ಕ್ಷಮಿಸಿಬಿಡು ಬಸವಣ್ಣ- ವಿಡಿಯೋ ಸಾಂಗ್ ಅದ್ಧೂರಿ ಬಿಡುಗಡೆ


ಗಂಗಾವತಿ: ನಗರದ ಖ್ಯಾತ ದಂತವೈದ್ಯರಾದ ಡಾ|| ಶಿವಕುಮಾರ ಮಾಲಿಪಾಟೀಲ್ ರಚಿಸಿರುವ ಹಾಗೂ
ರಾಜು ಎಮ್ಮಿಗನೂರುರವರ ಸಂಗೀತ ನಿರ್ದೇಶನದ, ಖ್ಯಾತ ಗಾಯಕ ರಘು ದೀಕ್ಷಿತ್ ಹಾಡಿರುವ ‘ಕ್ಷಮಿಸಿಬಿಡು ಬಸವಣ್ಣ’ ವಿಡಿಯೋ ಸಾಂಗ್ ಇತ್ತೀಚೆಗೆ ಬೆಂಗಳೂರಿನಲ್ಲಿ ಡಾ. ಹಂಸಲೇಖ, ನಾಡೋಜ ಗೊ.ರು. ಚನ್ನಬಸಪ್ಪ, ಹಿರಿಯ ನಟ ಶ್ರೀನಿವಾಸ ಮೂರ್ತಿ, ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಬಿಡುಗಡೆಗೊಳಿಸಿದರು.
ಬಿಡುಗಡೆಗೊಳಿಸಿ ಮಾತನಾಡಿದ ಡಾ. ಹಂಸಲೇಖರವರು ಡಾ|| ಶಿವಕುಮಾರ್ ಮಾಲಿಪಾಟೀಲ ಅವರು ಜನತಂತ್ರದ ಜನಕ ಬಸವಣ್ಣನವರನ್ನು ಸಮಾಜಕ್ಕೆ ಉತ್ತಮವಾಗಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಗೊ.ರು. ಚನ್ನಬಸಪ್ಪ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಗಾಳಿಗೆ ತೂರಿದ ಪರಿಣಾಮ ನಾವೆಲ್ಲರೂ ಕ್ಷಮೆ ಕೇಳುವ ಪರಿಸ್ಥಿತಿ ಬಂದಿದೆ ಎಂದರು. ವಿಡಿಯೋ ವೀಕ್ಷಿಸಿದ ಗಣ್ಯರು, ಅತಿಥಿಗಳು, ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿಯವರು ಮಾತನಾಡಿ, ಈ ವಿಡಿಯೋವನ್ನು ಬಸವ ಜಯಂತಿಯ ದಿನ ೧೫೬ ದೇಶಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಘೋಷಿಸಿದರು. ಇದೇ ಸಂದರ್ಭದಲ್ಲಿ ನಾಡೋಜ ಪ್ರಶಸ್ತಿ ಪಡೆದ ಗೊ.ರು. ಚನ್ನಬಸಪ್ಪ ಅವರನ್ನು ಗೌರವಿಸಲಾಯಿತು. ಅದೇರೀತಿ ಡಾ. ಶರಣಬಸಪ್ಪ ಕೋಲ್ಕಾರ್, ಕೆ. ಶಾಂತಾ ಬಸವರಾಜ, ಡಾ|| ಮಲ್ಲನಗೌಡ ಹೆಚ್., ಡಾ|| ರೇಣುಕಾರಾಧ್ಯ, ಡಾ|| ಶರಣಬಸವ, ಡಾ|| ಪ್ರಶಾಂತ ದೇಸಾಯಿ, ಖ್ಯಾತ ಗಾಯಕ ರವೀಂದ್ರ ಸುರಗಾವಿ, ದೇವೆಂದ್ರಪ್ಪ ಪತ್ತಾರ ಅವರನ್ನು ಸನ್ಮಾನಿಸಲಾಯಿತು. ‘ಕ್ಷಮಿಸಿಬಿಡು ಬಸವಣ್ಣ’ ಹಾಡಿಗೆ ರಾಜ್ಯಾಧ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Please follow and like us: