ಕಣದಲ್ಲಿರುವ ಅಭ್ಯರ್ಥಿಗಳ ಮೇಲಿದೆ ಗಂಭೀರ ಅಪರಾಧ ಆರೋಪ

ಫೆಬ್ರವರಿ 14ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರಖಂಡ ಮತ್ತು ಗೋವಾ, ಫೆಬ್ರವರಿ 20ರಂದು ಚುನಾವಣೆ ನಡೆಯಲಿರುವ ಪಂಜಾಬ್‍ನಲ್ಲಿ ಕಣದಲ್ಲಿರುವ 2,207 ಅಭ್ಯರ್ಥಿಗಳಲ್ಲಿ 491 ಮಂದಿ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಇವರಲ್ಲಿ ಹಲವರು ಗಂಭೀರ ಆರೋಪ ಎದುರಿಸುತ್ತಿದ್ದಾರೆ ಎಂದು ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬಂದಿದೆ.

ಚುನಾವಣಾ ಆಯೋಗದ ದಾಖಲೆ ಪ್ರಕಾರ ಪಂಜಾಬ್‍ನ 117 ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸಿರುವ 1285 ಅಭ್ಯರ್ಥಿಗಳ ಪೈಕಿ 312 ಮಂದಿ, ಉತ್ತರಖಂಡದ 70 ಕ್ಷೇತ್ರಗಳಲ್ಲಿ 632 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಈ ಪೈಕಿ 106 ಮಂದಿಗೆ ಅಪರಾಧ ಹಿನ್ನೆಲೆ ಇದೆ. ಗೋವಾದ 40 ಸ್ಥಾನಗಳಿಗೆ 301 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಈ ಪೈಕಿ 80 ಮಂದಿ ಕ್ರಿಮಿನಲ್ ಹಿನ್ನೆಲೆ ಕುರಿತ ದಾಖಲೆ ಸಲ್ಲಿಸಿದ್ದಾರೆ.

ಪಂಜಾಬ್‍ನಲ್ಲಿ ಕಣದಲ್ಲಿರುವ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳ ಪೈಕಿ ಶೇ.13 ರಷ್ಟು, ಉತ್ತರಖಂಡ ಮತ್ತು ಗೋವಾದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಶೇ.10 ರಿಂದ 16ರಷ್ಟು ಮಂದಿ ಗಂಭೀರ ಅಪರಾಧ ಪ್ರಕರಣಗಳ ಆರೋಪ ಹೊತ್ತಿರುವುದು ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿರುವ ಅಫಿಡವಿಟ್ ಪರಿಶೀಲನೆ ವೇಳೆ ತಿಳಿದು ಬಂದಿರುವ ಬಗ್ಗೆ ಪ್ರಿಂಟ್ ವರದಿ ಮಾಡಿದೆ.

ದಾಖಲೆಗಳಲ್ಲಿ ಕೊಲೆ, ಕೊಲೆ ಯತ್ನ, ಅಪರಾಧಿ ನರಹತ್ಯೆ, ಅತ್ಯಾಚಾರ, ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಪ್ರಕರಣ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು, ಅಪಹರಣ ಮತ್ತು ಸುಲಿಗೆಯಂಥ ಪ್ರಕರಣಗಳನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ.

8 ಅಭ್ಯರ್ಥಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳಿದ್ದು, ಇವರಲ್ಲಿ ಪಂಜಾಬ್‍ನ ಮೂವರು, ಉತ್ತರಖಂಡ್ನ ಒಬ್ಬರು, ಗೋವಾದ ನಾಲ್ವರು ಇದ್ದಾರೆ. ಧಾರ್ಮಿಕ ಅಸಂಗತತೆ, ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸುವುದು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವಂಥ ಪ್ರಕರಣಗಳನ್ನು ಎದುರಿಸುತ್ತಿರುವ 19 ಅಭ್ಯರ್ಥಿಗಳ ಪೈಕಿ ತಲಾ 9 ಮಂದಿ ಪಂಜಾಬ್ ಮತ್ತು ಉತ್ತರಖಂಡದವರಾಗಿದ್ದು, ಒಬ್ಬರು ಗೋವಾದವರಾಗಿದ್ದಾರೆ.

ಪಂಜಾಬ್‍ನ ಕ್ರಿಮಿನಲ್ ಹಿನ್ನೆಲೆಯ 312 ಅಭ್ಯರ್ಥಿಗಳ ಪೈಕಿ ಶೇ.12.9ರಷ್ಟು ಮಂದಿ ಗಂಭೀರ ಆರೋಪ ಹೊತ್ತಿದ್ದಾರೆ. ನಾಲ್ವರು ಅಭ್ಯರ್ಥಿಗಳು ಕೊಲೆ ಪ್ರಕರಣ, ಇಬ್ಬರು, ಅಪರಾಧಿ ನರಹತ್ಯೆ, 24 ಮಂದಿ ಕೊಲೆ ಯತ್ನ, ಇಬ್ಬರು ಅತ್ಯಾಚಾರ ಪ್ರಕರಣ, ಇಬ್ಬರು ಅಪಹರಣ ಪ್ರಕರಣ, ಐವರು ಮಹಿಳೆಯರ ಮೇಲಿನ ದೌರ್ಜನ್ಯ, ಇಬ್ಬರು ಅಭ್ಯರ್ಥಿಗಳು ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ಪ್ರಕರಣ ಎದುರಿಸುತ್ತಿದ್ದಾರೆ. 8 ಮಂದಿ ಮೇಲೆ ಮಾದಕ ವಸ್ತು ಸಂಬಂಧಿತ ಪ್ರಕರಣಗಳಿವೆ. ಒಬ್ಬರು ತೆರಿಗೆ ವಂಚನೆ, ಇಬ್ಬರು ಅಕ್ರಮ ಗಣಿಗಾರಿಕೆ ಪ್ರಕರಣ ಎದುರಿಸುತ್ತಿರುವ ಬಗ್ಗೆ ಅಫಿಡವಿಟ್‍ನಲ್ಲಿ ಮಾಹಿತಿ ಇದೆ.

ಉತ್ತರಖಂಡ ರಾಜ್ಯದಲ್ಲಿ ಕ್ರಿಮಿನಲ್ ದಾಖಲೆ ಇರುವ 106 ಅಭ್ಯರ್ಥಿಗಳ ಪೈಕಿ ಶೇ.10.4ರಷ್ಟು ಮಂದಿ ಗಂಭೀರ ಆರೋಪ ಹೊಂದಿದ್ದಾರೆ. ಕೊಲೆ, ಕೊಲೆ ಯತ್ನ, ಅಪರಾಧಿ ನರಹತ್ಯೆ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ಒಬ್ಬೊಬ್ಬ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಲ್ವರು ಮಹಿಳೆ ಗೌರವಕ್ಕೆ ಧಕ್ಕೆ ಪ್ರಕರಣ ಘೋಷಿಸಿದ್ದಾರೆ. ಇಬ್ಬರು ಅಭ್ಯರ್ಥಿಗಳು ಸುಲಿಗೆ ಪ್ರಕರಣ ಎದುರಿಸುತ್ತಿದ್ದಾರೆ. ಒಬ್ಬರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ಘೋಷಿಸಿದ್ದಾರೆ.

ಗೋವಾದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ 80 ಅಭ್ಯರ್ಥಿಗಳ ಪೈಕಿ ಶೇ.16.25ರಷ್ಟು ಮಂದಿ ಗಂಭೀರ ಆರೋಪದ ಪ್ರಕರಣ ಎದುರಿಸುತ್ತಿದ್ದು, ಈ ಪೈಕಿ ನಾಲ್ವರು ಕೊಲೆ ಯತ್ನದ ಪ್ರಕರಣಗಳಿರುವ ಬಗ್ಗೆ ಅಫಿಡವಿತ್ನಲ್ಲಿ ಮಾಹಿತಿ ಇದೆ. ಒಬ್ಬರು ಅತ್ಯಾಚಾರ, ಐವರ ವಿರುದ್ಧ ಮಹಿಳೆ ಗೌರವಕ್ಕೆ ಧಕ್ಕೆ, ಮೂವರ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿವೆ.

ಇದೇ ರೀತಿ ಮೂರು ರಾಜ್ಯಗಳಲ್ಲಿ ಹಲವು ಅಭ್ಯರ್ಥಿಗಳು ಬೇರೆ ಬೇರೆ ರೀತಿಯ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದು, ವಂಚನೆ ಮತ್ತು ನಕಲಿ ಪ್ರಕರಣಗಳನ್ನು ಎದುರಿಸುತ್ತಿರುವ ಒಟ್ಟು 48 ಅಭ್ಯರ್ಥಿಗಳಿದ್ದು, ಪಂಜಾಬ್ನಲ್ಲಿ 33, ಉತ್ತರಾಖಂಡದಲ್ಲಿ ಏಳು ಮತ್ತು ಗೋವಾದಲ್ಲಿ ಎಂಟು ಜನರಿದ್ದಾರೆ.

ಅಫಿಡವಿಟ್‍ಗಳ ಪ್ರಕಾರ ಮೂರು ರಾಜ್ಯಗಳಲ್ಲಿ ಎಲ್ಲ ಪ್ರಮುಖ ಪಕ್ಷಗಳು, ಕ್ರಿಮಿನಲ್ ಹಿನ್ನೆಲೆ ಹೊಂದಿರುವವರನ್ನು ಕಣಕ್ಕಿಳಿಸಿರುವ ಬಗ್ಗೆ ದಾಖಲೆಗಳು ತೋರಿಸಿವೆ. ಉಳಿದಂತೆ ಉತ್ತರ ಪ್ರದೇಶ ರಾಜ್ಯವು ಏಳು ಹಂತಗಳಲ್ಲಿ ಚುನಾವಣೆ ಎದುರಿಸುತ್ತಿರುವುದರಿಂದ ಅಲ್ಲಿನ ದತ್ತಾಂಶವನ್ನು ಆಯೋಗವು ಕಂತುಗಳಲ್ಲಿ ಪರಿಶೀಲಿಸಲಿದೆ.

ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‍ಗಳಲ್ಲಿ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಎಂದು ಘೋಷಿಸಿದ್ದಾರೆ.

Please follow and like us: