ಕಂದಕೂರಗೆ ಪ್ರತಿಷ್ಠಿತ ಫೋಟೋಗ್ರಫಿಕ್ ಸೊಸೈಟಿ ಆಫ್ ಸಿಂಗಪೂರದ ಚಿನ್ನದ ಪದಕ

ವಾಟರ್ ವಾರ್’ಗೆ ಮತ್ತೊಂದು ಅಂತರಾಷ್ಟ್ರೀಯ ಪ್ರಶಸ್ತಿ ಗರಿ
Kannadanet
ಕೊಪ್ಪಳ: ರಿಪಬ್ಲಿಕ್ ಆಫ್ ಸಿಂಗಪೂರದಲ್ಲಿ ನಡೆದ ಪ್ರತಿಷ್ಠಿತ 7ನೇ ಲಯನ್ ಸಿಟಿ ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ-2022 ರಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಫೋಟೋಗ್ರಫಿಕ್ ಸೊಸೈಟಿ ಆಫ್ ಸಿಂಗಪೂರದ ಚಿನ್ನದ ಪದಕ (PSS Gold Medal) ಪಡೆದುಕೊಂಡಿದ್ದಾರೆ.

ಸ್ಪರ್ಧೆಯ ಜೀವನ (LIFE) ಎಂಬ ವಿಭಾಗದಲ್ಲಿ ಕಂದಕೂರರ `ವಾಟರ್‍ವಾರ್’ ಶೀರ್ಷಿಕೆಯ ಚಿತ್ರ ಈ ಪ್ರಶಸ್ತಿ ಪಡೆದುಕೊಂಡಿದೆ. ಉತ್ತರ ಕರ್ನಾಟಕ ಭಾಗದ ನೀರಿನ ಸಮಸ್ಯೆಯನ್ನು ಪ್ರತಿಬಿಂಬಿಸುವಂತಿರುವ ಈ ಚಿತ್ರವನ್ನು ಸವದತ್ತಿಯ ಎಲ್ಲಮ್ಮನ ಜಾತ್ರೆ ಸಂದರ್ಭದಲ್ಲಿ ಸೆರೆಹಿಡಿಯಲಾಗಿತ್ತು. ಈವರೆಗೆ ಸುಮಾರು 5 ರಾಷ್ಟ್ರ ಹಾಗೂ 3 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಚಿತ್ರ ಪಡೆದುಕೊಂಡಿದೆ. ಪ್ರಸ್ತುತ ಪ್ರತಿಷ್ಠಿತ ಪ್ರಶಸ್ತಿಯೂ ಬಂದಿರುವುದು ವಿಶೇಷ.

ಇಂಟರ್‍ನ್ಯಾಷನಲ್ ಅಸೋಸಿಯೇಷನ್ ಆಫ್ ಆರ್ಟ್ ಫೋಟೋಗ್ರಾಫರ್ಸ್, ಫೆಡರೇಷನ್ ಆಫ್ ಇಂಟರ್‍ನ್ಯಾಷನಲ್ ಆರ್ಟ್ ಫೋಟೋಗ್ರಫಿ, ಫೋಟೋಗ್ರಫಿಕ್ ಸೊಸೈಟಿ ಆಫ್ ಅಮೇರಿಕಾ ಹಾಗೂ ಗ್ಲೋಬಲ್ ಫೋಟೋಗ್ರಫಿಕ್ ಯೂನಿಯನ್ ಸಹಯೋಗದಲ್ಲಿ ದಿ ಫೋಟೋಗ್ರಫಿಕ್ ಸೊಸೈಟಿ ಆಫ್ ಸಿಂಗಪೂರ ಪ್ರತಿವರ್ಷ ಈ ಸ್ಪರ್ಧೆ ಏರ್ಪಡಿಸುತ್ತದೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಏಷಿಯಾದಲ್ಲೇ ಪ್ರತಿಷ್ಠಿತ ಸ್ಪರ್ಧೆ ಇದಾಗಿದ್ದು, ಅತ್ಯಂತ ಕಠಿಣ ಸ್ಪರ್ಧೆ ಎಂದೇ ಹೆಸರುವಾಸಿಯಾಗಿದೆ.

ಅಂತರಾಷ್ಟ್ರೀಯ ತೀರ್ಪುಗಾರರಾದ ಚೀನಾದ ಗು ವೋ ಜಿಂಗ್, ಸಿಂಗಪೂರದ ಲಿಮ್ ಚು ಟೇಯಿಕ್, ಗೋ ಲಾಯ್ ಟಿನ್ ಲೈಫ್ ವಿಭಾಗದ ತೀರ್ಪುಗಾರರಾಗಿದ್ದರು. ಸಿಂಗಪೂರದ ಸೆಲೆಗಿ ಆರ್ಟ್ ಸೆಂಟರ್‍ನಲ್ಲಿ ಮೇ.7 ರಂದು ಪ್ರಶಸ್ತಿ ವಿತರಣೆ ಹಾಗೂ ಛಾಯಾಚಿತ್ರಗಳ ಪ್ರದರ್ಶನದ ಉದ್ಘಾಟನೆ ಸಮಾರಂಭ ನಡೆಯಲಿದೆ. ಮೇ.11ರ ವರೆಗೆ ಒಟ್ಟು 5 ದಿನಗಳ ಕಾಲ ಛಾಯಾಚಿತ್ರಗಳ ಪ್ರದರ್ಶನ ಸಹ ನಡೆಯಲಿದೆ ಎಂದು ಸೊಸೈಟಿಯ ಅಧ್ಯಕ್ಷ ಜಾಕ್ ಗೋಹ್ ತಿಳಿಸಿದ್ದಾರೆ.