ಅಗ್ನಿದಿವ್ಯದಿಂದ ಎದ್ದುಬಂದ ಅರವಿಂದ ಕೇಜ್ರಿವಾಲ್ – ಆದಿತ್ಯ

ಅರವಿಂದ ಕೇಜ್ರಿವಾಲ್ ಏಪ್ರಿಲ್ 21ರಂದು (ಭಾನುವಾರ) ಬೆಂಗಳೂರಿಗೆ ಬರುತ್ತಿದ್ದಾರೆ. ಈ ಬಾರಿ ಅವರ ಬೆಂಗಳೂರು ಭೇಟಿಯ ವಿಶೇಷವೇನೆಂದರೆ ರೈತರ ಬೃಹತ್ ಸಮಾವೇಶವೊಂದರಲ್ಲಿ ಅವರು ಪಾಲ್ಗೊಳ್ಳುತ್ತಿರುವುದು. ಸಮಾವೇಶವನ್ನು ಆಯೋಜಿಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಈಗಾಗಲೇ ರೈತರು ರಾಜಕೀಯಕ್ಕೆ ಬರಬೇಕು, ಅದಕ್ಕಾಗಿಯೇ ಈ ಸಮಾವೇಶ ಎಂದು ಘೋಷಿಸಿದ್ದಾರೆ. ಸಾವಿರಾರು ರೈತರು ಸಮಾವೇಶದಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯನ್ನು ಸೇರುತ್ತಿದ್ದಾರೆ. ಈ ಸಮಾವೇಶ ಕರ್ನಾಟಕದ ರಾಜಕೀಯ ಸಮೀಕರಣವನ್ನು ಈ ಭೇಟಿ ಬದಲಾಯಿಸುತ್ತಾ ಕಾದು ನೋಡಬೇಕು.

ಹಾಗೆ ನೋಡಿದರೆ ಅರವಿಂದ ಕೇಜ್ರಿವಾಲ್ ಈಗ ರಾಷ್ಟ್ರರಾಜಕಾರಣದಲ್ಲಿ ಎಲ್ಲರನ್ನೂ ಸೆಳೆಯುತ್ತಿರುವ ಚುಂಬಕಶಕ್ತಿಯಾಗಿ ಬದಲಾಗಿದ್ದಾರೆ. ಇದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಕೇಜ್ರಿವಾಲ್ ಹೋದಲ್ಲೆಡೆಯೆಲ್ಲ ಸಾವಿರಾರು ಜನರು ಸೇರುತ್ತಾರೆ. ಅವರನ್ನು ಆಲಿಸುತ್ತಾರೆ‌. ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಬೇಕಿರುವ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ಎಎಪಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ದೆಹಲಿ, ಪಂಜಾಬ್ ಗಳಲ್ಲಿ ಮಾಡಿದ ಮ್ಯಾಜಿಕ್ ಕರ್ನಾಟಕದಲ್ಲೂ ಮಾಡ್ತಾರಾ ಕೇಜ್ರಿವಾಲ್? ಇದು ಇವತ್ತಿನ ಪ್ರಶ್ನೆ.

ಕೇಜ್ರಿವಾಲ್ ಅವರ ಟ್ರಾಕ್ ರೆಕಾರ್ಡ್ ಎಂಥ ರಾಜಕೀಯ ಪಂಡಿತರನ್ನೂ ಬೆಚ್ಚಿ ಬೀಳಿಸುವಂತಿದೆ. ಇಂಡಿಯಾ ಎಗೆನೆಸ್ಟ್ ಕರಪ್ಷನ್ ಸಂಘಟನೆ ದೇಶವ್ಯಾಪಿ ನಡೆಸಿದ ಭ್ರಷ್ಟಾಚಾರದ ವಿರುದ್ಧದ ಅಭೂತಪೂರ್ವ ಹೋರಾಟದ ಮೂಲಕ ಅರವಿಂದ ಕೇಜ್ರಿವಾಲ್ ದೇಶದ ಜನತೆಗೆ ಪರಿಚಯವಾದರು. ಜನಲೋಕಪಾಲ್ ಗಾಗಿ ನಡೆದ ಚಳವಳಿಯ ನೇತೃತ್ವ ಅಣ್ಣಾ ಹಜಾರೆಯವರದ್ದಾಗಿತ್ತಾದರೂ, ಇಡೀ ಚಳವಳಿಯ ಕ್ರಿಯಾಶಕ್ತಿಯಾಗಿದ್ದವರು ಕೇಜ್ರಿವಾಲ್. ಕಾನೂ‌ನು ರೂಪಿಸಿ ಎಂದು ಬೀದಿಯಲ್ಲಿ ನಿಂತು ಒತ್ತಡ ಹೇರುವುದಲ್ಲ, ಬದಲಾಗಿ ಚುನಾವಣೆಗೆ ಬಂದು ನಿಮ್ಮ ತಾಕತ್ತು ತೋರಿಸಿ ಎಂದು ಅಂದಿನ ಘಟಾನುಘಟಿ ರಾಜಕಾರಣಿಗಳು ಕೇಜ್ರಿವಾಲ್ ಅವರಿಗೆ ಸವಾಲೊಡ್ಡಿದ್ದರು. ಕೇಜ್ರಿವಾಲ್ ಯಾವ ಅಳುಕೂ ಇಲ್ಲದೆ ಈ ಸವಾಲನ್ನು ಮೈಮೇಲೆ ಹೊತ್ತುಕೊಂಡು ಆಮ್ ಆದ್ಮಿ ಪಾರ್ಟಿ ಕಟ್ಟಿದರು. ಆಮೇಲೆ ನಡೆದಿದ್ದೆಲ್ಲ ಒಂದು ದೊಡ್ಡ ಇತಿಹಾಸ. ಅಕ್ಷರಶಃ ಒಂದು ರಾಜಕೀಯ ಕ್ರಾಂತಿ!

ಎಎಪಿ ಕಟ್ಟಿದ ಒಂದೇ ವರ್ಷಕ್ಕೆ 2013ರ ಡಿಸೆಂಬರ್ ನಲ್ಲಿ ಕೇಜ್ರಿವಾಲ್ ದೆಹಲಿಯ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ ಕಾಂಗ್ರೆಸ್ ಬೆಂಬಲದ ಹಂಗಿನರಮನೆ ಅವರಿಗೆ ಬೇಕಾಗಿರಲಿಲ್ಲ. ಹೀಗಾಗಿ ಸರ್ಕಾರ ಹೆಚ್ಚು ಕಾಲ ಉಳಿಯಲಿಲ್ಲ. ಕೇಜ್ರಿವಾಲ್ ಮತ್ತೆ ಬೀದಿಗೆ ಬಂದರು. 2015ರ ಫೆಬ್ರವರಿಯಲ್ಲಿ ಮತ್ತೆ ಚುನಾವಣೆ. ರಾಜಕೀಯ ಪಂಡಿತರು ಹೇಳಿದ್ದೇ ಬೇರೆ, ಅಲ್ಲಿ ಆಗಿದ್ದೇ ಬೇರೆ. 70 ಕ್ಷೇತ್ರಗಳಲ್ಲಿ 67 ಕ್ಷೇತ್ರಗಳಲ್ಲಿ ಎಎಪಿ ಗೆದ್ದುಬೀಗಿತು! ವಿರೋಧಪಕ್ಷಗಳು ನಾಮಾವಶೇಷವಾದವು. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದರೆ ಬಿಜೆಪಿ ಕೇವಲ ಮೂರು ಶಾಸಕರನ್ನು ಆಯ್ಕೆ ಮಾಡಲು ಸಾಧ್ಯವಾಯಿತು! ಅದೂ ಕೂಡ ದೇಶದಲ್ಲಿ ನರೇಂದ್ರ ಮೋದಿ ಹೆಸರಿನ ಅಲೆ ಇದ್ದ ಸಂದರ್ಭದಲ್ಲಿ!

ಚುನಾವಣೆ ಗೆದ್ದರೂ, ಮುಖ್ಯಮಂತ್ರಿಯಾದರೂ ಕೇಜ್ರಿವಾಲ್ ಮುಳ್ಳಿನ ದಾರಿಯಲ್ಲೇ ನಡೆಯಬೇಕಾಯಿತು. ಅವರಿಗೆ ಸುಲಭವಾಗಿ ಅಧಿಕಾರ ನಡೆಸಲು ಪಟ್ಟಭದ್ರ ರಾಜಕೀಯ ವ್ಯವಸ್ಥೆ ಬಿಡಲಿಲ್ಲ. ಕರ್ನಾಟಕದ ಹಾಗೆ ದೆಹಲಿ ಸಂಪೂರ್ಣ ರಾಜ್ಯದ ಸ್ಥಾನಮಾನ ಹೊಂದಿಲ್ಲ. ಅಲ್ಲಿನ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆ ನೀಡಲಾಗಿಲ್ಲ. ಪೊಲೀಸ್ ವ್ಯವಸ್ಥೆ ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ. ರಾಜ್ಯ ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಲೆಫ್ಟಿನೆಂಟ್ ಜನರಲ್ (ರಾಜ್ಯಪಾಲ) ಒಪ್ಪಿಗೆ ಬೇಕು. ಎಲ್ ಜಿ ಸಾಹೇಬರು ಕೇಂದ್ರ ಸರ್ಕಾರದ ಮಾತು ಕೇಳುತ್ತಾರಲ್ಲವೇ? ಹೀಗಾಗಿ ಕೇಜ್ರಿವಾಲ್ ಗೆ ಹೆಜ್ಜೆಹೆಜ್ಜೆಗೂ ಅಡ್ಡಿಗಳು. ಕೇಜ್ರಿವಾಲ್ ಒಂದು ಹಂತದಲ್ಲಿ ತಾವೇ ಮುಖ್ಯಮಂತ್ರಿಯಾದರೂ ಲೆಫ್ಟಿನೆಂಟ್ ಜನರಲ್ ಅವರ ಸರ್ವಾಧಿಕಾರದ ವಿರುದ್ಧ ಧರಣಿ ನಡೆಸಬೇಕಾಯಿತು. ಕೇಜ್ರಿವಾಲ್ ಅವರ ಟೀಕಾಕಾರರು, ಇದೇನಿದು? ಈ ಮನುಷ್ಯ ಅರಾಜಕತೆ ಸೃಷ್ಟಿಸುತ್ತಿದ್ದಾನೆ.‌ ಈತ ಅರಾಜಕವಾದಿ ಎಂದು ಜರಿದರು.

ಇದೆಲ್ಲದರ ನಡುವೆ ಕೇಜ್ರಿವಾಲ್ ಒಂದೊಂದೇ ರಾಜಕೀಯ ವಿಸ್ಮಯಗಳನ್ನು ಮಾಡತೊಡಗಿದರು. ರಾಜಕೀಯ ವಿರೋಧಿಗಳು ಕಟುಟೀಕೆಗಳ ಅಬ್ಬರದ ನಡುವೆಯೂ ದೆಹಲಿಯ ಈ ವಿಸ್ಮಯಗಳು ದೇಶಾದ್ಯಂತ ಸದ್ದು ಮಾಡಿದವು. ದೆಹಲಿಯ ಎಲ್ಲ ಸರ್ಕಾರಿ ಶಾಲೆಗಳನ್ನು ಕೇಜ್ರಿವಾಲ್ ಆಮೂಲಾಗ್ರವಾಗಿ ಬದಲಾಯಿಸಿದರು. ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಲಭ್ಯವಾಯಿತು. ತಮಾಶೆಯೆಂದರೆ ದೆಹಲಿಯ ಖಾಸಗಿ ಶಾಲೆಗಳು ಕೇಜ್ರಿವಾಲ್-ಮನೀಷ್ ಸಿಸೋಡಿಯಾ ಜೋಡಿ ಕಟ್ಟಿನಿಲ್ಲಿಸಿದ ಸರ್ಕಾರಿ ಶಾಲೆಗಳ ಎದುರು ಸ್ಪರ್ಧಿಸಿ ಸೋತವು. ಲಕ್ಷಾಂತರ ಪೋಷಕರು ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಸರ್ಕಾರಿ ಶಾಲೆಗಳಿಗ ಸೇರಿಸಿದರು. ದೊಡ್ಡ ಪವಾಡವೇ ದೆಹಲಿಯಲ್ಲಿ ನಡೆದುಹೋಗಿತ್ತು.

ಜನರಿಗೆ ಉಚಿತ ವಿದ್ಯುತ್ ಕೊಡುತ್ತೇನೆ, ಉಚಿತವಾಗಿ ನೀರು ಒದಗಿಸುತ್ತೇನೆ ಎಂದರು ಕೇಜ್ರಿವಾಲ್. ಇದೇನಿದು ಹುಚ್ಚಾಟ? ಇದೆಲ್ಲ ಹೇಗೆ ಸಾಧ್ಯ ಎಂದು ಮೂಗು ಮುರಿದರು ರಾಜಕೀಯ ಟೀಕಾಕಾರರು. ನೋಡನೋಡುತ್ತಿದ್ದಂತೆ ಇದೆಲ್ಲ ಸಾಧ್ಯ ಮಾಡಿಯೇ ಬಿಟ್ಟರು ಕೇಜ್ರಿವಾಲ್. ಮುನ್ನೂರು ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆದು ದೆಹಲಿ ಜನರು ನಿಟ್ಟುಸಿರು ಬಿಟ್ಟರು. ಇಡೀ ದೇಶ ಈ‌ ವಿದ್ಯಮಾನವನ್ನು ನಿಬ್ಬೆರಗಾಗಿ ನೋಡಿತು.

2020ರಲ್ಲಿ ಮತ್ತೆ ದೆಹಲಿ ವಿಧಾನಸಭಾ ಚುನಾವಣೆಗಳು ಬಂದವು. 2019ರಲ್ಲಿ ಮೋದಿ ಸರ್ಕಾರ ಲೋಕಸಭಾ ಚುನಾವಣೆಗಳಲ್ಲಿ ಭರ್ಜರಿ ಜಯಗಳಿಸಿದ್ದರಿಂದ ಈ ಬಾರಿ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದೇ ಬಹಳಷ್ಟು ಜನರು ಭಾವಿಸಿದ್ದರು. ಭಾರತೀಯ ಜನತಾ ಪಕ್ಷ ಚುನಾವಣೆ ಗೆಲ್ಲಲು ಎಲ್ಲ ಬಗೆಯ ಷಡ್ಯಂತ್ರಗಳನ್ನೂ ಹೆಣೆದಿತ್ತು. ಸ್ವತಃ ಕೇಂದ್ರ ಗೃಹಸಚಿವ ಅಮಿತ್ ಶಾ ದೇಶದ ಎಲ್ಲ ಘಟಾನುಘಟಿ ಬಿಜೆಪಿ ನಾಯಕರನ್ನು ಪ್ರಚಾರಕ್ಕೆ ತಂದು ನಿಲ್ಲಿಸಿದರು. ಎಲ್ಲ ಬಿಜೆಪಿ ಮುಖ್ಯಮಂತ್ರಿಗಳು ಕೆಲಸ ಕಾರ್ಯ ಬಿಟ್ಟು ದೆಹಲಿಯಲ್ಲಿ ಝಂಡಾ ಊರಿದರು. ಇನ್ನೇನು‌ ಬಿಜೆಪಿ ಗೆದ್ದೇಬಿಟ್ಟಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಎಲ್ಲರ ಊಹೆಗಳು ಸುಳ್ಳಾದವು. ಈ ಬಾರಿಯೂ ಪ್ರಚಂಡ ಗೆಲುವು! 70 ಸ್ಥಾನಗಳಲ್ಲಿ 62ರಲ್ಲಿ ಎಎಪಿ ಗೆದ್ದುಬಂದಿತು. ಮತ್ತೊಮ್ಮೆ ಅಗ್ನಿದಿವ್ಯದಿಂದ ಎದ್ದು ಬಂದಿದ್ದರು ಅರವಿಂದ ಕೇಜ್ರಿವಾಲ್.

ಮೂರನೇ ಬಾರಿ ಮುಖ್ಯಮಂತ್ರಿಯಾದ ಕೂಡಲೇ ಕೇಜ್ರಿವಾಲ್ ಗೇರ್ ಬದಲಿಸಿದರು. ದೆಹಲಿಯ ಚಿತ್ರಣ ಬದಲಾಗಿಹೋಯಿತು. ಅತ್ಯುತ್ತಮ ದರ್ಜೆಯ ರಸ್ತೆ, ಫುಟ್ ಪಾತ್ ಗಳು ಎದ್ದುನಿಂತವು. ಜನರಿಗೆ ಉಚಿತ ಆರೋಗ್ಯ ಸೇವೆಗಳನ್ನು ನೀಡಲಾಯಿತು. ಮೊಹಲ್ಲಾ ಕ್ಲಿ‌ನಿಕ್ ಎಂಬ‌ ವಿನೂತನ ಪ್ರಯೋಗ ನಡೆದು ಯಶಸ್ವಿಯಾಯಿತು. ಜನರಿಗೆ ಅವರ ಮನೆಗಳ ಬಳಿಯೇ ಆರೋಗ್ಯಸೇವೆ ಲಭ್ಯವಾಯಿತು. ಅಪರಾಧಗಳ ನಿಯಂತ್ರಣಕ್ಕೆ ಎಲ್ಲೆಡೆ ಸಿಸಿಟಿವಿಗಳ ಸ್ಥಾಪನೆಯೂ ಆಯಿತು. ದೆಹಲಿ ಮಹಿಳೆಯರಿಗೆ ಬಸ್, ಮೆಟ್ರೋಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಲಾಯಿತು.

ಹೀಗೆಲ್ಲ ಉಚಿತ ಭಾಗ್ಯ ಕೊಟ್ಟರೆ ಸರ್ಕಾರ ದಿವಾಳಿಯಾಗುತ್ತದೆ ಎಂದು ಟೀಕಿಸಿದರು ರಾಜಕೀಯ ಎದುರಾಳಿಗಳು. ನಾವು ಸೋರಿಹೋಗುತ್ತಿದ್ದ ಹಣವನ್ನು ನಿಯಂತ್ರಿಸಿ, ಜನರಿಗೆ ಕೊಡುತ್ತಿದ್ದೇವೆ ಎಂದರು ಕೇಜ್ರಿವಾಲ್. ನಿಜ ಹೇಳಬೇಕೆಂದರೆ ಜನಪ್ರತಿ‌ನಿಧಿಗಳು ಲೂಟಿ ಹೊಡೆಯುತ್ತಿದ್ದ ಹಣ ಜನರಿಗೆ ತಲುಪಿಸಿದರು ಕೇಜ್ರಿವಾಲ್.

ಇದೆಲ್ಲ ವಿಷಯಗಳು ದೇಶ ತಲುಪಲು ಹೆಚ್ಚು ಸಮಯವೇನೂ‌ ಹಿಡಿಯಲಿಲ್ಲ. ದೇಶದ ಎಲ್ಲೆಡೆ ಈಗ ದೆಹಲಿ ಮಾಡೆಲ್ ಅಥವಾ ಕೇಜ್ರಿವಾಲ್ ಮಾಡೆಲ್ ಚರ್ಚೆ
ನಡೆಯುತ್ತಿದೆ. ಕೇಜ್ರಿವಾಲ್ ದೇಶದ ಹೊಸ ಆಕರ್ಷಣೆಯಾಗಿದ್ದಾರೆ.

ಕೇಂದ್ರ ಸರ್ಕಾರ ಮೂರು ರೈತ‌ವಿರೋಧಿ ಕಾನೂನುಗಳನ್ನು ಜಾರಿಗೆ ತಂದಾಗ ದೇಶದ ಎಲ್ಲೆಡೆ ಪ್ರತಿಭಟನೆಗಳು ನಡೆದವು. ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತರು ನೆರೆದು ಒಂದು ವರ್ಷಕಾಲ ಸತತ ಹೋರಾಟ ಕೈಗೊಂಡರು. ದೆಹಲಿಯ ಎಎಪಿ ಸರ್ಕಾರ ರೈತರಿಗೆ ಎಲ್ಲ ಬಗೆಯ ಮಾನವೀಯ ನೆರವನ್ನೂ ನೀಡಿತು. ಕರಾಳಕಾಯ್ದೆಗಳ ವಿರುದ್ಧ ಅರವಿಂದ ಕೇಜ್ರಿವಾಲ್ ದೊಡ್ಡ ಧ್ವನಿಯಲ್ಲಿ ಮಾತನಾಡಿದರು. ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಿತು.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಯಾರೂ ಊಹಿಸದಷ್ಟು ಸ್ಥಾನಗಳನ್ನು ಗೆದ್ದು ಎಎಪಿ ಅಧಿಕಾರಕ್ಕೆ ಬಂದಿತು. ಕೇಜ್ರಿವಾಲ್ ಮ್ಯಾಜಿಕ್ ಪಂಜಾಬ್ ನಲ್ಲೂ ನಡೆದಿತ್ತು. ಭಗವಂತ್ ಮಾನ್ ಮುಖ್ಯಮಂತ್ರಿಯಾದರು. ಕೇಜ್ರಿವಾಲ್ ಕೇವಲ ದೆಹಲಿಗಷ್ಟೇ ಸೀಮಿತ, ಅಲ್ಲಿಂದ ಹೊರಗೆ ಬಂದು ಅವರೇನೂ ಮಾಡಲಾರರು ಎಂಬ ರಾಜಕೀಯ ಟೀಕಕಾರರ ಟೀಕೆಯೂ ಸುಳ್ಳಾಗಿ ಹೋಯಿತು. ದೇಶದ ಎಲ್ಲ ರಾಜ್ಯಗಳಲ್ಲೂ ಈಗ ಎಎಪಿ ಗರಿಗೆದರಿ ನಿಲ್ಲುತ್ತಿದೆ. ಹೊಸ ರಾಜಕೀಯ ಚರ್ಚೆಗಳು ನಡೆಯುತ್ತಿದೆ.

ಇವೆಲ್ಲದರ ನಡುವೆ ಏಪ್ರಿಲ್ 21 ರಂದು ಅರವಿಂದ ಕೇಜ್ರಿವಾಲ್ ಬೆಂಗಳೂರಿಗೆ ಬಂದು ರೈತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೊಂದು ಗೇಮ್ ಚೇಂಜರ್ ಆಗಲಿದೆಯೇ? ಕಾದು ನೋಡೋಣ.

– ಆದಿತ್ಯ
aravind kejriwal

Please follow and like us: