‘ನಾನೇಕೆ ಗಾಂಧಿ ಕೊಂದೆ’ ಬಿಡುಗಡೆ ತಡೆಗೆ ನಿರಾಕರಿಸಿದ ಸುಪ್ರೀಂಕೋರ್ಟ್‌

ಲೈಮ್‌ಲೈಟ್‌ ಒಟಿಟಿಯಲ್ಲಿ ʼನಾನೇಕೆ ಗಾಂಧಿ ಕೊಂದೆʼ (ವೈ ಐ ಕಿಲ್ಡ್ ಗಾಂಧಿ) ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸೋಮವಾರ ಸುಪ್ರೀಂಕೋರ್ಟ್ ನಿರಾಕರಿಸಿದೆ.

ಸಿನಿಮಾ ಬಿಡುಗಡೆಯಿಂದ ಸಂವಿಧಾನದ 32ನೇ ವಿಧಿಯಡಿ ಅರ್ಜಿದಾರರ ಮೂಲಭೂತ ಹಕ್ಕಿಗೆ ಚ್ಯುತಿಯಾಗಿಲ್ಲ. ಹೀಗಾಗಿ, ಈ ವಿಧಿಯಡಿ ಸಲ್ಲಿಸಲಾಗಿರುವ ಮನವಿಯನ್ನು ಪರಿಗಣಿಸಲಾಗದು ಎಂದು ನ್ಯಾ. ಇಂದಿರಾ ಬ್ಯಾನರ್ಜಿ ನೇತೃತ್ವದ ಪೀಠವು ಹೇಳಿದ್ದು, ಇತರ ದೂರುಗಳಿದ್ದಲ್ಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ಕಲ್ಪಿಸಿದೆ.

ಮೂಲಭೂತ ಹಕ್ಕುಗಳ ಉಲ್ಲಂಘನೆಯ ಪ್ರಶ್ನೆಯಿದ್ದಾಗ ಮಾತ್ರ ಕಲಂ 32 ರಡಿ ರಿಟ್‌ ಅರ್ಜಿ ಸಲ್ಲಿಸಬಹುದು. ಇಲ್ಲಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ತೋರುತ್ತಿಲ್ಲ. ಹೀಗಾಗಿ ಮನವಿ ಪರಿಗಣಿಸಲಾಗುವುದಿಲ್ಲ. ಆದರೆ ಅರ್ಜಿದಾರರಿಗೆ ಗಂಭೀರ ಕಳವಳ ಇದ್ದಲ್ಲಿ 226ರ ಅಡಿ ಹೈಕೋರ್ಟ್ ಮೊರೆ ಹೋಗಬಹುದು ಎಂದು ನ್ಯಾಯಾಲಯ ಹೇಳಿದೆ.“ಈ ಚಲನಚಿತ್ರವು ರಾಷ್ಟ್ರಪಿತರ ವರ್ಚಸ್ಸಿಗೆ ಕಳಂಕ ತರಲು, ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಲು ಮತ್ತು ಮಹಾತ್ಮಾ ಗಾಂಧಿ ಹತ್ಯೆಯ ಸಂಭ್ರಮಾಚರಣೆಯ ಉದ್ದೇಶ ಹೊಂದಿದೆ.

ಕೋಮು ಸಾಮರಸ್ಯ ಕದಡುವುದು, ದ್ವೇಷ ಹರಡುವುದು ಮತ್ತು ಅಶಾಂತಿ ನಿರ್ಮಿಸುವ ಗುರಿಯನ್ನು ಚಲನಚಿತ್ರ ಹೊಂದಿದೆ. ಸೆನ್ಸಾರ್ ಮಂಡಳಿ ಈ ಸಿನಿಮಾ ಬಿಡುಗಡೆಗೆ ಅನುಮತಿ ನೀಡದೆ ಇರುವುದರಿಂದ ಜನವರಿ 30 ರಂದು ಒಟಿಟಿ ಪ್ಲಾಟ್ ಫಾರ್ಮ್ ‘ ‘ಲೈಮ್ ಲೈಟ್’ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ವಕೀಲ ಅನುಜ್ ಭಂಡಾರಿ ಅವರ ಮೂಲಕ ಸಿಕಂದರ್ ಬೆಹ್ಲ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.ಪ್ರಸ್ತುತ ಸೆನ್ಸಾರ್ ಮಂಡಳಿಯ ವ್ಯಾಪ್ತಿಯಿಂದ ಹೊರಗುಳಿದ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವುದು, ಮತ್ತು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿಅನಿಯಂತ್ರಿತ ಮತ್ತು ಸೆನ್ಸಾರ್ ಮಾಡದ ವಿಷಯವನ್ನು ಪ್ರಕಟಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಕೋರಿದ್ದಾರೆ.

2017ರಲ್ಲಿ ಈ ಚಲನಚಿತ್ರ ನಿರ್ಮಾಣವಾಗಿದ್ದು, ಈವರೆಗೆ ಯಾವುದೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿಲ್ಲ. ಎನ್‌ಸಿಪಿ ಮುಖಂಡ ಮತ್ತು ಸಂಸದರಾಗಿರುವ ಅಮೋಲ್ ಕೋಲ್ಹೆ ಚಿತ್ರದಲ್ಲಿ ಗೋಡ್ಸೆ ಪಾತ್ರ ನಿರ್ವಹಿಸಿದ್ದಾರೆ.

Please follow and like us: