ಪ್ರೊಕಬಡ್ಡಿ: ಬೆಂಗಳೂರು ಬುಲ್ಸ್‌ ತಂಡದಲ್ಲಿಲ್ಲ ಡಿಫೆನ್ಸ್‌: ಭಗ್ನಗೊಳ್ಳುತ್ತಾ ಅಭಿಮಾನಿಗಳ ಕಪ್‌ ಕನಸು?

– ಅಶೋಕ್‌ ಎಂ ಭದ್ರಾವತಿ

ಕ್ರಿಕೆಟ್ ಪ್ರೀಮಿಯರ್ ಲೀಗ್ ಐಪಿಎಲ್‌ನಲ್ಲಿ ಗೆಲ್ಲದ ಕಪ್ ಅನ್ನು ಪ್ರೋ-ಕಬಡ್ಡಿಯಲ್ಲಾದರೂ ಬೆಂಗಳೂರು ತಂಡ ಗೆಲ್ಲುತ್ತದೆ ಎಂದು ಅಭಿಮಾನಿಗಳು ವಿಶ್ವಾಸವಿಟ್ಟಿದ್ದರು. ಆದರೆ, ಗೆಲುವು-ಸೋಲುಗಳ ನಡುವೆ ತಂಡವು ಓಲಾಡುತ್ತಿದ್ದು, ಅಭಿಮಾನಿಗಳು ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡಿದೆ.
ಈ ವರ್ಷ ನಡೆದ 14ನೇ ಐಪಿಎಲ್‌ ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತಂಡದ ಆರಂಭಿಕ ಓಟವನ್ನು ಕಂಡಿದ್ದ ಅಭಿಮಾನಿಗಳಿಗೆ ಕಪ್ ಗೆಲ್ಲುವ ನಿರೀಕ್ಷೆಯಿತ್ತು. ಈಗಲೂ ಬೆಂಗಳೂರು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಇದೆ. ಆದರೆ ಕೆಲವು ಪಂದ್ಯಗಳಲ್ಲಿ ಕಂಡ ಸೋಲು ತಂಡದ ದೌರ್ಬಲ್ಯಗಳನ್ನು ಎತ್ತಿ ತೋರಿಸಿದೆ. ಪ್ರೋ ಕಬಡ್ಡಿ ಲೀಗ್ನಲ್ಲೂ ಆರಂಭಿಕ ಹಂತದಿಂದಲೂ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿತ್ತು. ಹೀಗಾಗಿ ಪವನ್ ಶೆರಾವತ್ ಪಡೆ ಕಪ್ ಬರವನ್ನು ನೀಗಿಸುವ ನಿರೀಕ್ಷೆಯಿತ್ತು. ಆದರೆ ಆರಂಭದ ಉತ್ತಮ ಪ್ರದರ್ಶನವನ್ನು ಮುಂದುವರಿಸುವಲ್ಲಿ ಬೆಂಗಳೂರು ತಂಡ ವಿಫಲವಾಗಿ, ಸತತ ಸೋಲುಗಳನ್ನು ದಾಖಲಿಸುತ್ತಿರುವುದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

ಡಿಫೆನ್ಸ್ ವಿಭಾಗದಲ್ಲಿ ವೈಫಲ್ಯ

ಬೆಂಗಳೂರು ಬುಲ್ಸ್ ತಂಡದ ರೈಡಿಂಗ್ ವಿಭಾಗ ಈವರೆಗೆ ಅದ್ಭುತವಾದ ನಿರ್ವಹಣೆ ತೋರಿದೆ. ನಾಯಕ ಪವನ್ ಶೆರಾವತ್ ಯಶಸ್ವೀ ರೈಡರ್ ಆಗಿ ಈ ವರ್ಷದಲ್ಲಿ ಅತಿಹೆಚ್ಚು ಪಾಯಿಂಟ್ ತೆಗೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈವರೆಗೆ 16 ಪಂದ್ಯಗಳನ್ನು ಆಡಿರುವ ಅವರು ಒಟ್ಟು 214 ರೈಡ್ ಪಾಯಿಂಟ್ಗಳನ್ನು ಸಂಪಾದಿಸಿ ಮತ್ತೊಮ್ಮೆ ತಮ್ಮ ಅನುಭವವನ್ನು ಸಾಬೀತುಪಡಿಸಿದ್ದಾರೆ.

ಸೆಕೆಂಡರಿ ರೈಡರ್ ಆಗಿ ದೀಪಕ್ ನರ್ವಾಲ್ ಮತ್ತು ಚಂದ್ರನ್ ರಂಜಿತ್ ಅವರೂ ಉಪಯುಕ್ತ ಕೊಡುಗೆ ನೀಡಿದ್ದಾರೆ. ಆದರೆ, ತಂಡದ ಡಿಫೆನ್ಸ್ ವಿಭಾಗ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಈ ಋತುವಿನಲ್ಲಿ ಬೆಂಗಳೂರು ಬುಲ್ಸ್ 16 ಪಂದ್ಯಗಳ ಪೈಕಿ 8 ರಲ್ಲಿ ಗೆಲುವು ಸಾಧಿಸಿದ್ದರೆ, 7ರಲ್ಲಿ ಸೋಲನುಭವಿಸಿದೆ. ಈ ಸೋಲಿಗೆ ಡಿಫೆನ್ಸ್ ವಿಭಾಗದ ವೈಫಲ್ಯವೇ ಕಾರಣ.

ಡಿಫೆನ್ಸ್ ವಿಭಾಗದ ಪ್ರಮುಖ ಭರವಸೆಗಳಾದ ವಿಕಾಸ್ ಜೈದೀಪ್, ಅಂಕಿತ್, ಮೋಹಿತ್ ಶೆರಾವತ್, ಸೌರಬ್ ನಂದನ್ ಮತ್ತು ಮಹೇಂದರ್ ಸಿಂಗ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಪ್ರದರ್ಶನ ಸುದಾರಿಸದೆ ಬುಲ್ಸ್ ಕಪ್ ಕನಸು ನನಸಾಗಲು ಸಾಧ್ಯವಿಲ್ಲ.

ಪ್ಲೇ ಆಫ್ ಪ್ರವೇಶಿಸುವುದು ಖಚಿತ

ಅಂಕಗಳ ಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ 8 ಗೆಲುವಿನ ಮೂಲಕ 46 ಅಂಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ. 53 ಅಂಕಗಳೊಂದಿಗೆ ದಬಾಂಗ್ ಡೆಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನೂ ಪಾಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೆಲ್ಲರ್ಸ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಬೆಂಗಳೂರು ಬುಲ್ಸ್ಗೆ ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಪ್ರವೇಶ ಖಚಿತವಾಗಲಿದೆ. ಆದರೆ, ಡಿಫೆನ್ಸ್ ವಿಭಾಗದ ವೈಫಲ್ಯದ ಕಾರಣಕ್ಕೆ ಸತತ 4 ಸೋಲುಗಳನ್ನು ಕಂಡಿರುವ ಬುಲ್ಸ್ ಮುಂದಿನ ಪಂದ್ಯಗಳಲ್ಲಾದರೂ ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಳ್ಳಲಿದೆಯೇ? ಕಪ್ ಜಯಿಸಲಿದೆಯೇ? ಎಂದು ಕಬಡ್ಡಿ ಅಭಿಮಾನಿಗಳು ಕಾತರರಾಗಿದ್ದಾರೆ.

ಪ್ರೋ ಕಬಡ್ಡಿ ವಿಜೇತರ ಪಟ್ಟಿ

2014 – ಜೈಪುರ ಪಿಂಕ್ ಫ್ಯಾಂಥರ್ಸ್
2015 – ಯು-ಮುಂಬಾ
2016 – ಪಾಟ್ನಾ ಪೈರೇಟ್ಸ್
2017 – ಪಾಟ್ನಾ ಪೈರೇಟ್ಸ್
2018 – ಬೆಂಗಳೂರು ಬುಲ್ಸ್
2019 – ಬೆಂಗಾಳ್ ವಾರಿಯರ್ಸ್.

Please follow and like us: