ರಮೇಶಬಾಬು ಯಾಳಗಿಯವರ ‘ವಚನಸಿರಿ’ ಸುಂದರ ಬದುಕು ಕಟ್ಟಿಕೊಳ್ಳಲು ಮಾದರಿ


(ದಿನಾಂಕ ೦೫-೦೫-೨೦೨೨ ರಂದು ಬಿಡುಗಡೆಗೊಳ್ಳುವ ನಿಮಿತ್ಯ ವಿಶೇಷ ಲೇಖನ)ಹನ್ನೆರಡನೆ ಶತಮಾನದಲ್ಲಿ ಹುಟ್ಟಿಕೊಂಡ ವಚನ ಸಾಹಿತ್ಯ ಜಗತ್ತಿಗೆ ಮಾದರಿ. ಅಲ್ಲದೆ ಇಂತಹ ವಿಶಿಷ್ಟ ಪ್ರಕಾರದ ಸಾಹಿತ್ಯ ಜಗತ್ತಿನಲ್ಲೆ ಇಲ್ಲವೇನೂ ಎಂಬAತೆ ಹುಟ್ಟಿ ಸಮಾಜಕ್ಕೆ ಬೆಳಕು ನೀಡಿತು. ಸಮಾಜಕ್ಕೆ ಬೇಕಾದ ಅರಿವು, ಆಧ್ಯಾತ್ಮ, ಜ್ಞಾನದ ಬೆಳಕು ಆ ಎಲ್ಲವುಗಳನ್ನು ವಚನಗಳ ಮೂಲಕ ನೀಡಿತು. ಭಾಷೆಯಂತೂ ಅತ್ಯಂತ ಸರಳವಾದ ನುಡಿಗಳಾಗಿದ್ದರಿಂದ ಜನ ಒಪ್ಪಿಕೊಂಡರು, ನಾಲಿಗೆಯ ಮೇಲೆ ನುಡಿಯುತ್ತಾ ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಅಪ್ಪಿಕೊಂಡರು. ಇದು ವಚನ ಸಾಹಿತ್ಯದ ವೈಶಿಷ್ಟ್ಯ ಎನ್ನಬಹುದು. ವಚನಕಾರರು ಬರಿ ವಚನಗಳನ್ನು ಬರೆದು ಸಮಾಜಕ್ಕೆ ಹೇಳಿ ಮನೆ ಸೇರಲಿಲ್ಲ. ಸಮಾಜಕ್ಕೆ ಬೇಕಾದ ಅರಿವನ್ನು ಮೂಡಿಸಿದರು, ಮೂಢನಂಬಿಕೆಯನ್ನು ವಿರೋಧಿಸಿದರು, ಸಮಾನತೆಯನ್ನು ಬೋಧಿಸಿದರು. ಹೀಗಾಗಿಯೇ ವಚನ ಸಾಹಿತ್ಯ ಮನೆಮಾತಾಯಿತು, ಅರ್ಥವಾಗದ ಹಳೆಗನ್ನಡ ಸಾಹಿತ್ಯ ದೂರ ಸರಿಯಿತು. ಜೇಡರ ದಾಸಿಮಯ್ಯರಿಂದ ಪ್ರಾರಂಭಗೊಂಡು ವಚನ ಸಾಹಿತ್ಯ ಬಸವಾದಿ ಶರಣರ ಕಾಲಕ್ಕೆ ಉತ್ತುಂಗದ ಮಟ್ಟಕ್ಕೇರಿತು. ಅಲ್ಲದೇ ನೂರಾರು ಮಹಿಳಾ ವಚನಕಾರ್ತಿಯರೂ ಸಹ ಅದರಲ್ಲಿ ಸೇರಿಕೊಂಡರು. ಸಮಾಜಕ್ಕೆ ಬೇಕಾದ ಸಮಾನತೆಯನ್ನು ಬಿತ್ತಿದರು, ಲೋಕದ ಅಂಕು-ಡೊಂಕುಗಳನ್ನು ತಿದ್ದಿದರು. ಇದು ೧೨ನೇ ಶತಮಾನದಲ್ಲಿ ನಡೆದ ಬಹುದೊಡ್ಡ ವಚನ ಚಳುವಳಿ ಎನ್ನಲಾಗುತ್ತಿದೆ. ವಚನ ಸಾಹಿತ್ಯವು ಸುಮಾರು ೧೧ನೇ ಶತಮಾನದ ಅಂತ್ಯಕ್ಕೆ ಪ್ರಾರಂಭಗೊAಡು ೧೨ನೇ ಶತಮಾನದ ಅಂತ್ಯದ ಹೊತ್ತಿಗೆ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ಪರಿಣಾಮದಿಂದಾಗಿ ಆ ಚಳುವಳಿ ಅಲ್ಲಿಗೆ ನಿಂತುಹೋಯಿತು. ಅನುಭವ ಮಂಟಪದ ವಚನಕಾರರು ಚದುರಿಹೋದರು. ತಮಗೆ ಅನುಕೂಲವಾದ ಕಡೆ ನೆಲೆನಿಂತು ಅಲ್ಲಿಯೇ ತಮ್ಮ ಕೊನೆಯ ದಿನಗಳನ್ನು ಕಳೆದದ್ದು ಇತಿಹಾಸ. ಇದಾದ ನಂತರ ಅಲ್ಲಲ್ಲಿ ವಚನ ಮಾದರಿಯಲ್ಲಿ ರಚನೆಯಾದರೂ ಹೇಳಿಕೊಳ್ಳುವಷ್ಟು ನಡೆದಿಲ್ಲ ಎನ್ನಬಹುದು. ನಂತರ ೧೬ನೇ ಶತಮಾನದಲ್ಲಿ ಮತ್ತೆ ಎರಡನೇ ಘಟ್ಟ ಎಂಬಂತೆ ಪ್ರಾರಂಭವಾಗಿ ಅಲ್ಲಲ್ಲಿ ಶಿವಶರಣರಿಂದ ವಚನಗಳ ರಚನೆ ಮತ್ತು ಪುರಾತನ ವಚನಗಳ ಅಧ್ಯಯನ ಹಾಗೂ ಅವುಗಳ ಸಂರಕ್ಷಣಾದAತಹ ಕಾರ್ಯಗಳು ನಡೆದವು. ಇಂದು ೨೦ನೇ ಶತಮಾನದಲ್ಲಿಯೂ ಸಹ ವಚನಗಳ ಮಾದರಿಯಲ್ಲೇ ರಚನೆಗೆ ತೊಡಗಿಕೊಂಡಿರುವ ಅನೇಕ ಅಧುನಿಕ ವಚನಕಾರರು ರಾಜ್ಯದಲ್ಲಿ ದೊರೆಯುತ್ತಾರೆ. ಹರ್ಡೆಕರ್ ಮಂಜಪ್ಪ, ಸಿದ್ಧಯ್ಯ ಪುರಾಣಿಕ್, ವೀರಣ್ಣ ರಾಜೂರು, ಎಸ್.ವಿ.ರಂಗಣ್ಣ, ರಂ.ರಾ.ದಿವಕರ, ಡಾ.ತಿಪ್ಪೆರುದ್ರಸ್ವಾಮಿ, ಇಟಗಿ ಈರಣ್ಣ, ಡಾ.ಪಂಚಾಕ್ಷರಿ ಹಿರೇಮಠ, ಕಮಲ ಹಂಪನಾ, ಜಯಶ್ರೀ ಸಬರದ ಹೀಗೆ ಮುಂತಾದವರು ವಚನಗಳನ್ನು ರಚಿಸಿ ಸಮಾಜಕ್ಕೆ ಬೇಕಾದ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅದರಂತೆ ರಾಯಚೂರು ಜಿಲ್ಲೆಯಲ್ಲಿಯೂ ಸಹ ವಚನಗಳನ್ನು ಬರೆದ ಅನೇಕ ಅಧುನಿಕ ವಚನಕಾರರು ಸಿಗುತ್ತಾರೆ. ಗಿರಿರಾಜ ಹೊಸಮನಿ, ಅಯ್ಯಪ್ಪಯ್ಯ ಹುಡಾ, ಬಿ.ಶೇಖರಪ್ಪ ಹುಲಿಗೇರಿ, ಲಕ್ಷ್ಮಿರೆಡ್ಡಿ ಹೊಸೂರು, ಶಂಕ್ರಯ್ಯ ಮಠದ್, ತಿಪ್ಪಣ್ಣ ಹೂಗಾರ್, ಶರಣಪ್ಪ ಗುಡದಿನ್ನಿ ಮುಂತಾದವರು ಆಧುನಿಕ ವಚನಗಳನ್ನು ಬರೆದವರ ಸಾಲಿನಲ್ಲಿದ್ದಾರೆ. ಅವರ ಸಾಲಿನಲ್ಲೇ ಮಾನ್ವಿಯ ಶ್ರೀ ರಮೇಶಬಾಬು ಯಾಳಗಿಯವರೂ ಸಹ ಒಬ್ಬ ಆಧುನಿಕ ವಚನಕಾರರಾಗಿ ಹೊರ ಹೊಮ್ಮಿರುವುದು ನಮ್ಮ ಹೆಮ್ಮೆ ಎನ್ನಬಹುದು. ಶ್ರೀ ಯಾಳಗಿಯವರು ಮೂಲತಃ ಯಾದಗಿರಿಯ ಸಗರದವರು. ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ರಾಜ್ಯಶಾಸ್ತç ಉಪನ್ಯಾಸಕರಾಗಿ ಮಾನ್ವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವೆಯ ಜೊತೆಗೆ ಸಾಹಿತ್ಯದ ಕೃಷಿಯೂ ಮಾಡಿರುವುದು ವಿಶೇಷ ಎನ್ನಬಹುದು. ಸರ್ವಜ್ಞನ ವಿಚಾರ ದರ್ಶನ, ಕರಿಯನಿತ್ತಡೆ ಒಲ್ಲೆ, ಗೆಳತಿಗೊಂದು ಪ್ರಶ್ನೆ, ಬೆಳಗಿನೊಳಗಣ ಬೆಳಗು, ಭರವಸೆಯ ಬೇಸಾಯ, ಅನುಭವಗಳ ಅನಾವರಣ, ಎದೆಯ ಕದ, ಹಿಮದೊಳಗಿನ ಬೆಂಕಿ, ವಚನಸಿರಿ ಹೀಗೆ ಮುಂತಾದ ಸ್ವತಂತ್ರ ಕೃತಿಗಳನ್ನು ಹಾಗೂ ಅನೇಕ ಸಂಪಾದನಾ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯದ ಸೇವೆಗೈದಿದ್ದಾರೆ. ಅವುಗಳಲ್ಲಿ ‘ವಚನಸಿರಿ’ಯು ಆಧುನಿಕ ವಚನಗಳ ಸಂಕನಲನವಾಗಿದೆ. ಇದು ಹೇಗೆ ಆಧುನಿಕ ವಚನಗಳ ಸಂಕಲನವೋ, ಹಾಗೆ ಇದರಲ್ಲಿ ಆಧುನಿಕ ಬದುಕಿಗೆ ಬೇಕಾದ ಮಾತುಗಳು ಈ ಸಂಕಲನದಲ್ಲಿ ಸುಲಭವಾಗಿ ಸಿಗುತ್ತವೆ. ಶ್ರೀ ಯಾಳಗಿಯವರ ‘ವಚನಸಿರಿ’ ಈ ಕೃತಿಯು ಬರೊಬ್ಬರಿ ನೂರೊಂದು ವಚನಗಳನ್ನು ಹೊಂದಿರುವ ಗುಚ್ಛ. ಅದರಲ್ಲಿ ಇರುವ ವಿಷಯ-ವಸ್ತುಗಳು ಬಹಳ ವಿಶಿಷ್ಟವೇ ಎನ್ನಬಹುದು. ೧೨ನೇ ಶತಮಾನದಲ್ಲಿ ರಚನೆಯಾದ ಶರಣರ ವಚನಗಳ ಮಾದರಿಯಲ್ಲೇ ಇಲ್ಲಿನ ಕೆಲ ವಚನಗಳನ್ನು ಗುರುತಿಸಬಹುದು. ಕಾಯಕ ಪ್ರಜ್ಞೆ, ಸಮಾನತೆ, ವಿಡಂಬನೆ, ಆಧ್ಯಾತ್ಮದ ಚಿಂತನೆ, ಬದುಕು, ಕುಟುಂಬ, ಸಹವಾಸ, ಸಾಮರಸ್ಯ ಹೀಗೆ ಅನೇಕ ಸಂಗತಿಗಳ ಹೋಲಿಕೆಯನ್ನು ಈ ‘ವಚನಸಿರಿ’ಯಲ್ಲಿ ಕಾಣಬಹುದಾಗಿದೆ. ಜೊತೆಗೆ ವಚನಗಳಿರುವಂತೆ ಈ ಕೃತಿಯಲ್ಲಿರುವ ವಚನಗಳಿಗೂ ರಮೇಶಬಾಬು ಯಾಳಗಿಯವರು ‘ಗುರುವೆ ರಮೇಶ ಪ್ರಿಯ ಬಸವ ತಂದೆ’ ಎಂಬ ಅಂಕಿತವನ್ನಿಟ್ಟು ಬರೆದಿರುವುದು ವಿಶೇಷ ಎನ್ನಬಹುದು. ೧೨ನೇ ಶತಮಾನದಲ್ಲಿನ ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಕಾಯಕವೇ ಕೈಲಾಸ ಎಂದು ಭಾವಿಸಿದ್ದರು. ಮತ್ತು ಅದರಂತೆ ದುಡಿದು ಸಮಾಜಕ್ಕೆ ಮಾದರಿಯಾದರು. ಇಂತಹ ಮಹತ್ವದ ಕಾಯಕದ ಬಗ್ಗೆ ಅನೇಕ ವಚನಗಳಲ್ಲಿ ತಿಳಿಹೇಳಿದ್ದರು. ಅದೇ ಮಾದರಿಯಲ್ಲೇ ಯಾಳಗಿಯವರು ತಮ್ಮ ವಚನಸಿರಿಯಲ್ಲಿ ಸುಮಾರು ಹತ್ತಕ್ಕೂ ಅಧಿಕ ವಚನಗಳಲ್ಲಿ ಕಾಯಕದ ಕುರಿತು ಮಾತನಾಡಿದ್ದಾರೆ. “ದುಡಿಯುವ ರಟ್ಟೆಗೆ ಸಿಗುವ ಕೂಲಿ ಕೆಲಸವೇ ಕೈಲಾಸವಯ್ಯ, ಹಸಿದ ಹೊಟ್ಟೆಗೆ ಸಿಗುವ ರೊಟ್ಟಿ ಚಟ್ನಿಯೇ ಪ್ರಸಾದವಯ್ಯ”(ಸಂ-೫೩) ಎಂದು ಕೈಗಳಿಗೆ ದುಡಿತ ಸಿಗಲೇಬೇಕು, ಆಗ ಮಾತ್ರ ಕೈಲಾಸ ಕಾಣಲು ಸಾಧ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ. ಮತ್ತು ಆ ಕಾಯಕ ಹೇಗಿರಬೇಕೆಂದರೆ “ಬಡಕೊಂಡು ತಿನ್ನುವವರು ಭ್ರಷ್ಟರು ನೋಡಯ್ಯ, ದುಡಕೊಂಡು ತಿನ್ನುವವರು ನಿಷ್ಠರು ನೋಡಯ್ಯ”(ಸಂ-೬೩) ಎಂದು ನಿಷ್ಟೆಯಿಂದ ಕಾಯಕವ ಮಾಡಿರಿ ಎಂಬ ಯಾಳಗಿಯವರ ಸಲಹೆಯನ್ನು ಇಲ್ಲಿ ಒಪ್ಪಲೇಬೇಕು. ಕಷ್ಟಪಟ್ಟು ಕೆಲಸ ಮಾಡಿ ತಂದು ಅದನ್ನು ವ್ಯರ್ಥ ಖರ್ಚು ಮಾಡಬಾರದು ಎಂಬುದು ಬಹಳ ಮಹತ್ವದ ಸಂಗತಿ. “ಬೆವರ ಸುರಿಸಿ ದುಡಿದ ದುಡ್ಡು ದುಂದು ವೆಚ್ಚ ಮಾಡದಿರಯ್ಯ”(ಸಂ-೭೫) ಎಂಬ ಸಲಹೆಯೂ ಇಲ್ಲಿದೆ. ಹೀಗೆ ದುಡಿದ ಹಣವನ್ನು ದುಂದು ವೆಚ್ಚ ಮಾಡಿದಲ್ಲಿ ಕುಟುಂಬದ ನಿರ್ವಾಣೆ ಮಾಡಲು ಸಧ್ಯವೇ? ಅದನ್ನು ಸಮಾಜ ಅರಿತುಕೊಳ್ಳಬೇಕಿದೆ ಅಷ್ಟೇ. ವಚನ ಸಾಹಿತ್ಯ, ದಾಸಸಾಹಿತ್ಯ, ಜನಪದ ಸಾಹಿತ್ಯ ಹೀಗೆ ಯಾವುದೇ ಪ್ರಕಾರವಿರಲಿ ಸಹವಾಸದ ಬಗ್ಗೆ ಬಹಳನೇ ಹೇಳಿವೆ. ಯಾಕೆಂದರೆ ಒಬ್ಬ ಮನುಷ್ಯನು ಸಹವಾಸದಿಂದಲೇ ಹೆಚ್ಚಾಗಿ ಹಾಳಾಗಿರುತ್ತಾನೆ. ಅದಕ್ಕಾಗಿ ಒಳ್ಳೆಯ ಸಹವಾಸವಿರಲಿ ಎಂಬ ಮಾತುಗಳು ಆಗಾಗ ಕೇಳುತ್ತಿರುತ್ತೇವೆ. ಅದರಂತೆ ಈ ಸಿರಿಯಲ್ಲಿಯೂ ಸಹ ಒಳ್ಳೆಯ ಸಹವಾಸದ ಮಾತುಗಳನ್ನು ಕಾಣಬಹುದಾಗಿದೆ. “ಒಳ್ಳೆಯವರ ಸಹವಾಸ ಕೆನೆ ಹಾಲು ಸವಿದಂತೆ, ಕೆಟ್ಟವರ ಸಹವಾಸ ಕಾಡಿಗೆಯ ತೆನೆಯಂತೆ, ಹಾವಿನೊಂದಿಗೆ ಸರಸವಾಡುವುದಕ್ಕಿಂತ ಉತ್ತಮರ ಸಂಗ ಹಾಲು ಜೇನು ಸವಿದಂತೆ”(ಸಂ-೨೩) ಎಂದಾಗ ಕೆಟ್ಟವರು ಹಾವಿನಂತೆ ವಿಷಕಾರರು ಎಂಬುದು ಸ್ಪಷ್ಟವಾಗುತ್ತದೆ. ಅಂತಹವರಿಂದ ದೂರ ಇರಿ ಎಂಬುದು ಕವಿಯ ಮನವಿಯಂತಿದೆ. ಒAದAಶದಲ್ಲಿ ಈ ಸಿರಿ ನನಗೆ ವಿಶಿಷ್ಟವಾಗಿ ಕಾಣುತ್ತಿದೆ. ಅದು ಕುಟುಂಬದ ವಿಚಾರದಲ್ಲಿ. ಇಲ್ಲಿ ಕುಟುಂಬಕ್ಕೆ ಬೇಕಾದ ಮಾತುಗಳೂ ಇಲ್ಲಿವೆ. “ಹೆತ್ತಮ್ಮ, ಹೆಂಡತಿ ಮನೆಯ ಎರಡು ಕಣ್ಣುಗಳಂತೆ, ಯಾವ ಕಣ್ಣಿಗೂ ಗಾಯವಾಗದಂತೆ, ಯಾವ ಕಣ್ಣು ತೇವಗೊಳ್ಳದಂತೆ, ಮುತ್ತು ಮಾಸದಂತೆ ತುತ್ತು ಹಳಸದಂತೆ ನೋಡಿಕೊಳ್ಳುವ ಸುಬುದ್ಧಿ ನೀಡು ಗುರುವೆ”(ಸಂ-೪೫) ಎಂದು ದೇವರಲ್ಲಿ ಪ್ರಾರ್ಥಿಸಿದಂತೆ ಕಾಣುತ್ತದೆ. “ಅಪ್ಪ ಅಮ್ಮನ ಅನುದಿನ ಆರಾಧಿಸಿ, ಅನುಕ್ಷಣ ಅವರ ಆಶೀರ್ವಾದ ನೀ ಬಯಸಬೇಕಯ್ಯ, ಅಪ್ಪ ಅಮ್ಮನ ಆಪ್ತತತೆಯಿಂದ ಪೋಷಿಸಿ ಹೆತ್ತವರ ಹೃದಯದಿ ಸದಾ ನೀ ನೆಲೆಸಬೇಕಯ್ಯ...”(ಸಂ-೬೨) ಎಂಬ ಸಲಹಾ ಮಾತುಗಳು ಯುವ ಸಮಾಜಕ್ಕೆ ಇಲ್ಲಿವೆ. ಈ ಸಿರಿಯಲ್ಲಿ ರೈತನ ಪಡಿಪಾಟಲೂ ಇವೆ. ಅವನ ಶೋಚನಿಯ ಪರಿಸ್ಥಿತಿಯನ್ನು ಇಲ್ಲಿ ಮನಮುಟ್ಟುವಂತೆ ಶ್ರೀ ಯಾಳಗಿಯವರು ಹೇಳಿದ್ದಾರೆ. “ಬಿತ್ತಿದೆಲ್ಲ ಬೆಳೆಯುವುದಿಲ್ಲ, ಬೆಳೆದಿದ್ದೆಲ್ಲವೂ ಉಳಿಯುವುದಿಲ್ಲ, ಉಳಿದಿದ್ದೆಲ್ಲವೂ ಹೊಳೆಯುವುದಿಲ್ಲ, ಹೊಳೆದುಳಿದ ದವಸ ಧಾನ್ಯಕ್ಕೂ ಇಲ್ಲಿ ಬೆಲೆಯೇ ಇಲ್ಲವಯ್ಯ ರೈತರು ಮಾತ್ರ ಬಿತ್ತುತ್ತಲೇ ಇದ್ದಾರೆ, ಭರವಸೆಯ ಬೇಸಾಯ ಬೇಸರವಿಲ್ಲದೆ”(ಸಂ-೧೦) ಎಂದಾಗಲಂತೂ ರೈತನ ಕಷ್ಟ ನಮಗೆ ಅರಿವಾಗುತ್ತಿದೆ. ಇದು ಸರಕಾರಕ್ಕೆ ಮುಟ್ಟಬೇಕಿದೆ. ಆಗ ಮಾತ್ರ ರೈತನ ಕಷ್ಟಗಳು ಸ್ವಲ್ಪವಾದರೂ ಕಡಿಮೆಯಾಗಬಹುದೇನೂ ಎಂಬುದು ಕವಿಮನದ ಭಾವನೆ. ಇದು ಕವಿಯಾದವನ ಸದಾಶಯವೂ ಆಗಿದೆ. ಅದೆ ಆಶಯವನ್ನು ಯಾಳಗಿಯವರು ವಚನಗಳ ಮೂಲಕ ಅಭಿವ್ಯಕ್ತಿಪಡಿಸಿದ್ದಾರೆ. “ಏನಾದರೂ ಆಗು ಮೊದಲು ಮಾನವನಾಗು” ಎಂಬ ಸಿದ್ಧಯ್ಯ ಪುರಾಣಿಕರ ಮಾತು ಸರ್ವಕಾಲಿಕವೂ ಸತ್ಯ. ಅದಕ್ಕಾಗಿ ಮನುಷ್ಯನು ಮನುಷ್ಯನಾಗಿಯೇ ಬದುಕಬೇಕು, ಅಗ ಮಾತ್ರ ಆ ಬದುಕಿಗೆ ಅರ್ಥ ಬರುತ್ತದೆ. “ಮೃಗತ್ವವೇ ಮೈಲಿಗೆ, ಮಾನವತ್ವವೇ ಮಡಿ, ದುರ್ನಡತೆಯೇ ಎಂಜಲು, ಸನ್ನಡತೆಯೇ ಮೀಸಲು”(ಸಂ-೩೩) ಎಂಬ ಸಿರಿಯ ಮಾತುಗಳನ್ನು ಒಮ್ಮೆ ಓದುತ್ತಾ ಹೋದಾಗ ಮನುಷ್ಯತ್ವದ ಮಹತ್ವ ತಿಳಿಯುತ್ತದೆ. ಮನುಷ್ಯತ್ವವನ್ನು ಮೀರಿ ನಡೆದಾದ ಸಮಾಜ ಹೇಗೆ ಉಳಿಯುತ್ತದೆ? ಅಷ್ಟೇ ಅಲ್ಲ ಅವನೇ ಉಳಿಯುವನೇ? ಎಂಬ ಪ್ರಶ್ನೆ ಮೂಡುತ್ತದೆ. ಮನುಷ್ಯನಾಗಿ ಹುಟ್ಟಿ ಬದುಕಿ ಸತ್ತರೆ ಮುಗಿಯಿತೇ? ಅವನ ಜೀವನ ಸಾರ್ಥಕವಾಗುತ್ತದೆಯೇ? ಆಗಾಗದು. ಹುಟ್ಟಿದ ಬಳಿಕ ಏನನ್ನಾದರೂ ಸೇವೆಗೈದಿರಲೇಬೇಕು. ಆಗ ಮಾತ್ರ ಅವನ ಜೀವನ ಸಾರ್ಥಕವಾಗುತ್ತದೆ. ಆ ಸಾರ್ಥಕತೆ ಹೇಗೆ ಮಾಡಿಕೊಳ್ಳಬೇಕೆಂಬ ಮಾತುಗಳೂ ಇಲ್ಲಿವೆ. “ಸಮಾಜ ಸೇವೆಯಲಿ ಸಮರ್ಪಣಾ ಭಾವಿರಲಿ ಮೋಸ, ವಂಚನೆ, ಕಪಟ ಇಲ್ಲದಿರಲಿ, ಪುಣ್ಯದ ಕಾರ್ಯ ಸದಾ ಇರಲಿ”(ಸಂ-೨೨), ಆಗ ನಿನ್ನ ಬದುಕು ಮಾದರಿಯಾಗುತ್ತದೆ ಎನ್ನುವಂತಿದೆ. ಸಮಾಜ ಸೇವೆಯನ್ನು ಗರ್ವದಿಂದ ಇರಬಾರದು ಎಂಬ ಮಾತುಗಳೂ ಈ ಕೃತಿಯಲ್ಲಿ ಕಾಣುತ್ತೇವೆ. “ಗರ್ವದಿಂದ ಮಾಡುವುದು ಸಮಾಜ ಸೇವೆ ಅಲ್ಲವಯ್ಯ, ಉಪಕಾರವೆಂದು ಮಾಡುವುದು ಸಮಾಜ ಸೇವೆ ಅಲ್ಲವಯ್ಯ, ಸ್ವಾರ್ಥದಿಂದ ಮಾಡುವುದು ಸಮಾಜ ಸೇವೆ ಅಲ್ಲವಯ್ಯ, ಸಮಾಜ ಸೇವೆ ಸಮರ್ಪಣಾ ಭಾವದಿಂದ ಮಾಡುವಂತೆ ಮಾಡು ಗುರುವೆ”(ಸಂ-೯೧) ಎಂಬ ಮಾತುಗಳನ್ನೊಮ್ಮೆ ಕೇಳಿದಾಗ ಸಮಾಜದ ಸೇವೆಯಗಿರುವ ನಿಯಮಗಳು ಮತ್ತು ಅದನ್ನು ಹೇಗೆ ಮಾಡಬೇಕೆಂಬುದು ಇಲ್ಲಿ ಮನನವಾಗುತ್ತಿದೆ. ಈಗಾಗಲೇ ನಾನು ವಿವರಿಸಿದಂತೆ ಯಾಳಗಿಯವರ ಈ ಸಿರಿಯು ೧೨ನೇ ಶತಮಾನದ ವಚನಕಾರರ ಮಾದರಿಯಂತೆ ಇಲ್ಲಿನ ವಚನಗಳನ್ನು ನಾವು ನೋಡಬಹುದು. ಅಲ್ಲಿರುವ ಅನೇಕ ವಿಷಯ-ವಸ್ತುಗಳೇ ಇಲ್ಲಿರುವುದನ್ನು ನಾವು ಕಾಣಬಹುದಾಗಿದೆ. ಅದರಂತೆ ಆಧ್ಯಾತ್ಮದ ಮಾತುಗಳೂ ಇಲ್ಲಿವೆ. “ಆತ್ಮಲಿಂಗನ ಮಾತು ಆಲಿಸದೆ ಮಂಗನಂತೆ ವರ್ತಿಸಿದರೇನು ಫಲ? ಮಹಾಮಂತ್ರ ಪಠಿಸಿ ಕಂತ್ರಿ ಕೆಲಸ ಮಾಡಿದರೇನು ಫಲ? ಉತ್ತಮ ಉಪದೇಶ ನುಡಿದು ನಡೆ ಹೊಲಸಾದರೇನು ಫಲ?” (ಸಂ-೨೭) ಎಂದು ಯಾಳಗಿಯವರು ನೇರವಾಗಿಯೇ ವಿಡಂಬಿಸಿದ್ದಾರೆ. ”ಮುಂಜಾನೆದ್ದು ಮಡಿಯಿಂದ ಮಂತ್ರ ಹೇಳಿ ಮಹಾಪೂಜೆ ಮಾಡಿದ ಮಾತ್ರಕ್ಕೆ ಮೋಕ್ಷದ ಮಾರ್ಗ ದೊರೆಯದಯ್ಯ”(ಸಂ-೧೬), ಹೀಗಾಗಿ ನಾವು ಮಾಡುವ ಕೆಲಸ ನಿಷ್ಟೆಯಿಂದ ಇರಬೇಕು, ಪ್ರಾಮಾಣಿಕವಾಗಿರಬೇಕು ಅಂದಾಗ ಮಾತ್ರ ನಮಗೆ ಮೋಕ್ಷವೂ ದೊರೆಯುತ್ತದೆ, ಸಮಾಜದಲ್ಲಿ ಒಳ್ಳೆಯ ಸ್ಥಾನ-ಮಾನವೂ ದೊರೆಯುತ್ತದೆ ಎಂಬುದು ವಚನಸಿರಿಯ ಆಶಯವಾಗಿದೆ. ಇಂದು ಸಮಾಜ ಕಲುಸಿತಗೊಳ್ಳತ್ತಿದೆ ಎಂಬುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಜಾತಿ-ಧರ್ಮಗಳ ಸಂಘರ್ಷದಲ್ಲಿ ಸಮಾಜ ನಲುಗುತ್ತಿದೆ. ಆದರೆ ಸಮಾಜವಾಗಲಿ ಇಲ್ಲವೆ ಸರಕಾರವಾಲಿ ಏನು ಮಾಡುತ್ತಿವೆ ಎಂಬ ಪ್ರಶ್ನೆ ಬಂದಾಗ ಕವಿಯಾದವನ ಜವಾಬ್ಧಾರಿ ಇಲ್ಲಿ ಬರುತ್ತದೆ. ಸರಕಾರಕ್ಕಿಂತಲೂ ಕವಿಯಾದವನ ಜವಬ್ಧಾರಿ ಹೆಚ್ಚಿದೆ ಎಂಬುದು ನನ್ನ ಭಾವನೆ. ಆ ಜವಾಬ್ಧಾರಿಯನ್ನೇ ಶ್ರೀ ಯಾಳಗಿವರು ಇಲ್ಲಿ ಮಾಡಿದ್ದಾರೆ. “ಮಡಿವಂತಿಕೆಯ ಸೋಗಿನಲಿ ಸಮಾನತೆ ಸಾಯಿಸದಿರಯ್ಯ, ಜಾತಿ ರಾಜಕಾರಣದಲಿ ನೀತಿ ನಿರ್ನಾಮ ಮಾಡದಿರಯ, ಕೋಮುವಾದದ ಹೆಸರಿನಲಿ ಸಾಮರಸ್ಯ ಕದಡದಿರಯ್ಯ”(ಸಂ-೫೧). ಎಂಬ ಮಾತುಗಳನ್ನು ಸಮಾಜ ಅರಿಯಬೇಕಿದೆ. ಅದಕ್ಕೆ “ಎಲ್ಲ ಧರ್ಮಗಳಿಗಿಂತ ಮಾನವ ಧರ್ಮವೇ ಬಲು ದೊಡ್ಡದು ನೋಡಯ್ಯ, ಎಲ್ಲಾ ತತ್ವಗಳಿಗಿಂತ ಮನುಷ್ಯತ್ವವೇ ಬಲು ದೊಡ್ಡದು ನೋಡಯ್ಯ ಎಲ್ಲಾ ಮತಗಳಿಗಿಂತ ಮನುಜ ಮತವೇ ಬಲು ದೊಡ್ಡದು ನೋಡಯ್ಯ”(ಸಂ-೯೩) ಎಂದರೂ ಸಮಾಜ ತಿಳಿಯದಿದ್ದಾಗ ಎಲ್ಲವನ್ನು ಆ ದೇವರಿಗೆ ಬಿಡುವುದು. “ಜಾತ್ಯಾತೀತ ಸಮಾಜದ ಆಪೇಕ್ಷಕ ನೀನಯ್ಯ, ಸರ್ವ ಧರ್ಮ ಸಮನ್ವಯದ ರಕ್ಷಕ ನೀನಯ್ಯ”(ಸಂ-೯೯), ಈ ಸಮಾಜವನ್ನು ನೀನೇ ರಕ್ಷಿಸಬೇಕೇಂದು ಆ ಭಗವಂತನಲ್ಲಿ ಮೊರೆ ಇಡುವುದೇ ಕೊನೆಯ ಪ್ರಯತ್ನ ಎಂಬಂತೆ ಕವಿ ಇಲ್ಲಿ ಕಂಡAತಿದೆ. ಹೀಗೆ ಶ್ರೀ ರಮೇಶಬಾಬು ಯಾಳಗಿಯವರ ‘ವಚನಸಿರಿ’ಯಲ್ಲಿ ಕಾಯಕದ ಮಹತ್ವದಿಂದ ಹಿಡಿದು ಒಬ್ಬ ವ್ಯಕ್ತಿ ಎಂತಹ ಸಹವಾಸ ಮಾಡಬೇಕೆಂಬುದನ್ನೂ ಈ ಕೃತಿಯಲ್ಲಿ ಕಾಣಬಹುದಾಗಿದೆ. ಭಾಷೆ ಅತ್ಯಂತ ಸರಳವಾದ ಮಾತುಗಳಲ್ಲೆ ಬರೆಯಲಾಗಿದೆ. ಎಲ್ಲಿಯೂ ಕ್ಲಿಷ್ಟ ಎನಿಸುವುದಿಲ್ಲ. ಹೀಗಾಗಿ ಈ ಸಿರಿಯನ್ನು ಒಂದೇ ಓದಿನಲ್ಲಿ ಓದಿ ಮುಗಿಸಬಹುದು. ಮತ್ತು ಈ ಕೃತಿಯನ್ನು ಅಧ್ಯಾಪಕರು, ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು ಹೀಗೆ ಎಲ್ಲರೂ ಓದಬಹುದು. ಇದು ಅಷ್ಟು ಸರಳವಾದ ಭಾಷೆ ಮತ್ತು ನಿರೂಪಣೆಯನ್ನು ಹೊಂದಿದೆ. ಎಲ್ಲಿಯೂ ಅನುಮಾನ ಮತ್ತು ಗೊಂದಲಗಳನ್ನು ಸೃಷ್ಟಿಸುವುದಿಲ್ಲ. ಇದು ಶ್ರೀ ರಮೇಶಬಾಬು ಯಾಳಗಿಯವರ ‘ವಚನಸಿರಿ’ ಕೃತಿಯ ವೈಶಿಷ್ಟ್ಯ ಎನ್ನಬಹುದು.

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್


ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊ ಸಂ : ೯೪೪೮೫೭೦೩೪೦
ಇಮೇಲ್:-skotnekal@gmail.com

Please follow and like us: