ರಂಗಕರ್ಮಿ ಐ.ಡಿ.ಬಾಬುರವರಿಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಲಿ

ಕನ್ನಡನೆಟ್ : ನಾಡಿನ ಸಂಗೀತ , ರಂಗಭೂಮಿ ಕ್ಷೇತ್ರಕ್ಕೆ ಇಡೀ ಬದುಕನ್ನೇ ಮುಡುಪಾಗಿರಿಸಿದ ನಾಡು ಸದಾ ಸ್ಮರಿಸುವಂತ ಸೇವೆ ಸಲ್ಲಿಸಿದ ಕುಷ್ಟಗಿ ಯ ದಿವಂಗತ ಐ.ಡಿ.ಬಾಬು ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಸರ್ಕಾರದಿಂದ ನಡೆಯಲಿಲ್ಲ ‘ ಎಂದು ನಿಸರ್ಗ ಸಂಗೀತ ಪಾಠಶಾಲೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ ವಿಷಾಧ ವ್ಯಕ್ತಪಡಿಸಿದರು . ಇತ್ತೀಚಿಗೆ ನಿಧನರಾದ ಸಂಗೀತ ಕಲಾವಿದ ದಿ.ಐ.ಡಿ.ಬಾಬು ಅವರಿಗೆ ನುಡಿ ನಮನ ‘ ಸಲ್ಲಿಸಲು ಪಟ್ಟಣದ ಶ್ರೀನಿಧಿ ಸಂಗೀತ ಪಾಠಶಾಲೆ ವತಿಯಿಂದ ಸಂತೆಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು . ವಾದಕ ಹಾರ್ಮೋನಿಯಂ ರಂಗಕರ್ಮಿ , ಹಾಡುಗಾರ ಹೀಗೆ ಸಂಗೀತ ಕ್ಷೇತ್ರದ ಏಳಿಗೆಗೆ ಬಾಬು ಅವರು ನೀಡಿದ ಕೊಡುಗೆಗೆ ಬೆಲೆಕಟ್ಟಲಾಗದು . ಈಗಲಾದರೂ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ಘೋಷಿಸುವ ಮೂಲಕ ಈ ಹಿರಿಯ ಸಂಗೀತ ಕಲಾವಿದನಿಗೆ ಗೌರವ ಸಲ್ಲಿಸಬೇಕು. ಈ ಭಾಗದ ಸಂಗೀತಗಾರರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿಸಬಾರದು ಎಂದು ಹೇಳಿದರು.

ಇಳಕಲ್‌ದ ಶಿವರಂಜನಿ ಸಂಗೀತ ಪಾಠ ಶಾಲೆಯ ಅಧ್ಯಕ್ಷ ಪ್ರಭುಸ್ವಾಮಿ ಬನ್ನಿಗೋಳಮಠ ಮಾತನಾಡಿದರು . ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಯ್ಯ ಕೆಂಪಾಪೂರಮಠ , ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಪ್ರತಿನಿಧಿ ನಬಿಸಾಬ್‌ ಕುಷ್ಟಗಿ ಇತರರು ಅವರ ಸೇವೆಯನ್ನು ಸ್ಮರಿಸಿದರು . ಪ್ರಾರಂಭದಲ್ಲಿ ಐ.ಡಿ. ಬಾಬು ಅವರ ಭಾವಚಿತ್ರಕ್ಕೆ ಖಾಸಿಂಬಿ ಐ.ಡಿ.ಬಾಬ ಪುಷ್ಪಾರ್ಪಣೆ ಮಾಡಿದರು.

ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು . ಶ್ರೀನಿಧಿ ಸಂಗೀತ ಪಾಠ ಶಾಲೆಯ ಅಧ್ಯಕ್ಷ ಉಮೇಶ ನವಲಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು . ಮೋಹನಲಾಲ ಜೈನ್ , ಕಂದಕೂರಪ್ಪ ವಾಲ್ಮೀಕಿ , ಇಮಾಮಸಾಬ್ ಗರಡಿಮನಿ , ಹನಮಂತಪ್ಪ ಚೌಡಿ , ಮೀನಾಕ್ಷಿ ಜೋಶಿ , ಬಸವರಾಜ ಉಪ್ಪಲದಿನ್ನಿ , ಸೈಯದ್ ನದಾಫ್ , ಶುಕಮುನಿ ಗಡಗಿ ಇತರರು ಇದ್ದರು . ಗಿರೀಶ ದಿವಾನಜಿ ನಿರೂಪಿಸಿದರು . ನಂತರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ಸಂಗೀತ ಸೇವೆ ಪ್ರಸ್ತುತಪಡಿಸಿದರು . ಇಡೀ ಕುಷ್ಟಗಿಯ ಜನತೆ ಈ ಮೂಲಕ ಹಿರಿಯ ಕಲಾವಿದರಿಗೆ ಗೌರವ ಅರ್ಪಿಸಿದರು.

Please follow and like us: