ಮಕ್ಕಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು- ರವಿ.ಡಿ.ಚನ್ನಣ್ಣನವರ

ಕೊಪ್ಪಳ : ಮಕ್ಕಳು ಬದುಕಿನಲ್ಲಿನಲ್ಲಿ ಯಾವಾಗಲೂ ಉನ್ನತವಾದ ಗುರಿಯನ್ನಿಟ್ಟುಕೊಳ್ಳಬೇಕು. ಮನುಷ್ಯನ ಶಕ್ತಿಗೆ ಪಾರವೇ ಇಲ್ಲ. ಸಾಧನೆಗೆ ಶ್ರಮ ಮತ್ತು ಇಚ್ಛಾ ಶಕ್ತಿ ಬೇಕು. ಇವೆಲ್ಲವನ್ನೂ ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು ಉತ್ತಮ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲ ಮಕ್ಕಳಿಗೂ ಅವರ ಪ್ರತಿಭೆಯನ್ನಾಧರಿಸಿ ಉಚಿತವಾದ ಶಿಕ್ಷಣ ಸಿಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ಸಾಧ್ಯ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯ ಪೋಲಿಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ ಹೇಳಿದರು.
ಅವರು ಇಂದು ಬಹಾದ್ದೂರ ಬಂಡಿ ರಸ್ತೆಯ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ೨೦೨೨-೨೩ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭವೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಸಿಗೆ ನೀರು ಎರೆಯುವುದರ ಮೂಲಕ ಕಾರ್‍ಯಕ್ರಮ ಉದ್ಘಾಟಿಸಿದ ರವಿ.ಡಿ.ಚನ್ನಣ್ಣನವರ ಮಕ್ಕಳಲ್ಲಿ ಪ್ರಶ್ನೆ ಕೇಳುವ ಮನೋಭಾವ ಬೆಳೆಯಬೇಕು. ವಿದ್ಯೆಯ ಬಗ್ಗೆ ಆಸಕ್ತಿ ಇರಬೇಕು. ಎಲ್ಲರಿಗೂ ಉತ್ತಮವಾದ ಶಿಕ್ಷಣ, ಮೂಲಭೂತ ಸೌಲಭ್ಯ, ಆರೋಗ್ಯ ಸಿಗುವಂತಾಗಬೇಕು ಇದರಿಂದ ಅವರ ಅಭಿವೃದ್ದಿ ಸಾಧ್ಯ. ಕುಟುಂಬಗಳು ಉದ್ದಾರವಾದರೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಉದ್ದಾರವಾಗುತ್ತೆ. ಈ ನಿಟ್ಟಿನಲ್ಲಿ ಶಿಕ್ಷಕರೂ ಸಹ ಮಕ್ಕಳಿಗೆ ನಿತ್ಯ ನೀತಿಪಾಠಗಳನ್ನು ಹೇಳಬೇಕು ವಿದ್ಯಾರ್ಥಿಗಳು ಉನ್ನತವಾದ ಕನಸುಗಳನ್ನು ಇಟ್ಟುಕೊಳ್ಳಬೇಕು, ಹಿರಿಯರ ಆದರ್ಶಗಳನ್ನು ಪಾಲಿಸಬೇಕು ತಂದೆ ತಾಯಿಗಳಿಗೆ, ಗುರುಗಳಿಗೆ ಗೌರವ ಕೊಡಬೇಕು ಎಂದು ಹೇಳಿದರು.
  ಮಕ್ಕಳ ಜೊತೆ ಸಂವಾದ ನಡೆಸಿದ ರವಿ.ಡಿ.ಚನ್ನಣ್ಣನವರ ಬುದ್ದ ಪೂರ್ಣಿಮೆಯ ಕುರಿತು ಸಿದ್ದಾರ್ಥ ಬುದ್ದನಾದ ಚರಿತ್ರೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳಿದರು. ಕಾರ್‍ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಮೀಣ ಠಾಣೆಯ ಪಿಎಸೈ ಎಲ್.ಬಿ.ಅಗ್ನಿ ಮಾತನಾಡಿ ರವಿ.ಡಿ.ಚನ್ನಣ್ಣನವರ ಜೊತೆಗಿನ ಕಾಲೇಜು ದಿನಗಳ ಒಡನಾಟವನ್ನು, ಅವರು ಅನುಭವಿಸಿದ ಕಷ್ಟನಷ್ಟಗಳ ಅನುಭವನ್ನು ಹಂಚಿಕೊಂಡರು. ರವಿ ಚನ್ನಣ್ಣನವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಇದರಿಂದ ಸಾಧನೆ ಸಾಧ್ಯ ಎಂದು ಹೇಳಿದರು.   ಇದೇ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಮಾತನಾಡಿದರು. ವೇದಿಕೆಯ ಮೇಲೆ ಹನುಮೇಶ ಕನಕಗಿರಿ, ಬಸವರಾಜ್ ಭೋವಿ,ಅಜ್ಮೀರ್ ಕುಷ್ಟಗಿ,ಸಿದ್ದನಗೌಡ ಪಾಟೀಲ್, ಮುಖ್ಯೋಪಾಧ್ಯಾಯನಿ ಶ್ರೀಮತಿ ರೇಣುಕಾ ಅತ್ತನೂರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್‍ಯಕ್ರಮದ ನಂತರ ರವಿ.ಡಿ.ಚನ್ನಣ್ಣನವರ ಗವಿಮಠಕ್ಕೆ ತೆರಳಿದ ಗವಿಸಿದ್ದೇಶ್ವರ ಸ್ವಾಮಿಜಿಗಳ ಆಶೀರ್ವಾದ ಪಡೆದರು.   

Please follow and like us: