕಟಿಸಿ ಆ ಮೂಲಕ ಕನ್ನಡ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದರೂ ಸಹ ಕನ್ನಡದ ಮೇಲಿರುವ ಇವರ ಅಭಿಮಾನವನ್ನು ಅಭಿನಂದಿಸಲೇಬೇಕು.
ಪ್ರೊ.ಬರಗೂರು ರಾಮಚಂದ್ರಪ್ಪನವರು ೨೦೧೬ ಡಿಸೆಂಬರ್ ೨ರಿಂದ ೪ರ ವರೆಗೆ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ೮೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಅವರ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು, ವರದಿಗಳು, ಸಂವಾದ, ಸಂದರ್ಶನಗಳು ಹಾಗೂ ಸಮ್ಮೇಳನದ ಅಧ್ಯಕ್ಷರ ಭಾಷಣ ಎಲ್ಲವುಗಳನ್ನು ಸಂಗ್ರಹಿಸಿ ‘ಬಂಡಾಯಗಾರ ಬರಗೂರು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿ ನಾಡಿನ ಜನತೆಗೆ ಬರಗೂರರ ವಿವಿಧ ಆಯಾಮಗಳನ್ನು ಪರಿಚಯಿಸಿರುವುದು ಹೆಮ್ಮೆಯ ಸಂಗತಿ.
ಈ ಕೃತಿಯನ್ನು ಅಧ್ಯಯನ ಮಾಡಿದಾಗ ಬರಗೂರರವರ ಕುರಿತು ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ. ಶ್ರೀ ಅಂಡಗಿಯವರು ಮುಖ್ಯವಾಗಿ ಈ ಕೃತಿಯನ್ನು ಐದು ಭಾಗಗಳಲ್ಲಿ ವಿಂಗಡಿಸಿ ಪ್ರಕಟಿಸಿದ್ದಾರೆ. ಲೇಖನ ವಿಭಾಗ, ಸಂವಾದ ವಿಭಾಗ, ಸಂದರ್ಶನ ವಿಭಾಗ, ಸಮ್ಮೇಳನ ಅಧ್ಯಕ್ಷರ ಭಾಷಣ ಹಾಗೂ ಪತ್ರಿಕಾ ವರದಿಗಳು ಹೀಗೆ ಐದು ಭಾಗಗಳನ್ನಾಗಿ ಮಾಡಿ ಈ ಕೃತಿಯನ್ನು ಸಂಪಾದಿಸಿದ್ದಾರೆ. ಒಂದೊಂದು ಭಾಗದಲ್ಲಿ ಒಂದೊಂದು ಮಾದರಿಯಲ್ಲಿ ಲೇಖನಗಳನ್ನು ಸಂಗ್ರಹಿಸಲಾಗಿದೆ.
ಲೇಖನ ವಿಭಾಗ;- ಈ ಲೇಖನ ವಿಭಾಗದಲ್ಲಿ ಹತ್ತು ಲೇಖನಗಳನ್ನು ಸಂಗ್ರಹಿಸಲಾಗಿದೆ. ಒಂದೊಂದು ಲೇಖನವೂ ಒಂದೊಂದು ಮುತ್ತು. ಯಾಕೆಂದರೆ ಇಲ್ಲಿರುವ ಲೇಖನಗಳನ್ನು ಬರೆದವರು ಸಾಮಾನ್ಯರೇನಲ್ಲ. ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರು ಮತ್ತು ವಿಶೇಷವಾಗಿ ಬರಗೂರರವರ ಒಡನಾಡಿಗಳಾಗಿರುವುದು. ಡಾ.ಗೀತಾ ವಸಂತ, ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್.ಪಾಟೀಲ, ಆರ್.ಜಿ.ಹಳ್ಳಿ ನಾಗರಾಜ, ಡಾ.ತೇಜಸ್ವಿ ಕಟ್ಟಿಮನಿ, ಡಾ.ವೆಂಕಟಗಿರಿ ದಳವಾಯಿ ಮುಂತಾದವರು ಪ್ರೊ.ಬರಗೂರರನ್ನು ತೀರಾ ಹತ್ತಿರದಿಂದ ಬಲ್ಲವರು. ಹೀಗಾಗಿ ಅವರನ್ನು ಕಂಡಂತೆ ಬರೆದಿದ್ದಾರೆ. ಅವರ ಬದುಕು, ಬರಹ, ಹೋರಾಟ, ಸಂಘಟನೆಗಳನ್ನು ಲೇಖಕರು ತಾವು ಕಂಡಂತೆ ಬರೆದಿದ್ದಾರೆ. ಜೊತೆಗೆ ವಾಸ್ತವಿಕ ನೆಲೆಯಲ್ಲಿ ಪ್ರೊ.ಬರಗೂರರನ್ನು ನೋಡುತ್ತಾ ಸಮೀಕರಿಸಿ ಅವರನ್ನು ನಾಡಿಗೆ ಈ ಲೇಖನಗಳ ಮೂಲಕ ಪರಿಚಯಿಸಿದ್ದಾರೆ.
ಸಂವಾದಗಳ ವಿಭಾಗ;- ಈ ಭಾಗದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪನವರು ಅಖಿಲ ಭಾರತ ೮೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಅವರ ಕುರಿತು ಪತ್ರಿಕೆಗಳು ನಡೆಸಿದ ಸಂವಾದವನ್ನು ಇಲ್ಲಿ ಕಾಣಬಹುದು. ವಿಶೇಷವಾಗಿ ವಿಜಯ ಕರ್ನಾಟಕ ದಿನಪತ್ರಿಕೆಯು ನಡೆಸಿದ ಸಂವಾದ ಇಲ್ಲಿದೆ. ಪ್ರೊ.ಬರಗೂರು ರಾಮಚಂದ್ರಪ್ಪನವರು ಸಾಮಾನ್ಯವಾದ ವ್ಯಕ್ತಿಯಲ್ಲ. ಇಲ್ಲಿನ ಸಂವಾದವೂ ಅವರಂತೆ ನಡೆಸಲಾಗಿದೆ. ಜಾಗತಿಕ ವಿದ್ಯಮಾನ, ಆರ್ಥಿಕ ನಾಯಕತ್ವ, ಅಪನಂಬಿಕೆಯ ಹೋರಾಟಗಳು, ಎಲ್ಲರಿಗೂ ಸೌಲಭ್ಯ ಸಿಗಬೇಕು, ಶಾಸ್ತ್ರೀಯ ಭಾಷೆಯ ಸಮಸ್ಸೆ, ಭಾಷೆ ಬೆಳವಣಿಗೆಗೆ ತಂತ್ರಜ್ಞಾನ ಇಂತಹ ಅನೇಕ ಪ್ರಶ್ನೆಗಳಿಗೆ ಸಮರ್ಥವಾಗಿಯೇ ಉತ್ತರಿಸಿರುವುದನ್ನು ಶ್ರೀ ಅಂಡಗಿಯವರು ಎಲ್ಲಿಯೂ ಲೋಪವಾಗದಂತೆ ಸಂಗ್ರಹಿಸಿ ಓದುಗರ ಮುಂದೆ ಇಟ್ಟಿದ್ದಾರೆ. ಸ್ಥಳೀಯವಾಗಿ ನಾವು ಎದುರಿಸುತ್ತಿರುವ ತಲ್ಲಣ ಮತ್ತು ಸಂಘರ್ಷಕ್ಕೆ ಜಾಗತಿಕ ವಿದ್ಯಮಾನಗಳೇ ನೇರವಾಗಿ ಕಾರಣವಾಗಿವೆ ಎಂಬುದನ್ನು ಎಲ್ಲಿಯೂ ಅಳುಕಿಲ್ಲದೆ ನೇರವಾಗಿ ಉತ್ತರಿಸಿದ್ದಾರೆ. ಇಂದಿನ ಹೋರಾಟಗಳನ್ನು ಅಪನಂಬಿಕೆಯಿಂದ ನೋಡುವಂತಾಗುವುದು ಅಪಾಯಕಾರಿ ಬೆಳವಣಿಗೆ. ಮೊದಲೆಲ್ಲಾ ಹೋರಾಟದ ಮುಂಚೂಣಿಯಲ್ಲಿ ಯಾರಿದ್ದಾರೆ ಎನ್ನುವುದು ಮುಖ್ಯವಾಗುತ್ತಿತ್ತು. ಈಗ ಈ ಹೋರಾಟದ ಹಿಂದೆ ಯಾರ್‍ಯಾರಿದ್ದಾರೆ ಎನ್ನುವ, ಯಾರ ಕುಮ್ಮಕ್ಕು ಇದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ ಎಂಬ ವಿಷಾದವನ್ನು ಬರುಗೂರರು ಸಂವಾದದಲ್ಲಿ ವ್ಯಕ್ತಪಡಿಸಿದ್ದಾರೆ.
ಸಂದರ್ಶನಗಳ ವಿಭಾಗ;- ಇದರಲ್ಲಿ ವಿವಿಧ ಪತ್ರಿಕೆಗಳವರು ನಡೆಸಿದ ಸಂದರ್ಶನಗಳನ್ನು ಕಾಣಬಹುದಾಗಿದೆ. ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯವಾಣಿ, ಕನ್ನಡ ನುಡಿ, ವಿಜಯ ಕರ್ನಾಟಕ, ಉದಯವಾಣಿ, ಕನ್ನಡಪ್ರಭ, ವಿಶ್ವವಾಣಿ, ಸುದ್ದಿಮೂಲ, ಸುಧಾ ಹೀಗೆ ವಿವಿಧ ಪತ್ರಿಕೆಗಳ ವರದಿಗಾರರು ನಡೆಸಿದ ಮೌಲ್ಯಯುತ ಸಂದರ್ಶನಗಳು ಇಲ್ಲಿವೆ. ಈ ವಿಭಾಗದ ಮೊದಲ ಸಂದರ್ಶನದಲ್ಲಿ ರಮೇಶ ದೊಡ್ಡಪುರ ಅವರು ಬರಗೂರರ ಬಾಲ್ಯಾವಸ್ಥೆಯಿಂದ ಅವರ ಪ್ರಬುದ್ಧಾವಸ್ಥೆಯವರೆಗಿನ ಅನುಭವಗಳನ್ನು ಇಲ್ಲಿ ಸಂದರ್ಶಿಸಿದ್ದಾರೆ. ಉದಯವಾಣಿಯಲ್ಲಿ ಎಸ್. ಗಿರೀಶ್‌ಬಾಬುರವರು ‘ಕನ್ನಡ ಹೋರಾಟಗಾರರ ಅಗತ್ಯವಿದೆ’ ಎಂಬ ಶೀರ್ಷಿಕೆಯಲ್ಲಿ ಇಂದಿನ ಕನ್ನಡ ಹೋರಾಟಗಾರರ ಸಂವೇದನಾಶೀಲತೆ, ಹೋರಾಟದ ಪುಂಡಾಟಿಕೆ, ವಿವೇಕದ ಹೋರಾಟಗಳ ಕುರಿತ ಚರ್ಚೆಗಳು ಇಲ್ಲಿವೆ. ಚ.ಹ.ರಘುನಾಥರವರು ‘ನಮಗೆಲ್ಲ ಬಾಯಿಬಡುಕತನ ಬಂದಿದೆ’ ಎಂಬ ತಮ್ಮ ಸಂದರ್ಶನದಲ್ಲಿ, ಸಮ್ಮೇಳನದಲ್ಲಿ ಅರ್ಥಪೂರ್ಣ ಸಂವಾದಗಳು ನಡೆಸಬೇಕಿದೆ, ಇಂದು ತಿಳಿ ಲೇಖಕರ ಅಗತ್ಯವಿದೆ. ಬಹಳ ಮುಖ್ಯವಾಗಿ ಸಮ್ಮೇಳನದ ನೆಪದಲ್ಲಿ ರಾಜಕಾರಣ ಮತ್ತು ಧರ್ಮದ ಕವಲುಗಳು ಹರಿಯುತ್ತಿವೆ ಎಂಬ ಮಾತುಗಳಿಗೂ ಇಲ್ಲಿ ಬರಗೂರರ ಸಮರ್ಥ ಉತ್ತರವಿದೆ. ಅಲ್ಲದೇ ಪ್ರಿಯಾಂಕ ಪತ್ರಿಕೆಯಲ್ಲಿ ಅರ್.ಜಿ.ಹಳ್ಳಿ ನಾಗರಾಜ, ವಿಜಯ ಕರ್ನಾಟಕದಲ್ಲಿ ಎನ್.ಜಗನ್ನಾಥ ಪ್ರಕಾಶ, ಸಂಯುಕ್ತ ಕರ್ನಾಟಕದಲ್ಲಿ ಕಂ.ಕ.ಮೂರ್ತಿ, ಪ್ರಜಾವಾಣಿಯಲ್ಲಿ ಸಿದ್ಧಯ್ಯ ಹಿರೇಮಠ ಮತ್ತು ಎನ್.ಉದಯಕುಮಾರ್, ಉದಯವಾಣಿಯಲ್ಲಿ ಜಿ.ಎನ್.ಮೋಹನ್, ಸುದ್ದಿಮೂಲದಲ್ಲಿ ಬಿ.ವೆಂಕಟಸಿಂಗ್ ಮುಂತಾದವರ ಪತ್ರಿಕಾ ಸಂದರ್ಶನಗಳನ್ನು ಅಂಡಗಿಯವರು ಸಂಗ್ರಹಿಸಿ ಈ ಕೃತಿಯಲ್ಲಿ ಪ್ರಕಟಿಸಿದ್ದಾರೆ.
ಸಮ್ಮೇಳನಾಧ್ಯಕ್ಷರ ಭಾಷಣ ವಿಭಾಗ;- ಈ ಭಾಗದಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಮ್ಮೇಳನದ ಅಧ್ಯಕ್ಷರ ಭಾಷಣವನ್ನು ಇಲ್ಲಿ ಸಂಪಾದಿಸಿ ಪ್ರಕಟಿಸಲಾಗಿದೆ. ಸುಮಾರು ಐವತೈದು ಪುಟಗಳಿಗೂ ಮಿಗಿಲಾದ ಸುಧೀರ್ಘವಾದ ಸಮ್ಮೇಳನಾಧ್ಯಕ್ಷರ ಭಾಷಣವು ಇದರಲ್ಲಿವುದರಿಂದ ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಭವಿಷ್ಯ ಇಷ್ಟು ಸುಧೀರ್ಘ ಭಾಷಣವನ್ನು ನಾನು ಗಮನಿಸಿದ್ದು ಇದೇ ಮೊದಲು ಎಂದೆನಿಸುತ್ತಿದೆ. ಈ ಧೀರ್ಘವಾದ ಭಾಷಣದಲ್ಲಿ ಕನ್ನಡ ನಾಡು-ನುಡಿಯ ಚರಿತ್ರೆ, ಕನ್ನಡ ಕವಿಗಳು, ಏಕೀಕರಣ, ಶಿಕ್ಷಣದ ಮಾಧ್ಯಮ, ಕನ್ನಡ ಶಾಲೆಗಳ ಸಬಲೀಕರಣ, ದೇಶಭಕ್ತಿ, ಜಾಗತೀಕರಣ, ಕನ್ನಡ ಮಾಹಿತಿ ತಂತ್ರಜ್ಞಾನ ಹೀಗೆ ನಾನಾ ಸಂಗತಿಗಳ ಕುರಿತು ಮಾತನಾಡಿದ್ದಾರೆ. ಇಷ್ಟೆಲ್ಲಾ ಮಾತುಗಳನ್ನಾಡಿ ಕೊನೆಗೆ ಈ ಮಾತುಗಳು ನಿಮಗೆ ಹೇಳಿದ ಮಾತುಗಳು ಅಲ್ಲ. ನನಗೆ ನಾನೇ ಹೇಳಿಕೊಂಡ ಮಾತುಗಳೂ ಹೌದು ಎಂದು ಹೇಳಿ ಮಾತು ಮುಗಿಸಿರುವುದು ವಿಶೇಷವಾಗಿ ಕಾಣುತ್ತದೆ. ಎಲ್ಲವನ್ನೂ ಜನರಿಗೆ ಬಿಟ್ಟಂತಿದೆ.
ಪತ್ರಿಕಾ ವರದಿಗಳ ವಿಭಾಗ;- ಈ ಭಾಗದಲ್ಲಿ ಶ್ರೀ ಬರಗೂರರು ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಂತರ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ವಿಜಯವಾಣಿ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ರಾಯಚೂರುವಾಣಿ ಹೀಗೆ ನಾನಾ ಪತ್ರಿಕೆಗಳು ಬರಗೂರರ ಆಯ್ಕೆಯ ವರದಿಗಳು ಇಲ್ಲಿವೆ. ಅಲ್ಲದೇ ಇಂಗ್ಲೀಷ ಭಾಷೆಯ ಪತ್ರಿಕೆಯಲ್ಲಿಯೂ ಬಂದ ವರದಿ ಇಲ್ಲಿದೆ. ಇಲ್ಲಿ ಅಂಡಗಿಯವರ ವಿಶೇಷತೆ ಎಂದರೆ ಇಂತಹ ವರದಿಗಳನ್ನೂ ಸಹ ಸಂಗ್ರಹಿಸಿ ಅವುಗಳನ್ನು ಪ್ರಕಟಿಸಿರುವುದು.
ಹೀಗೆ ಶ್ರೀ ಹನುಮಂತಪ್ಪ ಅಂಡಗಿಯವರು ನಾಡಿನ ಖ್ಯಾತ ಬಂಡಾಯಗಾರ, ಸಾಹಿತಿ, ವೈಚಾರಿಕ ಮನಸುಳ್ಳ ಶ್ರೀ ಬರಗೂರು ರಾಮಚಂದ್ರಪ್ಪನವರ ಕುರಿತು ನಾಡಿನ ವಿದ್ವಾಂಸರು, ಹಿರಿಯ-ಕಿರಿಯರು ಬರೆದ ಲೇಖನಗಳು ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು ಸಂಗ್ರಹಿಸಿ ‘ಬಂಡಾಯಗಾರ ಬರಗೂರು’ ಎಂಬ ಕೃತಿಯನ್ನು ಸಂಪಾದಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಈ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಂತಯ್ಯನವರು ಈ ಕೃತಿಯು ಪ್ರೊ.ಬರಗೂರರ ಕುರಿತು ಅಧ್ಯಯನ ಮಾಡುವವರಿಗೆ ಒಳ್ಳೆಯ ಆಕರ ಗ್ರಂಥವಾಗಲಿದೆ ಎಂದರು. ಇಂತಹ ಅಮೂಲ್ಯ ಕೃತಿಯನ್ನು ಪ್ರಕಟಿಸಿ ಉಚಿತವಾಗಿ ಹಂಚುತ್ತಿರುವ ಶ್ರೀ ಅಂಡಗಿಯವರ ಕಾರ್ಯವನ್ನು ಮೆಚ್ಚಲೇಬೇಕು ಎಂದರು.
ಇಂತಹ ಸೇವೆಯ ಸಲ್ಲಿಸಿದ ಶ್ರೀ ಹನುಮಂತಪ್ಪ ಅಂಡಗಿಯವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ೨೦೦೪ರಲ್ಲಿ ‘ಜನಮೆಚ್ಚಿದ ಶಿಕ್ಷಕ’ ಹಾಗೂ ೨೦೦೮ರಲ್ಲಿ ‘ಜಿಲ್ಲಾಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೆ ಕನಕಶ್ರೀ ಪ್ರಶಸ್ತಿ, ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ, ಶ್ರೀಕೃಷ್ಣದೇವರಾಯ ಪ್ರಶಸ್ತಿ, ಅಂಬಿಗರ ಚೌಡಯ್ಯ ಪ್ರಶಸ್ತಿ, ಪಿ.ಬಿ ಧುತ್ತರಗಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಇವರ ಸೇವೆಗೆ ಸಂದಿವೆ. ಅಲ್ಲದೇ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆ ಮೂಲಕವೂ ಅನೇಕ ಸಮ್ಮೇಳನ ಮತ್ತು ಸಾಹಿತ್ಯದ ಕಾರ್ಯಕ್ರಮಗಳನ್ನು ಮಾಡುತ್ತಾ ಕನ್ನಡದ ಸೇವೆ ಸಲ್ಲಿಸುತ್ತಿರುವು ಅಭಿಮಾನದ ಸಂಗತಿಯೆಂದೇ ಹೇಳಬೇಕಾಗುತ್ತದೆ.

ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊಬೈಲ್: ೯೪೪೮೫೭೦೩೪೦

Please follow and like us: