ಕೇಂದ್ರ ಬಜೆಟ್ 2022- ಜನರಿಗೆ ಬಗೆದ ವಂಚನೆ-ಎಸ್ ಯುಸಿಐ(ಸಿ )  ಶರಣು ಗಡ್ಡಿ

ಕೇಂದ್ರ ಬಜೆಟ್ 2022- ಜನರಿಗೆ ಬಗೆದ ವಂಚನೆ ಎಂದು ಎಸ್ ಯುಸಿಐ(ಸಿ )  ಶರಣು ಗಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು

ದೇಶವಾಸಿಗಳು ನಿರಂತರವಾಗಿ ಬೆಲೆಯೇರಿಕೆಯ ಬಿಸಿಗೆ, ಹೆಚ್ಚುತ್ತಿರುವ ನಿರುದ್ಯೋಗ, ಉದ್ಯೋಗನಾಶ, ಆದಾಯ ಕುಸಿತ, ಸರಿಯಾದ ಆರೋಗ್ಯ, ಶಿಕ್ಷಣ, ನಾಗರಿಕ ಸೌಲಭ್ಯಗಳ ಅಲಭ್ಯತೆ ಮುಂತಾದ ಸಮಸ್ಯೆಗಳಿಂದ ಜರ್ಜರಿತವಾಗಿರುವಾಗ, ಸಾಲದೆಂಬಂತೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ನಲುಗಿರುವಾಗ, ಬಂದಿರುವ ಈ ಬಜೆಟ್ ಇಂತಹ ಒಂದೇ ಒಂದು ಸಂಕಷ್ಟಕ್ಕೂ ಪರಿಹಾರ ನೀಡಿಲ್ಲ. ವೇಗವಾಗಿ ದಿವಾಳಿಯಾಗುತ್ತಿರುವ ಜನರ ಕೊಳ್ಳುವ ಶಕ್ತಿಯನ್ನು ವೃದ್ಧಿಸಲು ನೇರ ನಗದು ವರ್ಗಾವಣೆಯಂತಹ ಯಾವುದೇ ಆದಾಯ ಖಾತ್ರಿಯ ಯೋಜನೆ ಘೋಷಣೆಯಾಗಿಲ್ಲ. ಬದಲಿಗೆ ದೇಶದ ಆರ್ಥಿಕತೆ ಹೇಗೆ ಸುಧಾರಿಸುತ್ತಿದೆ ಎಂದು ಅರ್ಥ ಸಚಿವರು ತಮ್ಮ ಹಳೆಯ ಶೈಲಿಯಲ್ಲಿಯೇ ದೇಶದ ಜನತೆಗೆ ಪಾಠ ಮಾಡಿದ್ದಾರೆ. ಮತ್ತು ಅದಕ್ಕಾಗಿ ಸರ್ಕಾರ ಕೈಗೊಳ್ಳಲಿರುವ ಕ್ರಮಗಳನ್ನು ಪಟ್ಟಿ ಮಾಡಿ ಓದಿದ್ದಾರೆ. “ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ” ಎನ್ನುವ ಸವಕಲು ಘೋಷಣೆಗೆ ಪುಷ್ಠಿ ನೀಡುತ್ತ ಎಲ್ಲ ರಂಗಗಳನ್ನು ಆಕ್ರಮಣಕಾರಿಯಾಗಿ ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಗೆ ಒಳಪಡಿಸಿದ್ದಾರೆ.


ಕಾರ್ಪೊರೇಟ್ ಬಂಡವಾಳಶಾಹಿಗಳ ಪರವಾಗಿ ಹಲವಾರು ಕ್ರಮಗಳನ್ನು ಪ್ರಕಟಿಸಿದ ಅವರು ಕಾರ್ಪೊರೇಟ್ ಮೇಲಿನ ತೆರಿಗೆಯನ್ನು ಶೇ. 12ರಿಂದ ಶೇ.7ಕ್ಕೆ ಇಳಿಸಿದ್ದಾರೆ, ಆರ್ಥಿಕ ವ್ಯವಸ್ಥೆಯಲ್ಲಿ ಕುರುಹುಗಳನ್ನೇ ಬಿಡದೆ ಸಂಪತ್ತು ವರ್ಗಾವಣೆ ಮಾಡಬಲ್ಲ ವಿನಾಶಕಾರಿ ಕ್ರಿಪ್ಟೋಕರೆನ್ಸಿಗೆ ಅಧಿಕೃತ ಮಾನ್ಯತೆ ನೀಡಲಾಗಿದೆ. ಹಲವಾರು ರಂಗಗಳಲ್ಲಿ ಸರ್ಕಾರಿ ಖಾಸಗಿ ಪಾಲುದಾರಿಕೆ ಅಥವಾ ಇನ್ನಿತರ ದಾರಿಗಳ ಮೂಲಕ ಖಾಸಗಿ ಹೂಡಿಕೆದಾರರ ಪಾತ್ರವನ್ನು ಹೆಚ್ಚಿಸಿದೆ. ಈ ಬಜೆಟ್ ಹೆಚ್ಚಿನ ಬಂಡವಾಳಶಾಹಿ ಪರ ನೀತಿಗಳನ್ನು ಹೈಟೆಕ್ ಆರ್ಥಿಕ ಪದಪುಂಜಗಳ ನೆರವಿನಿಂದ ಮುಚ್ಚಿ ಹಾಕಿದೆ. ಆದರೆ ದುಡಿಯುವ ಜನರನ್ನು ಸ್ಪಷ್ಟವಾಗಿಯೇ ದಿವಾಳಿತನಕ್ಕೆ ದೂಡಿದೆ. ಇದರ ಮೂಲಕ ಹೇಗೆ ಬಿಜೆಪಿ ಸರ್ಕಾರವು ಜನಗಳ ಹಿತದ ಬಗ್ಗೆ ಅಪರಾಧಿ ನಿಷ್ಕಾಳಜಿ ವಹಿಸಿದೆ ಮತ್ತು ತನ್ನ ಬಂಡವಾಳಶಾಹಿ ಯಜಮಾನರ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us: