ಪಾಕ್ ಮತ್ತು ಚೀನಾ ಸ್ನೇಹ ಬೆಳೆಯಲು ಮೋದಿ ಸರ್ಕಾರ ಕಾರಣ: ರಾಹುಲ್ ಟೀಕೆ

ಬಜೆಟ್ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮತ್ತು ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ, ಬಡವ ಮತ್ತು ಶ್ರೀಮಂತರ ಕುರಿತಂತೆ ತಾರತಮ್ಯ ನೀತಿ ಮತ್ತು ಒಕ್ಕೂಟ ಸರ್ಕಾರದ ಬದ್ಧತೆಗಳನ್ನು ನಿಭಾಯಿಸದೆ ಇರುವ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗಳನ್ನು ಟೀಕಿಸಿರುವ ರಾಹುಲ್ ಗಾಂಧಿ “ಚೀನಾ ಮತ್ತು ಪಾಕಿಸ್ತಾನದ ನಡುವೆ ಆಪ್ತ ಸ್ನೇಹ ಬೆಳೆಯಲು ಕೇಂದ್ರ ಸರ್ಕಾರದ ನೀತಿಗಳು ಕಾರಣ” ಎಂದು ಆರೋಪಿಸಿದ್ದಾರೆ. “ದೇಶವು ಎಲ್ಲಾ ಕಡೆಗಳಲ್ಲಿ ಶತ್ರುಗಳಿಂದ ಸುತ್ತುವರಿದಿದೆ. ರಾಷ್ಟ್ರವು ಹೊರಗಿನಿಂದ ಮತ್ತು ಒಳಗಿನಿಂದ ಅಪಾಯದಲ್ಲಿದೆ. ಇಂತಹ ಪರಿಸ್ಥಿತಿ ಕಂಡು ಚಿಂತೆಯಾಗುತ್ತಿದೆ. ಚೀನಾ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಇಡುವುದು ಭಾರತದ ಕಾರ್ಯತಂತ್ರದ ಗುರಿಯಾಗಬೇಕಿತ್ತು. ಆದರೆ ನೀವು ಆ ಎರಡೂ ರಾಷ್ಟ್ರಗಳನ್ನು ಜೊತೆಗೂಡಿಸಿದ್ದೀರಿ. ನಾವು ಎದುರಿಸುತ್ತಿರುವ ಈ ಸಮಸ್ಯೆಯನ್ನು ಕೀಳಂದಾಜು ಮಾಡಬೇಡಿ. ಇದು ಭಾರತಕ್ಕೆ ಗಂಭೀರ ಬೆದರಿಕೆ” ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳು, ವಿಶೇಷವಾಗಿ 2015ರಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪ್ರಾರಂಭಿಸಿದ ನಂತರ ಬಲಗೊಂಡಿವೆ. ಈ ಸಂಬಂಧವು ಆರ್ಥಿಕ ಪಾಲುದಾರಿಕೆಯನ್ನು ಮೀರಿ, ಶಸ್ತ್ರಾಸ್ತ್ರ ಒಪ್ಪಂದಗಳು, ಜಂಟಿ ಕಾರ್ಯನಿರ್ವಹಣೆ ಮತ್ತು ರಕ್ಷಣಾ ಒಪ್ಪಂದಗಳನ್ನು ಒಳಗೊಂಡಿರುವ ಮಿಲಿಟರಿ ಸಹಕಾರವನ್ನು ಹೆಚ್ಚಿಸುತ್ತದೆ. ಕಳೆದ ವರ್ಷ ಚೀನಾದ ನೆರವಿನೊಂದಿಗೆ ಪಾಕಿಸ್ತಾನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ಕರಾಚಿಯಲ್ಲಿ ನಿರ್ಮಿಸಿದೆ. ಉಭಯ ದೇಶಗಳು ಮುಕ್ತ ವ್ಯಾಪಾರ ಒಪ್ಪಂದವನ್ನು ಹೊಂದಿವೆ. ಇವು ಭಾರತಕ್ಕೆ ದೊಡ್ಡ ಸವಾಲನ್ನು ಒಡ್ಡಿವೆ ಎಂದು ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.




ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ, “ಅಫ್ಘನ್ ಜೊತೆ ಸೌಹಾರ್ದ ಮತ್ತು ಸಹಕಾರ ಸಂಬಂಧಗಳನ್ನು ಭದ್ರಗೊಳಿಸಲು ನಾವು ಸಿದ್ದವಾಗಿದ್ದೇವೆ” ಎಂದು ಚೀನಾ ಹೇಳಿಕೊಂಡಿದೆ. ಇದಕ್ಕೆ ಅಫ್ಘನ್‌ನ ಹೊಸ ಸರ್ಕಾರದ ಔಪಚಾರಿಕ ಮನ್ನಣೆ ಶೀಘ್ರದಲ್ಲೇ ಸಂಭವಿಸಬಹುದು ಎಂದು ಅನೇಕರು ನಿರೀಕ್ಷಿಸುತ್ತಿದ್ದಾರೆ. ಇದು ಸಾಧ್ಯವಾದರೆ, ಪಾಕಿಸ್ತಾನದ ಗಡಿಯಲ್ಲಿನ ಕಾರ್ಯತಂತ್ರದ ಹೂಡಿಕೆಗಳನ್ನು ರಕ್ಷಿಸಲು ತಾಲಿಬಾನ್ ಚೀನಾಕ್ಕೆ ಸಹಾಯ ಮಾಡುತ್ತದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ತಾಲಿಬಾನ್ ತರಬೇತಿಗೆ ಪಾಕಿಸ್ತಾನದ ಭದ್ರತಾ ಸಂಸ್ಥೆಯ ಸಹಾಯವನ್ನು ಪಡೆದಿದೆ ಎಂದು ಅನೇಕ ತಜ್ಞರು ನಂಬಿದ್ದಾರೆ. ಇವೆಲ್ಲವೂ ಸಾಮಾನ್ಯ ಬೆದರಿಕೆಗಳಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

“ಈ ವರ್ಷದ ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ಅತಿಥಿಗಳು ಬರಲಿಲ್ಲ. ಏಕೆಂದರೆ, ದೇಶವು ಸಂಪೂರ್ಣವಾಗಿ ಪ್ರತ್ಯೇಕವಾಗಿದೆ ಮತ್ತು ಶತ್ರುಗಳಿಂದ ಸುತ್ತುವರಿದಿದೆ, ನಾವು ನೇಪಾಳ, ಅಫ್ಘಾನಿಸ್ತಾನ, ಚೀನಾದಿಂದ ಸುತ್ತುವರೆದಿದ್ದೇವೆ. ಮಾತ್ರವಲ್ಲದೆ, ಭಾರತ ಸರ್ಕಾರವು ದೇಶದ ಜನರ ವಿರುದ್ಧವೇ ಕೆಲಸ ಮಾಡುತ್ತಿದೆ. ಇದು ದೊಡ್ಡ ಅಪರಾಧ” ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ಹಿಂತೆಗೆದುಕೊಂಡಿದ್ದನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, “ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ದೊಡ್ಡ ಕಾರ್ಯತಂತ್ರವನ್ನು ಜಾರಿಗೊಳಿಸಿ ತಪ್ಪನ್ನು ಮಾಡಿದ್ದೇವೆ. ಗಡಿ ರಾಜ್ಯಗಳಲ್ಲೂ ಸಂಘರ್ಷಗಳು ಹೆಚ್ಚುತ್ತಿವೆ” ಎಂದು ಹೇಳಿದ್ದಾರೆ.



ಜೈಶಂಕರ್ ಸ್ಪಷ್ಟನೆ

ರಾಹುಲ್ ಗಾಂಧಿ ಅವರ ಆರೋಪಕ್ಕೆ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚೀನಾ ಮತ್ತು ಪಾಕಿಸ್ತಾನ ಒಟ್ಟಿಗೆ ಕೆಲಸ ಮಾಡಿದ ನಾಲ್ಕು ಉದಾಹರಣೆಗಳನ್ನು ಪಟ್ಟಿ ಮಾಡಿ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

• 1963ರಲ್ಲಿ ಪಾಕಿಸ್ತಾನವು ಶಾಕ್ಸ್‌ಗಾಮ್ ಕಣಿವೆಯನ್ನು ಅಕ್ರಮವಾಗಿ ಚೀನಾಕ್ಕೆ ಹಸ್ತಾಂತರಿಸಿತ್ತು.

• 1970 ರ ದಶಕದಲ್ಲಿ ಚೀನಾ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಮೂಲಕ ಕಾರಕೋರಂ ಹೆದ್ದಾರಿಯನ್ನು ನಿರ್ಮಿಸಿತು.

• 1970 ರ ದಶಕದಿಂದಲೇ ಉಭಯ ದೇಶಗಳು ನಿಕಟ ಪರಮಾಣು ಸಹಯೋಗವನ್ನು ಹೊಂದಿವೆ.

• 2013 ರಲ್ಲಿ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪ್ರಾರಂಭವಾಯಿತು ಎಂದು ಜೈಶಂಕರ್ ಉಲ್ಲೇಖಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಗಣರಾಜ್ಯೋತ್ಸವದ ರಾಷ್ಟ್ರೀಯ ಅತಿಥಿ ಇರಲಿಲ್ಲವೆನ್ನುವ ಟೀಕೆಗೆ ಉತ್ತರಿಸಿದ ಅವರು, “ನಾವು ಸಾಂಕ್ರಾಮಿಕ ರೋಗದ ಮಧ್ಯದಲ್ಲಿದ್ದೇವೆ. ವಿದೇಶಿ ಅತಿಥಿಗಳು ಗಣರಾಜ್ಯೋತ್ಸವ ಆಚರಣೆಯಲ್ಲಿ ಭೌತಿಕವಾಗಿ ಜೊತೆಗಿರಲಿಲ್ಲ. ಆದರೆ, ಕಾರ್ಯಕ್ರಮಕ್ಕೆ ಬರಬೇಕಿದ್ದ 5 ಮಧ್ಯ ಏಷ್ಯಾ ರಾಷ್ಟ್ರಗಳ ಅಧ್ಯಕ್ಷರು ಜನವರಿ 27 ರಂದು ನಡೆದ ವರ್ಚುವಲ್ ಶೃಂಗಸಭೆಯನ್ನು ನಡೆಸಿದ್ದರು. ಇದನ್ನು ರಾಹುಲ್ ಗಾಂಧಿ ಮರೆತಿದ್ದಾರೆಯೇ?” ಎಂದು ಪೋಸ್ಟ್ ಮಾಡಿದ್ದಾರೆ.

Please follow and like us: