
ಬೆಂಗಳೂರು:
ಪತ್ರಕರ್ತರಿಗೆ ಕೊಡುವ ಮಾನ್ಯತಾ (accreditation) ಕಾರ್ಡ್ ನಲ್ಲಿ ಕೆಲವು ಕಡೆ ಆಗಿರುವ ಲೋಪವನ್ನು ಕೂಡಲೇ ಸರಿಪಡಿಸಿ ಹಿಂದಿನ ಮಾದರಿಯಲ್ಲಿ ಕಾರ್ಡ್ ಕೊಡಲು ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಆದೇಶಿಸಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದ ಅಧ್ಯಕ್ಷ ಶಿವಾನಂದ ತಗಡೂರು ಅವರು ವಾರ್ತಾ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿ, ಅಕ್ರಿಡಿಟೇಶನ್ ಕಾರ್ಡ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಆಗಿರುವ ಲೋಪವನ್ನು ಗಮನಕ್ಕೆ ತಂದಿದ್ದರು.
ಪತ್ರಕರ್ತರಿಗೆ ನೀಡುವ ಮಾನ್ಯತಾ ಕಾರ್ಡ್ ಎಲ್ಲರಿಗೂ ಒಂದೇ ಮಾದರಿಯಲ್ಲಿ ಇರುತಿತ್ತು. ಆದರೆ, ಈ ಬಾರಿ ಕೆಲ ಕಾರ್ಡನ್ನು ಜಿಲ್ಲೆಗೆ ಮಾತ್ರ ಸೀಮಿತ ಮಾಡಿರುವ ಲೋಪದ ಬಗ್ಗೆ ಕೆಯುಡಬ್ಲ್ಯೂಜೆ ಗಮನಸೆಳೆದಿತ್ತು. ಈ ಬಗ್ಗೆ ಕೆಲ ಜಿಲ್ಲೆಗಳಿಂದ ಬಂದಿರುವ ದೂರುಗಳನ್ನು ಆಯುಕ್ತರ ಗಮನಕ್ಕೆ ತರಲಾಗಿತ್ತು. ಸರಿಪಡಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಕೆಯುಡಬ್ಲ್ಯೂಜೆ ಎಚ್ಚರಿಕೆ ನೀಡಿತ್ತು.
ಲೋಪಗಳಿರುವ ಕಾರ್ಡ್ ಗಳನ್ನು ವಾಪಸ್ಸು ಪಡೆದುಕೊಳ್ಳುವಂತೆ ಜಿಲ್ಲಾ ವಾರ್ತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಯುಕ್ತರಾದ ಡಾ.ಹರ್ಷ ಅವರು ತಿಳಿಸಿದ್ದಾರೆ.