ಶಿಕ್ಷಣ ಕ್ಷೇತ್ರಕ್ಕೆ ಆಚಾರ ಅವರ ಕುಟುಂಬದ ಕೊಡುಗೆ ಶ್ಲಾಘನೀಯ: ಸಂಸದ ಸಂಗಣ್ಣ ಕರಡಿ

: ಶಿಕ್ಷಣ ಪ್ರೇಮಿ, ವಿಶಾಲ ಹೃದಯಿ ಹಾಲಪ್ಪ ಆಚಾರ ಅವರ ಕುಟುಂಬವು ಅಂದಿನ ದಿನಗಳಲ್ಲಿ ಶಾಲೆಗಾಗಿ ನೀಡಿದ್ದ ಭೂಮಿಯ ಕೊಡುಗೆಯಿಂದಾಗಿ ಸರ್ಕಾರಿ ಶಾಲೆಯು ಇಂದು ವಿಶ್ವವಿದ್ಯಾಲಯವನ್ನು ಹೋಲುವ ರೀತಿ ಬೆಳೆದು ನಿಂತಿದ್ದು, ಶಿಕ್ಷಣ ಕ್ಷೇತ್ರಕ್ಕೆ ಆಚಾರ ಅವರ ಕುಟುಂಬದ ಕೊಡುಗೆ ಶ್ಲಾಘನೀಯವಾದದ್ದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಮಸಬಹಂಚಿನಾಳ ಗ್ರಾಮದ ಶ್ರೀಮತಿ ಗೌರಮ್ಮ ಬಸಪ್ಪ ಆಚಾರ್ ಸರ್ಕಾರಿ ಪ್ರೌಢಶಾಲೆಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಆಯೋಜಿಸಿದ್ದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಸಬಹಂಚಿನಾಳ ಗ್ರಾಮದ ಪ್ರೌಢಶಾಲೆಗೆ 1996 ರಲ್ಲಿ ಹಾಲಪ್ಪ ಆಚಾರ್ ಅವರ ಪೋಷಕರು 3.27 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಇವರ ಆಡಳಿತದಲ್ಲಿ ಖಾಸಗಿ ಶಾಲೆಗಳಿಗೆ ಮಾದರಿಯಾಗುವಂತೆ ಈ ಸರ್ಕಾರಿ ಶಾಲೆಯನ್ನು ವಿನೂತನ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಈ ಶಾಲೆಯು ಮುಖ್ಯೋಪಾಧ್ಯಾಯರ ಮತ್ತು ಶಿಕ್ಷಕರ ಅತ್ಯಾಧುನಿಕ ಸುಸಜ್ಜಿತ ಕೊಠಡಿಗಳು, ಅಧುನಿಕ ಪ್ರಯೋಗಾಲಯ, ಗ್ರಂಥಾಲಯ, ಉತ್ತಮ ಗುಣಮಟ್ಟದ ಭೋಜನ ಕೊಠಡಿ, ಶೌಚಾಲಯ, ವಿಶಾಲ ಆಟದ ಮೈದಾನ ಹೊಂದಿದೆ. ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣಾಭಿವೃದ್ಧಿಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 153 ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಅದರಲ್ಲಿ ಈ ಶಾಲೆ ರಾಜ್ಯದಲ್ಲಿಯೇ ಮಾದರಿಯಾಗುವಂತೆ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ, ಗ್ರಾಮದಲ್ಲಿ ಇಂತಹ ಶಾಲೆಗಳು ಇರುವುದರಿಂದ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ತುಂಬಾ ಸಹಕಾರಿಯಾಗುತ್ತದೆ ಮತ್ತು ಇಷ್ಟೊಂದು ಸೌಲಭ್ಯ ಹೊಂದಿರುವ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ದಿನನಿತ್ಯ ಪಠ್ಯದೊಂದಿಗೆ ಶಾಲೆಯಲ್ಲಿ ಲಭ್ಯವಿರುವ ಗ್ರಂಥಾಲಯ, ಪ್ರಯೋಗಾಲಯ ಬಳಸಿಕೊಂಡು ಹೆಚ್ಚಿನ ಜ್ಞಾನವನ್ನು ಪಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಮಂಗೇಶ ಬೆಂಡೆ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತಿ ಸಿಇಒ ಬಿ. ಫೌಜಿಯಾ ತರನ್ನುಮ್ ಮತ್ತು ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.

Please follow and like us: