ನಾಡೋಜ ಡಾ. ಚನ್ನವೀರ ಕಣವಿಯವರ ನಿಧನ : AIDSO, ಎಐಡಿವೈಓ,ಎಐಎಂಎಸ್‌ಎಸ್ ಸಂಘಟನೆಗಳ ತೀವ್ರ ಸಂತಾಪ

ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ , ಪ್ರಗತಿಪರ ವಿಚಾರಗಳಿಗೆ ಬೆಂಬಲಿಸುತ್ತಿದ್ದ ನಾಡಿನ ಹಿರಿಯ ಸಾಹಿತಿ , ಕವಿಗಳಾದ ನಾಡೋಜ ಡಾ . ಚನ್ನವೀರ ಕಣವಿಯವರ ನಿಧನಕ್ಕೆ ಎಐಡಿಎಸ್‌ಓ ಎಐಡಿವೈಓ ಹಾಗೂ ಎಐಎಂಎಸ್‌ಎಸ್ ವಿದ್ಯಾರ್ಥಿ – ಯುವಜನ ಮಹಿಳಾ ಸಂಘಟನೆಗಳು ತೀವ್ರ ಸಂತಾಪವನ್ನು ಸಲ್ಲಿಸಿವೆ .
ಅವರ ನಿಧನದಿಂದ ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಚಳುವಳಿಗಳನ್ನು ಬೆಂಬಲಿಸುವ ಕೊಂಡಿಯೊಂದು ಕಳಚಿದಂತಾಗಿದೆ . ಧಾರವಾಡದಲ್ಲಿ ಅಥವಾ ರಾಜ್ಯಮಟ್ಟದಲ್ಲಾಗಲಿ , ನಮ್ಮ ಸಂಘಟನೆಗಳಿಂದ ಆಯೋಜಿಸುತ್ತಿದ್ದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸದಾ ನಮ್ಮ ಜೊತೆ ಕೈಜೋಡಿಸುತ್ತಿದ್ದ ಕಣವಿಯವರು ಪ್ರಗತಿಪರವಾದ , ಸಮಾಜಮುಖಿಯಾದ , ಸಾಮರಸ್ಯದ , ಬದಲಾವಣೆಯನ್ನು ಬಯಸುವ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಸದಾ ಮಿಡಿಯುತ್ತಿದ್ದರು . ಕ್ರಾಂತಿಕಾರಿಗಳ ಜೀವನ ಹಾಗೂ ಆದರ್ಶಗಳ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದ ಕಣವಿಯವರು ಇಂದಿನ ರಾಜಕೀಯದಲ್ಲಿನ ಮೌಲ್ಯಗಳ ಕುಸಿತಕ್ಕೆ ತೀವ್ರ ನೋವನ್ನು ವ್ಯಕ್ತಪಡಿಸುತ್ತಿದ್ದರು . ತಮ್ಮ ಅಲ್ಲಾ ಒಂದ ಮಾತ ಹೇಳ್ತಿನಿ ‘ ಕವನದ ಮೂಲಕ ರಾಜಕೀಯ ಪರಿಸ್ಥಿತಿಯ ಬಗ್ಗೆ ವಿಡಂಬನಾತ್ಮಕವಾಗಿ ಟೀಕಿಸಿದರಲ್ಲದೇ ಪರ್ಯಾಯವಾದ ಉದಾತ್ತ ಕ್ರಾಂತಿಕಾರಿ ರಾಜಕೀಯವನ್ನು ಮೈಗೂಡಿಸಿಕೊಳ್ಳಲು ಯುವಜನರಿಗೆ ಕಿವಿಮಾತು ಹೇಳುತ್ತಿದ್ದರು . ನಮ್ಮ ಹಲವಾರು ಸಾಂಸ್ಕೃತಿಕ , ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮನತುಂಬಿ ಭಾಗವಹಿಸಿ ವಿದ್ಯಾರ್ಥಿ , ಯುವಜನ , ಮಹಿಳೆಯರಿಗೆ ಸ್ಪೂರ್ತಿಯ ಮಾತುಗಳನ್ನಾಡುತ್ತಿದ್ದ ಕಣವಿಯವರು , ನಮ್ಮ ಸಂಘಟನೆಗಳಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ‘ ಯಾವುದೇ ಕಲೆ , ಸಾಹಿತ್ಯ , ಸಂಸ್ಕೃತಿ ಜೀವನ ಪರವಾದ ವಿಚಾರಗಳನ್ನು ಹೊಂದಿರಬೇಕು . ಹೊಸ ಸಮಾಜ ನಿರ್ಮಾಣಕ್ಕೆ ಕ್ರಾಂತಿಯ ಅವಶ್ಯಕತೆಯಿದೆ ; ಕ್ರಾಂತಿಯೆಂದರೆ ಭಯಪಡಬೇಕಾಗಿಲ್ಲ . ಅದು ಉನ್ನತ ನೀತಿ ಮೌಲ್ಯಗಳ ಆಧಾರದ ಮೇಲೆ ಹೊಸ ಸಮಾಜವನ್ನು ನಿರ್ಮಿಸುತ್ತದೆ . ಸಮಾಜದಲ್ಲಿ ಉನ್ನತ ಮೌಲ್ಯಗಳನ್ನು ಸ್ಥಾಪಿಸಲು , ಸಮಾನತೆ , ಸಹಬಾಳ್ವೆ , ಕೋಮು ಸಾಮರಸ್ಯ ಬೆಳೆಸಲು , ಉದಾತ್ತ ಸಂಸ್ಕೃತಿಯನ್ನು ಹುಟ್ಟುಹಾಕುವ ಪ್ರಯತ್ನವನ್ನು ಈ ಸಂಘಟನೆಗಳು ಮಾಡುತ್ತಿದ್ದು ಸಮಾಜ ಹಾಗೂ ನಾಗರಿಕರು ಬೆಂಬಲಿಸಬೇಕು ‘ ಎಂದು ನಮ್ಮ ಸಂಘಟನೆಗಳ ಹೋರಾಟಗಳ , ಸಾಂಸ್ಕೃತಿಕ ಚಳುವಳಿಯ ಆಶಯಗಳನ್ನು ಬೆಂಬಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು . ಧಾರವಾಡದಲ್ಲಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ , ಇಂದಿನ ಶಿಕ್ಷಣದಲ್ಲಿ ಸರಿಯಾದ ದೋರಣೆ , ಗುರಿ ಇಲ್ಲವೆಂದು ವಿಷಾದ ವ್ಯಕ್ತಪಡಿಸುತ್ತ , ಸಾಮಾಜಿಕ ಅವಶ್ಯಕತೆಗಳಿಗೆ ಪೂರಕವಾದ ಶಿಕ್ಷಣ ದೊರೆಯುವಂತಾಗಬೇಕೆಂದು ಹೇಳಿದ್ದನ್ನು ಇಲ್ಲಿ ನೆನೆಯಲೇಬೇಕು . ಯುವ ಬರಹಗಾರರ ಕಮ್ಮಟ ಏರ್ಪಡಿಸಿದಾಗ ಭಾಗವಹಿಸಿ ಯುವಬರಹಗಾರರಿಗೆ ಮಾರ್ಗದರ್ಶನ ನೀಡಿದ್ದು ಅವಿಸ್ಮರಣೀಯವಾದದ್ದು . ನಮ್ಮ ಸಂಘಟನೆಗಳ ಜೊತೆ ದೀರ್ಘಕಾಲದಿಂದ ಅವಿನಾಭಾವ ಸಂಬಂಧ ಹಾಗೂ ಒಡನಾಟ ಹೊಂದಿದ್ದ ಕಣವಿಯವರು ನಮ್ಮ ಕಾರ್ಯಕರ್ತರು ಯಾರೇ ಅವರನ್ನು ಬೇಟಿಯಾದರೂ ಸರಳತೆಯಿಂದ , ಪ್ರೀತಿಯಿಂದ ಮಾತನಾಡಿಸಿ , ಬೆಂಬಲಿಸಿ , ಮಾತುಗಳನ್ನು ಕೇಳಿಸಿಕೊಂಡು ಸಲಹೆಗಳನ್ನು ಕೊಡುತ್ತಿದ್ದ ಬಗೆ ಅನನ್ಯವಾದದ್ದು . ಎಷ್ಟೋ ಸಂದರ್ಭದಲ್ಲಿ ಸಾಮಾನ್ಯ ವಿದ್ಯಾರ್ಥಿಗಳು ಅವರನ್ನು ಬೇಟಿಯಾದಾಗ ಒಳ್ಳೆಯ ಸಂಸ್ಕೃತಿ , ಜ್ಞಾನ , ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಎಐಡಿಎಸ್‌ಓ ಸೇರಿಕೊಳ್ಳಿ ಎನ್ನುತ್ತಿದ್ದರಲ್ಲದೇ ಬಹಿರಂಗವಾಗಿ ಕೂಡಾ ವಿದ್ಯಾರ್ಥಿಗಳಿಗೆ ಈ ರೀತಿ ಕರೆ ನೀಡಿದ್ದರು . ಇದು ಹೋರಾಟಗಳ ಬಗ್ಗೆ ಅವರಿಗಿದ್ದ ವಿಶ್ವಾಸ , ನಂಬಿಕೆಯನ್ನು ತೋರಿಸುತ್ತದೆ . ಇಂದಿನ ಸಂದಿಗ್ಧ ಸಾಮಾಜಿಕ , ರಾಜಕೀಯ , ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ಸಾಮಾಜಿಕ ಬದಲಾವಣೆಯ ಆಶಯವನ್ನು ಹೊಂದಿದ್ದ ನಾಡೋಜ ಚನ್ನವೀರ ಕಣವಿಯವರು ನಿಧನರಾಗಿರುವುದು ಶೈಕ್ಷಣಿಕ , ಸಾಹಿತ್ಯಕ , ಸಾಂಸ್ಕೃತಿಕ ಚಳುವಳಿಗಳಿಗೆ ಉಂಟಾದ ನಷ್ಟವಾಗಿದೆ . ನಾಡೋಜ ಚನ್ನವೀರ ಕಣವಿಯವರ ನಿಧನಕ್ಕೆ ಸಂತಾಪವನ್ನು ಸಲ್ಲಿಸುತ್ತ ಎಐಡಿಎಸ್‌ಓ , ಎಐಡಿವೈಓ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳ ಪರವಾಗಿ ಗಂಗರಾಜ ಅಳ್ಳಳ್ಳಿ ಎಐಡಿಎಸ್‌ಓ ,*ಶರಣು ಪಾಟೀಲ್,ಎಐಡಿವೈಓ,*ವಿಜಯಲಕ್ಷ್ಮಿ ದೇವತ್ಕಲ್ ಎಐಎಂಎಸ್‌ಎಸ್ ಬಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸಿದ್ದಾರೆ.

Please follow and like us: