ಸೇನಾ ಸಮವಸ್ತ್ರ ಧರಿಸಿದ್ದಕ್ಕಾಗಿ ಪ್ರಧಾನಿ ಕಚೇರಿಗೆ ಕೋರ್ಟ್‌ ನೋಟಿಸ್‌

ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದರು. ಅವರು ಸೇನಾ ವಸ್ತ್ರವನ್ನು ಧರಿಸಿದ್ದನ್ನು ಪ್ರಶ್ನಿಸಿ ಉತ್ತರ ಪ್ರದೇಶದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಪ್ರಯಾಗ್‌ರಾಜ್ (ಅಲಹಾಬಾದ್) ಜಿಲ್ಲಾ ನ್ಯಾಯಾಲಯ ಪ್ರಧಾನಿ ಕಚೇರಿಗೆ ನೋಟಿಸ್ ಜಾರಿ ಮಾಡಿದೆ.

ಮಾರ್ಚ್ 2 ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ವಕೀಲ ರಾಕೇಶ್ ನಾಥ್ ಪಾಂಡೆ ಅವರು ಸಲ್ಲಿಸಿದ್ದ ಅರ್ಜಿಯ ಕುರಿತು ವಕೀಲರ ವಾದವನ್ನು ಆಲಿಸಿದ ನಂತರ ಜಿಲ್ಲಾ ನ್ಯಾಯಾಧೀಶ ನಳಿನ್ ಕುಮಾರ್ ಶ್ರೀವಾಸ್ತವ ಪ್ರಧಾನಿ ಕಚೇರಿಗೆ ನೋಟಿಸ್ ಜಾರಿ ಮಾಡಿ ಆದೇಶ ನೀಡಿದ್ದಾರೆ ಎಂದು ಎಂದು ದೈನಿಕ್ ಭಾಸ್ಕರ್‌ ವರದಿ ಮಾಡಿದೆ.

ಕಾಶ್ಮೀರದ ನೌಶೇರಾದಲ್ಲಿ ಪ್ರಧಾನಿ ಸೇನಾ ಸಮವಸ್ತ್ರ ಧರಿಸಿದ್ದನ್ನು ಪ್ರಶ್ನಿಸಿ ವಕೀಲ ರಾಕೇಶ್ ನಾಥ್ ಪಾಂಡೆ ಅವರು ಪ್ರಧಾನಿ ಮೋದಿ ವಿರುದ್ಧ ಸೆಕ್ಷನ್ 153 (3) ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಧಾನಿ ವಿರುದ್ಧ ಮೊಕದ್ದಮೆ ದಾಖಲು ಮಾಡುವಂತೆ ಆದೇಶಿಸುವಂತೆ ಮನವಿ ಮಾಡಿದ್ದರು. 2021 ನವೆಂಬರ್ 4 ರಂದು ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಪ್ರಧಾನಿ ಭಾರತೀಯ ಸೇನೆಯ ಸಮವಸ್ತ್ರವನ್ನು ಧರಿಸಿದ್ದರು. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 140 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಸೆಕ್ಷನ್, ನಾಗರಿಕರು ಸೈನಿಕ, ನೌಕಾದಳ, ವಾಯುದಳದ ಸಮವಸ್ತ್ರವನ್ನು ಧರಿಸುವುದನ್ನು ತಡೆಯುತ್ತದೆ. ಹೀಗಾಗಿ ಪ್ರಧಾನಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಲಾಗಿದೆ.

ಇದಕ್ಕೂ ಮೊದಲು 2021 ಡಿಸೆಂಬರ್ 21ರಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹರೇಂದ್ರ ನಾಥ್ ಅವರು ಅರ್ಜಿಯನ್ನು ಆಲಿಸಿದ್ದರು. ಆಗ ನ್ಯಾಯಾಲಯವು ಈ ಘಟನೆ ನ್ಯಾಯಾಲಯದ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದು ಹೇಳಿತ್ತು. ಸ್ಥಳೀಯ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಮ್ಯಾಜಿಸ್ಟ್ರೇಟ್ ಅವರು ಈ ವಿಷಯವನ್ನು ಆಲಿಸಬಹುದು ಎಂದು ಸಿಜೆಎಂ ಹರೇಂದ್ರನಾಥ್ ಅರ್ಜಿಯನ್ನು ತಿರಸ್ಕರಿಸಿದ್ದರು. ಈ ತಿರಸ್ಕೃತ ಆದೇಶವನ್ನು ಪ್ರಶ್ನಿಸಿ ವಕೀಲ ರಾಕೇಶ್ ನಾಥ್ ಪಾಂಡೆ ಜಿಲ್ಲಾ ನ್ಯಾಯಾಧೀಶರ ಮುಂದೆ ಮೇಲ್ವಿಚಾರಣಾ ಅರ್ಜಿಯನ್ನು ಸಲ್ಲಿಸಿದ್ದರು. ಅದನ್ನು ಆಲಿಸಿದ ಜಿಲ್ಲಾ ನ್ಯಾಯಾಧೀಶ ನಳಿನ್ ಕುಮಾರ್ ಶ್ರೀವಾಸ್ತವ ಪ್ರಧಾನಿ ಕಚೇರಿಗೆ ನೋಟಿಸ್ ಜಾರಿ ಮಾಡಿ ಆದೇಶಿಸಿದ್ದಾರೆ.

Please follow and like us: