ಈಶ್ವರ ಹತ್ತಿಯವರ ‘ಅನಿಮಲ್ ಫಾರ್ಮ್’ ನಾಳೆ ಲೋಕಾರ್ಪಣೆ – ಕೃತಿಯ ಕುರಿತ ಲೇಖನ

ಈಶ್ವರ ಹತ್ತಿಯವರ ‘ಅನಿಮಲ್ ಫಾರ್ಮ್’
(ದಿನಾಂಕ:-೧೭ ೦೪-೨೦೨೨ ರಂದು ಡಾ.ಎಲ್.ಹನುಮಂತಯ್ಯರವರಿಂದ
ಬಿಡುಗಡೆಗೊಳ್ಳಲಿರುವ ಈಕೃತಿಯ ನಿಮಿತ್ಯ ವಿಶೇಷ ಲೇಖನ)

“ಯಾವುದು ಎರಡು ಕಾಲಿನ ಮೇಲೆ ಚಲಿಸುವುದೋ ಅದೊಂದು ವೈರಿ, ಯಾವುದು ತನ್ನ ನಾಲ್ಕು ಕಾಲು ಇಲ್ಲವೇ ರೆಕ್ಕೆಗಳ ಮೇಲೆ ಚಲಿವುದೋ ಅದೊಂದು ಸ್ನೇಹಿತ, ಯಾವ ಪ್ರಾಣಿಯೂ ಬಟ್ಟೆ ಧರಿಸುವಂತಿಲ್ಲ, ಯಾವ ಪ್ರಾಣಿಯೂ ಹಾಸಿಗೆಯ ಮೇಲೆ ಮಲಗುವಂತಿಲ್ಲ, ಯಾವ ಪ್ರಾಣಿಯೂ ಮದ್ಯಪಾನ ಮಾಡುವಂತಿಲ್ಲ, ಯಾವ ಪ್ರಾಣಿಯೂ ಇನ್ನೊಂದು ಪ್ರಾಣಿಯನ್ನು ಹಿಂಸಿಸುವುದು ಇಲ್ಲವೇ ಕೊಲ್ಲುವಂತಿಲ್ಲ, ಎಲ್ಲ ಪ್ರಾಣಿಗಳು ಸರಿಸಮಾನವಾದವುಗಳು” ಎಂಬ ಏಳು ನಿರ್ದೇಶಿತ ಅನುಶಾಸನ ಆಜ್ಞಾಪಿತಗಳನ್ನು ಪ್ರಾಣಿಗಳೇ ತಮ್ಮ-ತಮ್ಮ ಮಧ್ಯ ಜಾರಿಗೊಳಿಸಿರುವುದನ್ನು ಗಮನಿಸಿದರೆ ಪ್ರಾಣಿ ಮತ್ತು ಮನುಷ್ಯನ ನಡುವಿರುವ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಪ್ರಾಣಿ-ಪ್ರಾಣಿಗಳ ಮಧ್ಯ ಸಮಾನತೆಗಾಗಿ ತಂದ ಅನುಶಾಸನಗಳನ್ನು ಮನಷ್ಯರಲ್ಲಿ ಹುಡುಕಾಡಬೇಕಿದೆ.ಮನುಷ್ಯನ ವೈಭೋಗದ ಜೀವನಕ್ಕೆ ಈ ತತ್ವಗಳು ಚುಚ್ಚಿದಂತೆ ಎನ್ನಬಹುದು.ಇಂತಹ ತತ್ವಗಳನ್ನು ಮನಷ್ಯರು ಪಾಲಿಸಲು ಸಾಧ್ಯವೇ ಎಂಬ ಅನುಮಾನ ಮೂಡುವುದು ಸಹಜ.ಈ ನಿರ್ದೇಶಿತ ಏಳು ತತ್ವಗಳನ್ನು ಇಂಗ್ಲೆಂಡಿನ ಜಾರ್ಜ್ ಆರ್ವೆಲ್‌ರವರ ‘ಅನಿಮಲ್ ಫಾರ್ಮ್’ ಎಂಬ ಕೃತಿಯಲ್ಲಿಜಾರಿಗೊಳಿಸಲಾಗಿದೆ.ಇದನ್ನುಕೊಪ್ಪಳದ ಶ್ರೀ ಈಶ್ವರ ಹತ್ತಿಯವರು ಕನ್ನಡಕ್ಕೆ ಯಥಾವತ್ತಾಗಿ ಅನುವಾದಿಸಿದ್ದಾರೆ.

‘ಜಾರ್ಜ್ ಆರ್ವೆಲ್’ ಮೂಲತಃ ಇಂಗ್ಲೇಂಡಿನಪತ್ರಕರ್ತರು.ಪ್ರಪಂಚದ ಶ್ರೇಷ್ಠ ಕಾದಂಬರಿಕಾರರಲ್ಲಿ ಇವರೂ ಒಬ್ಬರು ಎಂದು ಹೇಳಲಾಗುತ್ತಿದೆ.ಜಾರ್ಜ್ ಮೂಲತಃಇಂಗ್ಲೇಂಡಿನವರಾಗಿದ್ದರೂ ಜನಿಸಿದ್ದು ಮಾತ್ರ ಭಾರತದಲ್ಲೆ. ಇವರ ತಂದೆ ರಿಚರ್ಡ್ ವಾಮಸ್ಲೆಯವರು ಬ್ರಿಟಿಷ್ ಅವಧಿಯಲ್ಲಿ ಭಾರತದ ನಾಗರಿಕ ಸೇವೆಯಲ್ಲಿದ್ದವರು.ಹೀಗಾಗಿ ಜಾರ್ಜ್ರವರು ಭಾರತದಲ್ಲಿ ಜನಿಸಿದ್ದಾರೆ.ಭಾರತ, ಬರ್ಮಾ ಸೇರಿದಂತೆ ಕೆಲ ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಆ ಹುದ್ದೆಗಳಿಗೆ ರಾಜಿನಾಮೆ ನೀಡಿ ನಂತರ ತಮ್ಮನ್ನು ಬರವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ಡೌನ್ ಆಯಿಂಡ್ ಔಟ್ ಇನ್ ಪ್ಯಾರೀಸ್ ಆಯಿಂಡ್ ಲಂಡನ್ (DOWN AND OUT IN PARIS AND LONDON), ಬರ್ಮಾಸ್ ಡೇಸ್ (BARMESES DAYS), ನೈಂಟಿನ್ ಎಟಿಫೋರ್ (NINETEEN EIGHTY FOUR)ಹಾಗೂ ಅನಿಮಲ್ ಫಾರ್ಮ್ (ANIMAL FORM)ಎಂಬ ಕೃತಿಗಳನ್ನು ರಚಿಸುವುದರ ಮೂಲಕ ವಿಶ್ವಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದಾರೆ. ಅವುಗಳಲ್ಲಿ ‘ಅನಿಮಲ್ ಫಾರ್ಮ್’ ಎಂಬ ಕೃತಿಯು ಪ್ರಪಂಚದ ನೂರು ಶ್ರೇಷ್ಠ ಕಾದಂಬರಿಗಳಲ್ಲಿ ಇದೂ ಒಂದು ಎಂದು ಹೇಳಲಾಗುತ್ತಿದೆ.ಇಂತಹ ಶ್ರೇಷ್ಠ ಕಾದಂಬರಿಯನ್ನು ಮೊಟ್ಟಮೊದಲ ಬಾರಿಗೆ ಕನ್ನಡ ಭಾಷೆಗೆ ಅನುವಾದಿಸಿದ ಕೀರ್ತಿ ಕೊಪ್ಪಳದ ‘ಶ್ರೀ ಈಶ್ವರ ಹತ್ತಿ’ಯವರಿಗೆ ಸಲ್ಲುತ್ತದೆ. ಶ್ರೀ ಈಶ್ವರ ಹತ್ತಿಯವರು ಮೂಲತಃ ಕೊಪ್ಪಳ ತಾಲೂಕಿನ ಗುನ್ನಾಳ ಗ್ರಾಮದವರು.ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.ಸೇವೆಯ ಜೊತೆೆ ಜೊತೆಯಲ್ಲಿಹಾಗೂ ನಿವೃತ್ತಿಯ ನಂತರವೂ ಅವರ ಕನ್ನಡ ಸಾಹಿತ್ಯದ ಸೇವೆ ಅಪಾರವಾದದ್ದು.ಅಟ್ಟಣೆಕೆಗಳು ಹದಿನೆಂಟು, ಅಪೂರ್ಣ, ಕವೀಶ್ವರನ ತ್ರಿದಳಗಳು, ಶ್ರೀ ಶರಣಬಸವೇಶ ಕಾವ್ಯಂ, ಗುನ್ನಾಳೇಶನ ವಚನಗಳು, ಅಳ್ಳೊಳ್ಳಿ ಬಂತು ಕಳ್ಳೊಳ್ಳಿ ಎಂಬ ಮುಂತಾದ ಕೃತಿಗಳನ್ನು ಕನ್ನಡ ಸಾರಸತ್ವ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.ಅಲ್ಲದೆ ಮೂಲ ಬೆಂಗಾಲಿ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಅನುವಾದಿತ ಕೃತಿಯನ್ನು ಕನ್ನಡದಲ್ಲಿ ‘ದೇವಿ ಮತ್ತು ಇತರ ಕಥೆಗಳು’ ಎಂಬ ಹೆಸರಿನಲ್ಲಿ ಹಾಗೂ ಜಾರ್ಜ್ ಆರ್ವೆಲ್‌ರವರ‘ಅನಿಮಲ್ ಫಾರ್ಮ್’ ಎಂಬ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.ಅದರಲ್ಲಿ ಅನಿಮಲ್ ಫಾರ್ಮ್ ಎಂಬ ಕೃತಿಯು ಶ್ರೇಷ್ಠ ಕಾದಂಬರಿಗಳಲ್ಲೊಂದಾಗಿರುವುದರಿAದ ಕನ್ನಡಕ್ಕೆ ಅನುವಾದಿಸಿದ ಶ್ರೀ ಹತ್ತಿಯವರೂ ಶ್ರೇಷ್ಠರೆ ಎಂದು ಹೇಳಬಹುದು.

ಶ್ರೀ ಹತ್ತಿಯವರು ಸಾಹಿತ್ಯದ ಸೇವೆಯ ಜೊತೆಗೆ ರಂಗಕಲಾವಿದರೂ ಹೌದು.ಅನೇಕ ನಾಟಕ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.ಇಂತಹ ಮಹನೀಯರಿಂದ ‘ಜಾರ್ಜ್ ಆರ್ವೆಲ್’ರವರ ‘ಅನಿಮಲ್ ಫಾರ್ಮ್’ ಶ್ರೇಷ್ಠ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿರುವುದು ಯೋಗ್ಯವೇ ಆಗಿದೆ ಎಂದು ಹೇಳಬಹುದು.
ಪ್ರಾಣಿಗಳು ಮತ್ತು ಮನುಷ್ಯನ ನಡುವಿರುವ ಬಹುದೊಡ್ಡ ವ್ಯತ್ಯಾಸವೆಂದರೆ ಮಾತುಗಳು.ಪ್ರಾಣಿಗಳು ಮಾತನಾಡುವುದಿಲ್ಲ, ಅವು ಮೂಕ ಪ್ರಾಣಿಗಳು.ಮಾತನಾಡುವ ಸಂಸ್ಕೃತಿ ಕೇವಲ ಮನಷ್ಯನಿಗೆ ಮಾತ್ರವಿದೆ.ಆದರೆ ಈ ಕೃತಿಯಲ್ಲಿ ಪ್ರಾಣಿಗಳೂ ಮಾತನಾಡುವ ಕ್ರಿಯೆಯನ್ನು ನೀಡಲಾಗಿದೆ.ಆ ಪ್ರಾಣಿಗಳಲ್ಲಿರುವ ಭವಿಷ್ಯತ್ತಿನ ಚಿಂತನೆಗಳು, ಅವುಗಳ ಉದಾತ್ತ ಆಲೋಚನೆಗಳು ಮನುಷ್ಯನಿಗಿಂತಲೂ ಶ್ರೇಷ್ಠವಾದವುಗಳು ಎಂಬುದನ್ನು ಈ ಕೃತಿ ಅನಾವರಣ ಮಾಡುತ್ತದೆ.
“ನಾಲ್ಕು ಕಾಲಿನ ಪ್ರಾಣಿಗಳು ಶ್ರೇಷ್ಠ, ಎರಡು ಕಾಲಿನ ಮನುಷ್ಯ ಕನಿಷ್ಠ” ಎಂಬ ಧೋರಣೆಯು ಈ ಕೃತಿಯ ತುಂಬ ಕಾಣಬಹುದಾಗಿದೆ.ಇಂತಹ ಎರಡು ಕಾಲಿನ ಮನುಷ್ಯನಿಂದಾಗಿ ಪ್ರಾಣಿಗಳು ಅನುಭವಿಸುವ ಯಾತನೆಗಳನ್ನು ಲೇಖಕ ಶ್ರೀ ಹತ್ತಿಯವರು ಅನಿಮಲ್ ಫಾರ್ಮ್ದಲ್ಲಿಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಈ ಕೃತಿಯನ್ನು ಒಮ್ಮೆ ಓದಿದಾಗ ಇದೊಂದು ಪ್ರಾಣಿಗಳ ಕಥೆ; ಪ್ರಾಣಿಗಳ ಮಧ್ಯೆ ನಡೆಯುವ ಸಂಭಾಷಣೆಗಳ ಕಥಾನಕ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಇದು ವಾಸ್ತವದಲ್ಲಿ ಜಗತ್ತು ಕಂಡ ಕ್ರಾಂತಿಗಳ ಸ್ವರೂಪಗಳನ್ನು ಇದು ಅನಾವರಣ ಮಾಡುತ್ತದೆ. ಯುದ್ಧಗಳಲ್ಲಿ ಅನುಭವಿಸುವ ನೋವು, ಸಾವು, ಯಾತನೆಗಳ ಪರಿಣಾಮಗಳಿಗೆ ಇದೊಂದು ಕೈಗನ್ನಡಿಯಂತೆ ತೋರುತ್ತದೆ.ಇದರ ಮಧ್ಯ ಸ್ವತಃ ಪ್ರಜಾಪ್ರಭುತ್ವಕ್ಕೆನೆ ಅರಿವಾಗದಂತೆ ನಿರಂಕುಶ ಮತಿಗಳ ಮೊಂಡುತನಗಳು ಇಲ್ಲಿವೆ. ಆ ಮೊಂಡುತನಗಳಿಂದಲೇ ಮನುಷ್ಯರು ಅನುಭವಿಸಿದ ಯಾತನೆಗಳನ್ನು ಇಲ್ಲಿ ಪ್ರಾಣಿಗಳು ಅನುಭವಿಸಿದಂತೆ ಬಿಂಬಿಸಲಾಗಿದೆ.
ಈ ಕೃತಿಯನ್ನು ಹತ್ತಿಯವರು ಹತ್ತು ಭಾಗಗಳಲ್ಲಿ ವಿಸ್ತರಿಸುತ್ತಾ ಹೋಗಿದ್ದಾರೆ.ಪ್ರಾಣಿಗಳು ಪ್ರಾರಂಭದಲ್ಲಿ ಆರಂಭವಾದ ಯುದ್ಧದ ಪ್ರೇರಣೆ, ಉನ್ಮಾದತೆ ಕೊನೆಯವರೆಗೂ ಮುಂದುವರೆಯುತ್ತದೆ.ಆದರೆ ಅದರಲ್ಲಿ ಹೆಚ್ಚಿನ ಪರಿಣಾಮ ಬೀರದೆ ವ್ಯತಿರಿಕ್ತ ಪರಿಣಾಮಗಳನ್ನು ಇಲ್ಲಿ ಕಾಣಬಹುದಾಗಿದೆ.ಪ್ರಾಣಿಗಳು ಅನುಭವಿಸುವ ನೋವುಗಳು, ಯಾತನೆಗಳು ಇದರಲ್ಲಿ ಮನಕಲಕುವಂತೆ ಚಿತ್ರಿಸಲಾಗಿದೆ.
ಜಾರ್ಜ್ ಆರ್ವೆಲ್‌ರವರು ಪತ್ರಕರ್ತರು. ಮೇಲಾಗಿ ಪ್ರಪಂಚವನ್ನು ಸೂಕ್ಷ್ಮವಾಗಿ ಕಂಡವರು.ಪ್ರತಿಯೊಂದು ರಾಷ್ಟçಗಳು ಒಂದಲ್ಲಾ ಒಂದು ಕ್ರಾಂತಿಗಳನ್ನು ಕಂಡಿವೆ. ಬಿಡುಗಡೆಗಾಗಿ, ಬದುಕಲು, ದಬ್ಬಾಳಿಕೆಗಳನ್ನು ಮೆಟ್ಟಿ ನಿಲ್ಲಲು, ವಿವಿಧ ಬೇರೆ ಬೇರೆ ಕಾರಣಗಳಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ಕ್ರಾಂತಿಗಳನ್ನು ಮಾಡಿವೆ. ಅಂತಹ ಕ್ರಾಂತಿಗಳನ್ನು ಜಾರ್ಜ್ ಆರ್ವೆಲ್‌ರವರು ಈ ಅನಿಮಲ್ ಫಾರ್ಮ್ನಲ್ಲಿ ಪ್ರಾಣಿಗಳ ಮೂಲಕ ಹೇಳಿದಂತಿದೆ.
ಸತ್ಯ, ನ್ಯಾಯ, ನೀತಿ, ಧರ್ಮಸ್ಥಾಪನೆಗಾಗಿ ಪ್ರಾಣಿಗಳು ಭ್ರಷ್ಟಚಾರ, ದಬ್ಬಾಳಿಕೆ, ಅನ್ಯಾಯದ ವಿರುದ್ಧ ಸಿಡಿದೆದ್ದು ಹೋರಾಡುವ ರೀತಿ ಈ ಕೃತಿಯಲ್ಲಿ ವಿಭಿನ್ನವಾಗಿ ಕಂಡುಬರುತ್ತಿದೆ.ಅವು ಏನೇ ಹೊರಾಟ ಮಾಡಿದರೂ ಯಶಸ್ವಿ ಮಾತ್ರ ಕಾಣುವುದಿಲ್ಲ. ಮೇಲ್ನೊಟಕ್ಕೆ ಅವು ಯಶಸ್ವಿ ಕಂಡಂತೆ ಅಂದುಕೊAಡರೂ ಪ್ರತಿಫಲ ಮಾತ್ರ ಶೂನ್ಯ.ಏನೇ ಕಷ್ಟಪಟ್ಟು ದುಡಿದರೂ ತಿನ್ನುವುದಕ್ಕೆ ಸಾಲುವುದಿಲ್ಲ. ಮಲಗುವ ಸಮಯ ಬಿಟ್ಟರೆ ದುಡಿವುದು ಎಂಬಂತೆ ಇಲ್ಲಿ ಪ್ರಾಣಿಗಳನ್ನು ದುಡಿಸಿಕೊಳ್ಳಲಾಗುತ್ತದೆ.ಅದಕ್ಕೆ ಪ್ರತಿಯಾಗಿ ಪಡಿತರ ಇಲ್ಲವೇ ಯಾವುದೇ ಸೌಲಭ್ಯಗಳೂ ಸಹ ಸರಿಯಾಗಿ ದೊರೆಯುವುದಿಲ್ಲ. ಇದು ದುರಂತವೇ ಸರಿ.
ಜೋನ್ಸ್ನ ಕಪಿಮುಷ್ಠಿಯಲ್ಲಿ ‘ಮ್ಯಾನೋರ್ ಫಾರ್ಮ್’ ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಮೇಜರ ಸೇನಾನಿ ಎಂಬ ಹಂದಿ, ಬಾಕ್ಸರ್ ಎಂಬ ಕುದುರೆ, ಸ್ನೋವ್‌ಬಾಲ್ ಹಾಗೂ ನೆಪೋಲಿಯನ್ ಎಂಬ ಹಂದಿಗಳು ಹೀಗೆ ಮುಂತಾದ ಪ್ರಾಣಿ-ಪಕ್ಷಿಗಳು ಕತ್ತೆ ದುಡಿದಂತೆ ದುಡಿಯುತ್ತವೆ. ಸೇನಾನಿಯು ಆ ಪ್ರಾಣಿಗಳಲ್ಲಿ ಯುದ್ಧದ ಕಿಚ್ಚನ್ನು ಹಚ್ಚಿ ಸತ್ತು ಹೋಗುತ್ತದೆ.ಪರಿಣಾಮ ಎಂಬಂತೆ ಜೋನ್ಸ್ನ ವಿರುದ್ಧದ ಯುದ್ಧದಲ್ಲಿ ಹೋರಾಡಿ ಎಲ್ಲಾ ಪ್ರಾಣಿಗಳು ‘ಮ್ಯಾನೋರ್ ಫಾರ್ಮ್’ನಿಂದ ಹೊರಬಂದು ‘ಅನಿಮಲ್ ಫಾರ್ಮ್’ ಎಂಬ ಸ್ವತಂತ್ರ ರಾಜ್ಯವನ್ನು ಕಟ್ಟಿಕೊಳ್ಳುತ್ತವೆ. ಈ ರೀತಿ ಸ್ವತಂತ್ರ ರಾಜ್ಯವನ್ನು ಕಟ್ಟಿಕೊಂಡರೂ ಅವುಗಳಿಗೆ ಮೊದಲಿನ ಮ್ಯಾನೋರ್ ಫಾರ್ಮ್ಗಿಂತಲೂ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಆ ಫಾರ್ಮ್ದಲ್ಲಿ ಬ್ರಷ್ಟಾಚಾರ ದಬ್ಬಾಳಿಕೆಗಳು ಹೆಚ್ಚಾಗುತ್ತವೆ.ಕಾರಣ ನೆಪೊಲಿಯನ್ ಎಂಬ ನಿರಂಕುಶಮತಿ ಮತ್ತವರ ಚೇಲಾಗಳು ನಿಧಾನವಾಗಿ ಅಲ್ಲಿ ಆಡಳಿತವನ್ನು ನಡೆಸಲು ಪ್ರಾರಂಭಿಸುತ್ತಾರೆ.ಬಾಕ್ಸರ್ ಎಂಬ ಕುದುರೆ ನಿರಂತರವಾಗಿ ದುಡಿದರೂ ಸರಿಯಾದ ಪಡಿತರ ದೊರೆಯುವುದಿಲ್ಲ.ಅಲ್ಲದೇ ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾದರೂ ಸರಿಯಾದ ರೀತಿಯಲ್ಲಿ ಚಿಕಿತ್ಸೆಗಳು ದೊರೆಯುವುದಿಲ್ಲ. ನೆಪೊಲಿಯನ್ ಎಂಬ ಹಿಂಸಾತ್ಮಕ ಹಂದಿಯಿAದ ಅಲ್ಲಿ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಸ್ನೋವ್‌ಬಾಲ್ ಎಂಬ ಪ್ರಗತಿಪರ ಹಂದಿ ಮತ್ತು ಅವರ ಸಮಾನ ಮನಸ್ಕ ಹಂದಿಗಳನ್ನು ಕಟ್ಟಿಕೊಂಡು ಎಷ್ಟೇ ಕಷ್ಟಪಟ್ಟು ದುಡಿದರೂ ಸರಿಯಾದ ರೀತಿಯಲ್ಲಿ ಪಡಿತರ ಸಿಗುವುದಿಲ್ಲ. ಈ ಸ್ನೋವ್‌ಬಾಲ್‌ನು ಎಲ್ಲಾ ಪ್ರಾಣಿಗಳಿಗೆ ಶಿಕ್ಷಣ ದೊರೆಯಬೇಕು, ವಿಂಡ್‌ವಿಲ್ ಸ್ಥಾಪಿಸಿ ಆ ಮೂಲಕ ಪ್ರಾಣಿಗಳ ಬದುಕನ್ನು ಸರಿಯಾದ ಮಾರ್ಗದ ಕಡೆಗೆ ಕರೆದುಕೊಂಡು ಹೋಗಬೇಕೆಂಬ ಪ್ರಜಾಪ್ರಭುತ್ವದ ಕನಸು ಕೊನೆಯವರೆಗೂ ನನಸಾಗುವುದಿಲ್ಲ.ತನ್ನ ವಿಚಾರಗಳನ್ನು ಒಪ್ಪದ ಸ್ನೋವ್‌ಬಾಲ್‌ನನ್ನು ನೆಪೊಲಿಯನ್‌ನು ತಾನು ಸಾಕಿದ ದುಷ್ಟ ನಾಯಿಗಳಿಂದ ದಬ್ಬಾಳಿಕೆ ಮಾಡಿಸಿ ಅಲ್ಲಿಂದ ಓಡಿಸುತ್ತವೆ. ಅಲ್ಲಿಂದ ಕಥೆಯ ರೂಪವೇ ಬದಲಾಗುತ್ತದೆ.
ನೆಪೊಲಿಯನ್ ಎನ್ನುವ ಹಿಂಸಾತ್ಮಕ ರಾಜಕಾರಣದ ಗಂಡು ಹಂದಿಯು ಆ ಫಾರ್ಮ್ನಲ್ಲಿ ನಡೆಯುವ ಪ್ರತಿಯೊಂದು ದುರಂತಗಳನ್ನು ಓಡಿಹೋದ ಸ್ನೋವ್‌ಬಾಲ್‌ನ ಮೇಲೆ ಆರೋಪವನ್ನು ಹೊರಿಸಲಾಗುತ್ತದೆ. ಹೊಲ, ಬೆಳೆಗಳು, ತೋಟಗಳ ನಾಶ, ವಿಂಡ್‌ವಿಲ್ ಕಟ್ಟಡ ಎಲ್ಲವೂ ನಾಶವಾಗಿ ಹೋಗಿದ್ದು, ಕಟ್ಟಡಗಳ ಮಾಳಿಗೆಗಳು ಕಿಟಕಿ-ಬಾಗಿಲುಗಳು ತುಂಡಾಗಿದ್ದವು. ಇದೆಲ್ಲವೂ ಸ್ನೋವ್‌ಬಾಲ್‌ನು ಮಾಡಿದ ಪಾಪದ ಕೃತ್ಯ, ಸೇಡಿನ ವೈರತ್ವದಿಂದ ಈ ಕೃತ್ಯವನ್ನು ಮಾಡಿಸುತ್ತಿದ್ದಾನೆ. ಅವನಿಗೆ ಮರಣದಂಡನೆ ವಿಧಿಸಲಾಗುತ್ತದೆ.ಆ ಸ್ನೋವ್‌ಬಾಲ್‌ನನ್ನು ಹಿಡಿದುಕೊಟ್ಟವರಿಗೆ ಬಹುಮಾನ ಕೊಡುವುದಾಗಿ ನೆಪೊಲಿಯನ್‌ನು ಘೋಷಿಸುತ್ತಾನೆ. ನಿಜವಾಗಿ ಈ ದುರಂತಗಳನ್ನು ಯಾರೂ ಮಾಡಿಸುತ್ತಾರೆಯೋ ಎಂಬುದು ಮಾತ್ರ ನಿಗೂಢವಾಗಿ ಉಳಿಯುತ್ತದೆ.
ಪ್ರಾರಂಭದಲ್ಲಿ ಜಾರಿಗೆ ತಂದಂತಹ ತತ್ವ ಶಾಸನಗಳನ್ನು ಗಾಳಿಗೆ ತೂರಿಬಿಡಲಾಗುತ್ತದೆ. ಸ್ವತಃ ಪ್ರಾಣಿಗಳೇ ಆಜ್ಞಾಪಿತ ಶಾಸನಗಳನ್ನು ಮರೆತು ಗೊಂದಲಕ್ಕಿಡಾಗುವ ದುರಂತವನ್ನು ಕಾಣಬಹುದು.ಎಲ್ಲಾ ಆಜ್ಞಾಪಿತ ಶಾಸನಗಳು ಸಂಪೂರ್ಣ ವ್ಯತಿರಿಕ್ತ ಎಂಬಂತೆ ಭಾವಿಸಲಾಗುತ್ತದೆ.ಸ್ನೋವ್‌ಬಾಲ್‌ನ ಜೊತೆಯಲ್ಲಿ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬ ಆರೋಪದ ಮೇಲೆ ಪ್ರಾಣಿಗಳನ್ನು ಹತ್ಯೆಗೈಯಲಾಗುತ್ತದೆ.ಇಲ್ಲಿ ಎಂತಹ ನಿರಂಕುಶ ಪ್ರಭುತ್ವವನ್ನು ನಡೆಸಲಾಗುತ್ತದೆ ಎಂದರೆ ಕೋಳಿಗಳು ಸ್ನೋವ್‌ಬಾಲ್‌ನು ತಮ್ಮ ಕನಸಿನಲ್ಲಿ ಬಂದು ನೆಪೊಲಿಯನ್ ಆದೇಶಗಳನ್ನು ಧಿಕ್ಕರಿಸುವಂತೆ ಆದೇಶ ನೀಡಿತು ಎಂದು ತಪ್ಪೊಪ್ಪಿಗೆ ನೀಡುತ್ತವೆ. ಅದಕ್ಕೆ ಪ್ರತಿಕಾರವಾಗಿ ಆ ಎಲ್ಲಾ ಪ್ರಾಣಿಗಳನ್ನು ತುಂಡರಿಸಲಾಗುತ್ತದೆ.ಪ್ರಾಣಿಗಳು ಹಾಸಿಗೆಯ ಮೇಲೆ ಮಲಗುವುದು, ಒಂದಕ್ಕೊಂದು ಹಿಂಸಿಸುವುದು ಇಲ್ಲವೇ ಕೊಲ್ಲುವುದು ಪ್ರಾರಂಭವಾಯಿತು.ಫಾರ್ಮ್ನ ವ್ಯವಸ್ಥೆಯಲ್ಲಿ ಬುಡಮೇಲಾಯಿತು. ಹಳೆಯ ಜೋನ್ಸ್ನ ಫಾರ್ಮ್ ಎಷ್ಟೋ ಉತ್ತಮ ಎನ್ನುವಂತಾಯಿತು.
ಈ ಅನಿಮಲ್ ಫಾರ್ಮ್ನಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ ಪ್ರಪಂಚ ಕಂಡ ಕ್ರಾಂತಿಗಳನ್ನು ಒಮ್ಮೆ ಅವಲೋಕಿಸಬೇಕಿದೆ.ರಷ್ಯ, ಪ್ರಾನ್ಸ್, ತುರ್ಕಿ, ಅಮೇರಿಕ, ಭಾರತ ಮುಂತಾದ ರಾಷ್ಟçಗಳಲ್ಲಿ ಯಾವುದೋ ಕಾರಣಕ್ಕಾಗಿ ನಡೆದ ಕ್ರಾಂತಿಗಳು.ಇದರ ಜೊತೆಯಲ್ಲಿ ಮೊದಲನೆ ಮತ್ತು ಎರಡನೆ ಜಾಗತಿಕ ಯುದ್ಧಗಳನ್ನು ಸಹ ಒಮ್ಮೆ ಮೆಲಕು ಹಾಕಬೇಕಿದೆ.ಅವುಗಳ ಕಾರಣಗಳು ಮತ್ತು ವಿಶೇಷವಾಗಿ ಪರಿಣಾಮಗಳನ್ನು ಅವಲೋಕಿಸಿದಾಗ ಎದೆ ಝಲ್ಲೆನಿಸುತ್ತದೆ.ಅತಂಹ ಭಯಾನಕ ಕ್ರಾಂತಿಗಳನ್ನೇ ಜಾರ್ಜ್ ಆರ್ವೆಲ್‌ರವರು ತಮ್ಮ ‘ಅನಿಮಲ್ ಫಾರ್ಮ್’ ಎಂಬ ಈ ಕೃತಿಯಲ್ಲಿ ಪ್ರಾಣಿಗಳ ಮೂಲಕ ಹೇಳ ಹೊರಟಂತಿದೆ.
ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರಿಯ ನಿರಂಕುಶ ಆಡಳಿತ ಇವೆರಡರಲ್ಲಿ ಯಾವುದು ಹೆಚ್ಚು ಸೂಕ್ತ ಎಂಬುದು ಬಹುತೇಕ ದೇಶಗಳಿಗೆ ಮನವರಿಕೆ ಆಗಿದೆ.ಅರಸನನ್ನು ನಾವು ಪ್ರತ್ಯಕ್ಷ ದೇವರೆಂದು ನಂಬಿರುತ್ತೇವೆ. ಈ ಅರಸನು ಪ್ರಜಾಸತ್ತತೆಯನ್ನು ನೂಕಿ ಸರ್ವಾಧಿಕಾರಿಯಂತೆ ವರ್ತಿಸಿದಲ್ಲಿ ಪ್ರಜೆಗಳ ಪಾಡೇನು?ಅವರ ಬದುಕು ಉಳಿಯುವುದೇ?ಅಷ್ಟೆ ಅಲ್ಲ ಅವರೂ ಉಳಿಯುವರೇ ಎಂಬ ಪ್ರಶ್ನೆ ಉಂಟಾಗುತ್ತದೆ.ಇಂತಹ ಅರಸೊತ್ತಿಗೆಯ ನಿರಂಕುಶತ್ವವನ್ನು ಕಿತ್ತೊಗೆಯಲು ಸ್ವತಂತ್ರಕ್ಕಾಗಿ ನಡೆದ ಹೋರಾಟವೇ ಈ ಫಾರ್ಮ್ದಲ್ಲಿ ಪ್ರಾಣಿಗಳ ಮೂಲಕ ಜಾರ್ಜ್ರವರು ಹೇಳಿದ್ದಾರೆ. ನೆಪೊಲಿಯನ್ ನಿರಂಕುಶ ಮತಿಯು ಸಮಾನ ಮನಸ್ಕವುಳ್ಳವರನ್ನು ಕಟ್ಟಿಕೊಂಡು ಮೇಲೆ ಪ್ರಜಾಪ್ರಭುತ್ವದ ಸೋಗು ಹಾಕಿ ಅಧಿಕಾರ ನಡೆಸುತ್ತಾನೆ. ಆ ಮೂಲಕ ಪ್ರಭುತ್ವದ ದಬ್ಬಾಳಿಕೆ, ಮೌಲ್ಯಗಳ ಅಧಃಪತನ, ಭ್ರಷ್ಟಾಚಾರ, ಅಸಮಾನತೆ, ಅನ್ಯಾಯದ ಆಡಳಿತ ನಡೆಸುತ್ತಾನೆ. ಅದನ್ನು ವಿರೋಧಿಸುವ ಸ್ನೋವ್‌ಬಾಲ್ ಎಂಬ ಪ್ರಗತಿಪರ ಚಿಂತಕರನ್ನು ಅಲ್ಲಿಂದ ಓಡಿಸುತ್ತಾನೆ.
ಒಂದು ಕೃತಿಯನ್ನು ಹೀಗೂ ನೋಡಬಹುದೇ ಎಂಬ ಪ್ರಶ್ನೆ ಉಂಟಾಗುತ್ತದೆ.ಜಾರ್ಜ್ರವರ ಅನಿಮಲ್ ಫಾರ್ಮ್ ಕೃತಿಯನ್ನು ಕೇವಲ ಪ್ರಾಣಿಗಳ ಮಧ್ಯ ನಡೆಯುವ ಸಂಭಾಷಣೆ ಇಲ್ಲವೇ ಘರ್ಷಣೆ ಎಂದುಕೊAಡಿದ್ದರೆ ಅದು ಅಷ್ಟಕ್ಕೆ ಸೀಮಿತವಾಗುತ್ತಿತ್ತೇನೋ ಎನಿಸುತ್ತದೆ. ಅಲ್ಲಿ ನಡೆಯುವ ಪ್ರತಿಯೊಂದು ಘಟನಾವಳಿಗಳನ್ನು ವಾಸ್ತವದಲ್ಲಿ ನೋಡಲಾಗಿದೆ.ಅದು ವಿಶೇಷವಾಗಿ ಕ್ರಾಂತಿಗಳ ಸಂದರ್ಭದಲ್ಲಿ ಮತ್ತು ನಂತರದ ಘಟನಾವಳಿಗೆ ಹೋಲಿಸಲಾಗಿದೆ.ಸ್ವಾತಂತ್ರಕ್ಕಾಗಿ ಇಲ್ಲವೆ ಪ್ರಜಾಪಭುತ್ವ ಸ್ಥಾಪನೆಗಾಗಿ ಹೋರಾಟ ಮಾಡುವ ಸ್ನೋವ್‌ಬಾಲ್‌ನ ಗೆಳೆಯರು ಮತ್ತವರ ಪ್ರಗತಿಪರ ಚಿಂತನೆಗಳು ಒಂದುಕಡೆಯಾದರೆ ಪ್ರಭುತ್ವವನ್ನು ದಮನಮಾಡಿ ಕೇಂದ್ರಿಕೃತ ಆಡಳಿತ ನಡೆಸಲು ನೆಪೊಲಿಯನ್ ಮತ್ತವರ ಹಿಂಸಾತ್ಮಕ ನಡವಳಿಕೆಗಳು ಇನ್ನೊಂದು ಕಡೆ.ಮಧ್ಯದಲ್ಲಿ ನಲುಗಿ ಹೋಗುವ ಇಲ್ಲವೆ ಸತ್ತು ಹೋಗುವ ಪ್ರಜೆಗಳ ಪಾತ್ರಗಳನ್ನು ಇಲ್ಲಿ ಪ್ರಾಣಿಗಳಿಗೆ ನೀಡಲಾಗಿದೆ.
ಹೀಗೆಶ್ರೀ ಈಶ್ವರ ಹತ್ತಿಯವರುಜಾರ್ಜ್ ಆರ್ವೆಲ್‌ರವರ ‘ಅನಿಮಲ್ ಫಾರ್ಮ್’ ಎಂಬ ಮೂಲ ಕೃತಿಗೆಎಲ್ಲಿಯೂ ಲೋಪವಾಗದಂತೆ ಅನುವಾದಿಸಿದ್ದಾರೆ.ಪರಭಾಷೆಯ ಶ್ರೇಷ್ಠ ಕಾವ್ಯ, ಕಥೆ-ಕಾದಂಬರಿಗಳನ್ನು ಅನುವಾದಿಸುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.ಅಂತಹ ಜಾಗರೂಕ ಕೆಲಸವನ್ನು ಶ್ರೀ ಹತ್ತಿಯವರು ಮಾಡಿದ್ದಾರೆ.ಇಂಗ್ಲೀಷನಿAದ ಕನ್ನಡ ಭಾಷೆಗೆ ಅನುವಾದಿಸುವ ಕೆಲವೇ ಕೆಲವು ಕನ್ನಡ ಲೇಖಕರಲ್ಲಿ ಶ್ರೀ ಈಶ್ವರ ಹತ್ತಿಯವರೂ ಒಬ್ಬರು ಎಂದು ಹೇಳಬಹುದು.

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊ ಸಂ : ೯೪೪೮೫೭೦೩೪೦
Email:-skotnekal@gmail.com

Please follow and like us: