ಕೊಪ್ಪಳ ಬಂದ್ ಯಶಸ್ವಿ : ಭರ್ಜರಿ ಪ್ರತಿಭಟನಾ ಮೆರವಣಿಗೆ

ಕೊಪ್ಪಳ : ರಾಯಚೂರಿನ ನ್ಯಾಯಾದೀಶ ಮಲ್ಲಿಕಾರ್ಜುನಗೌಡರನ್ನು ಸೇವೆಯಿಂದ ವಜಾಗೊಳಿಸಬೇಕು ಅವರ ವಿರುದ್ದ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿ ಇಂದು ನೀಡಲಾಗಿದ್ದ ಕೊಪ್ಪಳ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಇಂದು ಬೆಳಗಿನ ಜಾವದಿಂದಲೇ ಇಡೀ ಕೊಪ್ಪಳ, ಭಾಗ್ಯನಗರದಲ್ಲಿ ಬಂದ್ ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಎಲ್ಲ ಅಂಗಡಿ, ಮುಂಗಟ್ಟುಗಳು, ವ್ಯಾಪಾರಿ ಮಳಿಗೆಗಳು ಬಂದ್ ಮಾಡುವ ಮೂಲಕ ಸ್ವಯಂಪ್ರೇರಣೆಯಿಂದ ಎಲ್ಲರೂ ಬಂದ್ ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.




ಗಣರಾಜ್ಯೋತ್ಸವದಂದು ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರವನ್ನು ತೆಗೆಸುವ ಮೂಲಕ ಅಪಮಾನ ಗೈದಿರುವ ನ್ಯಾಯಾದೀಶ ಮಲ್ಲಿಕಾರ್ಜುನಗೌಡ ವಿರುದ್ದ ಕ್ರಮಕ್ಕೆ ಕೈಗೊಳ್ಳಬೇಕೆಂದು ಒತ್ತಾಯಿಸಿ ನೀಡಲಾಗಿದ್ದ ಬಂದ್ ಕರೆ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಬಸ್ ಸಂಚಾರ ನಿಂತು ಹೋಗಿತ್ತು. ಬಸ್ ನಿಲ್ದಾಣದೊಳಗೆ ಯಾವುದೇ ರೀತಿ ಬಸ್ ಗಳು ಪ್ರವೇಶ ಮಾಡಲಿಲ್ಲ. ಬಂದ್ ತೀವ್ರವಾಗ ಇರಲಿಕ್ಕಿಲ್ಲ ಎನ್ನುವ ನಿರೀಕ್ಷೆಯಲ್ಲಿ ಬಂದಿದ್ದ ಕೆಲವು ಜನರಿಗೆ ತೊಂದರೆಯಾಗಿದ್ದು ಹೊರತು ಪಡಿಸಿದರೆ ಎಲ್ಲರೂ ಬಂದ್ ಗೆ ಸಹಕಾರ ನೀಡಿದರು.

ಅಂಬೇಡ್ಕರ್ ಸರ್ಕಲ್ ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಗಡಿಯಾರ ಕಂಬದ ಮೂಲಕ ಜವಾಹರ ರಸ್ತೆಯ ಮೂಲಕ ಸಾಗಿ ಅಶೋಕ ಸರ್ಕಲ್ ತಲುಪಿತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿವಿಧ ದಲಿತ, ಪ್ರಗತಿಪರ , ಮುಸ್ಲಿಂ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾದರು. ಭಾಗ್ಯನಗರ ಪಟ್ಟಣದಿಂದಲೂ ದಲಿತಪರ , ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿಕೊಂಡು ಬಂದು ಅಶೋಕ ಸರ್ಕಲ್ ಮೂಲಕ ಮುಖ್ಯ ಪ್ರತಿಭಟನಾ ಮೆರವಣಿಗೆಯಲ್ಲಿ ಸೇರಿಕೊಂಡರು.

ಅಶೋಕ ಸರ್ಕಲ್ ನಲ್ಲಿ ಪ್ರತಿಭಟನೆಗಿಳಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಹಾಲಕ್ಷ್ಮೀ ಕಂದಾರಿ, ಮಲ್ಲು ಪೂಜಾರ, ಗಣೇಶ ಹೊರತಟ್ನಾಳ ಸೇರಿದಂತೆ ಇತರರು ಮಾತನಾಡಿ ಸರಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಲ್ಲಿಕಾರ್ಜುನಗೌಡನ ವಿರುದ್ದ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಇಡೀ ಭಾರತ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು. ನಂತರ ಮೆರವಣಿಗೆಯು ಅಶೋಕ ಸರ್ಕಲ್ ಮೂಲಕ ಗಂಜ್ ಸರ್ಕಲ್ ತಲುಪಿ ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಬಸವರಾಜ್ ಶೀಲವಂತರ, ಡಿ.ಎಚ್.ಪೂಜಾರ್, ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಇತರರು ಮಾತನಾಡಿದರು. ಪ್ರತಿಭಟನೆಯಲ್ಲಿ ಹನುಮೇಶ ಕಡೇಮನಿ, ಕರಿಯಪ್ಪ ಗುಡಿಮನಿ, ಕಾಟನ್ ಪಾಷಾ, ಮಾನ್ವಿ ಪಾಷಾ, ಹೊನ್ನೂರಸಾಬ ಬೈರಾಪೂರ, ಚಂದ್ರು ಇಟ್ಟಂಗಿ, ಸಲಿಂ ಅಳವಂಡಿ, ಪರಶುರಾಮ ಹುಬ್ಬಳ್ಳಿ, ಮನೋಜ ಬಿಳಿಎಲಿ, ರಾಘು ಚಾಕ್ರಿ, ಮಂಜುನಾಥ, ದ್ಯಾಮಣ್ಣ ಚಾಮಲಾಪೂರ, ಮಾರುತಿ ಚಾಮಲಾಪೂರ, ರವಿ ಮಾಟಲದಿನ್ನಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಿದರು.





Please follow and like us: