ಬೆಲಾರಸ್‌ನಲ್ಲಿ ರಷ್ಯಾ ಸೇನಾ ನಿಯೋಜನೆ ಕುರಿತು ನ್ಯಾಟೋ ಕಳವಳ

ಉಕ್ರೇನ್‌ನ ಗಡಿಭಾಗದಲ್ಲಿ ತನ್ನ ಸೇನಾ ನಿಯೋಜನೆಯನ್ನ ಹಿಂತೆಗೆದುಕೊಳ್ಳಲು ರಷ್ಯಾ ಸಿದ್ಧವಾಗಿಲ್ಲ. 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಷ್ಯಾವು ಉಕ್ರೇನ್ನ ಉತ್ತರದ ಗಡಿಭಾಗದಲ್ಲಿ ಮತ್ತು ಬೆಲಾರಸ್‌ನಲ್ಲಿ ತನ್ನ ಸೈನಿಕರು ಮತ್ತು ಸೇನಾ ಶಸ್ತ್ರಾಸ್ತ್ರಗಳ ಪ್ರಮಾಣವನ್ನು ಹೆಚ್ಚಿಸಿದೆ ಎಂದು ನ್ಯಾಟೋ ಸೆಕ್ರೆಟರಿ-ಜನರಲ್ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಕಳವಳ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ, ರಷ್ಯಾದ ಉದ್ದೇಶಗಳು ಏನಿರಬಹುದು ಎಂಬ ಅನಿಶ್ಚಿತತೆ ಜಾಗತಿಕ ಮಟ್ಟದಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಈ ನಡುವೆ ಮಾಸ್ಕೋ (ರಷ್ಯಾ ರಾಜಧಾನಿ) ಮತ್ತು ಕೈವ್‌ (ಉಕ್ರೇನ್‌ ರಾಜಧಾನಿ)ನಲ್ಲಿ ಹೆಚ್ಚಿನ ಉನ್ನತ ಮಟ್ಟದ ರಾಜತಾಂತ್ರಿಕತೆಯು ತೆರೆದುಕೊಂಡಿದೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಉಕ್ರೇನ್ ರಾಜಧಾನಿಯಲ್ಲಿ ಮಾತುಕತೆ ನಡೆಸಲಿದ್ದಾರೆ. ಇದೇ ಸಮಯದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅರ್ಜೆಂಟೀನಾದ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ ಅವರನ್ನು ಮಾಸ್ಕೋದಲ್ಲಿ ಭೇಟಿಯಾಗಲಿದ್ದಾರೆ.

ಉಕ್ರೇನ್‌ನ ಉತ್ತರ ಮತ್ತು ಪೂರ್ವ ಗಡಿಗಳಲ್ಲಿ 1,00,000 ಕ್ಕೂ ಹೆಚ್ಚು ಸೈನಿಕರನ್ನು ರಷ್ಯಾ ನಿಯೋಜಿಸಿದೆ. 2014ರಲ್ಲಿ ಮಾಡಿದಂತೆಯೇ ರಷ್ಯಾ ಮತ್ತೊಮ್ಮೆ ಆಕ್ರಮಣ ಮಾಡಬಹುದು. ಇದರಿಂದಾಗಿ ಉಕ್ರೇನ್‌ನ ಆರ್ಥಿಕತೆ ಅಸ್ಥಿರಗೊಳಿಸಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ. ಆದರೆ, ಉಕ್ರೇನ್‌ ಮೇಲೆ ಆಕ್ರಮಣ ಮಾಡಲು ಯೋಜಿಸಲಾಗಿದೆ ಎಂಬ ಅನುಮಾನಗಳನ್ನು ರಷ್ಯಾದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಆದರೂ, “ಕಳೆದ ಕೆಲವು ದಿನಗಳಿಂದ ರಷ್ಯಾ ಮಿಲಿಟರಿ ಪಡೆಗಳು ಬೆಲಾರಸ್‌ನಲ್ಲಿ ಬೀಡುಬಿಡಲಾರಂಭಿಸಿವೆ. ಶೀತಲ ಸಮರದ ನಂತರ ಇದು ರಷ್ಯಾದ ಅತಿದೊಡ್ಡ ನಿಯೋಜನೆಯಾಗಿದೆ” ಎಂದು ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.

ವಿಶೇಷ ಪಡೆಗಳು, ಸುಧಾರಿತ ಫೈಟರ್ ಜೆಟ್‌ಗಳು, ಇಸ್ಕಾಂಡರ್ ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು S-400 ಗ್ರೌಂಡ್‌ ಟು ಏರ್‌ ಕ್ಷಿಪಣಿಗಳು ಸೇರಿದಂತೆ 30,000 ಸೈನಿಕರನ್ನು ರಷ್ಯಾವು ಬೆಲಾರಸ್‌ನಲ್ಲಿ ಸಜ್ಜುಗೊಳಿಸಿದೆ ಎಂದು ಸ್ಟೋಲ್ಟೆನ್‌ಬರ್ಗ್‌ ಹೇಳಿದ್ದಾರೆ.

ಅದೇ ಸಮಯದಲ್ಲಿ, ಉಕ್ರೇನ್ ಕಳೆದ ತಿಂಗಳು ಡ್ರೋನ್ ಮೂಲಕ ದೇಶದ ವಾಯುಪ್ರದೇಶದ ಗಡಿ ಉಲ್ಲಂಘನೆಯನ್ನು ಮಾಡಿದೆ ಎಂದು ಬೆಲಾರಸ್‌ನ ರಕ್ಷಣಾ ಸಚಿವಾಲಯವು ಆರೋಪಿಸಿದೆ.

ಬೆಲಾರಸ್‌ನ ಆರೋಪವನ್ನು ತಿರಸ್ಕರಿಸಿರುವ ಉಕ್ರೇನ್, ತಮ್ಮನ್ನು ಮತ್ತಷ್ಟು ಅಸ್ಥಿರಗೊಳಿಸಲು ರಷ್ಯಾದೊಂದಿಗೆ ಬೆಲಾರಸ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.

“ಉಕ್ರೇನ್‌ಅನ್ನು ಅಸ್ಥಿರಗೊಳಿಸುವ ರಷ್ಯಾದ ಚಟುವಟಿಕೆಗಳನ್ನು ತಡೆಯಲು ನಾವು ಮಿನ್ಸ್ಕ್‌ಗೆ ಕರೆ ನೀಡುತ್ತೇವೆ. ಬೆದರಿಕೆ ಅಸ್ತಿತ್ವದಲ್ಲಿದೆ, ಅಪಾಯಗಳು ಅಸ್ತಿತ್ವದಲ್ಲಿವೆ, ಆದರೆ ಅವರು 2014 ರಿಂದಲೂ ಇದು ಮುಂದುವರೆಯುತ್ತಿದೆ. ಅಂದಿನಿಂದಲೂ ರಷ್ಯಾ ಆಕ್ರಮಣಕಾರಿಯಾಗಿದೆ” ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯದ ವಕ್ತಾರ ಒಲೆಗ್ ನಿಕೊಲೆಂಕೊ ಹೇಳಿದ್ದಾರೆ.

ರಷ್ಯಾ ಹೊಸ ಯುದ್ಧವನ್ನು ಬಯಸುವುದಿಲ್ಲ ಎನ್ನುವುದಾರೆ, ರಷ್ಯಾ ರಾಜತಾಂತ್ರಿಕ ಒಪ್ಪಂದಗಳನ್ನು ಮುಂದುವರೆಸಬೇಕು. ಉಕ್ರೇನ್‌ನ ಗಡಿಗಳಲ್ಲಿ ಮತ್ತು ಉಕ್ರೇನ್‌ ಭಾಗದ ಆಕ್ರಮಿತ ಪ್ರದೇಶಗಳಲ್ಲಿ ನಿಯೋಜಿಸಿರುವ ಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು. ರಾಜತಾಂತ್ರಿಕತೆ ಮಾತ್ರವೇ ಜವಾಬ್ದಾರಿಯುತ ಮಾರ್ಗವಾಗಿದೆ ಎಂದು ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಅವರು ಟ್ವೀಟ್‌ ಮಾಡಿದ್ದಾರೆ.

ರಷ್ಯಾ ಆಕ್ರಮಣ ಮಾಡಿದರೆ ಉಕ್ರೇನ್‌ಗೆ ಸೈನ್ಯವನ್ನು ನಿಯೋಜಿಸುವ ಉದ್ದೇಶವನ್ನು NATO ಹೊಂದಿಲ್ಲ. ಆದರೆ, ಉಕ್ರೇನ್‌ ಸಮೀಪವಿರುವ ನ್ಯಾಟೋದ ಸದಸ್ಯ ರಾಷ್ಟ್ರಗಳ (ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಪೋಲೆಂಡ್) ರಕ್ಷಣೆಯನ್ನು ಬಲಪಡಿಸಲು ಪ್ರಾರಂಭಿಸಿದೆ. 30 ರಾಷ್ಟ್ರಗಳ ಮಿಲಿಟರಿ ಮೈತ್ರಿಕೂಟವಾದ ನ್ಯಾಟೋ, ಬಲ್ಗೇರಿಯಾ ಮತ್ತು ರೊಮೇನಿಯಾ ಬಳಿಯ ಕಪ್ಪು ಸಮುದ್ರ ಪ್ರದೇಶದಲ್ಲಿ ತನ್ನ ರಕ್ಷಣೆಯನ್ನು ಹೆಚ್ಚಿಸಲು ಯೋಜಿಸುತ್ತಿದೆ.

2,000 US ಸೈನಿಕರನ್ನು ಪೋಲೆಂಡ್ ಮತ್ತು ಜರ್ಮನಿಗೆ ಕಳುಹಿಸಲು ಮತ್ತು ಜರ್ಮನಿಯಿಂದ ರೊಮೇನಿಯಾಗೆ 1,000 ಸೈನಿಕರನ್ನು ಸ್ಥಳಾಂತರಿಸಲು ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ಸ್ವಾಗತಿಸಿರುವ ಸ್ಟೋಲ್ಟೆನ್‌ಬರ್ಗ್, ಇದು ಪೂರ್ವ ದೇಶಗಳ ಬಗ್ಗೆ NATOದ ಸದಸ್ಯ ರಾಷ್ಟ್ರವಾಗಿರುವ ಅಮೆರಿಕಾದ ಬದ್ಧತೆಯನ್ನು ಮಿತ್ರರಾಷ್ಟ್ರಗಳು ಮತ್ತು ಶತ್ರುಗಳಿಗೆ ಪ್ರದರ್ಶಿಸುತ್ತದೆ ಎಂದು ಹೇಳಿದ್ದಾರೆ.

“ಬಿಕ್ಕಟ್ಟಿಗೆ ರಾಜಕೀಯ ಪರಿಹಾರವನ್ನು ಕಂಡುಹಿಡಿಯಲು ನಾವು ಬದ್ಧರಾಗಿದ್ದೇವೆ. ಆದರೆ, ಕೆಟ್ಟ ಪರಿಸ್ಥಿತಿ ಎದುರಾದರೆ, ಅದನ್ನು ನಿಭಾಯಿಸಲು ನಾವು ಸಿದ್ಧರಾಗಿರಬೇಕು” ಎಂದು ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.