ಕೊಪ್ಪಳ : ಇವತ್ತು ಸೈದ್ದಾಂತಿಕ ನೆಲೆಗಿಂತ ಸಮಯಸಾಧಕ ನೆಲೆಯ ಕಾಲ. ಶ್ರೇಣಿಕೃತ ಸಮಾಜದಲ್ಲಿ ತುಳಿತಕ್ಕೊಳಗಾದವರು ಬದಲಾವಣೆಗೊಳಗಾಗುವುದೇ ಬಂಡಾಯ. ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಇಂದು ಭಾಗವಹಿಸಿರುವುದು ಸಹ ಒಂದು ಬಂಡಾಯವೇ. ಬಂಡಾಯಕ್ಕೊಂದು ದೊಡ್ಡ ಪರಂಪರೆಯೇ ಇದೆ. ಚಾರಿತ್ರಿಕತೆ ಇದೆ. ಚಾರಿತ್ರಿಕತೆ ಮರೆತರೆ ಸಮಕಾಲೀನತೆಗೆ ಅರ್ಥವಿಲ್ಲ. ಭೂತದ ಬೆಳಕಿನಲ್ಲಿ ವರ್ತಮಾನ ನೋಡಬೇಕು. ಭೂತ, ವರ್ತಮಾನಗಳ ವಿವೇಕದ ಬೆಳಕಿನಲ್ಲಿ ಭವಿಷ್ಯದ ಮುನ್ನೋಟ ಕಂಡುಕೊಳ್ಳಬೇಕು ಎಂದು ಹಿರಿಯ ಬಂಡಾಯ ಸಾಹಿತಿ,ಚಿಂತಕ ಬರಗೂರ ರಾಮಚಂದ್ರಪ್ಪ ಹೇಳಿದರು.
ಅವರು ಭಾಗ್ಯನಗರದ ಬಾಲಾಜಿ ಪಂಕ್ಷನ್ ಹಾಲ್ ನಲ್ಲಿ ನಡೆದ ತಿರುಳ್ಗನ್ನಡ ಸಾಹಿತಿಗಳ ಸಂಘ ಹಾಗೂ ಶಕ್ತಿ ಶಾರಧೆಯ ಮೇಳ ಭಾಗ್ಯನಗರ ಜಂಟಿಯಾಗಿ ಹಮ್ಮಿಕೊಂಡಿದ್ದ ಸಿ.ಬಿ.ಚಿಲ್ಕರಾಗಿಯವರ ಬೆಟ್ಟದೂರ ಅಲ್ಲಮ ಹಾಗೂ ಈಶ್ವರ ಹತ್ತಿಯವರು ಅನುವಾಧಿಸಿರುವ ಜಾರ್ಜ ಆರ್ವೆಲ್ ನ ಅನಿಮಲ್ ಫಾರ್ಮ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಮಾತುಗಳು ಮಲೀನವಾದ ಸಂದರ್ಭದಲ್ಲಿದ್ದೇವೆ. ಯಾವ ಮಾತುಗಳಲ್ಲಿ ಸಹಿಷ್ಣುತೆ, ಸೌಹಾರ್ಧತೆ ಇರಬೇಕಿತ್ತೋ ಅದು ಇಲ್ಲವಾದ ಮಾತುಗಳು ಮಲೀನಗೊಂಡ ಸಂದರ್ಭ ಇದು. ನಾಗ ನಾಲಿಗೆಗಳ ನವಭಾರತವಿದು. ಭಾಷಿಕ ಭ್ರಷ್ಟಾಚಾರ ನಡೆಯುತ್ತಿದೆ. ಬೀದಿ ಭಾರತ ಸ್ವಚ್ಛಗೊಳಿಸಲಾಗುತ್ತಿದೆ ಆದರೆ ಭಾವ ಭಾರತ ಮಲೀನಗೊಳ್ಳುತ್ತಿದೆ ಎಂದು ವಿಶಾದ ವ್ಯಕ್ತಪಡಿಸಿದರು. ಸಿ.ಬಿ.ಚಿಲ್ಕರಾಗಿಯವರ ಬೆಟ್ಟದೂರ ಅಲ್ಲಮ ಕುರಿತು ಮಾತನಾಡಿದರು.
ಈಶ್ವರ ಹತ್ತಿಯವರು ಅನುವಾಧಿಸಿರುವ ಜಾರ್ಜ ಆರ್ವೆಲ್ ನ ಅನಿಮಲ್ ಫಾರ್ಮ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ರಾಜ್ಯಸಭಾ ಸದಸ್ಯ ಹಿರಿಯ ಬಂಡಾಯಗಾರ ಡಾ.ಎಲ್ ಹನುಮಂತಯ್ಯ ಮಾತನಾಡಿ ಅನಿಮಲ್ ಫಾರ್ಮ ಸಾರ್ವಕಾಲಿಕ ಕೃತಿ. ಇದು ಎಲ್ಲ ಕಾಲಕ್ಕೂ ದೇಶಗಳಿಗೂ ಸಲ್ಲುವಂತದ್ದು. ಇದು ಎಲ್ಲ ಭಾಷೆಗಳಲ್ಲಿ ಅನುವಾದಗೊಳ್ಳಬೇಕು. ಕನ್ನಡಕ್ಕೆ ಈ ಪುಸ್ತಕ ತರುವ ಮೂಲಕ ಈಶ್ವರ ಹತ್ತಿಯವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇನ್ನಷ್ಟು ಕೃತಿಗಳನ್ನು ಅವರು ಕನ್ನಡಕ್ಕೆ ತರಲಿ ಎಂದು ಹಾರೈಸಿದರು.
ಇನ್ನೊರ್ವ ಅತಿಥಿಯಾಗಿದ್ದ ಉದ್ಯಮಿ ಶ್ರೀನಿವಾಸ ಗುಪ್ತಾ ಕೊಪ್ಪಳ ಜಿಲ್ಲೆಯಲ್ಲಿ ಸಾಹಿತ್ಯಿಕ ಬೆಳವಣಿಗೆ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದರು. ಪ್ರಾರ್ಥನ ಗೀತೆಯನ್ನು ಅನಸೂಯಾ ಜಾಗೀರದಾರ, ಪ್ರಾಸ್ತಾವಿಕವಾಗಿ ಡಿ.ಎಂ.ಬಡಿಗೇರ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿ.ಕಾ,ಬಡಿಗೇರ ನೆರವೇಸಿದರು. ವೇದಿಕೆಯ ಮೇಲೆ ಸಿ.ಬಿ.ಚಿಲ್ಕರಾಗಿ, ಅಲ್ಲಮಪ್ರಭು ಬೆಟ್ಟದೂರ, ಈಶ್ವರ ಹತ್ತಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಕಿರಿಯ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಚಿತ್ರಗಳು : ಅಮರದೀಪ್ ಪಿ.ಎಸ್.