ಬಂಡವಾಳಶಾಹಿಗರಿಗೆ ಮತ್ತಷ್ಟು ಶ್ರೀಮಂತಿಕೆ, ಬಜೆಟ್ಗೆ ದುಸ್ವಪ್ನವಾದ ಬಜೆಟ್


ಆರ್ಬಿಐ ಮಾಹಿತಿ ನೀಡಿರುವ ಪ್ರಕಾರ 2022-23ರ ಹಣಕಾಸಿನ ವರ್ಷದಲ್ಲಿ ಭಾರತ ಸರ್ಕಾರ ರೂ. 11,58,719 ಕೋಟಿ ಸಾಲ ಮಾಡುವ ಅಂದಾಜು ಮಾಡಿದೆ. ಹಾಗಿದ್ದರೆ ಹಿಂದಿನ ಬೃಹತ್ತಾದ ಸಾಲದ ಮೊತ್ತ ಎಲ್ಲಿ ಹೋಯಿತು? ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ಯಾರೂ ಕೇಳುವರಿಲ್ಲ, ಕೇಳಿದರೂ ಮೋದಿ ಮತ್ತವರ ಪಟಾಲಂ ಹೇಳುವುದಿಲ್ಲ. ಸಾಲದ ವಿವರಗಳು ಹೀಗಿವೆ:

– 2021-22ರಲ್ಲಿ ರೂ. 8,75,771 ಕೋಟಿ ಸಾಲ ಮಾಡುವ ಬಜೆಟ್ ಮಂಡಿಸಿದ್ದರು. ಅದರ ಲೆಕ್ಕಪತ್ರದ ವಿವರಗಳೂ ಲಭ್ಯವಿಲ್ಲ.
– ಭಾರತದ ಅಂತರಿಕ ಮತ್ತು ಬಾಹ್ಯ ಸಾಲವು 2021-22ರ ಮಾರ್ಚ್ ಅಂತ್ಯದೊಳಗೆ ರೂ. 135,87,893 ಕೋಟಿ ಎಂದು ಅಂದಾಜಿಸಲಾಗಿದೆ.

– 2022-23ರ ಮಾರ್ಚ್ ಅಂತ್ಯದೊಳಗೆ ಅದು ರೂ. 152,17,910 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ.

– 1990ರ ವೇಳೆಗೆ ಸುಮಾರು 95 ಬಿಲಿಯನ್ ಡಾಲರ್ ಇದ್ದ ಭಾರತದ ಸಾಲದ ಮೊತ್ತ 2010ರ ವೇಳೆಗೆ 230 ಬಿಲಿಯನ್ ಡಾಲರ್ ನಷ್ಟು ಹೆಚ್ಚಾಯಿತು. ಅಂದರೆ 10 ವರ್ಷಗಳಲ್ಲಿ 135 ಬಿಲಿಯನ್ ಡಾಲರ್ ಸಾಲ ಹೆಚ್ಚಾಯಿತು.

– 2021ರ ಮಾರ್ಚ್ ಅಂತ್ಯದ ವೇಳೆಗೆ ಭಾರತದ ಸಾಲದ ಮೊತ್ತ 570 ಬಿಲಿಯನ್ ಡಾಲರ್ ನಷ್ಟಿದೆ. ಅಂದರೆ ಈ ಹತ್ತು ವರ್ಷಗಳಲ್ಲಿ 340 ಬಿಲಿಯನ್ ಡಾಲರ್ ಹೆಚ್ಚಾಯಿತು.
– ಆದರೆ 2010-21ರ ವೇಳೆಗೆ ನಿರುದ್ಯೋಗದ ಪ್ರಮಾಣ 12%ರಷ್ಷಿದೆ. ಜಿಡಿಪಿ 4% ಕುಸಿದಿದೆ. ಕಾರ್ಖಾನೆಗಳು ಮುಚ್ಚಿವೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿದ್ದೇವೆ.

ಇದು ಭಾರತದ ಇಂದಿನ ಆರ್ಥಿಕ ಪರಿಸ್ಥಿತಿ. ಇದ್ಯಾವುದಕ್ಕೂ ಲೆಕ್ಕವಿಡದೆ ಈ ಬಾರಿ ಬಜೆಟ್ ನಲ್ಲಿ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. 2022-23 ಬಜೆಟ್ ವೆಚ್ಚ ಅಂದಾಜು ರೂ. 39.45 ಲಕ್ಷ ಕೋಟಿ. ಆದಾಯ ಅಂದಾಜು ರೂ. 22.84 ಲಕ್ಷ ಕೋಟಿ. ವಿತ್ತೀಯ ಕೊರತೆ ಜಿಡಿಪಿಯ 6.9%.

ಆದಾಯದ ವಿವರ ಸಿಗುವುದಿಲ್ಲ
ಆಸ್ತಿ ನೋಂದಣಿ ಒಂದು ದೇಶ, ಒಂದು ನೋಂದಣಿ ಜಾರಿಯಾದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಆದಾಯ ಕುಂಠಿತವಾಗುತ್ತದೆ. ಶೇ. 1% ರಷ್ಟಿರುವ ಅತಿ ಶ್ರೀಮಂತರ ಮೇಲೆ ಶೇ. 2% ಸಂಪತ್ತು ತೆರಿಗೆ ವಿಧಿಸುವ ಪ್ರಸ್ತಾಪವಿಲ್ಲ. Capital expenditure ಈ ಬಾರಿ ರೂ. 7.5 ಲಕ್ಷ ಕೋಟಿ (ಜಿಡಿಪಿಯ ಶೇ. 2.1%) ಎಂದು ಹೇಳಿದ್ದಾರೆ. ಹೆಚ್ಚುವರಿಯಾಗಿ ಬಾರಿ ರೂ. 10.68 ಲಕ್ಷ ಕೋಟಿ (ಜಿಡಿಪಿಯ ಶೇ. 4.1%) ಎಂದು ಹೇಳಿದ್ದಾರೆ. ಇದರಲ್ಲಿ ರಾಜ್ಯಗಳಿಗೆ ಕೊಡುವ ಒಂದು ಲಕ್ಷ ಕೋಟಿ ಮತ್ತು ಗ್ರೀನ್ ಬಾಂಡ್ ಒಂದು ಲಕ್ಷ ಕೋಟಿ ಸೇರಿದೆ. ಆದರೆ ಪ್ರತಿ ಬಾರಿಯಂತೆ ಈ ಬಾರಿಯೂ ವೆಚ್ಚದ ವಿವರಗಳನ್ನು ಕೊಟ್ಟಿಲ್ಲ.

ಆದರೆ ಕಳೆದ ಕೆಲ ವರ್ಷಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಂದ ಗಮನಾರ್ಹ ವೆಚ್ಚ ಕಂಡುಬಂದಿಲ್ಲ. ಬದಲಿಗೆ ಕಾರ್ಖಾನೆಗಳು ಮುಚ್ಚುತ್ತಿವೆ. ಸಾರ್ವಜನಿಕ ವಲಯದಲ್ಲಿ ಸರಕಾರದ ಹೂಡಿಕೆಯೂ ಹೇಳಿಕೊಳ್ಳುವಂತಹದಿಲ್ಲ. ಹೀಗಾಗಿ ಉದ್ಯೋಗ ಸೃಷ್ಟಿಯೂ ಕುಂಠಿತಗೊಂಡಿದೆ. ಹಾಗಿದ್ದರೆ ಇದು ಅಭಿವೃದ್ಧಿ ಬಜೆಟ್ ಹೇಗಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.

ಹಂಚಿಕೆಯಲ್ಲೂ ಕುಸಿತ
ಗ್ರಾಮೀಣಾಭಿವೃದ್ಧಿಗೆ 2022-23ರ ಬಜೆಟ್ ನಲ್ಲಿ ರೂ. 1.3 ಲಕ್ಷ ಕೋಟಿ ಹಂಚಿಕೆ ಮಾಡಿದ್ದಾರೆ. ಆದರೆ ಕಳೆದ ಬಾರಿಗಿಂತ ರೂ. 22,000 ಕೋಟಿ ಕಡಿಮೆ, 2021 ಬಾರಿಗಿಂತ ರೂ. 70,000 ಕೋಟಿ ಕಡಿಮೆ ಕೊಟ್ಟಿದ್ದಾರೆ. ಆಹಾರ ಸಬ್ಸಿಡಿಗಾಗಿ (ಪಿಡಿಎಸ್, ಮುಂತಾದ) 2022-23ರ ಬಜೆಟ್ ನಲ್ಲಿ ರೂ. 2 ಲಕ್ಷ ಕೋಟಿ ಹಂಚಿಕೆ ಮಾಡಿದ್ದಾರೆ. ಆದರೆ ಕಳೆದ ಬಾರಿಗಿಂತ ರೂ. 99, 000 ಕೋಟಿ ಕಡಿಮೆ, 2021 ಬಾರಿಗಿಂತ ರೂ. 3.54 ಲಕ್ಷ ಕೋಟಿ ಕಡಿಮೆ ಕೊಟ್ಟಿದ್ದಾರೆ. ಮದ್ಯಾಹ್ನದ ಬಿಸಿಯೂಟಕ್ಕೆ ರೂ. 10,234 ಕೋಟಿ ಕೊಟ್ಟಿದ್ದಾರೆ. ಕಳೆದ ಬಾರಿಗಿಂತ ರೂ. 1000 ಕೋಟಿ ಕಡಿಮೆ, 2021ರ ಬಜೆಟ್ಗಿಂತ ರೂ. 2,600 ಕೋಟಿ ಕಡಿಮೆ ಕೊಟ್ಟಿದ್ದಾರೆ.
ಹಾಗಿದ್ದರೆ ಪಿಎಮ್ ಪೋಷಣ್ ಅಂತ ಪುಂಗಿದ್ಯಾಕೆ? ಹಾಗಿದ್ದರೆ ಈ ಬಜೆಟ್ ಯಾರಿಗಾಗಿ? ಇದು ಹೇಗೆ ಅಭಿವೃದ್ಧಿ ಬಜೆಟ್? ಮನರೇಗಗೆ 2022-23ರ ಬಜೆಟ್ ನಲ್ಲಿ ರೂ. 73,000 ಕೋಟಿ ಹಂಚಿಕೆ ಮಾಡಿದ್ದಾರೆ. ಆದರೆ ಕಳೆದ ಬಾರಿಗಿಂತ ರೂ. 25,000 ಕೋಟಿ ಕಡಿಮೆ, 2021 ಬಾರಿಗಿಂತ ರೂ. 38,000 ಕೋಟಿ ಕಡಿಮೆ ಕೊಟ್ಟಿದ್ದಾರೆ. ಹಾಗಿದ್ದರೆ ವರ್ಷಕ್ಕೆ 12 ಲಕ್ಷ ಉದ್ಯೋಗ ಆಕಾಶದಿಂದ ಉದರುತ್ತವೆಯೇ? ವಾಸ್ತವದಲ್ಲಿ ಶಿಕ್ಷಣಕ್ಕೆ ಜಿಡಿಪಿಯ 6%, ಕೇಂದ್ರ ಸರಕಾರದ ಬಜೆಟ್ ವೆಚ್ಚದ 15% ರಷ್ಟು ಹಣವನ್ನು, ರಾಜ್ಯ ಸರಕಾರದ ಬಜೆಟ್ ವೆಚ್ಚದ 26% ರಷ್ಟು ಹಣವನ್ನು ಹಂಚಿಕೆ ಮಾಡಬೇಕು.

ಆದರೆ ಏನಾಗುತ್ತಿದೆ? ಕಳೆದ ವರ್ಷದ ಕೇಂದ್ರ ಬಜೆಟ್ನಲ್ಲಿ ಶಿಕ್ಷಣಕ್ಕೆ ರೂ. 93,924 ಕೋಟಿ ಹಂಚಿಕೆ ಮಾಡಿದ್ದರು. ನಂತರ ಕೋವಿಡ್ ನೆಪ ಹೇಳಿ ರೂ. 88,000 ಕೋಟಿಗೆ ಕಡಿತಗೊಳಿಸಿದ್ದರು. ಅಂದರೆ ಜಿಡಿಪಿಯ 0.25% ರಷ್ಟು ಮಾತ್ರ. ಬಜೆಟ್ ವೆಚ್ಚದ 2% ಮಾತ್ರ. ಈ ಬಾರಿ 2022-23ರಲ್ಲಿ ಶಿಕ್ಷಣಕ್ಕೆ ರೂ. 1,04,278 ಕೋಟಿ ಹಂಚಿದ್ದಾರೆ. ಆದರೆ ಜಿಡಿಪಿಯ 0.45% ರಷ್ಟು ಮಾತ್ರ, ಬಜೆಟ್ ವೆಚ್ಚದ 2.5% ಮಾತ್ರ.

ಇಲ್ಲಿ ಸರಕಾರ ಶಿಕ್ಷಣದಿಂದ ಸಂಪೂರ್ಣವಾಗಿ ಹೊರಬರಲು ಕುತಂತ್ರ ಮಾಡುತ್ತಿರುವುದು ಹೊಸದೇನಲ್ಲವಾದರೂ ಸಹ ಈ ಬಜೆಟ್ ನ್ನು ಹೊಗಳುವವರಿಗೆ ಇದನ್ನು ಹೇಳಬೇಕಾಯಿತು. ಎನ್ಇಪಿ ಪರವಾಗಿ ಮಾತನಾಡುವ ನಮ್ಮ ಉನ್ನತ ಶಿಕ್ಷಣ ಸಚಿವರು ಮತ್ತು ಬಿಜೆಪಿ ಪೋಷಿತ ಘನ ವಿದ್ವಾಂಸರು ಅದರ ಶಿಫಾರಸ್ಸು ಮಾಡಿದ ಜಿಡಿಪಿಯ 6% ರ ಹತ್ತಿರಕ್ಕೂ ಬರದ ಕೇಂದ್ರ ಬಜೆಟ್ ಗೆ ಏನು ಹೇಳುತ್ತಾರೆ?

60 ಲಕ್ಷ ಉದ್ಯೋಗ ಸೃಷ್ಟಿ ಘೋಷಣೆ. ಬಜೆಟ್ ವೆಚ್ಚದಲ್ಲಿಯೂ ಕೊಂಚ ಹೆಚ್ಚಳ. Capital ವೆಚ್ಚದಲ್ಲಿಯೂ 34% ಹೆಚ್ಚಳ.
ಇದೆಲ್ಲಾ ಸರಿ. ಆದರೆ ಹೇಗೆ? ಇದರಿಂದ ದುರ್ಬಲರ ಸಬಲೀಕರಣವಾಗುತ್ತದೆಯೇ? ಇದನ್ನು ಜಾರಿಗೊಳಿಸುವ Micro management ನ ನೀಲನಕ್ಷೆಯೇ ಇಲ್ಲ. 12 ಕೋಟಿ ಉದ್ಯೋಗ ಸೃಷ್ಟಿ ಮಾಡುವ, ಈಗ ಸಂಪೂರ್ಣ ದುಸ್ಥಿತಿಯಲ್ಲಿರುವ ಎಂಎಸ್ ಎಂಇ ವಲಯದ ಪುನಶ್ಚೇತನಕ್ಕೆ ಯಾವುದೇ ಪ್ರಸ್ತಾಪವಿಲ್ಲ. ಮತ್ತು ಕಳೆದ ಐದು ವರ್ಷಗಳಲ್ಲಿ ಬಜೆಟ್ ನ ಅಂದಾಜು ವೆಚ್ಚದ ಮೊತ್ತಕ್ಕಿಂತ ವಾಸ್ತವದ ವೆಚ್ಚವು ಶೇ. 30% ಪ್ರಮಾಣದಲ್ಲಿ ಕಡಿಮೆಯಿರುತ್ತದೆ. ಹಾಗಿದ್ದರೆ ಈ 34% ಹೆಚ್ಚುವರಿ ವೆಚ್ಚದ ಕತೆಯೂ ಇದೇ ಆಗಿದೆ. ಒಟ್ಟಾರೆ ಇದು ಸಂಪೂರ್ಣವಾಗಿ ದಿಕ್ಕು ದೆಸೆಯಿಲ್ಲದ, ಯಾವುದೇ ಖಾತರಿಯಿಲ್ಲದ, ಬಂಡವಾಳಶಾಹಿಗಳಿಗೆ ಮತ್ತಷ್ಟು ಅತಿ ಶ್ರೀಮಂತರಾಗುವ ಅವಕಾಶ ಕಲ್ಪಿಸುವ ಬಜೆಟ್. ಆದರೆ ಬಡವರಿಗೆ ದುಃಸ್ವಪ್ನ.

– ಬಿ. ಶ್ರೀಪಾದ ಭಟ್

Please follow and like us: