ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮಂದರ್, ಪ್ರತೀಕ್ ಮತ್ತು ಜುಬೈರ್‌ ನಾಮನಿರ್ದೇಶನ

ಕಾರವಾನ್-ಎ-ಮೊಹಬ್ಬತ್ ಅಭಿಯಾನದ ಸಂಸ್ಥಾಪಕ, ಲೇಖಕ ಹರ್ಷ್ ಮಂದರ್ ಮತ್ತು ಫ್ಯಾಕ್ಟ್ ಚೆಕ್ ವೆಬ್‌ತಾಣವಾದ ಆಲ್ಟ್ ನ್ಯೂಸ್‌ನ ಸಂಸ್ಥಾಪಕರಾದ ಪ್ರತೀಕ್ ಸಿನ್ಹಾ ಹಾಗೂ ಮುಹಮ್ಮದ್ ಜುಬೈರ್ ಅವರನ್ನು ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಾಂತಿ ಸಂಶೋಧನಾ ಸಂಸ್ಥೆ ಓಸ್ಲೊ (PRIO) ನಾಮನಿರ್ದೇಶನ ಮಾಡಿದೆ.

ನಾಮ ನಿರ್ದೇಶನ ಮಾಡಿರುವವರ ಕುರಿತು ಓಸ್ಲೊ ಸಂಸ್ಥೆಯು ನೀಡಿದ ಹೇಳಿಕೆಯಲ್ಲಿ, “ಸತ್ಯ ಪರಿಶೀಲನೆಯ ವೆಬ್ಸೈಟ್ ಮೂಲಕ ಗಮನಾರ್ಹ ಕೊಡುಗೆ ನೀಡಿದ ಸಿನ್ಹಾ ಮತ್ತು ಜುಬೈರ್ ಅವರನ್ನು ‘ಯೋಗ್ಯ ಅಭ್ಯರ್ಥಿಗಳು’ ಎಂದು ಪರಿಗಣಿಸಲಾಗಿದೆ. ಆಲ್ಟ್ ನ್ಯೂಸ್ ಬರೆದ ಸತ್ಯಶೋಧನಾ ಲೇಖನಗಳು ಹಲವು ನಕಲಿ ಸುದ್ದಿಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ನಿಂದಿಸುವ ನಿಟ್ಟಿನಲ್ಲಿ ಹಬ್ಬುತ್ತಿರುವ ಹಲವು ಸುಳ್ಳುಸುದ್ದಿಗಳ ಸತ್ಯ ಪರಿಶೀಲನೆ ನಡೆಸಿದ ಹಿರಿಮೆ ಅವರಿಗಿದೆ” ಎಂದು ತಿಳಿಸಿದೆ.

ಹರ್ಷ್ ಮಂದರ್ ಆಯ್ಕೆಯ ಬಗ್ಗೆ, “ಭಾರತದಲ್ಲಿ ಮುಸ್ಲಿಂ ಸಮುದಾಯ ಹೆಚ್ಚು ಕಷ್ಟಕರವಾದ ಪರಿಸ್ಥಿತಿ ಎದುರಿಸುತ್ತಿದೆ. ಧಾರ್ಮಿಕ ಸಹಿಷ್ಣುತೆ ಮತ್ತು ಸಂವಾದಕ್ಕೆ ಮಂದರ್ ಪ್ರಮುಖ ಧ್ವನಿಯಾಗಿದ್ದಾರೆ”ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದ್ವೇಷದ ಅಪರಾಧಗಳಿಂದ ನೊಂದ ಮನಸುಗಳ ಪರವಾಗಿ ಒಗ್ಗಟ್ಟನ್ನು ತೋರಿಸುವ ಸಲುವಾಗಿ ‘ಕ್ಯಾರವಾನ್ ಎ ಮೊಹಬ್ಬತ್’ ಅಂದರೆ ‘ಪ್ರೀತಿಯ ದಿಬ್ಬಣ’ ಎಂಬ ಅಭಿಯಾನವನ್ನು 2017ರಲ್ಲಿ ಹರ್ಷ್ ಮಂದರ್ ಸ್ಥಾಪಿಸಿದ್ದರು. ಈ ಅಭಿಯಾನವು ಅಂತರ್-ಧರ್ಮೀಯ ಸಂಘರ್ಷ ಮತ್ತು ಹಿಂಸಾಚಾರವನ್ನು ವಿರೋಧಿಸುವವರು ಒಗ್ಗಟ್ಟಾಗಲು ಸಹಕಾರಿಯಾಗಿದೆ.

ಆಲ್ಟ್ ನ್ಯೂಸ್ ಎಂಬುದು ಸತ್ಯ-ಪರಿಶೀಲನೆಯ ವೆಬ್‌ತಾಣವಾಗಿದ್ದು, ಸಾಮಾಜಿಕ ಮಾಧ್ಯಮ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಪ್ರತಿದಿನವೂ ಕಂಡುಬರುವ ತಪ್ಪು ಮಾಹಿತಿ, ತಪ್ಪು ಸುದ್ದಿಗಳ ಸತ್ಯ ಪರಿಶೀಲನೆ ನಡೆಸುತ್ತದೆ.

ಈ ಪ್ರಶಸ್ತಿಗೆ ನಾಮನಿರ್ದೇಶಿತರಲ್ಲಿ ಬೆಲಾರಸ್‌ನ ರಾಜಕಾರಣಿ ಸ್ವಿಯಾಟ್ಲಾನಾ ಸಿಖಾನೌಸ್ಕಯಾ, ಚೀನಾದ ಕಾರ್ಯಕರ್ತರಾದ ಇಲ್ಹಾಮ್ ತೊಹ್ತಿ, ಆಗ್ನೆಸ್ ಚೌ ಮತ್ತು ನಾಥನ್ ಲಾ, ಮಾನವ ಹಕ್ಕುಗಳ ಕಾರ್ಯಕರ್ತೆ ನಟಾಸಾ ಕಂಡಿಕ್, ಮಾನವೀಯ ಕಾನೂನು ಕೇಂದ್ರ, ಹ್ಯೂಮನ್ ರೈಟ್ಸ್ ಡೇಟಾ ಅನಾಲಿಸಿಸ್ ಗ್ರೂಪ್ ಮತ್ತು ಸೆಂಟರ್ ಫಾರ್ ಅಪ್ಲೈಡ್ ನಾನ್ ವಯಲೆಂಟ್ ಆಕ್ಷನ್ ಆಂಡ್ ಸ್ಟ್ರಾಟಜೀಸ್‌ ಮೊದಲಾದ ಸಂಸ್ಥೆಗಳು ಸೇರಿವೆ.

ನೊಬೆಲ್ ಪುರಸ್ಕಾರಕ್ಕೆ ಹೆಸರುಗಳನ್ನು ಶೀಫಾರಸು ಮಾಡಿರುವ ಓಸ್ಲೊ ಸಂಸ್ಥೆಯು ನೊಬೆಲ್ ಪ್ರಶಸ್ತಿ ನೀಡುವ ನೊಬೆಲ್ ಇನ್‌ಸ್ಟಿಟ್ಯೂಟ್ ಅಥವಾ ನಾರ್ವೆ ಮೂಲದ ನೊಬೆಲ್ ಸಮಿತಿಗೆ ಸೇರಿದ ಸಂಸ್ಥೆಯಲ್ಲ. ಆದರೆ ಇದು ಪ್ರತಿ ವರ್ಷವು ತನ್ನ ಸಂಸ್ಥೆಯ ವತಿಯಿಂದ ನೊಬೆಲ್ ಪ್ರಶಸ್ತಿಗೆ ಹೆಸರುಗಳನ್ನು ಶಿಫಾರಸು ಮಾಡುತ್ತದೆ. ಪ್ರಸ್ತುತ ಹೆನ್ರಿಕ್ ಉರ್ದಾಲ್ ಈ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

Please follow and like us: