ಅಂಚೆ ಇಲಾಖೆಯಲ್ಲಿ ಸೇವಾ ಮನೋಭಾವನೆಯನ್ನು ಕಾಣುತ್ತೇವೆ: ಸಂಗಣ್ಣ ಕರಡಿ

Koppal NEWS: ಅಂಚೆ ಇಲಾಖೆಯಲ್ಲಿ ಇತರೆ ಇಲಾಖೆಗಳಿಗೆ ಹೋಲಿಸಿದರೆ ಭ್ರಷ್ಟಾಚಾರ ರಹಿತ ಸೇವಾ ಮನೋಭಾವನೆಯನ್ನು ಕಾಣುತ್ತೇವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಬುಧವಾರದಂದು ಜಿಲ್ಲಾಡಳಿತ ಭವನದಲ್ಲಿ ಉಪ ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಚೆ ಇಲಾಖೆಯು ದೇಶದಲ್ಲಿಯೇ ದೊಡ್ಡ ಇಲಾಖೆಯಾಗಿದ್ದು, ರೈಲ್ವೇ ಇಲಾಖೆಯ ನಂತರ ಬರುವ ಇಲಾಖೆ ಎಂದರೆ ತಪ್ಪಾಗಲಾರದು. ಗ್ರಾಮೀಣ ಭಾಗದಲ್ಲಿ ಇದು ಉತ್ತಮ ಸೇವೆಯನ್ನು ನೀಡುತ್ತಿದೆ. ನಮ್ಮ ದೇಶದಲ್ಲಿ 1,55,618 ಅಂಚೆ ಕಚೇರಿಗಳಿವೆ. ಇದರ ವಿಭಾಗವನ್ನು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ತೆರೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದಾಗ ಅವರು ಇದಕ್ಕೆ ಅವಕಾಶ ಮಾಡಿಕೊಟ್ಟರು. ಹಾಗಾಗಿ ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಿಲ್ಲಾಡಳಿತ ಭವನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅವರಿಗೂ ಮತ್ತು ಇಲ್ಲಿರುವ ವಿವಿಧ ಇಲಾಖೆಗಳಿಗೂ ಅನುಕೂಲವಾಗಲಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಅಂಚೆ ಕಚೇರಿಗಳನ್ನು ಬ್ಯಾಂಕುಗಳನ್ನಾಗಿ ಪರಿವರ್ತಿಸಿದ್ದು, ಈ ಮೂಲಕ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ, ಅಂಚೆ ಕಚೇರಿ ಸ್ಥಾಪಿಸಲು ಸಂಸದರು ಹೆಚ್ಚಿನ ಮುತುವರ್ಜಿ ವಹಿಸಿದ ಕಾರಣ ಇಲ್ಲಿ ಇದನ್ನು ಸ್ಥಾಪಿಸಲಾಯಿತು. ಇದರಿಂದ ಜಿಲ್ಲಾಡಳಿತಕ್ಕೆ ಬರುವ ಜನರು ಮತ್ತು ಅಧಿಕಾರಿಗಳಿಗೆ ಅನುಕೂಲವಾಗಲಿದ್ದು, ಅಂಚೆ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉತ್ತಮ ಸೇವೆ ನೀಡುವ ಮೂಲಕ ಇಲಾಖೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.
ಸಂಸದರಾದ ಸಂಗಣ್ಣ ಕರಡಿ ಅವರು ಜಿಲ್ಲಾಡಳಿತ ಭವನದಲ್ಲಿ ಉಪ ಅಂಚೆ ಕಚೇರಿಯಲ್ಲಿ ಮೊದಲ ಅಂಚೆಯನ್ನು ಪೋಸ್ಟ್ ಮಾಡುವ ಮೂಲಕ ಚಾಲನೆ ನೀಡಿದರು. ಸಂಸದರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಅಂಚೆ ಇಲಾಖೆಯಿಂದ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಅಂಚೆ ಅಧೀಕ್ಷಕರಾದ ಪಿ.ಚಿದಾನಂದ, ಸಹಾಯಕ ಅಂಚೆ ಅಧೀಕ್ಷಕರಾದ ಎಮ್.ಎಲ್.ಭಾಗವಾನ, ಕೊಪ್ಪಳ ಅಂಚೆ ನಿರೀಕ್ಷಕರಾದ ಷಣ್ಮುಖಪ್ಪ ಎಸ್. ಶಿರಹಟ್ಟಿ ಹಾಗೂ ಜಿಲ್ಲಾಡಳಿತ ಭವನದ ಮತ್ತು ಅಂಚೆ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Please follow and like us: