ಥೇಮ್ಸ್ ನದಿ ದಡದಲ್ಲಿ
ಕ್ರಾಂತಿಕಾರಿ ಬಸವಣ್ಣ- ತಗಡೂರ

ಲಂಡನ್ ಥೇಮ್ಸ್ ನದಿ‌‌ಯ ದಡದಲ್ಲಿ ಹನ್ನೆರಡನೇ‌ ಶತಮಾನದಲ್ಲಿ ಸಮಾನತೆ ಸಾರಿದ ಕ್ರಾಂತಿಕಾರಿ ಕರ್ಮಯೋಗಿ ಬಸವಣ್ಣನವರ ಪ್ರತಿಮೆಯನ್ನು ಸ್ಥಾಪನೆ ಮಾಡಿದಂತಹ ಹೆಗ್ಗಳಿಕೆ ಡಾ.ನೀರಜ್ ಪಾಟೀಲ್ ಅವರದ್ದು.

ಲಂಡನ್‌ ಲ್ಯಾಂಬತ್ ಮೇಯರ್ ಆಗಿದ್ದ ಡಾ.ನೀರಜ್ ಅಪ್ಪಟ ಕನ್ನಡಿಗ ಎನ್ನುವುದು ನಮ್ಮೆಲ್ಲರ ಹೆಮ್ಮೆ. ಬಸವಣ್ಣನವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದ ಬಳಿಕ ಅಲ್ಲಿಗೆ ಒಬ್ಬಿಬ್ಬರು ಸಚಿವರು ಭೇಟಿ ನೀಡಿದ್ದಾರೆ. ‌

ಆದರೆ ಕನ್ನಡ ನೆಲದ ಮುಖ್ಯಮಂತ್ರಿ ಆಗಿದ್ದವರು ಮಾತ್ರ ಯಾರೂ ಈ ತನಕ ಭೇಟಿ ನೀಡದಿರುವುದು ವಿಷಾದದ ಸಂಗತಿ.

ಈ ಬಾರಿ ಮೇ ತಿಂಗಳ ಬಸವ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿ ಕನ್ನಡಿಗರ ಸ್ವಾಭಿಮಾನವನ್ನು ಇಂಗ್ಲೀಷ್ ನೆಲದಲ್ಲಿ ಹರಡಬೇಕು ಎನ್ನುವ ತುಡಿತ ಡಾ.ನೀರಜ್ ಅವರದ್ದು. ಆದರೆ, ಅದಕ್ಕೆ ಕನ್ನಡದ ಸರ್ಕಾರ ಮತ್ತು ಸಿಎಂ ಎಷ್ಟರಮಟ್ಟಿಗೆ ಸಾಥ್ ನೀಡಲಿದೆ ಎನ್ನುವುದು ಚರ್ಚೆಯ ಸಂಗತಿ.

ಅಂದ ಹಾಗೆ ಬೆಂಗಳೂರಿನಲ್ಲಿ ಡಾ.ನೀರಜ್ ಆಕಸ್ಮಿಕ ಎದುರಾದ ಸಂದರ್ಭದಲ್ಲಿ ಕಾಫಿ ಕುಡಿಯಲು ವಿಂಡ್ಸರ್ ಮ್ಯಾನರ್ ಹೋಟೆಲ್ ಎಡತಾಕಿದೆವು.

ಅಲ್ಲಿ, ಮಾತು ಇಂಗ್ಲೆಂಡ್ ರಾಜಕಾರಣದತ್ತ ಹೊರಳಿತು. ಲೇಬರ್‌ ಪಾರ್ಟಿಯಿಂದ ಮೇಯರ್ ಗದ್ದುಗೆ ತನಕ ಬಂದ ಹೋರಾಟದ ಹಾದಿ ನಿಜಕ್ಕೂ ಕುತೂಹಲಕಾರಿ. ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಅಲ್ಲಿ ಜಾಗ ಪಡೆಯಲು ಬ್ರಿಟಿಷ್ ಪಾರ್ಲಿಮೆಂಟ್ ನಲ್ಲಿ ಒಪ್ಪಿಗೆ ಪಡೆದ ಕ್ಷಣ ಮರೆಯಲಾಗದ ಘಟನೆ ಎಂದು ನೆನಪಿಸಿಕೊಂಡರು.
(ಈ ಬಗ್ಗೆ ಮತ್ತೊಮ್ಮೆ ಬರೆಯಬೇಕಿದೆ)
ಮಾತು ಮುಗಿಸಿ ಹೊರಡುವ ಮುನ್ನ ಬಸವಣ್ಣನವರ ನೆನಪು ಹೊಂದಿದ ಸ್ಮರಣಿಕೆ ನೀಡುವುದನ್ನು ಮರೆಯಲಿಲ್ಲ.

ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಿದ ಡಾ.ನೀರಜ್ ಅವರಿಗೊಂದು ಕನ್ನಡಿಗರ ಸಲಾಂ ಇರಲಿ.- ಶಿವಾನಂದ ತಗಡೂರ

Please follow and like us: