ಬಸವ ಜಯಂತ್ಯೋತ್ಸವ ನಾಳೆ

ಕೊಪ್ಪಳ : ಬಸವ ಜಯಂತ್ಯೋತ್ಸವ ಸಮಿತಿ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ವಿಶ್ವಗುರು ಬಸವೇಶ್ವರರ ಜಯಂತ್ಯೋತ್ಸವವನ್ನು ಕೊಪ್ಪಳದಲ್ಲಿ ನಾಳೆ ದಿ. ೦೩-೦೫-೨೦೨೨, ಮಂಗಳವಾರದಂದು ವಿಜೃಂಭಣೆಯಿಂದ ಆಚರಿಸಲಾಗುವುದು. ಮುಂಜಾನೆ ೯ ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಷಟಸ್ಥಲ ಧ್ವಜಾರೋಹಣ ಮತ್ತು ಶ್ರೀ ಬಸವೇಶ್ವರರ ಪುತ್ಥಳಿಗೆ ಪೂಜೆ, ನಂತರ ೧೦ ಗಂಟೆಗೆ ಕೊಪ್ಪಳದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ, ಸಂಜೆ ೪ ಗಂಟೆಗೆ ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದಿಂದ – ಶ್ರೀ ಗವಿಮಠದ ಆವರಣದವರೆಗೆ ಶ್ರೀ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

ಸಂಜೆ ೬ ಗಂಟೆಗೆ ಶ್ರೀ ಗವಿಮಠದ ಆವರಣದಲ್ಲಿ ಬಸವಗೋಷ್ಠಿ ಸಮಾರಂಭ ನಡೆಯಲಿದೆ. ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಪೂಜ್ಯರು ದಿವ್ಯ ಸಾನಿಧ್ಯವನ್ನು, ಪೂಜ್ಯ ಶ್ರೀ ಮಾತೆ ಬಸವೇಶ್ವರಿ ತಾಯಿಯವರು ಪಾವನ ಸಾನಿಧ್ಯವನ್ನು ವಹಿಸಲಿದ್ದು, ಗುಳೇದಗುಡ್ಡದ ಅಶೋಕ ಬಸಪ್ಪ ಬರಗುಂಡಿ ಇವರು ಬಸವ ಚಿಂತನೆ ಪ್ರಸ್ತುತ ಪಡಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಕಾಯಕ ಜೀವಿ – ಶರಣರಿಗೆ ‘ಬಸವ ಕಾರುಣ್ಯ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಕೊಪ್ಪಳದ ನಿವೃತ್ತ ವೈದ್ಯಾಧಿಕಾರಿಗಳಾದ ಡಾ. ಆರ್.ಎಂ. ಪಾಟೀಲ ಮತ್ತು ಶ್ರೀಮತಿ ಕಸ್ತೂರೆವ್ವ ಡಾ. ಬಸವಯ್ಯ ಸಸಿಮಠ ಮತ್ತು ಬೆಂಗಳೂರಿನ ಅಶೋಕ ದೊಮ್ಮಲೂರು ಇವರು ಈ ಸಲದ ಬಸವ ಕಾರುಣ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಬಸವ ಕಾರುಣ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಕವಿ ಮಹೇಶ ಬಳ್ಳಾರಿಯವರ ‘ನೀನೀಗ ಜಗದ ವಿಳಾಸ’ – ಬಸವ ಕವಿತೆಗಳು – ಕವನ ಸಂಕಲನವೂ ಇದೇ ಸಂದರ್ಭದಲ್ಲಿ ಲೋಕಾರ್ಪಣೆಯಾಗಲಿದೆ. ಕುಮಾರಿ ಶಕುಂತಲಾ ಬೆನ್ನಾಳ ಅವರು ವಚನ ಸಂಗೀತ ನೀಡಲಿದ್ದು, ಕಾರ್ಯಕ್ರಮದ ನಂತರ ಪ್ರಸಾದದ ವ್ಯವಸ್ಥೆ ಇದೆ. ಎಲ್ಲ ಬಸವಾಭಿಮಾನಿಗಳು ಬಸವ ಜಯಂತ್ಯೋತ್ಸವ ಸಮಾರಂಭದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಸವ ಜಯಂತ್ಯೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಬಸವ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿಯವರು    ವಿನಂತಿಸಿದ್ದಾರೆ.

Please follow and like us: