ಕೊಪ್ಪಳ : ತುಂಗಭದ್ರಾ ಜಲಾಶಯದ ಪವರಹೌಸಿನ ಸಮೀಪ ಕಾಲುವೆಯ ಅಂಡರ್ ಟನಲ್ ನಲ್ಲಿ ಅವಘಡ ಸಂಭವಿಸಿದ್ದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಕಾಲುವೆ ಮೇಲಿದ್ದ ಬೃಹತ್ ಮರ ನೀರಿನ ರಭಸಕ್ಕೆ ಬುಡಸಮೇತ ಕಿತ್ತು ಹೋಗಿರುವುದರಿಂದ ನೀರು ರಿವರ್ಸ್ ಆಗಿ ಬರುತ್ತಿದೆ. ಕಾಲುವೆ ಕೆಳಗಿನ ಅಂಡರ್ ಟನಲ್ ಒಡೆದಿದೆ ಎಂದು ಹೇಳಲಾಗುತ್ಯಿದೆ. ಇದು ದೊಡ್ಡ ಅನಾಹುತವೇ ಆಗಿದ್ದು ಇದರ ದುರಸ್ತಿಗೆ ಕನಿಷ್ಠ ಎಂದರೂ ಒಂದು ವಾರ ಸಮಯ ಬೇಕು. ಈಗ ಎಡದಂಡೆ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇನ್ನೇನು ಬೆಳೆ ಕೈಗೆ ಬಂತು ಎಂದು ಕಾದು ಕುಳಿತಿರುವ ರೈತರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದಾಜು ೪ ಸಾವಿರ ಕೋಟಿಯ ಭತ್ತದ ಬೆಳೆ ಬೆಳೆದಿರುವ ರೈತನಿಗೆ ಈಗ ಕೊನೆಯ ಹಂತದಲ್ಲಿ ನೀರು ಬೇಕಿದೆ. ಆದರೆ ಒಂದು ವಾರಕಾಲ ಎಡದಂಡೆಗೆ ನೀರು ಹರಿಸುವುದನ್ನು ನಿಲ್ಲಿಸಿದರೆ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ.

ಎರಡು ಮೂರು ದಿನಗಳ ಹಿಂದೆಯೇ ಲೀಕೇಜ್ ಜಾಸ್ತಿ ಇದೆ ನೋಡಿ ಅಂತಾ ಸ್ಥಳೀಯ ರೈತರು ಹೇಳಿದ್ದಾರೆ. ಆದರೆ ಅದರ ಬಗ್ಗೆ ಕಾಳಜಿ ವಹಿಸದೇ ಅಧಿಕಾರಿಗಳು ಸಣ್ಣ ಲೀಕೇಜ್ ಎಂದು ನಿರ್ಲಕ್ಯ ವಹಿಸಿದ್ದಾರೆ. ನಿನ್ನೆ ರಾತ್ರಿಯಿಂದ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು ೨೦ ಮೀಟರ್ ಗೂ ಅಗಲವಾಗಿ ಒಡೆದು ಹೋಗಿದೆ. ಇದರಿಂದ ಭೋರೋಕಾ ಪವರತನಕ ಇರುವ ನೀರು ಈಗ ರಿವರ್ಸ್ ಆಗಿ ಬರುತ್ತಿದೆ. ಅನಿವಾರ್ಯವಾಗಿ ಎಡದಂಡೆ ಕಾಲುವೆಗೆ ನೀರು ಬಂದ್ ಮಾಡಿದ್ದಾರೆ. ಇಂತಹ ಅವಘಡ ಕ್ಕೆ ಕಾರಣವಾಗಿರುವ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು, ಇಂಜಿನಿಯರ್ ಗಳ ಮೇಲೆ ಕ್ರಮ ವಹಿಸಬೇಕು ಶೀಘ್ರವೇ ದುರಸ್ತಿ ಮಾಡಬೇಕು ಬೆಳೆ ಉಳಿಸಿಕೊಡಬೇಕು ಎನ್ನುವುದು ರೈತರ ಅಳಲಾಗಿದೆ.
