ನನ್ನ ಅಮ್ಮ ನನ್ನ ಹೆಮ್ಮೆ – ಅಮ್ಮನಿಗೊಂದು ನಮನ (1)

ಸಿದ್ಧರಾಮ ಕೂಡ್ಲಿಗಿಆಗ 1967. ಅಮ್ಮನಿಗೆ ಶಿಕ್ಷಕರ ತರಬೇತಿ. ಅದೂ ಗುಲಬರ್ಗಾದಲ್ಲಿ. ಅಮ್ಮನಿದ್ದುದು ರಾಯಚೂರಿನಲ್ಲಿ. ಅದೇ ಆಗ ಹುಟ್ಟಿ 2 ವರ್ಷಗಳಾಗಿದ್ದ ನನ್ನನ್ನು ಬೇರೆಯವರ ಬಳಿ ಬಿಟ್ಟುಹೋಗಲು ಅಮ್ಮನಿಗೆ ಚಿಂತೆ. ಶಿಕ್ಷಕರ ತರಬೇತಿಗೆ ನನ್ನನ್ನು ಕರೆದುಕೊಂಡೇ ಹೋದಳಂತೆ. ಅಲ್ಲಿ ಕಟ್ಟುನಿಟ್ಟು. ತರಬೇತಿ ಸಮಯದಲ್ಲಿ ತಮ್ಮ ಕೂಸುಗಳನ್ನು ತರುವಂತಿಲ್ಲ ಎಂದು. ಅದೊಂದು ಆದೇಶವೇ ಇತ್ತಂತೆ. ಆದರೂ ಅಮ್ಮ ಎಲ್ಲವನ್ನೂ ಎದುರಿಸಿದಳು. ಆದೇಶವನ್ನೇ ಪ್ರಶ್ನಿಸಿದಳು. ಮಗುವನ್ನು ಬಿಟ್ಟಿರಲಾಗುವುದಿಲ್ಲ, ಬಿಟ್ಟಿರಲು ನನಗೆ ಬೇರೆ ದಾರಿಯಿಲ್ಲ ಎಂದು ಅಧಿಕಾರಿಗಳೆದುರು ಹೇಳಿಕೊಂಡಳಂತೆ. ಆಗಿನ ತರಬೇತಿ ಸಂಸ್ಥೆಯ ಅಧಿಕಾರಿಗಳು ಅಮ್ಮನ ಮನವಿಯನ್ನು ಕೇಳಿ ಮಕ್ಕಳನ್ನೂ ತರಬೇತಿಗೆ ಕರೆತರಬಹುದು ಎಂದು ಮೊದಲಿನ ಆದೇಶವನ್ನೇ ರದ್ದುಪಡಿಸಿದರಂತೆ. ಎಲ್ಲ ಶಿಕ್ಷಕರಿಯರೂ ಅಮ್ಮನಿಗೆ ಧನ್ಯವಾದಗಳನ್ನು ಹೇಳಿದರಂತೆ. ಇದು ನನ್ನ ಅಮ್ಮ. ನನ್ನ ಬಗ್ಗೆ ಮಾತನಾಡುವಾಗ ಅಮ್ಮ ಇದನ್ನು ಹೇಳಿಕೊಳ್ಳುತ್ತಿದ್ದಳು. ಅದು ಅಮ್ಮನ ಶಕ್ತಿ.


ತರಬೇತಿ ಸಮಯದಲ್ಲಿಯೇ ಚೆಂಡಾಟವಾಡುವಾಗ ಹೊಂಡದ ಬಳಿ ಇದ್ದ ನಾನು ಕೆಲವೇ ಕ್ಷಣಗಳಲ್ಲಿ ನೀರಿಗೆ ಬೀಳುವವನೇ. ಅಮ್ಮನಿಗೆ ಕೈಕಾಲು ನಡುಕ. ಅಮ್ಮನ ಗೆಳತಿಯೊಬ್ಬರು ಮೆಲ್ಲಗೆ ನನ್ನ ಹಿಂದಿನಿಂದ ಬಂದು ನನ್ನನ್ನು ಸರಕ್ಕನೆ ಎಳೆದುಕೊಂಡು ನನ್ನ ಜೀವ ರಕ್ಷಿಸಿದರಂತೆ. ಅಮ್ಮ ನನ್ನನ್ನು ತಬ್ಬಿ ಗೋಳೋ ಎಂದು ಅತ್ತಳಂತೆ. ಬಹುಶ : ಅಮ್ಮನ ಆ ಗೆಳತಿ ಆ ಧೈರ್ಯದಿಂದ ಆ ಕೆಲಸ ಮಾಡದಿದ್ದರೆ ಬಹುಶ : ನಾನು ಈ ಬರಹ ಬರೆಯುತ್ತಿರಲಿಲ್ಲ. ಅಷ್ಟು ಚಡಪಡಿಸಿದವಳು ನನ್ನಮ್ಮ. ಅದು ಅಮ್ಮನ ಪ್ರೀತಿ.

ನನ್ನ ಅಮ್ಮ ಎಂದರೆ ಬರೀ ಅಮ್ಮ ಅಲ್ಲ. ಅಮ್ಮ ಎಂದರೆ ಕರುಳಿನಾಳದ ಶಕ್ತಿ, ನರನಾಡಿಗಳಲ್ಲಿ ಪುಟಿಯುವ ಚೈತನ್ಯ, ಜಗತ್ತನ್ನು ತೋರಿದ ಕಣ್ಣು. ನನ್ನ ಅಮ್ಮ ತುಂಬಾ ಮುಗ್ಧೆಯಾಗಿದ್ದಳು. ಮಗುವಿನಂತಹ ಮನಸು. ಬದಲಾಗುತ್ತಿರುವ ಜಗತ್ತಿನಲ್ಲಿ ಅಮ್ಮ ಎಲ್ಲದಕ್ಕೂ ಅಚ್ಚರಿಪಡುತ್ತ ನೋಡುವ ಒಂದು ಮಗುವಾಗಿದ್ದಳು. ನನ್ನನ್ನೇ ಎತ್ತಿಕೊಂಡು ಸಲುಹಿದ ನನ್ನಮ್ಮ ಗುಬ್ಬಚ್ಚಿಯಂತಾಗಿದ್ದಳು. ಆದರೂ ಆಕೆಯ ಗಟ್ಟಿತನ, ಸಂಸಾರವನ್ನು ನಿಭಾಸಿದ ಧೀಶಕ್ತಿ, ಎಲ್ಲವನ್ನೂ ಸಂಭಾಳಿಸಿದ ತಾಳ್ಮೆ ಅದು ಅಮ್ಮನಿಗೆ ಮಾತ್ರ ಸಾಧ್ಯ.

ಇಂಜಕ್ಷನ್ ಎಂದರೇ ನೂರು ಮೈಲಿ ಓಡುವ ಅಮ್ಮನಿಗೆ ಮೂರು ಬಾರಿ ಶಸ್ತ್ರಕ್ರಿಯೆ ನಡೆದರೂ ಎಲ್ಲವನ್ನೂ ಧೈರ್ಯದಿಂದ ಎದುರಿಸಿದ ಆತ್ಮಸ್ಥೈರ್ಯ ಆಕೆಗಷ್ಟೇ ಬರುವಂಥದ್ದು. ನನ್ನ ದೇಹ ಮುಪ್ಪಾಗಿರಬಹುದು, ಮನಸು, ಚೈತನ್ಯ ಮುಪ್ಪಾಗಿಲ್ಲ ಎಂಬಂತೆಯೇ ಓಡಾಡುತ್ತಿದ್ದಳು. ಒಂದೆಡೆ ಕೂಡುವ ಜೀವವಲ್ಲ. ಅಲ್ಲಿ ಇಲ್ಲಿ ನೋಡಬೇಕು, ಹೋಗಬೇಕು, ಜೀವನವನ್ನು ತುಂಬಾ ಪ್ರೀತಿಸಬೇಕು ಎಂದೇ ಬಯಸುವ ನಿರಂತರ ಉತ್ಸಾಹಿಯಾಗಿದ್ದಳು. ಹಾಗೆ ನೋಡಿದರೆ ಅಮ್ಮನ ಓಡಾಟದ ಮುಂದೆ ನಾನೇ ಮುಪ್ಪಾಗಿರುವೆನೇನೋ ಅನಿಸುತ್ತಿತ್ತು. ಇಂಜೆಕ್ಷನ್ ಎಂದರೇ ಚಿಟ್ಟನೇ ಚೀರುತ್ತಿದ್ದ ಅಮ್ಮ ಆಸ್ಪತ್ರೆಯಲ್ಲಿ ಅದು ಹೇಗೆ ಅಷ್ಟೊಂದು ಗ್ಲುಕೋಸ್ ಬಾಟಲ್ ಗಳ ಸೂಜಿಯನ್ನು ಆಕೆಯ ದೇಹಕ್ಕೆ ಚುಚ್ಚಿದರೂ ಅದು ಹೇಗೆ ಸಹಿಸಿಕೊಂಡಿದ್ದಳೋ. ನೆನೆದರೆ ಕಣ್ಣೀರಾಗುತ್ತೇನೆ.

ಅಮ್ಮ ಒಬ್ಬ ಶಿಕ್ಷಕಿ. ಸಾವಿರ ಮಕ್ಕಳಿಗೆ ಪಾಠ ಹೇಳಿದ ಗುರು. ಮನೆಯಲ್ಲಿಯೇ ನನ್ನನ್ನು ತಿದ್ದಿ ತೀಡಿದಾಕೆ. ತಪ್ಪುಗಳಾದಲ್ಲಿ ಚೆನ್ನಾಗಿ ಬಾರಿಸುತ್ತಿದ್ದಳು. ಬಹುಶ: ಶಾಲೆಗೆ ಬಂದು ” ಇವನ ಸಲುವಾಗಿ ಸಾಕಾಗೇತ್ರಿ, ಹಿಡದು ನಾಲ್ಕು ಛೊಲೋ ಬಾರಸ್ರಿ, ನಿಮ್ಮನ್ ಯಾಕ ಅಂತ ಕೇಳಂಗಿಲ್ಲ ” ಅಂತ ನನ್ನನ್ನು ಶಿಕ್ಷಕರ ಮುಂದೆ ದೂಡಿದ ವಿರಳಾತಿ ವಿರಳ ತಾಯಂದಿರಲ್ಲಿ ನನ್ನ ಅಮ್ಮ ಒಬ್ಬಳು ಅಂತ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಯಾಕೆಂದರೆ ಈಗಿನ ಮಕ್ಕಳನ್ನು ಶಿಕ್ಷಕರು ಮುಟ್ಟುವುದಿರಲಿ ಬಯ್ಯುವಂತೆಯೂ ಇಲ್ಲ. ಪಾಲಕರು ಧಿಡೀರನೇ ಬಂದು ಇಡೀ ರಾಜ್ಯಾದ್ಯಂತ ಬಿತ್ತರಿಸಿಬಿಡುತ್ತಾರೆ. ಮಗನಿಗೆ ನಾಲ್ಕು ಬಾರಿಸಿ ಬುದ್ಧಿ ಕಲಿಸಿ ಸರಿ ದಾರಿಗೆ ತನ್ನಿ ಎಂದು ಹೇಳಿದವಳು ನನ್ನಮ್ಮ. ಹಾಗಾಗಿಯೇ ನನ್ನಲ್ಲೊಂದಿಷ್ಟು ಅಕ್ಷರ, ಬರಹ ಮೂಡಿದ್ದು.

ಅಮ್ಮ ಹಾಗಿದ್ದುದಕ್ಕೋ ಏನೋ ನಾನೂ ನಾಲ್ಕಕ್ಷರ ಕಲಿತೆ. ಮುದ್ದು ಮಾಡಿದ್ದರೆ ಮೊದ್ದಣ್ಣನಾಗಿ ಏನಾಗುತ್ತಿದ್ದೆನೋ ಗೊತ್ತಿಲ್ಲ. ಆಕೆಯಿಂದ ನುಡಿಕಲಿತೆ, ನಡೆಕಲಿತೆ, ಬದುಕು ಕಲಿತೆ, ನಾಲ್ಕುನುಡಿ ಬರೆಯುವುದ ಕಲಿತೆ. ನನ್ನ ಬರವಣಿಗೆಗೆ ಮೂಲ ಕಾರಣ ಅಪ್ಪ ಮತ್ತು ಅಮ್ಮ. ಇಬ್ಬರೂ ಸಾಹಿತಿಗಳೇ. ಅಮ್ಮ ಕವಿತೆ, ಲೇಖನ, ಹರಟೆ ಎಲ್ಲ ಬರೆದಳು. 2014ರಲ್ಲಿ ಕೊಪ್ಪಳದ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದಳು. ಅದು ಆಕೆಗೆ ಸಂದ ಗೌರವ. ಕನ್ನಡ ಸಾಹಿತ್ಯ ಪರಿಷತ್ ನ ದತ್ತಿ ಪ್ರಶಸ್ತಿ ಪಡೆದಿದ್ದಳು. ಅದು ನನಗೆ ಹೆಮ್ಮೆ.

ಅಮ್ಮ ಒಬ್ಬ ಶಿಕ್ಷಕಿ, ಒಬ್ಬ ಗೃಹಿಣಿ, ಒಬ್ಬ ತಾಯಿ, ಒಬ್ಬ ಕವಿಯತ್ರಿ, ಒಬ್ಬ ಲೇಖಕಿ, ಒಬ್ಬ ಭಾಷಣಕಾರ್ತಿ, ಒಬ್ಬ ಅಚ್ಚುಕಟ್ಟಾಗಿ ಅಡುಗೆ ಮಾಡುವ ನಳಪಾಕ ತಜ್ಞೆ, ಹರಟೆ ಹೊಡೆಯುವ ಸಾಮಾನ್ಯರಲ್ಲಿ ಸಾಮಾನ್ಯಳು. ಎಲ್ಲದಕ್ಕಿಂತಲೂ ಮಿಗಿಲಾದುದೆಂದರೆ ತನ್ನ ದೇಹವನ್ನೇ ದಾನ ಮಾಡಿ ಎಲ್ಲರಿಗೂ ಮಾದರಿಯೆನಿಸಿದವಳು. ನುಡಿದಂತೆ ನಡೆದಳು. ಹೀಗಾಗಿಯೆ ನನ್ನ ಅಮ್ಮ ನನಗೆ ಹೆಮ್ಮೆ.

ಬಹುಶ: ಸೆಲೆಬ್ರಿಟಿಗಳೇನಾದರೂ ಅಂಗಾಂಗಗಳನ್ನು ದಾನ ಮಾಡಿದ್ದರೆ ರಾಜ್ಯಾದಾದ್ಯಂತ ಎಲ್ಲ ಮೀಡಿಯಾಗಳಲ್ಲಿ ದೊಡ್ದ ಸುದ್ದಿಯಾಗುತ್ತಿತ್ತೇನೋ….. ಆದರೆ ನನ್ನ ಅಮ್ಮ ಸಾಮಾನ್ಯರಲ್ಲಿ ಸಾಮಾನ್ಯಳ ಹಾಗೇ ಬದುಕಿದವಳು. ಪ್ರಚಾರವನ್ನು ಎಂದೂ ಬಯಸದವಳು. ಅದು ಆಕೆಯ ಸ್ವಭಾವ. ಇದು ನನ್ನಮ್ಮ

ವೈಚಾರಿಕತೆ ಎಂಬುದು ಕೇವಲ ಬಾಯಿಮಾತಿನಲ್ಲಿ, ಬರಹದಲ್ಲಷ್ಟೇ ಅಲ್ಲ ಆಚರಣೆಯಲ್ಲೂ ಇರಬೇಕು ಎಂದು ಸ್ವತ: ತನ್ನ ನಡೆ ನುಡಿಯಲ್ಲೂ ತೋರಿಸಿಕೊಟ್ಟವಳು ನನ್ನ ಅಮ್ಮ. ನನ್ನಲ್ಲೊಂದಿಷ್ಟು ಹೊಸ ವಿಚಾರಗಳೇನಾದರೂ ಬಂದಿದ್ದರೆ ಅದೆಲ್ಲ ಆಕೆಯ ಕೊಡುಗೆ.

ಮರುಜನ್ಮವೆಂಬುದೇನಾದರೂ ಇದ್ದರೆ ನನಗೆ ಈ ಅಮ್ಮನ ಉದರದಲ್ಲೇ ಜನಿಸಲು ಪ್ರಾರ್ಥನೆ.

Please follow and like us: